ಅದೂ ಸುಳ್ಳು ಸುದ್ದಿಗಳ ಆಧಾರದಲ್ಲಿ! ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾದ ಖಂಡನೆ
ಸಿಪಿಐ(ಎಂ) ಪೊಲಿಟ್‌ಬ್ಯರೊ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿ, ವಿರುದ್ಧ ಕರಾಳ ಸಾರ್ವಜನಿಕ ಭದ್ರತಾ ಕಾನೂನು(ಪಿಎಸ್‌ಎ) ಪ್ರಯೋಗಿಸಿರುವುದನ್ನು ಬಲವಾಗಿ ಖಂಡಿಸಿದೆ. ಒಮರ್ ಅಬ್ದುಲ್ಲ ಒಂದು ಬಿಜೆಪಿ ಸರಕಾರದಲ್ಲಿ ರಾಜ್ಯಖಾತೆಯ ಮಂತ್ರಿಯಾಗಿ, ಮತ್ತು ಮೆಹಬೂಬ ಮುಫ್ತಿ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರತಿಜ್ಞಾ ಸ್ವೀಕಾರ ಮಾಡಿ ಸೇವೆ ಸಲ್ಲಿಸಿದವರು.
ಪ್ರಧಾನ ಮಂತ್ರಿ ಮೋದಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಗೊತ್ತುವಳಿಯ ಮೇಲಿನ ಚರ್ಚೆಗೆ ಉತ್ತರ ಕೊಡುತ್ತ ಇವರಿಬ್ಬರು ನೀಡಿರುವ ಹೇಳಿಕೆಗಳು ‘ಸ್ವೀಕಾರಾರ್ಹವಲ್ಲ’ ಎಂದರು. ಈ ಹೇಳಿಕೆಗಳನ್ನು ಒಂದು ವಿಡಂಬನಾ ವೆಬ್‌ತಾಣ ‘ಫೇಕಿಂಗ್ ನ್ಯೂಸ್ಫ’ ನ ಟ್ವಟರ್‌ನಿಂದ ತಗೊಂಡದ್ದು ಎಂದು ಈಗ ಗೊತ್ತಾಗಿದೆ ಮತ್ತು ಈ ಆಪಾದನೆಗಳು ಆಧಾರಹೀನ ಎಂದು ಸಾಬೀತಾಗಿದೆ ಎಂಬ ಸಂಗತಿಯತ್ತ ಪೊಲಿಟ್‌ಬ್ಯುರೊ ಗಮನ ಸೆಳೆದಿದೆ.
ಮೋದಿ ಸರಕಾರ ಈ ಕುಖ್ಯಾತ ಪಿಎಸ್‌ಎ ಕಾಯ್ದೆಯ ಏಟು ಹೊಡೆಯಲು ಇಂತಹ ಸುಳ್ಳು ಸುದ್ದಿಗಳ ಮೊರೆ ಹೋಗಬೇಕಾಗಿ ಬಂದಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಎಲ್ಲವೂ ಸಾಮಾನ್ಯವಾಗಿದೆ’ ಎಂಬ ಅದರ ದಾವೆಯನ್ನು ಸುಳ್ಳಾಗಿಸುತ್ತದೆ. ಆರು ತಿಂಗಳ ನಂತರವೂ ಸಾವಿರಾರು ಮಂದಿ ಈಗಲೂ ಬಂಧನದಲ್ಲಿದ್ದಾರೆ. ಲಕ್ಷಾಂತರ ಜೀವನಾಧಾರಗಳು ಛಿದ್ರಗೊಂಡಿವೆ, ಮತ್ತು ಸಾಮಾನ್ಯ ದೈನಂದಿನ ಚಟುವಟಿಕೆ ಇಲ್ಲವೇ ಇಲ್ಲ ಎಂಬಂತಾಗಿದೆ.
ಇದು ಭಾರತೀಯ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿರುವ ಮುಖಭಂಗ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇವರನ್ನು ಮತ್ತು ಆಗಸ್ಟ್೪, ೨೦೧೯ರ ರಾತ್ರಿಯಿಂದ ಬಂಧಿಸಿಟ್ಟಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವವ ಪ್ರಕ್ರಿಯೆಗಳನ್ನು ಮತ್ತೆ ನೆಲೆಗೊಳಿಸಬೇಕು ಎಂದು ಆಗ್ರಹಿಸಿದೆ.
ಕಾಶ್ಮೀರದಲ್ಲಿ ಪ್ರಜಾ ಪ್ರಭುತ್ವವನ್ನು ಮತ್ತೆ ನೆಲೆಗೊಳಿಸಿ, ಅವರಿಗೆ ನೀಡಿದ ಆಶ್ವಾಸನೆಗಳನ್ನು ಗೌರವಿಸಿ – ಪ್ರಧಾನ ಮಂತ್ರಿಗಳಿಗೆ ಸೀತಾರಾಮ್ ಯೆಚುರಿ ಪತ್ರ
ಇದಕ್ಕೆ ಮೊದಲು ಫೆಬ್ರುವರಿ ೫ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಧಾನಮಂತ್ರಿಗಳಿಗೆ ಒಂದು ಪತ್ರ ಬರೆದು ಎಲ್ಲ ಬಂಧಿತರನ್ನು ಬಿಡುಗಡೆ ಮಾಡಬೇಕು, ಕಾಶ್ಮೀರದಲ್ಲಿ ಪ್ರಜಾ ಪ್ರಭುತ್ವವನ್ನು ಮತ್ತೆ ನೆಲೆಗೊಳಿಸಿ, ಅವರಿಗೆ ನೀಡಿದ ಆಶ್ವಾಸನೆಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ೩೭೦ ನೇ ಕಲಮು ಮತ್ತು ೩೫ಎ ನ್ನು ಇದ್ದಕ್ಕಿದಂತೆ ರದ್ದು ಮಾಡಿ, ತೀವ್ರ ನಿರ್ಬಂಧಗಳನ್ನು ಹೇರಿ ಆರು ತಿಂಗಳಾಗಿವೆ. ಸಾವಿರಾರು ಜನಗಳನ್ನು ಸ್ಥಾನಬದ್ದತೆಯಲ್ಲಿ ಇಡಲಾಗಿದೆ. ಹಲವರನ್ನು ಜಮ್ಮು ಕಾಶ್ಮೀರದ ಒಳಗೆ ಮತ್ತು ಹೊರಗೆ ಜೈಲುಗಳಲ್ಲಿ ಇಡಲಾಗಿದೆ, ಹಲವರನ್ನು ಗೃಹಬಂಧನದಲ್ಲಿಡಲಾಗಿದೆ, ಅಥವ ಬೇರೆಡೆಗಳಲ್ಲಿ ಬಂಧಿಸಿಡಲಾಗಿದೆ. ಇವರಲ್ಲಿ ಈ ಹಿಂದೆ ಕೇಂದ್ರ ಮಂತ್ರಿಗಳಾಗಿದ್ದವರೂ ಸೇರಿದ್ದಾರೆ, ಮೂವರು ಮಾಜಿ ಮುಖ್ಯಮಂತ್ರಿಗಳೂ ಇದ್ದಾರೆ. ಈಗ ರದ್ದಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಾಲ್ಕು ಬಾರಿ ಚುನಾಯಿತರಾದ ಸಿಪಿಐ(ಎಂ)ನ ಹಿರಿಯ ಮುಖಂಡ ಮಹಮ್ಮದ್ ಯೂಸುಫ್ ತರಿಗಾಮಿಯವರೂ ಇದ್ದಾರೆ.
ಇವರೆಲ್ಲರಿಗೆ ಸಂವಿಧಾನ ಅವರಿಗೆ ನೀಡಿರುವ ಸ್ವಾತಂತ್ರ್ಯವನ್ನು ಮರಳಿ ಕೊಡಬೇಕು, ಸಂಪರ್ಕದ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆಯಬೇಕು, ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮತ್ತೆ ನೆಲೆಗೊಳಿಸಬೇಕು ಎಂದು ಸೀತಾರಾಂ ಯೆಚುರಿ ತಮ್ಮ ಪತ್ರದಲ್ಲಿ ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಇವು ರಾಜ್ಯದ ಅರ್ಥವ್ಯವಸ್ಥೆಯ ಮೇಲೆ ತೀರ ದುಷ್ಪರಿಣಾಮ ಬೀರಿವೆ.
ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರ್ಪಡೆಯಾಗುವಾಗ ಅಲ್ಲಿಯ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಬೇಕು, ಇದನ್ನು ಅತ್ಯಂತ ಗಂಭೀರತೆಯಿಂದ ಪರಿಗಣಿಸಬೇಕಾಗಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಹೇಳಿದ್ದರು.