ದಿಲ್ಲಿಯ “ಸೆಂಟ್ರಲ್ ವಿಸ್ಟ” ಪುನರ್ರಚನೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಸಂವಾದ ಅಗತ್ಯ. ಸದ್ಯಕ್ಕೆ ನಿಲ್ಲಿಸಿ, ಮೊದಲಿಗೆ ಸಂಸತ್ತಿನಲ್ಲಿ ಇದನ್ನು ಚರ್ಚಿಸಬೇಕು-ಸಿಪಿಐ(ಎಂ) ಪೊಲಿಟ್ ಬ್ಯುರೊ
ಬಿಜೆಪಿ ಸರಕಾರ ಪ್ರಸ್ತಾವಿತ ದಿಲ್ಲಿಯ “ಕೇಂದ್ರೀಯ ನೀಳನೋಟ” (ಸೆಂಟ್ರಲ್ ವಿಸ್ಟ) ಪರಿಯೋಜನೆಯ ಮೇಲಿನ ಮುಸುಕನ್ನು ತೆಗೆಯಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ ನೀಡಿದೆ. ನಾಗರಿಕರು ಮಾತ್ರವಲ್ಲದೆ, ಇದರಿಂದ ಸಂಸತ್ತು ಅತಿ ಹೆಚ್ಚು ಬಾಧಿತವಾಗುತ್ತದೆ. ಆದ್ದರಿಂದ ಈ ಯೋಜನೆಯ ವಿವರಗಳನ್ನು ಈಗ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರಕಾರವು ಚರ್ಚಿಸುವುದು ಅತ್ಯಗತ್ಯವಾಗಿದೆ. ಇಂತಹ ಐತಿಹಾಸಿಕ ಮತ್ತು ಮಹತ್ವದ ಪ್ರಸ್ತಾವವನ್ನು ಆತುರಾತುರದಿಂದ ಕಾರ್ಯಗತ ಮಾಡಬಾರದು ಎಂದು ಪೊಲಿಟ್ ಬ್ಯುರೊ ಹೇಳಿದೆ.
ಈ “ಸೆಂಟ್ರಲ್ ವಿಸ್ಟ”ಕ್ಕೆ ಪರಿಗಣಿಸಿರುವ ಭೂಮಿ ಜನತೆಗೆ ಸೇರಿದ್ದು, ಸರಕಾರ ಅದರ ಸುಫರ್ದುದಾರನಷ್ಟೇ ಎಂಬುದು ಸರಕಾರಕ್ಕೆ ಗೊತ್ತಿರಬೇಕು. ಸುಪ್ರಿಂ ಕೋರ್ಟ್ ಈಗಾಗಲೇ 2 ಜಿ ತರಂಗ ನೀಡಿಕೆ ಮೊಕದ್ದಮೆಯಲ್ಲಿ, ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ನಿಖರವಾದ ನಿರೂಪಣೆಯನ್ನು ಮತ್ತು ಸರಕಾರದ ಮಧ್ಯಪ್ರವೇಶದ ಮಿತಿಗಳನ್ನು ಹಾಕಿಕೊಟ್ಟಿದೆ. ಆದ್ದರಿಂದ ಸರಕಾರ ಇದನ್ನು ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಪೊಲಿಟ್ ಬ್ಯುರೊ ನೆನಪಿಸಿದೆ.
ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ) ಫೆಬ್ರುವರಿ 6ಮತ್ತು 7ರಂದು ಎರಡು ದಿನಗಳ ಸಾರ್ವಜನಿಕ ವಿಚಾರಣೆಯನ್ನು ನಡೆಸಿತು. ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿ ನಗರ ಯೋಜನಾಕಾರರು, ಪರಿಸರತಜ್ಞರು ಮತ್ತು ಸಮಾಜದ ಇತರ ವಿಭಾಗಗಳ ವ್ಯಕ್ತಿಗಳು ಭಾಗವಹಿಸಿದ್ದರು. ಈ “ಸೆಂಟ್ರಲ್ ವಿಸ್ಟ” ಪರಿಯೋಜನೆಯನ್ನು ಒಂದು ಸಂದಿಗ್ಧ ಹಾಗೂ ಗೋಪನೀಯ ರೀತಿಯಲ್ಲಿ ರೂಪಿಸಲಾಗಿದೆ ಎಂಬ ಒಂದು ಸಾರ್ವತ್ರಿಕ ಮತ್ತು ನೈಜ ಆತಂಕ ನಾಗರಿಕರಲ್ಲಿದೆ. ಆದ್ದರಿಂದ ಈ ಪರಿಯೋಜನೆಯನ್ನು ಮುಂದುವರೆಸುವ ಮೊದಲು ಕೆಲವು ಸಂಗತಿಗಳನ್ನು ಸಂಸತ್ತಿಗೆ ಮತ್ತು ಸಾರ್ವಜನಿಕರಿಗೆ ಒದಗಿಸುವುದು ಸರಕಾರದ ಹೊಣೆ. ಈ ಹೊಣೆಗಾರಿಕೆಗಳಲ್ಲಿ, ಈ ಕೆಳಗಿನ ಮಾಹಿತಿಗಳನ್ನು ಸಂಸತ್ತಿಗೆ ಒದಗಿಸುವುದು ಮತ್ತು ಅವನ್ನು ಸಾರ್ವಜನಿಕ ಅವಗಾಹನೆಗೆ ಲಭ್ಯವಾಗುವಂತೆ ಮಾಡುವ ಜವಾಬ್ದಾರಿಯೂ ಸೇರಿದೆ ಎಂದು ಪೊಲಿಟ್‌ಬ್ಯುರೊ ಪಟ್ಟಿ ಮಾಡಿದೆ:
- ಕೇಂದ್ರೀಯ ದಿಲ್ಲಿಯಲ್ಲಿ ಮತ್ತು ಸೆಂಟ್ರಲ್ ವಿಸ್ಟದ ಸಮೀಪದಲ್ಲಿ ಕೆಡವಬೇಕೆಂದಿರುವ ಎಲ್ಲ ಕಟ್ಟಡಗಳ ಪಟ್ಟಿ
- ಕೇಂದ್ರೀಯ ದಿಲ್ಲಿಯಲ್ಲಿ ಮತ್ತು ಸೆಂಟ್ರಲ್ ವಿಸ್ಟದ ಸಮೀಪದಲ್ಲಿ ಕಟ್ಟಲಿರುವ ಹೊಸ ಕಟ್ಟಡಗಳ ಪಟ್ಟಿ
- ಸಮಸ್ತ ಪರಿಯೋಜನೆಯ ಒಟ್ಟು ವೆಚ್ಚ ಮತ್ತು ಇದಕ್ಕಾಗಿ ವರ್ಷವಾರು ಹಣನೀಡಿಕೆ
- ಸೆಂಟ್ರಲ್ ವಿಸ್ಟದ ಪುನರ್ರಚನೆಗೆ ಬೇಕೆಂದಿರುವ ಸಮಯಾವಧಿ.
- ಸೆಂಟ್ರಲ್ ವಿಸ್ಟದ ಪುನರ್ರಚನೆಗೆ ಮಾಸ್ಟರ್‌ಪ್ಲಾನ್‌ನಲ್ಲಿ ಮಾಡಬೇಕಾದ ಬದಲಾವಣೆಗಳ ಪಟ್ಟಿ.
- ಈ ಪ್ರಸ್ತಾವವು ಒಟ್ಟು ಎಷ್ಟು ಎಕರೆ ಪ್ರದೇಶವನ್ನು ತಟ್ಟುತ್ತದೆ?
- ಪ್ರಸ್ತಾವಿತ ಪರಿಯೋಜನೆಗೆ ಒಂದು ಸ್ವತಂತ್ರ ಪ್ರಾಧಿಕಾರದಿಂದ ಪರಿಸರ ಪ್ರಭಾವದ ಅಂದಾಜಿನ ಅಧ್ಯಯನವನ್ನು ನಡೆಸಲಾಗಿದೆಯೇ?
“ಸೆಂಟ್ರಲ್ ವಿಸ್ಟ”ದ ರಚನೆಗೆ ಪ್ರಸ್ತಾವಿಸಿರುವ ಮರು-ಅಭಿವೃದ್ಧಿ ದಿಲ್ಲಿಯ ಈಗಿರುವ ಮಾಸ್ಟರ್ ಪ್ಲಾನ್ ನ್ನು ಕಾನೂನಿನಲ್ಲಿ ಹೇಳಿರುವ ಸೂಕ್ತ ಪ್ರಕ್ರಿಯೆಯನ್ನು ನಡೆಸದೆ ಉಲ್ಲಂಘಿಸುವಂತಿಲ್ಲ. ದಿಲ್ಲಿಯ ಪರಂಪರೆಯ ಪ್ರದೇಶವನ್ನು “ಸೆಂಟ್ರಲ್ ವಿಸ್ಟ”ದ ರಚನೆ ಹೇಗೆ ಪ್ರಭಾವಿಸುತ್ತದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಯಾವ ಮಾಹಿತಿಯೂ ಲಭ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಸರಕಾರ ಈ ಪರಿಯೋಜನೆಗೆ ಸದ್ಯ ತಡೆ ಹಾಕಿ, ಮೊದಲಿಗೆ ಸಂಸತ್ತಿನಲ್ಲಿ ಇದನ್ನು ಚರ್ಚಿಸಬೇಕು ಎಂದು ಆಗ್ರಹಿಸಿದೆ. ಏಕೆಂದರೆ, ಇದು ದೇಶದ ರಾಜಧಾನಿಯ ವಿಶಿಷ್ಟತೆಯಾದ ಸಂಸದ್ ಭವನದ ಪುನರ್ರಚನೆ, ಪುನರಭಿವೃದ್ಧಿ ಮತ್ತು ವಿಸ್ತರಣೆಗೆ ಸಂಬಂಧಪಟ್ಟಿದೆ.