ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಾರ್ಟಿಯನ್ನು ಮತ್ತು ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ಒಂದು ತಕ್ಕ ಪ್ರತ್ಯುತ್ತರವನ್ನು ನೀಡಿರುವ ದಿಲ್ಲಿಯ ಜನತೆಯನ್ನು ಅಭಿನಂದಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ “ರಾಷ್ಟ್ರೀಯ ಭದ್ರತೆ ಎಂದರೆ ಜೀವನ ಮತ್ತು ಜೀವನಾಧಾರಗಳನ್ನು ಕೂಡ, ಶಿಕ್ಷಣ ಮತ್ತು ಆರೋಗ್ಯವನ್ನು ಕೂಡ ಭದ್ರಗೊಳಿಸುವುದು ಎಂದರ್ಥ. ದೇಶದಲ್ಲಿ ಒಂದು ಗಂಭೀರ ಆರ್ಥಿಕ ಬಿಕ್ಕಟ್ಟಿನ ಎದುರು, ಉದ್ಯೋಗನಾಶಗಳ ಎದುರು ಮತದಾರರನ್ನು ಜರೆಯುವುದು, ಹೊಡೆದುರುಳಿಸಿ ಎಂದು ಬೆದರಿಸುವುದು ಪ್ರಜಾಪ್ರಭುತ್ವವನ್ನು ಚಿಂದಿಗೊಳಿಸುತ್ತಿರುವುದು ಇವೆಲ್ಲದಕ್ಕೂ ಒಂದು ತಕ್ಕ ಪ್ರತ್ಯುತ್ತರ ಸಿಕ್ಕಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರೆದು ಅವರು “ದಿಲ್ಲಿ ಚುನಾವಣೆಗಳು ಸಿ.ಎ.ಎ.-ಎನ್.ಪಿ.ಆರ್.- ಎನ್.ಆರ್.ಸಿ. ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳ ಮೇಲೆ ಜನಗಳ ತೀರ್ಪು ಎಂದು ಬಿಜೆಪಿ ಗಟ್ಟಿಯಾಗಿ ಹೇಳಿತ್ತು. ಮೋದಿ ಫಲಿತಾಂಶಗಳಿಗೆ ಕಿವಿಗೊಡಬೇಕು ಮತ್ತು ಸಿಎಎ ಯನ್ನು ಮತ್ತು ಎನ್‍ಪಿಆರ್ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.
ಕೇಜ್ರಿವಾಲ್‌ಗೆ ಪಿಣರಾಯಿ ವಿಜಯನ್ ಅಭಿನಂದನೆ
“ಎಎಪಿ ವಿಜಯ ದೇಶದಲ್ಲಿ ಒಳಗೊಳ್ಳುವ ರಾಜಕೀಯದ ಮುನ್ಸೂಚನೆಯಾಗಲಿ” ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರವರನ್ನು ಅಭಿನಂದಿಸುತ್ತ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿ ಯ ವಿಜಯ ಅನುರಣಿಸುತ್ತಿದೆ, ಇದು ದೇಶದಲ್ಲಿ ಎಲ್ಲರನ್ನೂ ಒಳಗೊಳ್ಳುವ ರಾಜಕೀಯದ ಮುನ್ಸೂಚನೆಯಾಗಲಿ ಎಂದು ಹೇಳಿದ್ದಾರೆ.