ಮಹಿಳೆಯರಿಗೆ ಸೇನಾಪಡೆಯಲ್ಲಿ ಪರ್ಮನೆಂಟ್ ಕಮಿಶನ್( ಕಾಯಂ ನಿಯೋಜನೆ) ನೀಡಬೇಕು ಎಂದು ಸುಪ್ರಿಂ ಕೋರ್ಟ್ ನಿರ್ಧರಿಸಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಸ್ವಾಗತಿಸುತ್ತ ದೇಶದ ಸರ್ವೋಚ್ಚ ನ್ಯಾಯಾಲಯ ಮಹಿಳೆಯರ ಸಮಾನತೆಯ ಹಕ್ಕನ್ನು ಎತ್ತಿ ಹಿಡಿದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಪಡೆಗಳಲ್ಲಿ ಮಹಿಳೆಯರು ಬಹಳ ವರ್ಷಗಳಿಂದ ಸಮಾನತೆಯ ತಮ್ಮ ಸಂವಿಧಾನಿಕ ಹಕ್ಕಿಗಾಗಿ ಹೋರಾಡುತ್ತಿದ್ದಾರೆ, ಈಗ ಸುಪ್ರಿಂ ಕೋರ್ಟ್ ಆ ಹಕ್ಕನ್ನು ಎತ್ತಿ ಹಿಡಿದಿದೆ ಎಂದ ಬೃಂದಾ ಕಾರಟ್ ಈ ತೀರ್ಪು ಮೋದಿ ಸರಕಾರದ ಬೂಟಾಟಿಕೆಯನ್ನೂ ಬಯಲಿಗೆ ತಂದಿದೆ ಎಂದು ಹೇಳಿದ್ದಾರೆ. ಮೋದಿ ಸರಕಾರ ಕೊನೆಯ ಗಳಿಗೆಯ ವರೆಗೂ ಮಹಿಳೆಯರಿಗೆ ರಕ್ಷಣಾ ಪಡೆಗಳಲ್ಲಿ ಸಮಾನತೆಯನ್ನು ನೀಡುವುದರ ವಿರುದ್ಧ ಹೋರಾಡಿತು. ಸರಕಾರ ತನ್ನ ರೂಢಿಗತ ಆಲೋಚನಾ ಕ್ರಮವನ್ನು ನಿಲ್ಲಿಸಿ, ಮಹಿಳೆಯರ ಸಮಾನತೆಯ ಸಂವಿಧಾನಿಕ ಹಕ್ಕನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಫೆಬ್ರುವರಿ ೧೭ರ ತನ್ನ ತೀರ್ಪಿನಲ್ಲಿ ಸುಪ್ರಿಂ ಕೋರ್ಟ್ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿರುವ ಎಲ್ಲ ಮಹಿಳಾ ಅಧಿಕಾರಿಗಳಿಗೆ, ಅವರ ಸೇವಾವಧಿ ಎಷ್ಟೇ ಇದ್ದರೂ, ಕಾಯಂ ನಿಯೋಜನೆಯನ್ನು ನೀಡಬೇಕು, ಎಂದು ಆದೇಶ ನೀಡಿದೆ. ಈ ಕುರಿತ ಅರ್ಜಿಯನ್ನು ಇತ್ಯರ್ಥ ಮಾಡುತ್ತ ಮೂರು ತಿಂಗಳೊಳಗೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ಹೇಳಿದೆ.
ಸೇನೆಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ಡ್ ಮಹಿಳಾ ಅಧಿಕಾರಿಗಳು ಅದೇ ದರ್ಜೆಯ ಪುರುಷ ಅಧಿಕಾರಿಗಳಂತೆ ಪರ್ಮನೆಂಟ್ ಕಮಿಷನ್ ಅಂದರೆ ಕಾಯಂ ನಿಯೋಜನೆಗೆ ಅರ್ಹರಾಗುವುದಿಲ್ಲ ಎಂಬುದನ್ನು ಕೆಲವು ಮಹಿಳಾ ಅಧಿಕಾರಿಗಳು ಪ್ರಶ್ನಿಸಿ ೨೦೦೬ರಲ್ಲಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ೨೦೧೦ರಲ್ಲಿ ದಿಲ್ಲಿ ಹೈಕೋರ್ಟ್ ಅವರ ಅರ್ಜಿಯನ್ನು ಎತ್ತಿ ಹಿಡಿದು ಮಹಿಳೆಯರಿಗೆ ಸೇನೆಯಲ್ಲಿ ಕಾಯಂ ನಿಯೋಜನೆ ನೀಡಬೇಕು ಎಂದು ಆದೇಶ ನೀಡಿತ್ತು . ಆದರೆ ಇದನ್ನು ಕೇಂದ್ರ ಸರಕಾರ ಜಾರಿಗೆ ತರದೆ ಸುಪ್ರಿಂ ಕೋರ್ಟ್‌ನಲ್ಲಿ ಈ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿತು. ಈ ಮೂಲಕ ಈ ಮಹಿಳಾ ಅಧಿಕಾರಿಗಳ ಸಮಾನತೆಯ ಹೋರಾಟ ಸುಪ್ರಿಂ ಕೋರ್ಟಿನಲ್ಲಿ ಮುಂದುವರೆಯಿತು. ವಿಚಾರಣೆಯ ಸಮಯದಲ್ಲಿ ಸೇನಾಪಡೆಗಳು ಇನ್ನೂ ಕೂಡ ಮಹಿಳಾ ಅಧಿಕಾರಿಗಳನ್ನು ತಮ್ಮ ಮುಖ್ಯಸ್ಥರನ್ನಾಗಿ ಸ್ವೀಕರಿಸಲು ಮಾನಸಿಕವಾಗಿ ಸಿದ್ಧವಾಗಿಲ್ಲ, ಏಕೆಂದರೆ ಅವರು ಬಹುಪಾಲು ಗ್ರಾಮೀಣ ಹಿನ್ನೆಲೆಯಿಂದ ಬಂದವರು ಎಂದೂ, ಈ ತೀರ್ಪನ್ನು ಪಾಲಿಸದಿರಲು ಮಹಿಳಾ ಅಧಿಕಾರಿಗಳ ದೈಹಿಕ ಮಿತಿಗಳ ಪ್ರಶ್ನೆಗಳೂ ಇವೆ ಎಂದೂ ಸಬೂಬು ಕೊಡುವ ಅಫಿಡವಿಟನ್ನು ಮೋದಿ ಸರಕಾರದ ಪರವಾಗಿ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಸುಪ್ರಿಂ ಕೊರ್ಟಿನ ತೀರ್ಪು ಗಮನಾರ್ಹವಾಗಿದೆ.
ಲಿಂಗದ ಆಧಾರದಲ್ಲಿ ಕಳಂಕ ಹಚ್ಚುವುದು ಅವರ ಮತ್ತು ದೇಶದ ಘನತೆಗೆ ತಕ್ಕುದಲ್ಲ. ಮಹಿಳಾ ಅಧಿಕಾರಿಗಳು ಅವರ ಪುರುಷ ಸಹಯೋಗಿಗಳ ಅಧೀನವಾಗಿಬೇಕಿಲ್ಲ ಎಂಬ ಸಮಯ ಬಂದಿದೆ ಎಂದು ಟಿಪ್ಪಣಿ ಮಾಡಿರುವ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಜಯ್ ರಸ್ತೊಗಿಯವರಿದ್ದ ನ್ಯಾಯಪೀಠ ಕೇಂದ್ರ ಸರಕಾರ ಒಡ್ಡಿದ ದೈಹಿಕ ಮಿತಿಗಳು ಮತ್ತು ಸಾಮಾಜಿಕ ರೂಢಿಗಳ ತರ್ಕಗಳ ಮೂಲಕ ಪರ್ಮನೆಂಟ್ ಕಮಿಶನ್‌ನ್ನು ನಿರಾಕರಿಸುವುದು ಆತಂಕಕಾರಿ, ಈ ಮನೋಭಾವ ಬದಲಾಗಬೇಕು ಎಂದಿದೆ.