ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಬಾರತ ಭೇಟಿಯ ಏಕಪಕ್ಷೀಯ ಅಜೆಂಡಾಕ್ಕೆ ಬಲಿಬೀಳಬಾರದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮೋದಿ ಸರಕಾರಕ್ಕ ಕರೆ ನೀಡಿದೆ. ಅಮೆರಿಕನ್ ಆಡಳಿತದ ಏಕಮೇವ ಆಶಯವೆಂದರೆ ಅಮೆರಿಕನ್ ಕಾರ್ಪೊರೇಟ್ ಹಿತಗಳಿಗೆ ಉತ್ತೇಜನೆ ನೀಡಲು ಭಾರತದ ಅರ್ಥವ್ಯವಸ್ಥೆಯನ್ನು ಇನ್ನಷ್ಟು ತೆರೆಸುವುದು, ಈ ಮೂಲಕ ಟ್ರಂಪ್ ರವರ ಮರು ಚುನಾವಣೆಯ ಪ್ರಯತ್ನಕ್ಕೆ ನೆರವಾಗುವುದು ಎಂದು ಪೊಲಿಟ್ ಬ್ಯುರೊ ಹೇಳಿದೆ.
ಅಮೆರಿಕಾದ ಅಜೆಂಡಾ ಭಾರತೀಯ ರೈತರ, ನಮ್ಮ ಕೃಷಿಯ, ನಿರ್ದಿಷ್ಟವಾಗಿ, ಹೈನುಗಾರಿಕೆ ಮತ್ತು ಕೋಳಿ ಸಾಕಣೆ ಉದ್ಯಮವನ್ನು ಅತ್ಯಂತ ಪ್ರತಿಕೂಲಕರವಾಗಿ ತಟ್ಟುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ 867 ಬಿಲಯನ್ ಡಾಲರುಗಳ ಭಾರೀ ಸಬ್ಸಿಡಿಯ ಮೂಲಕ ತನ್ನ ಕೃಷಿವ್ಯಾಪಾರ ಕ್ಷೇತ್ರ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳನ್ನು ವಿಕೃತಗೊಳಿಸಿ, ಅಭಿವೃದ್ಧಿಶೀಲ ದೇಶಗಳ ಸ್ಥಳೀಯ ರೈತರು ಅವರೊಂದಿಗೆ ಸ್ಪರ್ಧಿಸಲಾರದಂತೆ ಮಾಡಿದೆ. ಟ್ರಂಪ್ ಈಗ ಭಾರತ, ತನ್ನ ರೈತರನ್ನು ಸಂರಕ್ಷಿಸಲು, ಜನಗಳ ಆಹಾರ ಭದ್ರತೆಗೆ ಆಹಾರ ಸಂಗ್ರಹವನ್ನು ಸಾಧ್ಯಗೊಳಿಸಲು, ಮತ್ತು ರೈತರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕೊಡಲು ಒಂದು ಧೋರಣಾ ಸಾಧನವಾಗಿ ಕೆಲಸ ಮಾಡುತ್ತಿರುವ ಆಮದು ಸುಂಕಪಟ್ಟಿಯ ತಡೆಯನ್ನು ತೆಗೆದು ಹಾಕಬೇಕು ಎಂದು ಬಯಸುತ್ತಿದ್ದಾರೆ. ಇದು ಭಾರತೀಯ ಕೃಷಿಯನ್ನು ಮತ್ತು ನಮ್ಮ ಕೋಟ್ಯಂತರ ಜನಗಳ ಜೀವನಾಧಾರಗಳನ್ನು ಧ್ವಂಸಮಾಡುತ್ತದೆ.
ಟ್ರಂಪ್, ಈಗ ಜನಗಳ ಕೈಗೆಟಕುವ ಬೆಲೆಗಳಲ್ಲಿ ಸಾಮಾನ್ಯ ಬಳಕೆಯ ಔಷಧಿಗಳನ್ನು ಉತ್ಪಾದಿಸಿ ಒಂದು ನಿರ್ಣಾಯಕ ಪಾತ್ರ ವಹಿಸುತ್ತಿರುವ ಭಾರತದ ಆರೋಗ್ಯಪಾಲನೆ ವಲಯದ ಮೇಲೆಯೂ ಗುರಿಯಿಟ್ಟಿದ್ದಾರೆ. ಭಾರತ ಕಡ್ಡಾಯ ಲೈಸೆನ್ಸಿಂಗ್ ವ್ಯವಸ್ಥೆಯನ್ನು ತೆಗೆದು ಹಾಕಿ ಅಮೆರಿಕನ್ ಔಷಧಿ ಕಾರ್ಪೊರೇಟ್ಗಳಿಗ ಅನುಕೂಲ ಮಾಡಿಕೊಡಬೇಕು ಎಂದೀಗ ಅಮೆರಿಕ ಸಂಯುಕ್ತ ಸಂಸ್ಥಾನ ಆಗ್ರಹಿಸುತ್ತಿದೆ.
ಅಮೆರಿಕಾದ ಕಾರ್ಪೊರೇಟ್ಗಳ ಇ-ವಾಣಿಜ್ಯ ಅಜೆಂಡಾ ಕೂಡ ಇದೇ ರೀತಿಯಲ್ಲಿ ಅತಿಕ್ರಮಣಕಾರಿಯಾಗಿದೆ. ಅದು ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯಲ್ಲಿ ಒಂದು ಡಿಜಿಟಲ್ ವ್ಯಾಪಾರ ವ್ಯವಸ್ಥೆಗೆ ಭಾರತ ಸಹಿ ಹಾಕುವಂತೆ ಪುಸಲಾಯಿಸಲು ಪ್ರಯತ್ನಿಸುತ್ತಿದೆ. ಈ ವ್ಯಾಪಾರ ವ್ಯವಸ್ಥೆ ಅಮೆರಿಕನ್ ದೊಡ್ಡ-ತಂತ್ರಜ್ಞಾನ ವಲಯಕ್ಕೆ ಭಾರತದ ಅರ್ಥವ್ಯವಸ್ಥೆ ಮತ್ತು ರಾಜಕೀಯ ಪ್ರಕ್ರಿಯೆಯ ಮೇಲೆ ತನ್ನ ಹತೋಟಿಯನ್ನು ಹೆಚ್ಚಿಸಲು ಮತ್ತು ದತ್ತಾಂಶಗಳು ಗಡಿಗಳಾಚೆ ಯಾವುದೇ ಪರಿಹಾರ ನೀಡದೆ ಮುಕ್ತವಾಗಿ ಹರಿದಾಡಲು ಅನುಕೂಲ ಮಾಡಿ ಕೊಡುತ್ತದೆ. ಅದೇ ವೇಳೆಗೆ ಹೆಚ್1 ಬಿ ವೀಸಾಗಳನ್ನು ಕುರಿತಂತೆ ಅಮೆರಿಕಾದ ನಿರ್ಬಂಧಗಳ ಧೋರಣೆ ಭಾರತೀಯ ಐಟಿ ಉದ್ಯಮಕ್ಕೆ ಪ್ರತಿಕೂಲವಾಗಿದೆ. ಈ ಬಗ್ಗೆ ಭಾರತೀಯ ಸರಕಾರ ಒತ್ತು ನೀಡಬೇಕು ಎಂದು ಪೊಲಿಟ್ ಬ್ಯುರೊ ಹೇಳಿದೆ.
ಭಾರತದ ಸಣ್ಣ ಉತ್ಪಾಧಕರಿಗೆ, ವಿಶೇಷವಾಗಿ, ಸೌರಶಕ್ತಿ ಸೆಲ್ಗಳು ಮುಂತಾದ ರಂಗಗಳಲ್ಲಿನ ಸಣ್ಣ ಉತ್ಪಾದಕರಿಗೆ ನೀಡುತ್ತಿರುವ ರಫ್ತು ಸಬ್ಡಿಡಿಗಳ ಬಗ್ಗಯೂ ಒತ್ತಡಗಳನ್ನು ಹಾಕಲಾಗುತ್ತಿದೆ.
ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಚೌಕಟ್ಟು ಅಧಿನಿರ್ಣಯ ಕುರಿತ ಪ್ಯಾರಿಸ್ ಒಪ್ಪಂದದಿಂದ ಏಕಪಕ್ಷೀಯವಾಗಿ ಹೊರಬಂದಿದೆ, ಪರಿಹಾರ ನೀಡಲು, ಹವಾಮಾನ ಬದಲಾವಣೆಯನ್ನು ಶಮನಗೊಳಿಸುವ ನಿಧಿಗೆ ಹಣಕಾಸು ನೀಡಲು ನಿರಾಕರಿಸುತ್ತಿದೆ. ಭಾರತ ಪ್ರಮುಖ ಪರಿಸರ ಮಾಲಿನ್ಯ ಮತ್ತು ಹವಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಭಾರತ ಸರಕಾರ ಈ ಹವಾಮಾನ ಏಕಪಕ್ಷೀಯತೆಯನ್ನು ಪ್ರತಿರೋಧಿಸಬೇಕಾಗಿದೆ ಮತ್ತು ಅಮೆರಿಕ ಪರಿಸರ ಮಾಲಿನ್ಯ ಉಂಟುಮಾಡುವ ಗ್ರೀನ್ ಹೌಸ್ ಅನಿಲಗಳನ್ನು ಬಹಳ ಕಾಲದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ವಾತಾವರಣಕ್ಕೆ ಬಿಡುತ್ತಿರುವ ದೇಶವಾಗಿರುವುದರಿಂದ ಅದರ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳೂವಂತೆ ಮಾಡಲು ಪ್ರತಿರೋಧವನ್ನು ಕಟ್ಟಿ ಬೆಳೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.
ಇಂದು ಅಮೆರಿಕ ಸಂಯುಕ್ತ ಸಂಸ್ಥಾನವು ಒಂದು ನಿಯಮ-ಆಧಾರಿತ ವ್ಯಾಪಾರ ಪದ್ಧತಿ ಮತ್ತು ಅಂತರ್ರಾಷ್ಟ್ರೀಯ ವ್ಯವಸ್ಥೆಗೆ ಅತಿ ದೊಡ್ಡ ಬೆದರಿಕೆಯ ಪ್ರತಿನಿಧಿಯಾಗಿದೆ, ಜೀವನಾಧಾರಗಳ ಭದ್ರತೆ ಮತ್ತು ಭಾರತದಂತಹ ದೇಶಗಳ ಸಾರ್ವಭೌಮತೆಯನ್ನು ಬುಡಮೇಲು ಮಾಡುತ್ತಿದೆ. ಅದರ ಸುಂಕಪಟ್ಟಿ ಏಕಪಕ್ಷೀಯತೆಯಿಂದಾಗಿ ಈಗಾಗಲೇ ಕಳೆದ ಒಂದು ವರ್ಷದಲ್ಲೇ ಉಕ್ಕು ಉತ್ಪನ್ನಗಳ ರಫ್ತಿನಲ್ಲಿ 46ಶೇ. ಇಳಿಕೆಯಾಗುವಂತಾಗಿದೆ. ಭಾರತವನ್ನು ಒಂದು ಅಭಿವೃದ್ಧಿ ಹೊಂದಿರುವ ದೇಶ ಎಂದು ಏಕಪಕ್ಷೀಯವಾಗಿ ಮರು ವರ್ಗೀಕರಣ ಮಾಡುವುದರಿಂದ ಬದ್ಧತೆಗಳನ್ನು ಪರಿಸ್ಥಿತಿಗಳಿಗನುಗುಣವಾಗಿ ಹೊಂದಿಸಿಕೊಳ್ಳಲು ಮತ್ತು ದೀರ್ಘಾವಧಿ ಅನುಷ್ಠಾನಕ್ಕೆ ಅಗತ್ಯವಾದ ವಿಶೇಷ ಮತ್ತು ಭಿನ್ನ ಪ್ರಕಾರದ ಅವಕಾಶಗಳು ಇಲ್ಲವಾಗುತ್ತವೆ ಎಂಬ ಸಂಗತಿಯತ್ತ ಪೊಲಿಟ್ ಬ್ಯುರೊ ಗಮನ ಸೆಳೆದಿದೆ.
ಹಲವು ಮಿಲಿಟರಿ ಮತ್ತು ಭದ್ರತಾ ಒಪ್ಪಂದಗಳು ಹಾಕುತ್ತಿರುವ ಒತ್ತಡಗಳು ಮತ್ತು ಅಮೆರಿಕಾದ ಸಾಮರಿಕ ಹಿತಗಳನ್ನು ಭದ್ರಗೊಳಿಸಿಕೊಳ್ಳಲಿಕ್ಕಾಗಿ ಹಾಗೂ ಶಸ್ತಾಸ್ತ್ರಗಳ ಮಾರಾಟವನ್ನು ಉತ್ತೇಜಿಸಲಿಕ್ಕಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯ ಹಾಕುವುದು ಭಾರತದ ಸಾರ್ವಭೌಮ ಹಿತಗಳಿಗೆ ಮತ್ತು ಭದ್ರತಾ ಕಾಳಜಿಗಳಿಗೆ ಮಾರಕವಾಗುತ್ತದೆ.
ಆದ್ದರಿಂಧ ಬಿಜೆಪಿ ಸರಕಾರ ಭಾರತದ ಆರ್ಥಿಕ ಮತ್ತು ಭದ್ರತಾ ಕಾಳಜಿಗಳನ್ನು ಶಿಥಿಲಗೊಳಿಸುವ ಅಮೆರಿಕಾದ ಒತ್ತಡಗಳನ್ನ ಪ್ರತಿರೋಧಿಸಬೇಕು ಎಂದು ಕರೆ ನೀಡಿದೆ. ಭಾರತ, ಈ ಬಿಜೆಪಿ ಸರಕಾರದ ಅಡಿಯಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯ ಒಂದು ಅಡಿಯಾಳು ಮಿತ್ತನ ಸ್ಥಾನಕ್ಕೆ ಇಳಿಸಲ್ಟಪಟ್ಟಿದೆ. ಇದು ಭಾರತದ ಹಿತಗಳಿಗೆ ಮತ್ತು ಜಗತ್ತಿನಲ್ಲಿ ಅದರ ಸ್ವತಂತ್ರ ಉನ್ನತ ಸ್ಥಾನಕ್ಕೆ ವಿರುದ್ಧವಾಗಿರುವಂತದ್ದು ಎಂದು ಪೊಲಿಟ್ ಬ್ಯುರೊ ಹೇಳಿದೆ.
ಅಮೆರಿಕಾದ ಅಧ್ಯಕ್ಷ ಟ್ರಂಪ್ರವರ ಭೇಟಿಯ ವಿರುದ್ಧ ಪ್ರತಿಭಟನೆಗಳನ್ನು ಪ್ರಶಂಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಬಿಜೆಪಿ ಸರಕಾರ ಜನಗಳ ದನಿಗ ಕಿವಿಗೊಡಬೇಕು, ಅಮೆರಿಕಾದ ಒತ್ತಡಗಳಿಗೆ ಬಲಿಬೀಳಬಾರದು ಎಂದು ಹೇಳಿದೆ.