- 1936ರಲ್ಲಿ ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷ(ಸಿಪಿಜಿಬಿ)ದ ರಜನಿ ಪಾಮೆ ದತ್ ಮತ್ತು ಬೆನ್ ಬ್ರಾಡ್ಲಿಯವರು ಭಾರತದಲ್ಲಿನ ಸಾಮ್ರಾಜ್ಯಶಾಹಿ ವಿರೋಧಿ ಜನತಾ ರಂಗಕ್ಕಾಗಿ ಪ್ರಕಟಿಸಿದ ಪ್ರಬಂಧವು ಭಾರತದ ಕಮ್ಯುನಿಸ್ಟ್ ಚಳುವಳಿಯ ಮೇಲೆ ಅಗಾಧ ಪ್ರಭಾವ ಬೀರಿತು. ಈ ದತ್ – ಬ್ರಾಡ್ಲಿ ಪ್ರಬಂಧವು ಕಮ್ಯುನಿಸ್ಟ್ ಚಳುವಳಿಗೆ ಬಹಳವಾಗಿ ಸಹಾಯ ಮಾಡಿದೆ. ಈ ಅವಧಿಯಲ್ಲಿ ಕಮ್ಯುನಿಸ್ಟರ ಮಧ್ಯಪ್ರವೇಶದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ದೇಶದಲ್ಲಿ ಕಮ್ಯುನಿಸ್ಟ್ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿರುವ ಕಾರ್ಯಕರ್ತರು ಮತ್ತು ಹೊಸ ತಲೆಮಾರಿನ ಮುಖಂಡರು ಹೊರಹೊಮ್ಮಿದರು.
ದತ್ – ಬ್ರಾಡ್ಲಿ ಪ್ರಬಂಧವು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಪತ್ರಿಕೆ ಇಂಟರ್‌ನ್ಯಾಷನಲ್ ಪ್ರೆಸ್ ಕರೆಸ್ಪಾಂಡೆನ್ಸ್(ಇಂಪ್ರೆಕರ್)ನಲ್ಲಿ ಫೆಬ್ರವರಿ ೨೯, ೧೯೩೬ರಲ್ಲಿ ಪ್ರಕಟವಾಯಿತು. ಅದನ್ನು ಭಾರತದಲ್ಲಿನ ಸಾಮ್ರಾಜ್ಯಶಾಹಿ-ವಿರೋಧಿ ಜನತಾ ರಂಗಕ್ಕಾಗಿನ ಪ್ರಬಂಧವೆಂದೂ ಕರೆಯಲಾಯಿತು. ಗಮನಾರ್ಹ ಅಂತರ್ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಬಂಧವನ್ನು ಪ್ರಕಟಿಸಲಾಯಿತು. ಅಂತರ್ರಾಷ್ಟ್ರೀಯವಾಗಿ ಫ್ಯಾಸಿಸಂ ಏರುಗತಿಯಲ್ಲಿರುವಾಗಲೇ, ಭಾರತದಲ್ಲಿ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡ ಸಮಯದಲ್ಲಿ ರಾಷ್ಟ್ರೀಯ ಚಳುವಳಿಯ ಯುವಜನರಲ್ಲಿ ದೊಡ್ಡ ನಿರಾಸೆಯುಂಟಾಗಿತ್ತು. ೧೯೩೪ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷ(ಸಿ.ಎಸ್.ಪಿ)ವು ವಸಾಹತು ಪ್ರಶ್ನೆಯ ವಿಷಯದಲ್ಲಿ ಮಾರ್ಕ್ಸ್‌ವಾದಿ ಧೋರಣೆಯಿಂದ ಹೆಚ್ಚು ಪ್ರಭಾವಗೊಂಡಿತ್ತು. ಸಿ.ಎಸ್.ಪಿ.ಯ ಸ್ಥಾಪನೆಯೊಂದಿಗೆ ಪಂಥೀಯವಲ್ಲದ ಒಂದು ಚಿಂತನೆಯ ಪ್ರವೃತ್ತಿ ಬೆಳೆಯಿತು.
ಸಮಾಜವಾದಕ್ಕಾಗಿನ ಹೋರಾಟದ ಸಾಧನವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಾನಾಗಿಯೇ ಪರಿವರ್ತನೆ ಹೊಂದಲಿದೆ ಎಂದು ಸಿ.ಎಸ್.ಪಿ.ಯ ಒಂದು ಗಮನಾರ್ಹ ವಿಭಾಗ ನಿರೀಕ್ಷೆ ಮಾಡಿತ್ತು. ಸಾಮ್ರಾಜ್ಯಶಾಹಿ-ವಿರೋಧಿ ಜನರನ್ನು ಸಂಘಟಿಸಿ ಬಂಡವಾಳಶಾಹಿಗಳನ್ನು ಬಯಲುಮಾಡುವ ಮೂಲಕ ಹೋರಾಟಗಳಲ್ಲಿ ಸೇರಿಕೊಂಡು ಕಾಂಗ್ರೆಸ್ಸಿನ ಡೋಲಾಯಮಾನ ಹಾಗೂ ವಂಚನೆಯನ್ನು ಪರಿಣಾಮಕಾರಿಯಾಗಿ ವಿರೋಧಿಸುವುದು ಕಮ್ಯುನಿಸ್ಟರ ಮತ್ತು ಸೋಶಿಯಲಿಸ್ಟರ ಕೆಲಸವೆಂದು ಕಮ್ಯುನಿಸ್ಟರು ಸ್ಪಷ್ಟಪಡಿಸಿದರು. ಕಾಂಗ್ರೆಸ್ಸಿನ ಬಂಡವಾಳಶಾಹಿ ನಾಯಕತ್ವ ಮತ್ತು ಕಾರ್ಯಕರ್ತರ ನಡುವೆ ಯಾವುದೇ ಭಿನ್ನತೆಯನ್ನು ಪರಿಗಣಿಸದೆ ಇಡೀ ಕಾಂಗ್ರೆಸ್ಸನ್ನು ವಿರೋಧಿಸುವ ತನ್ನ ತಪ್ಪು ತಿಳುವಳಿಕೆಯನ್ನು ಸರಿಪಡಿಸಿಕೊಳ್ಳಲು ಕಮ್ಯುನಿಸ್ಟ್ ಪಕ್ಷವು ಈ ಪ್ರಕ್ರಿಯೆಯ ಮೂಲಕ ಆರಂಭಿಸಿತು. ವಾಸ್ತವದಲ್ಲಿ ಈ ತಪ್ಪು ತಿದ್ದಿಕೊಳ್ಳುವ ಪ್ರಕ್ರಿಯೆಯ ಪರಿಣಾಮವಾಗಿಯೇ ಒಂದು ಸಾಮ್ರಾಜ್ಯಶಾಹಿ-ವಿರೋಧಿ ರಂಗದ ಕಲ್ಪನೆ ಮೂಡಿದ್ದು.
ಪ್ರಾಥಮಿಕವಾಗಿ ಈ ಕೆಳಗಿನ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ದತ್ – ಬ್ರಾಡ್ಲಿ ಪ್ರಬಂಧವು ಮಾಡಿತು: (ಅಂದು ಅಸ್ತಿತ್ವದಲ್ಲಿದ್ದ) ಸನ್ನಿವೇಶವನ್ನು ಬದಲಾಯಿಸುವುದು ಹೇಗೆ? ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಪ್ರತಿರೋಧವಾಗಿ ಮತ್ತು ಜನರ ಅಗತ್ಯಗಳಿಗಾಗಿ ನಾವು ಹೇಗೆ ಒಗ್ಗೂಡುವುದು ಮತ್ತು ಒಂದು ಶಕ್ತಿಯುತ ಚಳುವಳಿಯನ್ನು ಅಣಿನೆರೆಸುವುದು ಹೇಗೆ? ಚುನಾಯಿತರಾದ ರಾಷ್ಟ್ರೀಯ ಪ್ರತಿನಿಧಿಗಳ ನೀತಿಗಳು ಏನಾಗಿರಬೇಕು? ಸಾಮ್ರಾಜ್ಯಶಾಹಿಯನನು ಹಿಮ್ಮೆಟ್ಟಿಸಲು ರಾಷ್ಟ್ರೀಯ ಹೋರಾಟಗಳ ಮುಂದಿನ ದಾರಿಯ ನಿಲುವು ಏನಾಗಿರಬೇಕು?
ಸಮಾನ ಹೋರಾಟದಲ್ಲಿರುವ ಎಲ್ಲಾ ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳ ಐಕ್ಯತೆ ಪ್ರಸ್ತುತ ಸನ್ನಿವೇಶದಲ್ಲಿನ ಪ್ರಮುಖ ಅಗತ್ಯ. ನಿರಂತರವಾಗಿ ತೀವ್ರಗೊಳ್ಳುತ್ತಿರುವ ದಾಳಿ ದಬ್ಬಾಳಿಕೆಗಳ ವಿರುದ್ಧ ಯಶಸ್ವಿ ಹೋರಾಟಕ್ಕಾಗಿ ಇದು ತೀರ ಅನಿವಾರ್ಯವಾದ ಸ್ಥಿತಿ. ಆದರೆ ಐಕ್ಯತೆ ಅಂದರೇನು? ಎಲ್ಲರೂ ಇವತ್ತು ಐಕ್ಯತೆ ಮತ್ತು ಸಂಯುಕ್ತ ರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ಅದರ ಹೆಸರಿನಲ್ಲಿ ಹಲವಾರು ಪ್ರಸ್ತಾಪಗಳನ್ನು ಮುಂದಿಡಲಾಗುತ್ತಿದೆ.
ಬ್ರಿಟಿಷ್ ಆಳರಸರ ಮಿತ್ರರು ಬಲಪಂಥೀಯ ಜನಗಳು ಯಾರ ಉದ್ದೇಶ ಸಾಮ್ರಾಜ್ಯಶಾಹಿಯೊಂದಿಗೆ ಸಹಕಾರ ಮತ್ತು ಅಧಿಕಾರದ ಸ್ಥಾನಗಳಿಗೆ ಪ್ರವೇಶ ಪಡೆಯುವುದಾಗಿದೆಯೋ.. .ಅಂಥವರು ಐಕ್ಯತೆಯ ಪ್ರಸ್ತಾಪವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಾರೆ; ಸಾಮ್ರಾಜ್ಯಶಾಹಿಗೆ ಅವರ ಸೇವೆಯನ್ನು ಮುಂದುವರಿಸುತ್ತಾರೆ; ಅವರಿಗೆ ಅವರದ್ದೇ ಆದ ಯಾವುದೇ ಅನುಯಾಯಿಗಳು ಇಲ್ಲ; ಪಟ್ಟ ಪಡೆಯಲು ಹಾತೊರೆದು ಅದು ಜಯಿಸಿದ ಮೇಲೆ ತಮ್ಮ ಕಾರ್ಯ ಸಿದ್ಧಿಸಿಕೊಳ್ಳುವುದು ಅವರ ಇರಾದೆ. ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವನ್ನು ತ್ಯಜಿಸಿ ಬ್ರಿಟಿಷರ ಮಿತ್ರರೊಂದಿಗೆ ಒಗ್ಗೂಡುವುದು, ಸಾಮ್ರಾಜ್ಯಶಾಹಿ-ವಿರೋಧಿ ಸಂಯುಕ್ತ ರಂಗವನ್ನು ದುರ್ಬಲಗೊಳಿಸುತ್ತದೆಯೇ ವಿನಃ ಬಲಪಡಿಸುವುದಿಲ್ಲ.
ಐಕ್ಯತೆಯು ಒಂದು ಅಮೂರ್ತವಾದದ್ದೆಂದು ಪರಿಗಣಿಸದೆ, ಸಾಮ್ರಾಜ್ಯಶಾಹಿ- ವಿರೋಧಿ ಹೋರಾಟದ ಆಧಾರದಲ್ಲಿ ಮಾತ್ರ ಆ ಐಕ್ಯತೆ ಸಾಧನೆಯಾಗಬೇಕು. ವಿದೇಶಿಯರ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ಎಲ್ಲಾ ಭಾರತೀಯರನ್ನೂ ಒಗ್ಗೂಡಿಸಬೇಕೆಂದು ನಾವು ಎಷ್ಟೇ ಬಯಸಿದರೂ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಎಲ್ಲಾ ಭಾರತೀಯ ಜನರ, ನೂರಕ್ಕೆ ನೂರರಷ್ಟು, ಎಲ್ಲಾ ವಿಭಾಗಗಳ ಮತ್ತು ವರ್ಗಗಳಂದು ಅಮೂರ್ತ ಐಕ್ಯತೆ ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕು.
ಕೆಲವು ವಿಭಾಗದವರು ಸಾಮ್ರಾಜ್ಯಶಾಹಿ ಹಿತಾಸಕ್ತಿಯೊಂದಿಗೆ ಜೋಡಣೆಯಾಗಿರುತ್ತಾರೆ; ಉದಾಹರಣೆಗೆ ರಾಜರುಗಳು, ಭೂಮಾಲಕರು, ಬಡ್ಡಿ ಸಾಹುಕಾರರು, ಕೋಮು ಭಿನ್ನತೆಗಳನ್ನು ದುರುಪಯೋಗ ಮಾಡಿಕೊಳ್ಳುವ ಪ್ರತಿಗಾಮಿ ಧಾರ್ಮಿಕ ಹಾಗೂ ರಾಜಕೀಯ ಜನರು, ವರ್ತಕರು ಮತ್ತು ಶ್ರೀಮಂತ ವರ್ಗದವರು ಸಾಮ್ರಾಜ್ಯಶಾಹಿಗಳೊಂದಿಗೆ ಸಖ್ಯ ಬಯಸುತ್ತಾರೆ. ರಾಷ್ಟ್ರೀಯ ಹೋರಾಟದ ಶಕ್ತಿಗಳನ್ನು ಅಂದಾಜು ಮಾಡುವಾಗ ಸಾಮ್ರಾಜ್ಯಶಾಹಿ ಪರಿಸ್ಥಿತಿಯಡಿಯಲ್ಲಿನ ಜನರ ವರ್ಗ ಸಂರಚನೆಯ ವಾಸ್ತವಗಳನ್ನು ನಾವು ಗಮನಕ್ಕೆ ತಗೊಳ್ಳಬೇಕು.
ಆದರೆ ಸಾಮ್ರಾಜ್ಯಶಾಹಿಯ ವಿರುದ್ಧ ಜನಸಂಖ್ಯೆಯ ಅಪಾರ ಬಹುಸಂಖ್ಯಾತರ ಅಂದರೆ ಸಾಮ್ರಾಜ್ಯಶಾಹಿ ಆಳ್ವಿಕೆಯಡಿಯಲ್ಲಿ ನರಳುತ್ತಿರುವ ಎಲ್ಲ ಜನಸಮೂಹಗಳ ಮತ್ತು ರಾಷ್ಟ್ರೀಯ ವಿಮೋಚನೆಗಾಗಿನ ಸಾರ್ವತ್ರಿಕ ಹೋರಾಟದಲ್ಲಿ ಸೇರಿಕೊಳ್ಳಲು ಸಿದ್ಧರಿರುವಕಿತರ ವರ್ಗಗಳ ಎಲ್ಲ ಜನರ ಐಕ್ಯತೆ ಸಾಧ್ಯವಿದೆ.
ಅಂತಹ ಗುಂಪುಗಳಿಗೆ ಕನಿಷ್ಠ ಅಗತ್ಯ ಆಧಾರವೆಂದರೆ: ೧) ಸಾಮ್ರಾಜ್ಯಶಾಹಿಯ ವಿರುದ್ಧ ಮತ್ತು ಈಗಿರುವ ಗುಲಾಮಿ ಸಂವಿಧಾನದ ವಿರುದ್ಧ, ಭಾರತದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಅಚಲವಾದ ಹೋರಾಟದ ನಿಲುವು; ೨) ದುಡಿಯುವ ಜನರ ಬದುಕಿನ ಅಗತ್ಯಗಳಿಗಾಗಿ ಕ್ರಿಯಾಶೀಲ ಹೋರಾಟ ಎಂಬುದು ಸ್ಪಷ್ಟವಾಗಿದೆ. ಭಾರತೀಯ ಜನರ ಇಂತಹ ಐಕ್ಯತೆಯನ್ನು, ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟಕ್ಕಾಗಿನ ಒಂದು ಸಾಮ್ರಾಜ್ಯಶಾಹಿ-ವಿರೋಧಿ ಸಂಯುಕ್ತ ಜನತಾ ರಂಗವನ್ನು ನಾವು ಬಯಸುವುದು.
ರಾಷ್ಟ್ರೀಯ ಕಾಂಗ್ರೆಸ್ಸಿನ ಇಂದಿನ ನಾಯಕತ್ವ ಮತ್ತು ತಂತ್ರಗಳನ್ನು ನಾವು ಎಡಪಂಥೀಯರು ಅನೇಕ ಬಾರಿ ತೀಕ್ಷ್ಣವಾಗಿ ಟೀಕೆಮಾಡಿದ್ದೇವೆ. ಅನೇಕ ತೀರ್ಮಾನಗಳು ಮತ್ತು ನೀತಿಗಳು . . ರಾಷ್ಟ್ರೀಯ ಹೋರಾಟದ ನೈಜ ಹಿತಾಸಕ್ತಿಗೆ ವಿನಾಶಕಾರಿಯಾಗಿವೆ ಮತ್ತು ಅವು ಸಾಮ್ರಾಜ್ಯಶಾಹಿಗಳಿಗೆ ಶರಣಾಗುವುದಕ್ಕೆ ಸಮಾನವಾಗಿವೆ ಎಂದು ನಮಗೆ ಕಂಡು ಬಂದಿದೆ. ಈ ತೀರ್ಮಾನಗಳು ಮತ್ತು ನೀತಿಗಳು ಈಗಿರುವ ಪ್ರಬಲ ಬಂಡವಾಳಶಾಹಿ ನಾಯಕತ್ವದ ಕಾರಣದಿಂದ ಆಗಿವೆ; ಅವರ ಹಿತಾಸಕ್ತಿಗಳು ಮತ್ತು ಸಾಮಾನ್ಯ ಜನರ ಹಿತಾಸಕ್ತಿಗೆ ಮತ್ತು ರಾಷ್ಟ್ರೀಯ ಹೋರಾಟದ ಹಿತಾಸಕ್ತಿಗಳ ನಡುವೆ ಸಂಘರ್ಷ ವಿರುವುದರಿಂದಾಗಿ ಹೀಗಾಗಿದೆ ಎಂಬುದನ್ನು ನಾವು ಗುರುತಿಸಿದ್ದೇವೆ.
ಈ ಟೀಕೆಗಳು ನಿರ್ದಿಷ್ಟ ನೀತಿಗಳ ವಿರುದ್ಧ ಮಾಡಿದ್ದೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತರ ವಿರುದ್ಧ ಮಾಡಿದ ಟೀಕೆಗಳು ಎಂದು ಭಾವಿಸಬಾರದು. ನಿರ್ದಿಷ್ಟ ನಾಯಕತ್ವ ಮತ್ತು ನಿರ್ದಿಷ್ಟ ನೀತಿಗಳ ಬಗೆಗಿನ ನಮ್ಮ ವಿರೋಧವು ಕಾಂಗ್ರೆಸ್ ಪ್ರತಿನಿಧಿಸುವ ರಾಷ್ಟ್ರೀಯ ಚಳುವಳಿಯ ಕಾಲಾಳುಗಳಿUಸಾಮೂಹಿಕ ಪಡೆಗಳಿಗೆ ಸಹಾಯ ಮಾಡುವ ಮತ್ತು ರಾಷ್ಟ್ರೀಯ ಚಳುವಳಿಗೆ ಸಹಾಯ ಮಾಡಿ ಬಲಪಡಿಸ ಆಧಯವನ್ನಷ್ಟೇ ಹೊಂದಿದೆ.
ರಾಷ್ಟ್ರೀಯ ಕಾಂಗ್ರೆಸ್ಸಿನ ಮೂಲಕ ಈಗ ಸಾಧಿಸಿರುವ ಐಕ್ಯತೆಯ ಹಂತಕ್ಕೆ ಭಂಗವಾಗದಂತೆ ನಾವೀಗ ಅಗತ್ಯವಾಗಿ ಮಾಡಬೇಕಿರುವುದು ಏನೆಂದರೆ ಒಂದು ವಿಶಾಲ ರಂಗದತ್ತ ಈ ಐಕ್ಯತೆಯನ್ನು ಬಲಪಡಿಸಬೇಕು ಮತ್ತು ವಿಸ್ತರಿಸಬೇಕು: ಆ ಮೂಲಕ ಸಾಮ್ರಾಜ್ಯಶಾಹಿಯ ವಿರುದ್ಧದ ಸಾಮೂಹಿಕ ಹೋರಾಟದ ಸಂಘಟನೆಯ ಹಾಗೂ ನಾಯಕತ್ವದ ಹೊಸ ಹಂತಕ್ಕೆ ಹೋಗಬೇಕಿದೆ.
ಆದ್ದರಿಂದ, ಈಗಿರುವ ಕಾರ್ಮಿಕ ಸಂಘಗಳು, ರೈತರ ಸಂಘಗಳು, ಯುವಜನ ಸಂಘಗಳು ಅಥವಾ ಇತರ ಸಾಮ್ರಾಜ್ಯಶಾಹಿ ವಿರೋಧಿ ಸಾಮೂಹಿಕ ಸಂಘಟನೆಗಳೊಂದಿಗೆ ರಾಷ್ಟ್ರೀಯ ಕಾಂಗ್ರೆಸಿನ ಒಂದು ಸಂಯುಕ್ತ ರಂಗವನ್ನು, ಸಾಮ್ರಾಜ್ಯಶಾಹಿಯ ಮತ್ತು ಅದರ ಸಂವಿಧಾನದ ವಿರುದ್ಧ ಹೋರಾಟದ ಆಧಾರದಲ್ಲಿ ಹಾಗೂ ಜನಸಾಮಾನ್ಯರ ತಕ್ಷಣದ ಬೇಡಿಕೆಗಳಿಗಾಗಿ ಹೋರಾಟವನ್ನು ಸಂಘಟಿಸಲು, ಒಂದು ವಿಶಾಲವಾದ ಸಾಮ್ರಾಜ್ಯಶಾಹಿ-ವಿರೋಧಿ ಜನತಾ ರಂಗವನ್ನು ಸ್ಥಾಪಿಸುವುದು ನಮ್ಮ ಮೊದಲ ಗುರಿಯಾಗಬೇಕು.
ಭಾರತದ ಸಂಪೂರ್ಣ ಸ್ವಾತಂತ್ರ್ಯ ಭಾರತದ ರಾಷ್ಟ್ರೀಯ ಚಳುವಳಿಯ ಬದಲಿಸಲಾಗದ ಗುರಿಯಾಗಿದೆ, ಗಳಿಸುವ ಉದ್ದೇಶ ಅದರಿಂದಾಗಿ ಅರೆಬರೆ ಕ್ರಮಗಳು, ಸಂವಿಧಾನ ರಚನೆಗೆ ಸಹಕರಿಸುವುದು ಮುಂತಾದ ಸಾಮ್ರಾಜ್ಯಶಾಹಿಗಳೊಂದಿಗೆ ಎಲ್ಲ ರಾಜಿಗಳನ್ನು ಮತ್ತು ಮಾತುಕತೆಗಳನ್ನು ತಿರಸ್ಕರಿಸಬೇಕು ಎನ್ನುವುದನ್ನು ನಿಸ್ಸಂದಿಗ್ಧವಾಗಿಯೂ ಮನಗಾಣಿಸಬೇಕಾಗಿದೆ.
ಅಲ್ಲದೆ, ಸ್ವಾತಂತ್ರ್ಯ ಚಳುವಳಿಯ ಹೋರಾಟದ ಕಾರ್ಯಕ್ರಮವನ್ನು, ಸಾಮ್ರಾಜಶಾಹಿಯ ವಿರುದ್ಧದ ತಕ್ಷಣದ ರಾಜಕೀಯ ಬೇಡಿಕೆಗಳಿಗಾಗಿನ ಹೋರಾಟದೊಂದಿಗೆ ಹಾಗೂ ಕಾರ್ಮಿಕರು ಮತ್ತು ರೈತರ ಬದುಕಿನ ಅಗತ್ಯಗಳಿಗೆ ತಕ್ಷಣದ ಬೇಡಿಕೆಗಳ ಹೋರಾಟದೊಂದಿಗೆ ಜೋಡಿಸುವ ಅವಶ್ಯಕತೆ ಇದೆ.
ಉದಾಹರಣೆಗೆ ಈ ಕಾರಣ ಅಂತಹ ಕಾರ್ಯಕ್ರಮವು ಇವುಗಳನ್ನು ಒಳಗೊಂಡಿರಬೇಕು:
- ಭಾರತದ ಸಂಪೂರ್ಣ ಸ್ವಾತಂತ್ರ್ಯದ ಗುರಿ;
- ವಾಕ್, ಪತ್ರಿಕಾ, ಸಂಘಟನಾ, ಒಟ್ಟುಸೇರುವ, ಮುಷ್ಕರದ ಮತ್ತು ಪಿಕೆಟಿಂಗ್ ಮಾಡುವ ಸ್ವಾತಂತ್ರ್ಯ;
- ಎಲ್ಲ ಅಸಾಧಾರಣ ಮತ್ತು ದಮನಕಾರಿ ಕಾನೂನುಗಳನ್ನು, ಸುಗ್ರೀವಾಜ್ಞೆಗಳನ್ನು ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು(ಅಪರಾಧ ತಿದ್ದುಪಡಿ ಕಾಯಿದೆ, ಪತ್ರಿಕಾ ಕಾಯಿದೆ, ಇತ್ಯಾದಿ) ಹಿಂತೆಗೆದುಕೊಳ್ಳಬೇಕು;
- ಎಲ್ಲಾ ರಾಜಕೀಯ ಖೈದಿಗಳನ್ನು, ಬಂಧಿತರನ್ನು ಮತ್ತು ಇಂಟರ್ನಿಗಳನ್ನು ಬಿಡುಗಡೆ ಮಾಡಬೇಕು;
- ಕೂಲಿ ಕಡಿತಗೊಳಿಸುವುದು ಮತ್ತು ಕೆಲಸದಿಂದ ಕಿತ್ತುಹಾಕುವುದರ ವಿರುದ್ಧ, ಕನಿಷ್ಠ ವೇತನ ಮತ್ತು ೮ ಗಂಟೆ ಕೆಲಸಕ್ಕೆ ಒತ್ತಾಯಿಸಿ, ಗೇಣಿಗಳನ್ನು ಶೇಕಡಾ ೫೦ಕ್ಕೆ ಇಳಿಸಲು ಒತ್ತಾಯಿಸಿ, ಸಾಲಕ್ಕಾಗಿ ರೈತರ ಜಮೀನನ್ನು ಸಾಮ್ರಾಜ್ಯಶಾಹಿಗಳು, ಸ್ಥಳೀಯ ರಾಜರುಗಳು, ಜಮೀನ್ದಾರರು ಮತ್ತು ಬಡ್ಡಿ ಸಾಹುಕಾರರು ಜಪ್ತಿ ಮಾಡುವುದರ ವಿರುದ್ಧ;
ಸಾಮ್ರಾಜ್ಯಶಾಹಿ ವಿರೋಧಿ ಜನತಾ ರಂಗವನ್ನು ಸಾಕಾರಗೊಳಿಸುವ ಸಲುವಾಗಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ಸಿನ ಸಂವಿಧಾನ, ಸಂಘಟನೆ, ನೀತಿ ಮತ್ತು ಕಾರ್ಯಗಳಲ್ಲಿ ಈ ತುರ್ತಾದ ಅಗತ್ಯವಾದ ಬದಲಾವಣೆಗಳನ್ನು ತರುವ ದಿಕ್ಕಿನಲ್ಲಿ ಕಾಂಗ್ರೆಸ್ಸಿನಲ್ಲಿರುವ ಎಡ ಪಂಥೀಯ ಜನರು ಈ ಬದುಕಿನ ಅಗತ್ಯಗಳಿಗಾಗಿ ಸಮಾನ ವೇದಿಕೆಯಲ್ಲಿ ಒಟ್ಟಾಗಿ ಹೋರಾಡಬೇಕಿದೆ… ವಿಶೇಷವಾಗಿ ಕಾಂಗ್ರೆಸ್ಸಿನಲ್ಲಿ ತೀವ್ರಗಾಮಿ ಬದಲಾವಣೆ ಬಯಸುವ ಗುಂಪಾಗಿ ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷವು ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಿದೆ ಕಾಮಗ್ರೆಸ್ ಸೋಶಲಿಸ್ಟ್ ಪಕ್ಷದ ಕಾರ್ಯಕ್ರಮ ಮತ್ತು ತಂತ್ತಗಾರಿಕೆ ಪ್ರಶ್ನೆಗಳನ್ನು ಸ್ಪಷ್ಟಪಡಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುವುದು ಅತ್ಯಂತ ಮಹತ್ವದ್ದಾಗಿದೆ.
ಈ ರೀತಿಯಾಗಿ ಮೊದಲ ಹಂತದ ಸಾಮ್ರಾಜ್ಯಶಾಹಿ ವಿರೋಧಿ ಜನತಾ ರಂಗವನ್ನು ಕಟ್ಟಬಹುದು, ಮುಖ್ಯವಾಗಿ ಸ್ಥಳೀಯ, ಜಿಲ್ಲಾ ಮತ್ತು ಪ್ರಾಂತೀಯ ಆಧಾರದಲ್ಲಿ ಹೆಚ್ಚು ಒತ್ತು ಕೊಡುತ್ತಾ ಅದಾಗಲೇ ಸಮಾನ ಹೋರಾಟವಾಗಿ ನಡೆಯುತ್ತಿದೆ.
ಸಾಮ್ರಾಜ್ಯಶಾಹಿ ವಿರೋಧಿ ರಂಗಕ್ಕೆ ಚುನಾವಣೆಗಳ ಪ್ರಶ್ನೆ ಅತ್ಯಂತ ಮಹತ್ವದ್ದು. ಒಂದು ಕಡೆಯಲ್ಲಿ, ಸಾಮ್ರಾಜ್ಯಶಾಹಿ ವಿರೋಧಿ ರಂಗದ ಸ್ಪಷ್ಟ ನಿಲುವು, ಸಂಪೂರ್ಣ ಸ್ವಾತಂತ್ರ್ಯಕ್ಕಾಗಿನ ನಿರಂತರ ಹೋರಾಟದ ನಿಲುವು, ಸಾಮ್ರಾಜ್ಯಶಾಹಿಯೊಂದಿಗೆ ಸಹಕಾರದ ವಿರುದ್ಧ ಮತ್ತು ಜನಸಾಮಾನ್ಯರ ಬೇಡಿಕೆಗಳ ಪರವಾಗಿನ ನಿಲುವುಗಳನ್ನು ಚುನಾವಣೆಗಳಲ್ಲಿ ಸ್ಪಷ್ಟವಾಗಿ ಸವಾಲಿನಂತೆ ಎತ್ತಬೇಕು; ರಾಷ್ಟ್ರೀಯ ಚಳುವಳಿಯ ಈ ವಿಶಾಲ ವಿಭಾಗಗಳ ದೃಷ್ಟಿಕೋನ ನಿಗ್ರಹಕ್ಕೆ ಒಳಗಾಗಬಾರದು… ಚುನಾವಣೆಗಳಲ್ಲಿನ ರಾಷ್ಟ್ರೀಯ ರಂಗವು ಒಡೆದುಹೋಗದಂತೆ ಸರ್ವಪ್ರಯತ್ನ ನಡೆಸಬೇಕು; ಆದರೆ ಇಂತಹ ಐಕ್ಯತೆಯನ್ನು ಸಾಮ್ರಾಜ್ಯಶಾಹಿ ವಿರೋದಿ ಬಣದಲ್ಲಿನ ಎಡ ಪಂಥೀಯ ಶಕ್ತಿಗಳನ್ನು ನಿಗ್ರಹಿಸಲು ಬಳಸದಂತೆ ನೋಡಿಕೊಳ್ಳಬೇಕು.
ಚಳುವಳಿಯ ಅಸ್ತಿತ್ವದಲ್ಲಿರುವ ಹಂತಗಳಿಗೆ ಅನುಸಾರವಾಗಿ, ಸಾರ್ವತ್ರಿಕ ಹಾಗೂ ಸಮಾನ ಮತದಾನ ಮತ್ತು ನೇರ ಹಾಗೂ ಗುಪ್ತ ಮತದಾನದ ಆಧಾರದ ಮೇಲೆ ಸಂವಿಧಾನ ಸಭೆ ರಚನೆಯಾಗಬೇಕು ಎಂಬ ನಮ್ಮ ಕೇಂದ್ರ ಘೋಷಣೆಯನ್ನು ಎತ್ತಲು ಈಗ ಸಮಯ ನಿಸ್ಸಂದೇಹವಾಗಿಯೂ ನಮಗೆ ಅನುಕೂಲಕರವಾಗಿದೆ.
ವಿಶಾಲ ನೆಲೆಯ, ಎಲ್ಲವನ್ನೂ ಅಪ್ಪಿಕೊಂಡ ಮತ್ತು ಶಕ್ತಿಯುತ ಸಾಮ್ರಾಜ್ಯಶಾಹಿ-ವಿರೋಧಿ ಜನತಾ ರಂಗ ಸಾಕಾರಗೊಂಡು ಭಾರತೀಯ ರಾಷ್ಟ್ರೀಯ ಚಳುವಳಿಗೆ ಹೊಸ ಮುನ್ನೋಟಗಳಿಗೆ ಹಾದಿಯನ್ನು ತ್ವರಿತವಾಗಿ ತೆರೆಯುವಂತಾಗಬೇಕು.
ದತ್ – ಬ್ರಾಡ್ಲಿ ಪ್ರಬಂಧವು ಕಮ್ಯುನಿಸ್ಟ್ ಚಳುವಳಿಗೆ ಬಹಳವಾಗಿ ಸಹಾಯ ಮಾಡಿದೆ. ಈ ಅವಧಿಯಲ್ಲಿ ಕಮ್ಯುನಿಸ್ಟರ ಮಧ್ಯಪ್ರವೇಶದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ದೇಶದಲ್ಲಿ ಕಮ್ಯುನಿಸ್ಟ್ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿರುವ ಕಾರ್ಯಕರ್ತರು ಮತ್ತು ಹೊಸ ತಲೆಮಾರಿನ ಮುಖಂಡರು ಹೊರಹೊಮ್ಮಿದರು.
ಕನ್ನಡಕ್ಕೆ: ಟಿ. ಸುರೇಂದ್ರ ರಾವ್