ಕಪಿಲ್ ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ ಬಂಧಿಸಬೇಕು – ಗೃಹಮಂತ್ರಿಗಳಿಗೆ ಸಿಪಿಐ(ಎಂ) ಮುಖಂಡರ ಪತ್ರ
“ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತೀ ಮತ್ತು ನ್ಯಾಯಯುತ ಮಧ್ಯಪ್ರವೇಶ ಈಗಿನ ಪ್ರಮುಖ ಆವಶ್ಯಕತೆ”
ದೇಶದ ರಾಜಧಾನಿ ದಿಲ್ಲಿಯಲ್ಲಿ ಫೆಬ್ರುವರಿ 23 ರಿಂದ ನಡೆಯುತ್ತಿರುವ ಹಿಂಸಾಚಾರಗಳಲ್ಲಿ ಇದುವರೆಗೆ 17 ಮಂದಿ ಪ್ರಾಣಕಳಕೊಂಡಿದ್ದಾರೆ. ಸುಮಾರು 150 ಜನ ಗಾಯಗೊಂಡು ಆಸ್ಪತ್ರೆಗಳಲ್ಲಿದ್ದಾರೆ. ಈಶಾನ್ಯ ದಿಲ್ಲಿ ಉರಿಯುತ್ತಿದೆ ಎಂಬ ವರದಿಗಳು ಬರುತ್ತಿವೆ.
ಭಾನುವಾರ, ಫೆಬ್ರುವರಿ 23ರಂದು, ಒಬ್ಬ ಬಿಜೆಪಿ ಮುಖಂಡ ಕಪಿಲ್ ಮಿಶ್ರ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಲವಂತವಾಗಿ ಹೊರಹಾಕಬೇಕು ಎಂದು ಬಹಿರಂಗವಾಗಿಯೇ ಒಂದು ಕರೆ ನೀಡುವುದರೊಂದಿಗೆ ಈ ಹಿಂಸಾಚಾರ ಆರಂಭವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದಿಲ್ಲಿ ಪೋಲೀಸ್ ಮತ್ತು ಬೇಹುಗಾರಿಕಾ ಸಂಸ್ಥೆಗಳು ಕೇಂದ್ರ ಗೃಹಮಂತ್ರಾಲಯದಡಿಯಲ್ಲಿರುವುದರಿಮದ ಕೇಂದ್ರ ಗೃಹಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಬೇಕಿತ್ತು. ಆದರೆ ದೇಶದ ರಾಜಧಾನಿಯಲ್ಲಿ ಶಾಂತಿ ಕಾಪಾಡಬೇಕೆಂಬ ಅವರ ಮನವಿ ಬಂದದ್ದು ಒಂದೂವರೆ ದಿನಗಳ ನಂತರವೇ.
ಈ ಬಗ್ಗೆ ದಿಲ್ಲಿವಾಸಿಗಳ ನಿರಾಸೆಗೆ ದನಿ ನೀಡುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ದಿಲ್ಲಿ ರಾಜ್ಯಸಮಿತಿಯ ಕಾರ್ಯದರ್ಶಿ ಕೆ.ಎಂ.ತಿವಾರಿ ಗೃಹಮಂತ್ರಿ ಅಮಿತ್ ಷಾರವರಿಗೆ ಫೆಬ್ರವರಿ 25ರಂದು ಪತ್ರ ಬರೆದು, ಕಪಿಲ್ ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ, ಅವರ ರಾಜಕೀಯ ಸಂಪರ್ಕಗಳು ಮತ್ತು ಬಣ್ಣ ಏನೇ ಇರಲಿ, ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದು ಜನಗಳಲ್ಲಿ, ತಾವು ಶಾಂತಿಗಾಗಿ ಮತ್ತು ಗಲಭೆಕೋರರ ವಿರುದ್ಧ ನಿಜವಾಗಿಯೂ ನಿಷ್ಪಕ್ಷಪಾತಪೂರ್ಣ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂಬ ವಿಶ್ವಾಸವನ್ನು ತರುತ್ತದೆ ಎನ್ನುತ್ತ ಅವರು ದಿಲ್ಲಿಯ ಹೊರಗಿಂದ ಯಾವುದೇ ಗಲಭೆಕೋರರು ರಾಜಧಾನಿಯನ್ನು ಪ್ರವೇಶಿಸಲು ಬಿಡಬಾರದು ಎಂದೂ ಕೇಳಿದ್ದಾರೆ.
ಸಿ..ಎ.ಎ ವಿರುದ್ಧ ಪ್ರತಿಭಟನೆಗಳು, ಮುಖ್ಯವಾಗಿ ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವವುಗಳು ಶಾಂತಿಯುತವಾಗಿಯೇ ಇವೆ. ಕಳೆದ ಎರಡು ತಿಂಗಳಿಂದ ದಿಲ್ಲಿಯಲ್ಲಿ ಹಿಂಸಾಚಾರದ ಯಾವ ಘಟನೆಗಳೂ ನಡೆದಿಲ್ಲ. ಇದಕ್ಕೆ ಅಪವಾದಗಳೆಂದರೆ, ಕೇಂದ್ರ ಸರಕಾರದ ಒಬ್ಬ ಮಂತ್ರಿಯ ಚಿತಾವಣೆಗೊಳಗಾದವರು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡು ಹಾರಾಟಗಳು. ಇದರಿಂದ ಪೋಲೀಸರು ಮತ್ತು ಬೇಹುಗಾರಿಕೆ ಸಂಸ್ಥೆಗಳು ಶಾಂತಿಯುತ ಪ್ರತಿಭಟನೆಗಳನ್ನು ಛಿದ್ರಗೊಳಿಸಲು ಮತ್ತು ಅದಕ್ಕೊಂದು ಕೋಮು ಬಣ್ಣವನ್ನು ಕೊಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಜಾಗೃತರಾಗಬೇಕಾಗಿತ್ತು.
ಆದರೆ, ಒಂದೋ, ಬೇಹುಗಾರಿಕೆ ಸಂಸ್ಥೆಗಳು ವಿಫಲವಾಗಿರಬೇಕು, ಇಲ್ಲವೇ ಅವುಗಳ ವರದಿಗಳನ್ನು ಉಪೇಕ್ಷಿಸಿರಬೇಕು ಎಂದು ಬೃಂದಾ ಕಾರಟ್ ಮತ್ತು ಕೆ.ಎಂ.ತಿವಾರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತೀ ಮತ್ತು ನ್ಯಾಯಯುತ ಮಧ್ಯಪ್ರವೇಶ ಈಗಿನ ಪ್ರಮುಖ ಆವಶ್ಯಕತೆ ಎಂದು ಅವರು ಕೇಂದ್ರ ಗೃಹಮಂತ್ರಿಗಳಿಗೆ ನೆನಪಿಸಿದ್ದಾರೆ.
ಮಂಗಳವಾರ ರಾತ್ರಿ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಕಪಿಲ್ ಮಿಶ್ರರಂತ ದ್ವೇಷ ಹರಡುವವರ ಬಂಧನ ಇನ್ನೂ ಆಗಿಲ್ಲ. ಬದಲಿಗೆ ಫೆಬ್ರುವರಿ 25 ರಾತ್ರಿ ಬಿಜೆಪಿಯ ಶಾಸಕ ಅಭಯ್ ವರ್ಮ ನೇತೃತ್ವದಲ್ಲಿ ‘ಗೋಲೀ ಮಾರೋ’ , “ಜೋ ಹಿಂದೂ ಹಿತ್ ಕೀ ಬಾತ್ ಕರೇಗಾ, ವೋ ಹೀ ದೇಶ್ ಪೆ ರಾಜ್ ಕರೇಗಾ’ ಮತ್ತು ‘ಜೈಶ್ರೀರಾಂ’ ಘೋಷಣೆಗಳನ್ನು ಕೂಗುತ್ತ ಮೆರವಣಿಗ ನಡೆದಿದೆ ಎಂದು ವರದಿಯಾಗಿದೆ.
ಈ ನಡುವೆ ಈಶಾನ್ಯ ದಿಲ್ಲಿಯ ಮುಸ್ತಫಾಬಾದ್ ನಲ್ಲಿ ಒಂದು ಸಣ್ಣ ಅಸ್ಪತ್ರೆಯಲ್ಲಿ ದಾಖಲಾದ 20 ಗಾಯಾಳುಗಳನ್ನ ಉಳಿಸಲು ದೊಡ್ಡ ಆಸ್ಪತ್ರೆಗೆ ಕಳಿಸಲು ಪೋಲೀಸರು ನೆರವಾಗುವಂತೆ ಮಾಡಲು ದಿಲ್ಲಿ ಹೈಕೋರ್ಟಿನ ಇಬ್ಬರು ಹಿರಿಯ ನ್ಯಾಯಾಧೀಶರು ಮಧ್ಯರಾತ್ರಿ ವಿಚಾರಣೆ ನಡೆಸಿ ದಿಲ್ಲಿ ಪೋಲೀಸಿಗೆ ನಿರ್ದೇಶನ ನೀಡಬೇಕಾಗಿ ಬಂದಿರುವ ಘಟನೆಯೂ ವರದಿಯಾಗಿದೆ.
ಬೃಂದ ಕಾರಟ್ ಮತ್ತು ಕೆ.ಎಂ.ತಿವಾರಿ ಬರೆದಿರುವ ಪತ್ರದ ಪೂರ್ಣಪಾಠವನ್ನು ಈ ಮುಂದೆ ಕೊಡಲಾಗಿದೆ:
ಪ್ರಿಯ ಶ್ರೀ ಅಮಿತ್ ಷಾ ಜೀ,
ದಿಲ್ಲಿಯ ಆಘಾತಕಾರೀ ಹಿಂಸಾಚಾರದ ಘಟನೆಗಳಲ್ಲಿ ಒಬ್ಬ ಪೋಲೀಸ್ ಕಾನ್ ಸ್ಟೇಬಲ್ ದುರಂತಮಯ ಸಾವು ಮತ್ತು ಆರು ನಾಗರಿಕರ ಸಾವುಗಳು ಬಹಳ ಆತಂಕ ಉಂಟು ಮಾಡುವ ಸಂಗತಿ. ದಿಲ್ಲಿಯಲ್ಲಿ ಪೋಲೀಸ್ ಕಾನಸ್ಟೇಬಲ್ ಸಾವು ಮತ್ತು ಹಿಂಸಾಚಾರಕ್ಕೆ ಹೊಣೆಯಾಗಿರುವವರನ್ನು ನಾವು ಬಲವಾಗಿ ಖಂಡಿಸುತ್ತೇವೆ. ದಿಲ್ಲಿ ಪೋಲೀಸ್ ಮತ್ತು ಸಂಬಂಧಪಟ್ಟ ಏಜೆನ್ಸಿಗಳು ತಮ್ಮ ಮಂತ್ರಾಲಯದ ಹತೋಟಿಯಡಿ ಬರುತ್ತವೆ. ಆದ್ದರಿಂದ ನಾವು ಈ ಪತ್ರವನ್ನು ತಮಗೆ ಬರೆಯುತ್ತಿದ್ದೇವೆ. ತಮ್ಮಡನೆ ನಮ್ಮ ಆತಂಕಗಳನ್ನು ಹಂಚಿಕೊಳ್ಳಲು ಅನುವಾಗುವಂತೆ ತಮ್ಮ ಭೇಟಿಗೆ ಅವಕಾಶ ಕೊಡಬೇಕು ಎಂದು ತಮ್ಮ ಕಚೇರಿಯನ್ನು ನಾವು ಕೇಳಿಕೊಂಡಿದ್ದೇವೆ.
ಸಿ..ಎ.ಎ ವಿರುದ್ಧ ಪ್ರತಿಭಟನೆಗಳು, ಮುಖ್ಯವಾಗಿ ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವವುಗಳು ಶಾಂತಿಯುತವಾಗಿಯೇ ಇವೆ. ಕಳೆದ ಎರಡು ತಿಂಗಳಿಂದ ದಿಲ್ಲಿಯಲ್ಲಿ ಹಿಂಸಾಚಾರದ ಯಾವ ಘಟನೆಗಳೂ ನಡೆದಿಲ್ಲ. ಇದಕ್ಕೆ ಅಪವಾದಗಳೆಂದರೆ, ಕೇಂದ್ರ ಸರಕಾರದ ಒಬ್ಬ ಮಂತ್ರಿಯ ಚಿತಾವಣೆಗೊಳಗಾದವರು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡು ಹಾರಾಟಗಳು. ಇದು ಪೋಲೀಸರು ಮತ್ತು ಬೇಹುಗಾರಿಕೆ ಸಂಸ್ಥೆಗಳು ಶಾಂತಿಯುತ ಪ್ರತಿಭಟನೆಗಳನ್ನು ಛಿದ್ರಗೊಳೀಸಲು ಮತ್ತು ಅದಕ್ಕೊಂದು ಕೋಮು ಬಣ್ಣವನ್ನು ಕೊಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಜಾಗೃತರಾಗಬೇಕಾಗಿತ್ತು.
ಆದರೆ, ಒಂದೋ, ಬೇಹುಗಾರಿಕೆ ಸಂಸ್ಥೆಗಳು ವಿಫಲವಾಗಿರಬೇಕು, ಇಲ್ಲವೇ ಅವುಗಳ ವರದಿಗಳನ್ನು ಉಪೇಕ್ಷಿಸಿರಬೇಕು.
ಭಾನುವಾರದಂದು, ಒಬ್ಬ ಬಿಜೆಪಿ ಮುಖಂಡ ಕಪಿಲ್ ಮಿಶ್ರ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಲವಂತವಾಗಿ ಹೊರಹಾಕಬೇಕು ಎಂದು ಬಹಿರಂಗವಾಗಿಯೇ ಒಂದು ಕರೆ ನೀಡಿದರು. ಪ್ರತಿಭಟನಾ ಸ್ಥಳಗಳ ಸುತ್ತಲಿನ ಪ್ರದೇಶಗಳಲ್ಲಿ ಲಾಠಿಗಳು ಮತ್ತು ಇಟ್ಟಿಗೆಗಳಿಂದ ಸಜ್ಜಿತರಾಗಿದ್ದ ಮಂದಿಗಳ ಗುಂಪುಗಳು ಅತ್ಯಂತ ಉದ್ರೇಕಕಾರಿ ಮತ್ತು ಕೋಮುವಾದಿ ಘೋಷಣೆಗಳನ್ನು ಹಾಕುತ್ತಿದ್ದ ವಿವರವಾದ ವರದಿಗಳು ಮತ್ತು ವೀಡಿಯೊ ಚಿತ್ರಗಳು ಲಭ್ಯ ಇವೆ.
ಪ್ರತಿಭಟನಾ ಸ್ಥಳಗಳನ್ನು ಅಸ್ತವ್ಯಸ್ತಗೊಳಿಸಲು ಮತ್ತು ಅವುಗಳ ಮೇಲೆ ದಾಳಿ ಮಾಡಲು ಸಜ್ಜುಗೊಳಿಸುತ್ತಿದ್ದುದರ ಕೋಮುವಾದಿ ಸ್ವರೂಪವನ್ನು ಕುರಿತಂತೆ ಒಬ್ಬ ಪತ್ರಕತರ್ತರ ನಿರೂಪಣೆ ಒಂದು ಸಚಿತ್ರ ಸಾಕ್ಷ್ಯ. ಇದು ಹಿಂಸಾತ್ಮಕ ಘರ್ಷಣೆಗೆ ಮತ್ತು ಪ್ರತಿಹಿಂಸಾಚಾರಕ್ಕೆ ಕಾರಣವಾಗಿದೆ. ಒಬ್ಬ ವ್ಯಕ್ತಿ, ನಂತರ ಶಾರುಕ್ ಎಂದು ಗುರುತಿಸಲ್ಪಟ್ಟವ, ಒಬ್ಬ ಪೋಲೀಸ್ ಸಿಬ್ಬಂದಿಯ ಮೇಲೆ ಒಂಧು ರಿವಾಲ್ವರ್ ಝಳಪಿಸಿದ್ದು ಮತ್ತು ನಂತರ ಗುಂಡು ಹಾರಿಸಿದ್ದು, ಪ್ರತಿ-ಹಿಂಸಾಚಾರದಲ್ಲಿ ಕ್ರಿಮಿನಲ್ ವ್ಯಕ್ತಿಗಳು ಸೇರಿಕೊಂಡದ್ದನ್ನು ತೋರಿಸುತ್ತದೆ.
ವೀಡಿಯೊ ಚಿತ್ರಗಳಲ್ಲಿ ಕಾಣುವಂತೆ, ಪೋಲೀಸ್ ಪಡೆಯ ಒಂದು ವಿಭಾಗ ಕಲ್ಲೆಸೆಯುತ್ತಿದ್ದ ಜನಜಂಗುಳಿಯೊಂದಿಗೆ ಸೇರಿಕೊಂಡು ತಮ್ಮ ವೃತ್ತಿಪರತೆಯನ್ನು ಸಂಪೂರ್ಣ ಬದಿಗೊತ್ತಿ ವರ್ತಿಸಿರುವುದು ಆಘಾತಕಾರಿ. ಅವರ ವಿರುದ್ಧ ಬಲವಾದ ಕ್ರಮವನ್ನು ಕೈಗೊಳ್ಳಬೇಕು, ಏಕೆಂದರೆ, ಇದರಿಂದಾಗಿ ದಿಲ್ಲಿ ಪೋಲೀಸ್ ಒಂದು ನಿಷ್ಪಕ್ಷಪಾತೀ ಪಡೆ ಎಂಬ ಅದರ ವಿಶ್ವಾಸಾರ್ಹತೆಗೆ ತೀವ್ರ ಕುಂದು ಬಂದಿದೆ.
ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತೀ ಮತ್ತು ನ್ಯಾಯಯುತ ಮಧ್ಯಪ್ರವೇಶ ಈಗಿನ ಪ್ರಮುಖ ಆವಶ್ಯಕತೆ. ಗೃಹಮಂತ್ರಿಯಾಗಿ ನೀವು ಶಾಂತಿಗಾಗಿ ತಕ್ಷಣ ಮಧ್ಯಪ್ರವೇಶ ಮಾಡುತ್ತೀರಿ ಎಂದು ಆಶಿಸಿದ್ದ ರಾಜಧಾನಿಯ ಜನಗಳು, ನಿಮ್ಮ ಶಾಂತಿಯ ಮನವಿ ಒಂದೂವರೆ ದಿನದ ವಿಳಂಬದ ನಂತರ ಬಂತು ಎಂಬುದನ್ನು ನೋಡಿ ನಿರಾಶರಾಗಿದ್ದಾರೆ,
ನಿಮ್ಮ ಮನವಿಯನ್ನು ಅನುಸರಿಸಿ ನೀವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು , ಮತ್ತು ನಿಮ್ಮ ಪ್ರಭಾವದೊಳಗಿರುವ ರಾಜಕೀಯ ಶಕ್ತಿಗಳು ಶಾಂತಿಯ ಅಗತ್ಯದತ್ತ ಗಮನ ಹರಿಸುವಂತೆ ಖಾತ್ರಿಗೊಳಿಸಬೇಕು ಎಂದೂ ನಾವು ಕೋರುತ್ತೇವೆ. ಶಾಂತಿಗಾಗಿ ನಿಮ್ಮ ಮಧ್ಯಪ್ರವೇಶ, ಕಳೆದೆರಡು ದಿನಗಳ ಘಟನೆಗಳು ಚುನಾವಣಾ ಫಲಿತಾಂಶಗಳಿಗೆ ‘ಸೇಡು’ ಎಂದು ಸಾರ್ವಜನಿಕರ ನಡುವೆ ಉಂಟಾಗಿರುವ ಸಂದೇಹಗಳನ್ನು ನಿವಾರಿಸುತ್ತದೆ. ಈ ಸಂದರ್ಭದಲ್ಲಿ ಕಪಿಲ್ ಮಿಶ್ರ ವಿರುದ್ಧ ಕ್ರಮ, ಜನಗಳಲ್ಲಿ, ತಾವು ಶಾಂತಿಗಾಗಿ ಮತ್ತು ಗಲಭೆಕೋರರ ವಿರುದ್ಧ ನಿಜವಾಗಿಯೂ ನಿಷ್ಪಕ್ಷಪಾತಪೂರ್ಣ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂಬ ವಿಶ್ವಾಸವನ್ನು ತರುತ್ತದೆ. ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ, ಅವರ ರಾಜಕೀಐ ಸಂಪರ್ಕಗಳು ಮತ್ತು ಬಣ್ಣ ಏನೇ ಇರಲಿ, ಬಂಧಿಸಬೇಕು.
ದಿಲ್ಲಿಯ ಹೊರಗಿಂದ ಯಾವುದೇ ಗಲಭಕೋರರು ರಾಜಧಾನಿಯನ್ನು ಪ್ರವೇಶಿಸಲು ಬಿಡಬಾರದು ಎಂದೂ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ.
ನಾವು ಕೂಡ ನಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರನ್ನೂ ಶಾಂತಿಗಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ, ಮತ್ತು ಭಾರತದ ರಾಜಧಾನಿಯಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಮತ್ತೆ ನೆಲೆಗೊಳಿಸಲು ಎಲ್ಲ ರೀತಿಗಳಲ್ಲೂ ಸಹಕರಿಸುತ್ತೇವೆ ಎಂಬ ಆಶ್ವಾಸನೆಯನ್ನು ಕೊಡುತ್ತೇವೆ.”