ದಿಲ್ಲಿ ಪೋಲೀಸ್ ಕಮಿಶನರ್‌ಗೆ ಬೃಂದಾ ಕಾರಟ್ ಪತ್ರ
ದಂಡ ಸಂಹಿತೆಯ ಸೆಕ್ಷನ್ ೪೧-ಸಿ ವಿಧಿಸಿರುವಂತೆ ರಾಜಧಾನಿಯ ಈಶಾನ್ಯ ಭಾಗವನ್ನು ಆವರಿಸಿದ ಕೋಮು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟವರ ಮತ್ತು ಸ್ಥಾನಬದ್ಧತೆಗೆ ಒಳಪಡಿಸಿದವರ ಮಾಹಿತಿಯನ್ನು ಪ್ರದರ್ಶಿಸಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸುವತ್ತ ಮುಂದುವರೆಯಬೇಕು ಎಂದು ದಿಲ್ಲಿಯ ಪೋಲೀಸ್ ಕಮಿಶನರ್ ಅವರನ್ನು ಸಿಪಿಐ(ಎಂ)ನ ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಕೋರಿದ್ದಾರೆ.
ಈ ಕುರಿತು ಪೋಲೀಸ್ ಕಮಿಶನರ್‌ರಿಗೆ ಬರೆದ ಪತ್ರದಲ್ಲಿ ಅವರು “೧೪೮ ಎಫ್‌ಐ.ಆರ್ ಗಳನ್ನು ಹಾಕಲಾಗಿದೆ ಮತ್ತು ಹಲವರನ್ನು ಬಂಧಿಸಲಾಗಿದೆ ಎಂದು ಪ್ರತಿಕಾ ವರದಿಗಳು ಹೇಳುತ್ತವೆ. ಈ ಹಿಂಸಾಚಾರದಲ್ಲಿ ಸತ್ತವರ ಮತ್ತು ಗಾಯಗೊಂಡವರ ಹಲವು ಕುಟುಂಬಗಳನ್ನು ನಾನು ಭೇಟಿ ಮಾಡಿದ್ದೇನೆ. ಅವರಿಗೆ ತಾವಾಗಿ ಎಫ್‌ಐಆರ್ ಸಲ್ಲಿಸಲು ಆಗಿಲ್ಲ, ಅಥವ ಅವರ ಮೇಲೆ ಮಾಡಿದ ಹಲ್ಲೆಗಳನ್ನು ಕುರಿತಂತೆ ಯಾವುದೇ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಪೋಲಿಸರು ಮಾಹಿತಿಯನ್ನೂ ಕೊಟ್ಟಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕಾನೂನು ಸ್ಪಷ್ಟವಾಗಿದೆ”ಎನ್ನುತ್ತ ಅದರತ್ತ ಗಮನ ಸೆಳೆದಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿಭಾಗ ೪೧-ಸಿ (೧) ಎಲ್ಲ ಜಿಲ್ಲೆಗಳಲ್ಲಿ ಒಂದು ಪೋಲೀಸ್ ಕಂಟ್ರೋಲ್ ರೂಂ. ಸ್ಥಾಪಿಸಬೇಕು. (೨) ಬಂಧಿಸಲ್ಪಟ್ಟವರ ಹೆಸರು ಮತ್ತು ವಿಳಾಸಗಳನ್ನು ಹಾಗೂ ಬಂಧಿಸಿದ ಪೋಲಿಸ್ ಅಧಿಕಾರಿ ಹೆಸರು ಮತ್ತು ಹುದ್ದೆಯನ್ನು ಪ್ರದರ್ಶಿಸಬೇಕು. (೩) ರಾಜ್ಯ ಮಟ್ಟದಲ್ಲಿ ಪೋಲಿಸ್ ಮುಖ್ಯಾಲಯದ ಕಂಟ್ರೋಲ್ ರೂಂ ಸಮಯ ಸಮಯಕ್ಕೆ (ಬಂಧಿತರು,ಅಪರಾಧದ ಸ್ವರೂಪದ) ವಿವರಗಳನ್ನು ಪಡೆಯಬೇಕು ಮತ್ತು ಸಾರ್ವಜನಿಕರ ಮಹಿತಿಗೆ ಒಂದು ಡಾಟಾಬೇಸ್ ಇಡಬೇಕು ಎಂದು ವಿಧಿಸಿದೆ.
“ಹೀಗೆ ಕಾನೂನು ಸ್ಫುಟವಾಗಿ ವಿಧಿಸಿದ್ದರೂ, ಬಂಧಿಸಿರುವ ಎಲ್ಲ ವ್ಯಕ್ತಿಗಳ ಹೆಸರುಗಳು ಮತ್ತು ವಿಳಾಸಗಳನ್ನು ಪೋಲೀಸ್ ಕಂಟ್ರೋಲ್ ರೂಂನಲ್ಲಿ ಪ್ರದರ್ಶಿಸುತ್ತಿಲ್ಲ. ಅಷ್ಟೇ ಅಲ್ಲ, ಸಂಬಂಧಪಟ್ಟ ಪ್ರತಿ ಪೋಲಿಸ್ ಠಾಣೆಗಳಲ್ಲೂ ಪ್ರದರ್ಶಿಸುತ್ತಿಲ್ಲ. ಈಗ ನಡೆದಿರುವ ಘಟನೆಗಳಿಂದಾಗಿ, ಮತ್ತು ಈಗಿರುವ ಪರಿಸ್ಥಿತಿಗಳಿಂದಾಗಿ, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುರ ಅಗತ್ಯವನ್ನು ತಾವು ಒಪ್ಪುತ್ತೀರಿ ಎಂದು ಭಾವಿಸುತ್ತೇನೆ.
ಕಾನೂನು ವಿಧಿಸಿರುವುದನ್ನು ಪಾಲಿಸುವುದು ಎಲ್ಲ ಬಾಧಿತರ ಬದುಕುಗಳನ್ನು ಪೀಡಿಸುತ್ತಿರುವ ಊಹಾಪೋಹಗಳು ಮತ್ತು ಸುಳ್ಳು ಮಾಹಿತಿಗಳನ್ನು ನಿವಾರಿಸುವಲ್ಲಿ ಬಹಳಷ್ಟು ಸಹಾಯಕವಾಗುತ್ತದೆ” ಎನ್ನುತ್ತ ಬೃಂದಾ ಕಾರಟ್ ಅವರು ಈ ಕಾನೂನಾತ್ಮಕ ಅಗತ್ಯವನ್ನು ಪಾಲಿಸುವಂತೆ ಖಾತ್ರಿಪಡಿಸಬೇಕು ಮತ್ತು ಈ ಪ್ರದೇಶದಲ್ಲಿ ಸಾಮಾನ್ಯ ಸ್ಥಿತಿ ಮತ್ತೆ ನೆಲೆಸುವಂತೆ ಮಾಡುವತ್ತ ಮುಂದುವರೆಯಬೇಕು ಎಂದು ತಮ್ಮ ಪತ್ರದಲ್ಲಿ ದಿಲ್ಲಿ ಪೋಲೀಸ್ ಕಮಿಶನರ್ ಅವರನ್ನು ಕೋರಿದ್ದಾರೆ.