ಅಖಿಲ ಭಾರತ ಸಾಮೂಹಿಕ ಸಂಘಟನೆಗಳ ಸ್ಥಾಪನೆ

  • ಪುನರ್ ಸಂಘಟಿತ ಸಿಪಿಐ ಉದಯ ಮತ್ತು ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷದೊಂದಿಗಿನ ಐಕ್ಯ ಕಾರ್ಯಾಚರಣೆಯು ನಮ್ಮ ದೇಶದ ಸಮಾಜೋ-ರಾಜಕೀಯ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದೆ. ವಾರ್ಷಿಕ ಕಾಂಗ್ರೆಸ್ ಅಧಿವೇಶನದಲ್ಲಿನ ಅಧ್ಯಕ್ಷೀಯ ಭಾಷಣ ಹಾಗೂ ಅಂಗೀಕರಿಸಿದ ನಿರ್ಣಯಗಳಲ್ಲಿ ಕೂಡ ಎಡ ಚಿಂತನೆಗಳು ಪ್ರತಿಧ್ವನಿಸಿದವು. ಹೊಸ ಎಡ ಪ್ರವೃತ್ತಿಯು ರಾಜಕೀಯ ಹಾಗೂ ಆರ್ಥಿಕ ವಲಯಗಳ ಮೇಲೆ ಮಾತ್ರವಲ್ಲದೇ ಸಾಂಸ್ಕೃತಿಕ ಚಳುವಳಿಯ ಮೇಲೂ ತನ್ನ ಅಚ್ಚೊತ್ತಲು ಆರಂಭಿಸಿತು. ೧೯೩೬ರಲ್ಲೇ, ಮೂರು ಅಖಿಲ ಭಾರತ ಸಂಘಟನೆಗಳನ್ನು ಆಲ್ ಇಂಡಿಯಾ ಕಿಸಾನ್ ಸಭಾ(ಎಐಕೆಎಸ್), ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್(ಎ.ಐ.ಎಸ್.ಎಫ್) ಮತ್ತು ಪ್ರೊಗ್ರೆಸಿವ್ ರೈmರ್ಸ್ ಅಸೋಶಿಯೇಷನ್(ಪಿಡಬ್ಲ್ಯುಎ) – ಸ್ಥಾಪಿಸಲಾಯಿತು. ಕಾಂಗ್ರೆಸ್ಸಿನಲ್ಲಿದ್ದ ಎಡ ಮತ್ತು ಪ್ರಗತಿಪರ ವಿಭಾಗಗಳೊಂದಿಗೆ ಸೇರಿ ಕಮ್ಯುನಿಸ್ಟರು ಅವುಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.

ಸಾಮಾಜಿಕ ಬದಲಾವಣೆಗಾಗಿ ಅಪಾರ ಜನ ವಿಭಾಗಗಳನ್ನು ಅಣಿನೆರೆಸುವ ತಮ್ಮ ಪ್ರಯತ್ನದ ಭಾಗವಾಗಿ ಹಲವಾರು ವರ್ಗ ಹಾಗೂ ಸಾಮೂಹಿಕ ಸಂಘಟನೆಗಳನ್ನು ಸ್ಥಾಪಿಸಲು ಕಮ್ಯುನಿಸ್ಟರು ಮುತುವರ್ಜಿ ವಹಿಸಿದರು. ೧೯೩೬ರಲ್ಲೇ, ಮೂರು ಅಖಿಲ ಭಾರತ ಸಂಘಟನೆಗಳನ್ನು  ಆಲ್ ಇಂಡಿಯಾ ಕಿಸಾನ್ ಸಭಾ(ಅಖಿಲ ಭರತ ಕಿಸಾನ್ ಸಭಾ-ಎಐಕೆಎಸ್), ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್(ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ-ಎ.ಐ.ಎಸ್.ಎಫ್) ಮತ್ತು ಪ್ರೊಗ್ರೆಸಿವ್ ರೈmರ್ಸ್ ಅಸೋಶಿಯೇಷನ್(ಪ್ರಗತಿಶೀಲ ಲೇಖಕರ ಸಂಘ-ಪಿಡಬ್ಲ್ಯುಎ) – ಸ್ಥಾಪಿಸಲಾಯಿತು. ಕಾಂಗ್ರೆಸ್ಸಿನಲ್ಲಿದ್ದ ಎಡ ಮತ್ತು ಪ್ರಗತಿಪರ ವಿಭಾಗಗಳೊಂದಿಗೆ ಸೇರಿ ಕಮ್ಯುನಿಸ್ಟರು ಅವುಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದರು.

ಕಿಸಾನ್ ಸಭಾ:

ಕಮ್ಯುನಿಸ್ಟರ ಚಟುವಟಿಕೆಗಳು ಬಹಳ ಮುಖ್ಯವಾಗಿ ಅಖಿಲ ಭಾರತ ಕಾರ್ಮಿಕರ ಮತ್ತು ರೈತರ ಪಕ್ಷ ಮತ್ತು ಮೀರತ್ ಪಿತೂರಿ ಪ್ರಕರಣದ ಆರೋಪಿಗಳ ಸಾರ್ವತ್ರಿಕ ಹೇಳಿಕೆಗಳ ಮೂಲಕ ಪ್ರಚುರಪಡಿಸಿದ ಚಿಂತನೆಗಳು ಎಡಪಂಥೀಯರ ವಿಸ್ತರಣೆಗೆ ಕೊಡುಗೆ ನೀಡಿದವು ಮತ್ತು ಅವು ರೈತಾಪಿಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದವು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ತಮ್ಮದೇ ಆದ ಒಂದು ಸ್ವತಂತ್ರ ವರ್ಗ ಸಂಘಟನೆಯನ್ನು ಸ್ಥಾಪನೆ ಮಾಡಬೇಕೆಂಬ ದೃಷ್ಟಿಕೋನದಿಂದ ಅವರು ಕೆಲಸ ಮಾಡಲು ಪ್ರಾರಂಭಿಸಿದರು. ಕಿಸಾನ್ ಸಭಾದ ಅಡಿಯಲ್ಲಿ ರೈತರನ್ನು ಸಂಘಟಿಸುವ ಮೂಲಕ ರೈತಾಪಿ ಜನಗಳ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವಲ್ಲಿ ಕಮ್ಯುನಿಸ್ಟರು ಮುಂಚೂಣಿಯಲ್ಲಿದ್ದರು.

ಈ ಅವಧಿಯಲ್ಲಿ ದಮನಕಾರೀ ತೆರಿಗೆ ವ್ಯವಸ್ಥೆ ಮತ್ತು ಶೋಷಣೆಯ ವಿರುದ್ಧ ಭಾರಿ ರೈತ ಹೋರಾಟಗಳು ನಡೆದವು. ಮುವ್ವತ್ತರ ದಶಕದ ಆದಿ ಹಾಗೂ ಮಧ್ಯದಲ್ಲಿ ನಡೆದ ಈ ಶಕ್ತಿಯುತ ಕಿಸಾನ್ ಚಳುವಳಿಗಳು ಪ್ರಮುಖವಾಗಿ ಭೂಮಾಲಕರ ದಾಳಿ, ಬಲವಂತ ದುಡಿಮೆ ಮತ್ತಿತರ ಶೋಷಣೆಗಳಿಂದ ರೈತರನ್ನು ರಕ್ಷಿಸುವುದೇ ಆಗಿದ್ದವು. ೧೯೩೦ ರ ಅರ್ಥಿಕ ಮಹಾ ಕುಸಿತವು ರೈತರನ್ನು ಇನ್ನಷ್ಟು ಕಂಗೆಡಿಸಿದವು. ೧೯೩೬ ರ ಅಖಿಲ ಭಾರತ ಕಿಸಾನ್ ಸಭಾದ ಸ್ಥಾಪನೆಗೂ ಮುಂಚೆ ಹಲವಾರು ರಾಜ್ಯ ಮಟ್ಟದ ಸಂಘಗಳು ರಚನೆಯಾದವು; ತಕ್ಷಣದ ಪರಿಹಾರಕ್ಕಾಗಿ ಮಾತ್ರವಲ್ಲದೇ ಭೂಮಾಲಕ ಪದ್ಧತಿಯ ವಿರುದ್ಧದ ಸ್ಪಷ್ಟ ಉದ್ದೇಶಗಳೊಂದಿಗೆ ಈ ಸಂಘಗಳು ರಚಿಸಲ್ಪಟ್ಟವು. ಕಮ್ಯುನಿಸ್ಟ್ ಮುಖಂಡರುಗಳು ಕಾಂಗ್ರೆಸ್ ಸೋಶಿಯಲಿಸ್ಟರ ಜತೆ ಕೈಜೋಡಿಸಿ ರೈತರನ್ನು ಸಂಘಟಿಸಿದರು ಹಾಗೂ ಹಲವಾರು ಹೋರಾಟಗಳಿಗೆ ನಾಯಕತ್ವ ನೀಡಿದರು.

ಕಿಸಾನ್ ಸಭಾದ ೧೯೩೬ರ ಸ್ಥಾಪನಾ ಸಮ್ಮೇಳನವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಸಭೆಯ ಸಮಯದಲ್ಲಿಯೇ ನಡೆಯಿತು. ವರ್ಗ ಸಂಘಟನೆಯಾಗಿ ತನ್ನ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳುತ್ತಲೇ ರೈತ ಚಳುವಳಿಯನ್ನು ರಾಷ್ಟ್ರೀಯ ಚಳುವಳಿಯ ಭಾಗವಾಗಿಯೇ ಕಾಣುವಂತೆ ಯೋಜಿಸಲಾಗಿತ್ತು. ಮುಂದಿನ ತಲೆಮಾರಿನ ಕಮ್ಯುನಿಸ್ಟ್ ನಾಯಕರುಗಳಾಗಿ ಹೊರಹೊಮ್ಮಿದ ಇಎಂಎಸ್ ನಂಬೂದಿರಿಪಾಡ್ ಮತ್ತು ಹರಿಕಿಷನ್ ಸಿಂಗ್ ಸುರ್ಜಿತ್ ಅವರುಗಳಂತಹ ಅನೇಕರು ಈ ಸ್ಥಾಪನಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಆರ್ಥಿಕ ಶೋಷಣೆಯಿಂದ ರೈತರು ಸಂಪೂರ್ಣ ವಿಮೋಚನೆ ಹೊಂದಬೇಕು ಮತ್ತು ರೈತರು, ಕಾರ್ಮಿಕರು ಹಾಗೂ ದಮನಿತ ವರ್ಗಗಳು ಆರ್ಥಿಕ ಮತ್ತು ರಾಜಕೀಯ ಅಧಿಕಾರ ಸಾಧಿಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಕಿಸಾನ್ ಸಭಾದ ಸ್ಥಾಪನಾ ಸಮ್ಮೇಳನವು ಹೊಂದಿತ್ತು. ಈ ಸಮ್ಮೇಳನವು ಎರಡು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿತು. ಒಂದು, ಎಲ್ಲಾ ಸ್ವರೂಪಗಳಲ್ಲಿರುವ ಭೂಮಾಲಕತ್ವವನ್ನು ರದ್ದುಮಾಡಬೇಕು ಮತ್ತು ಉಳುವವರಿಗೇ ಜಮೀನಿನ ಒಡೆತನ ನೀಡಬೇಕು ಎಂಬ ಹಕ್ಕೊತ್ತಾಯ; ಎರಡನೆಯದು, ರೈತವಾರಿ ಪ್ರದೇಶಗಳಲ್ಲಿನ ಕಂದಾಯ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕು ಮತ್ತು ಕಂದಾಯ ಪಾವತಿಯಿಂದ ಬಡರೈತರಿಗೆ ವಿನಾಯಿತಿ ನೀಡಿ ಶ್ರೇಣೀಕೃತ ಕಂದಾಯ ಪದ್ಧತಿ ಜಾರಿಯಾಗಬೇಕು ಎಂಬ ಹಕ್ಕೊತ್ತಾಯ.

ಲಾಗುವಾಡುಗಳ ಬೆಲೆಗಳು, ಕೃಷಿ ಉತ್ಪನ್ನಗಳ ಮಾರಾಟ ಬೆಲೆಗಳು, ಋಣಭಾರಗಳು, ಬಿಟ್ಟಿ ದುಡಿಮೆ ಮತ್ತು ಗೇಣಿದಾರರಿಂದ ಭೂಮಾಲಕರ ಕಾನೂನುಬಾಹಿರ ವಸೂಲಿ ಇವುಗಳಲ್ಲದೇ ಭೂಮಾಲಕರ ಜಮೀನುಗಳನ್ನು ಭೂಹೀನರಿಗೆ ಹಂಚಬೇಕು ಹಾಗೂ ಖರಾಬು ಜಮೀನು ಮತ್ತು ಗೋಮಾಳಗಳನ್ನು ಗ್ರಾಮ ಮಟ್ಟದ ಪಂಚಾಯತುಗಳಿಗೆ ವಹಿಸಬೇಕು ಎಂಬ ಒತ್ತಾಯಗಳನ್ನೂ ಆ ನಿರ್ಣಯಗಳಲ್ಲಿ ಸೇರಿಸಲಾಗಿತ್ತು. ಕೃಷಿ ಕೂಲಿಗಾರರಿಗೆ ಕನಿಷ್ಠ ಕೂಲಿ ನಿಗದಿ ಮತ್ತು ಅವರ ಸಂಘಟನೆಗಳಿಗೆ ಕಾನೂನಾತ್ಮಕ ರಕ್ಷಣೆಗೆ ಕೇಂದ್ರ ಕಾನೂನುಗಳನ್ನು ತರಬೇಕು ಎಂದು ಎಐಕೆಎಸ್ ಒತ್ತಾಯ ಮಾಡಿತು. ಈ ಧ್ಯೇಯೋದ್ದೇಶಗಳು ಮತ್ತು ನಿರ್ಣಯಗಳ ಅಂಗೀಕಾರದಲ್ಲಿ ಕಮ್ಯುನಿಸ್ಟ್ ಮತ್ತು ಸೋಶಿಯಲಿಸ್ಟ್ ಚಿಂತನೆಗಳ ಸ್ಪಷ್ಟ ಪ್ರಭಾವ ಇರುವುದನ್ನು ಕಾಣಬಹುದು. ಈಹೋರಾಟದಲ್ಲಿ ರೈತಾಪಿ ಜನಗಳಿಗೆ ನೇತೃತ್ವ ನೀಡುವ ಮೂಲಕ ಮಾತ್ರವೇ ಕಾರ್ಮಿಕ ವರ್ಗವು ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಯನ್ನು ಬಲಪಡಿಸುವ ಸಾಮರ್ಥ್ಯವುಳ್ಳ ಒಂದು ವರ್ಗವಾಗಿ ಎದ್ದು ಬರುತ್ತದೆ ಎಂಬ ಕಾರ್ಯತಂತ್ರವು ಕಮ್ಯುನಿಸ್ಟರಿಗೆ ಮಾರ್ಗದರ್ಶಿಯಾಗಿತ್ತು.

ವಿದ್ಯಾರ್ಥಿ ಒಕ್ಕೂಟ:

ರಷ್ಯನ್ ಕ್ರಾಂತಿಯ ಸಾಹಿತ್ಯ, ಸಮಾಜವಾದದ ಮುನ್ನಡೆ ಮತ್ತು ಭಗತ್ ಸಿಂಗ್‌ರಂತಹ ಭಾರತೀಯ ಕ್ರಾಂತಿಕಾರಿಗಳ ಚಟುವಟಿಕೆಗಳು ಯುವಜನರ ನಡುವೆ ಗಾಢವಾದ ಪ್ರಭಾವ ಬೀರಿದ್ದವು. ಕಮ್ಯುನಿಸ್ಟರ ಪ್ರಭಾವ ವಾಸ್ತವವನ್ನು ಕಾಂಗ್ರೆಸ್ಸಿನವರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ಮತ್ತು ಬ್ರಿಟಿಷರು ಬಹಳಷ್ಟು ಆತಂಕದಿಮದ ನೋಡುತ್ತಿದ್ದ ಒಂದು ವಾಸ್ತವವಾಗಿತ್ತು.

ಭಗತ್‌ಸಿಂಗ್ ಮತ್ತವರ ಒಡನಾಡಿಗಳಿಂದ ಸ್ಥಾಪಿಸಲ್ಪಟ್ಟ ನೌಜವಾನ್ ಭಾರತ್ ಸಭಾವು ಪಂಜಾಬ್ ಪ್ರದೇಶದ ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಹಾಗೂ ಯುವಜನರ ವಿಭಾಗವನ್ನು ಆಕರ್ಷಿಸಿತು. ದಿ ಬಾಂಬೇ ಪ್ರದೇಶ್ ಯೂಥ್ ಲೀಗ್ ಮತ್ತು ಆಲ್ ಬೆಂಗಾಲ್ ಸ್ಟೂಡೆಂಟ್ಸ್ ಅಸೋಶಿಯೇಷನ್(ನಂತರ ಅದನ್ನು ವಿಭಜಿಸಿ ಬೆಂಗಾಲ್ ಪ್ರದೇಶ್ ಸ್ಟೂಡೆಂಟ್ಸ್ ಅಸೋಶಿಯೇಷನ್ ರಚಿಸಲಾಯಿತು) ಮುಂತಾದ ಸಂಘಟನೆಗಳು ಆ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದವು. ಈ ಸಂಘಟನೆಗಳ ಸಮ್ಮೇಳನಗಳು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಮತ್ತು ಬಹಳ ಮುಖ್ಯವಾಗಿ ಕೋಮುವಾದದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದವು. ರಷ್ಯಾ ಕ್ರಾಂತಿಯ ಸಾಧನೆಗಳು ಮತ್ತು ಪ್ರಗತಿ ಈ ಎಲ್ಲ ಸಮ್ಮೇಳನಗಳಲ್ಲಿ ತಪ್ಪದೇ ಪ್ರಸ್ತಾಪಿಸಲ್ಪಟ್ಟವು.

ಮೀರತ್ ಪಿತೂರಿ ಪ್ರಕರಣ ಮತ್ತು ಲಾಹೋರ್ ಪಿತೂರಿ ಪ್ರಕರಣ(ಭಗತ್ ಸಿಂಗ್ ಮತ್ತವರ ಒಡನಾಡಿಗಳ ವಿರುದ್ಧ) ವಿದ್ಯಾರ್ಥಿ ಮತ್ತು ಯುವಜನರ ನಡುವೆ ವ್ಯಾಪಕ ಪ್ರಭಾವ ಬೀರಿದ್ದವು. ದೇಶದ ಅನೇಕ ಕಡೆಗಳಲ್ಲಿ, ಮುಖ್ಯವಾಗಿ ಮೀರತ್, ಪಂಜಾಬ್ ಮತ್ತು ಬೊಂಬಾಯಿಯಲ್ಲಿ, ವಿದ್ಯಾರ್ಥಿ ಸಂಘಗಳು ಈ ವಿಚಾರಣೆಗಳನ್ನು ಖಂಡಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದವು ಮತ್ತು ಆರೋಪಿಗಳ ಪರ ವಾದ ಮಂಡನೆಗೆ ಸಮಿತಿಗಳನ್ನೂ ರಚಿಸಿದ್ದವು. ಮೀರತ್ ಕಾಲೇಜಿನ ವಿದ್ಯಾರ್ಥಿಗಳು ಈ ಉದ್ದೇಶಕ್ಕಾಗಿ ಮೀರತ್ ಕಮ್ಯುನಿಸ್ಟ್ ಸೇವಾ ಸಂಘ್ ರಚಿಸಿಕೊಂಡಿದ್ದರು.

ಈ ಅವಧಿಯಲ್ಲಿ, ಚಂದ್ರ ರಾಜೇಶ್ವರ್ ರಾವ್ ಮತ್ತವರ ಒಡನಾಡಿಗಳು ೧೯೩೧ ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಯಂಗ್ ಕಮ್ಯುನಿಸ್ಟ್ ಲೀಗ್‌ಗಳನ್ನು ರಚಿಸಿಕೊಂಡಿದ್ದರು. ಅವರು ಆ ವಿಶ್ವವಿದ್ಯಾಲಯದಲ್ಲಿ ನಿಯತಕಾಲಿಕವಾಗಿ ಅಧ್ಯಯನ ಶಿಬಿರಗಳನ್ನು ನಡೆಸುತ್ತಿದ್ದರು ಮತ್ತು ದೈಹಿಕ ತರಬೇತಿಯನ್ನೂ ನೀಡುತ್ತಿದ್ದರು. ಅನೇಕ ಬಾರಿ ಅವರು ಆರ್.ಎಸ್.ಎಸ್ ಹಾಗೂ ಕೋಮುವಾದಿ ರಾಜಕೀಯವನ್ನು ಎದುರಿಸಬೇಕಾಗುತ್ತಿತ್ತು.

ಸಂಪೂರ್ಣ ಸ್ವಾತಂತ್ರ್ಯ ಗಳಿಸುವ ಉದ್ದೇಶ ಹೊತ್ತು ಮದ್ರಾಸ್ ಪ್ರಸಿಡೆನ್ಸಿಯಲ್ಲಿ, ರ್‍ಯಾಡಿಕಲ್ ಯೂಥ್ ಕಾನ್ಫರೆನ್ಸ್ ( ತೀವ್ರಗಾಮಿ ವಿದ್ಯಾರ್ಥಿ ಸಮ್ಮೇಳ)ವನ್ನು ೧೯೩೫ ರಲ್ಲಿ ನಡೆಸಿದ್ದರು. ಆಂಧ್ರ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮದ್ರಾಸ್ ನಗರದಲ್ಲಿ ಸ್ಥಳೀಯ ಲೀಗ್ ಗಳನ್ನು ಸಂಘಟಿಸಲು ಸಮಿತಿಗಳನ್ನು ರಚಿಸಿಕೊಂಡಿದ್ದರು. ಗೃಹ ಇಲಾಖೆಯ ವರದಿಗಳು ಈ ವಿದ್ಯಮಾನಗಳ ಬಗ್ಗೆ ತನ್ನ ಎಲ್ಲಾ ಪಡೆಗಳಿಗೆ ಎಚ್ಚರಿಕೆಯ ಸಂದೇಶಗಳನ್ನು ಕಳಿಸಿ ಈ ರೀತಿ ಹೇಳಿತ್ತು: ಗಣನೀಯ ಪ್ರಮಾಣದ ಕಮ್ಯುನಿಸ್ಟ್ ಸಾಹಿತ್ಯವನ್ನು ಮದ್ರಾಸ್ ಪ್ರೆಸಿಡೆನ್ಸಿಯ ಹಲವಾರು ವಿದ್ಯಾರ್ಥಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಾಂತೀಯ ವಿದ್ಯಾರ್ಥಿ ಸಂಘಟನೆಗಳನ್ನು ಒಂದುಗೂಡಿಸಲು ಮತ್ತು ಅಖಿಲ ಭಾರತ ಸಂಘಟನೆಯನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಯಿತು. ೧೯೩೬ಲ್ಲಿ ಉತ್ತರ ಪ್ರದೇಶದ ವಿದ್ಯಾರ್ಥಿಗಳು ಸಮ್ಮೇಳನ ನಡೆಸಲು ಮುಂದಾಗುವ ಮೂಲಕ ಈ ಪ್ರಯತ್ನ ಕೈಗೂಡಿತು. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಮಹಮದ್ ಆಲಿ ಜಿನ್ನಾ ವಹಿಸಿದ್ದರೆ ಉದ್ಘಾಟನಾ ಭಾಷಣವನ್ನು ಜವಾಹರ್ ಲಾಲ್ ನೆಹರೂ ಅವರು ಮಾಡಿದರು. ಈ ಸಮ್ಮೇಳನದಲ್ಲಿ ಅಂಗೀಕರಿಸಿದ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತ ಬೇರೆಲ್ಲಾ ನಿರ್ಣಯಗಳ ಜತೆ ಎದ್ದು ಕಾಣುವ ನಿರ್ಣಯ ಯಾವುದೆಂದರೆ ಕೋಮುವಾದದ ವಿರುದ್ಧದ ನಿರ್ಣಯ.

ಎಲ್ಲಾ ರಾಜಕೀಯ ಸದಸ್ಯತ್ವ ಹೊಂದಿರುವ ವಿದ್ಯಾರ್ಥಿಗಳನ್ನು ಎ.ಐ.ಎಸ್.ಎಫ್. ಸೇರಲು ಉತ್ತೇಜನ ನೀಡಲಾಯಿತು. ಈ ಪರಿಣಾಮವಾಗಿ, ಗಾಂಧಿವಾದಿ ವಿದ್ಯಾರ್ಥಿಗಳು, ಮುಸ್ಲಿಂಲೀಗ್ ಚಿಂತನೆಗಳನ್ನು ಹೊಂದಿರುವ ವಿದ್ಯಾರ್ಥಿಗಳು, ಸಂಘಟನೆಯನ್ನು ಕಟ್ಟುವಲ್ಲಿ ನಾಯಕತ್ವ ವಹಿಸಿದ ಕಮ್ಯುನಿಸ್ಟ್ ಮತ್ತು ಸೋಶಿಯಲಿಸ್ಟ್ ಮನಸ್ಸುಗಳ ವಿದ್ಯಾರ್ಥಿಗಳೊಂದಿಗೆ ಎ.ಐ.ಎಸ್.ಎಫ್.ನ ಭಾಗವಾದರು.

ಕಮ್ಯುನಿಸ್ಟರ ಪ್ರಭಾವದಿಂದಾಗಿ ಉಚಿತ ಶಿಕ್ಷಣ, ವಿದ್ಯಾರ್ಥಿನಿಲಯ, ಶಾಲೆಗಳು, ಸಹಕಾರಿ ಕ್ರೆಡಿಟ್ ಸೊಸೈಟಿ ಮುಂತಾದ ವಿಷಯಗಳನ್ನು ಈ ವಿದ್ಯಾರ್ಥಿ ಚಳುವಳಿಯು ಎತ್ತಿತು. ಈ ವಿದ್ಯಾರ್ಥಿ ಸಂಘಟನೆಯು ವಿಶೇಷವಾಗಿ ಅಸ್ಪೃಶ್ಯತೆಯ ಸಮಸ್ಯೆಯನ್ನು ಕೈಗೆತ್ತಿಕೊಂಡಿತು ಮತ್ತು ದಲಿತ ವಿದ್ಯಾರ್ಥಿಗಳನ್ನು ಸಂಘಟಿಸಲು ಮುಂದಾಯಿತು. ವಿವಿಧ ಜಾತಿಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಊಟದ ಮನೆಯಂತಹ ಹಲವಾರು ತಾರತಮ್ಯ ಪದ್ಧತಿಗಳ ವಿರುದ್ಧ ಯಶಸ್ವಿ ಹೋರಾಟಗಳನ್ನು ನಡೆಸಲಾಯಿತು.

ಅದೇ ರೀತಿಯಲ್ಲಿ, ವಿದ್ಯಾರ್ಥಿನಿಯರನ್ನು ಕೀಟಲೆ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಜತೆಯಲ್ಲೇ ಈ ಹಾವಳಿಯಿಂದ ವಿದ್ಯಾರ್ಥಿನಿಯರನ್ನು ರಕ್ಷಿಸಲು ತಂಡಗಳನ್ನು ರಚಿಸಲಾಯಿತು. ವಿದ್ಯಾರ್ಥಿನಿಯರನ್ನು ಸಂಘಟಿಸುವ ಸಲುವಾಗಿ ೧೯೩೯ರಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಯಿತು: ಪ್ರತ್ಯೇಕ ಮಹಿಳಾ ಸಂಚಾಲನಾ ಸಮಿತಿಗಳನ್ನು ರಚಿಸಲಾಯಿತು. ಕನಕ್ ಮುಖರ್ಜಿಯವರು ಇಂತಹ ಮಹಿಳಾ ಸಮಿತಿಯ ಮೊದಲ ಸಂಚಾಲಕಿಯಾಗಿದ್ದರು.

ಪ್ರಗತಿಪರ ಬರಹಗಾರರ ಸಂಘ

(ಪ್ರೊಗ್ರೆಸ್ಸಿವ್ ರೈಟರ್ಸ್‌ ಅಸೋಶಿಯೇಷನ್): ೧೯೩೬ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನ ನಡೆಯುವಾಗಲೇ ಪಿಡಬ್ಲ್ಯುಎನ ಸ್ಥಾಪನಾ ಸಮ್ಮೇಳನ ಕೂಡ ಲಕ್ನೋದಲ್ಲಿ ನಡೆಯಿತು. ಮ್ಯಾಕ್ಸಿಂ ಗಾರ್ಕಿ ನೇತೃತ್ವದ ಫ್ಯಾಸಿಸ್ಟ್ ವಿರೋಧಿ ಬರಹಗಾರರ ಸಂಘ ಮತ್ತು ಯೂರೋಪಿನ ಇತರ ಪ್ರಗತಿಪರ ಬರಹಗಾರರು ಅಖಿಲ ಭಾರತ ಪ್ರಗತಿಪರ ಬರಹಗಾರರ ಸಂಘ ಸ್ಥಾಪನೆಗೆ ಸ್ಪೂರ್ತಿ ನೀಡಿದರು. ಕಮ್ಯುನಿಸ್ಟರ ಮುತುವರ್ಜಿಯಿಂದ ರಚಿಸಲ್ಪಟ್ಟ ಸಂಘವು ರವೀಂದ್ರನಾಥ್ ಟ್ಯಾಗೋರ್, ಸರೋಜಿನಿ ನಾಯಿಡು, ಮುನ್ಶಿ ಪ್ರೇಮ್‌ಚಂದ್, ಮುಲ್ಕ್ ರಾಜ್ ಆನಂದ್ ಹಾಗೂ ದೇಶದ ಇತರ ಉನ್ನತ ದರ್ಜೆಯ ಬರಹಗಾರರ ಆಶೀರ್ವಾದ ಪಡೆದಿತ್ತು.

ನಿಜ ಹೇಳಬೇಕೆಂದರೆ, ಭಾರತೀಯ ಬರಹಗಾರರ ಲಕ್ನೋ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೇಮ್‌ಚಂದ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಭಾಷೆಯ ಮುಖ್ಯ ಉದ್ದೇಶ ನಮ್ಮ ಚಿಂತನೆಗಳನ್ನು ಮತ್ತು ಭಾವನೆಗಳನ್ನು ರೂಪಿಸುವುದು ಮತ್ತು ಸರಿಯಾದ ಮಾರ್ಗ ತೋರಿಸುವುದೇ ಆಗಿದೆ ಎಂದರು. ಮುಂದುವರಿದು ಹೇಳಿದರು:ಬರಹಗಾರರು ಮಾನವೀಯತೆಯ ಮುಂದಾಳುಗಳಾಗಬೇಕು ಮತ್ತು ದಮನಿತರು, ತುಳಿತಕ್ಕೊಳಗಾದವರು ಮತ್ತು ಶೋಷಣೆಗೆ ಒಳಗಾದ ವ್ಯಕ್ತಿಗಳು ಹಾಗೂ ಗುಂಪುಗಳಿಗೆ ಸಹಾಯ ಮಾಡಬೇಕು ಮತ್ತು ಅವರ ಪರ ದನಿ ಎತ್ತಬೇಕು.

ಇಂತಹ ಕಾಳಜಿಗಳನ್ನು ಬಿಂಬಿಸುತ್ತಾ, ಪಿಡಬ್ಲ್ಯುಎನ ಸ್ಥಾಪನಾ ಸಮ್ಮೇಳನವು ಅಂಗೀಕರಿಸಿದ ಪ್ರಣಾಳಿಕೆಯು ಭಾರತೀಯ ನಾಗರೀಕತೆಯ ಅತ್ಯುತ್ತಮ ಪರಂಪರೆಯ ವಾರಸುದಾರರು ಎಂದು ಹೇಳಿಕೊಳ್ಳುವಾಗಲೇ, ನಾವು ನಮ್ಮ ದೇಶದ ಪ್ರತಿಗಾಮಿ ಮನೋಭಾವಗಳನ್ನು ಎಲ್ಲಾ ಆಯಾಮಗಳಿಂದಲೂ ಖಂಡಿಸೋಣ, ನಮ್ಮ ದೇಶವಿಂದು ತುಡಿಯುತ್ತಿರುವ ಹೊಸ ಬದುಕಿನತ್ತ ಕೊಂಡೊಯ್ಯಲು ಅಗತ್ಯವಾದ ಎಲ್ಲವನ್ನೂ, ವಿಸ್ತಾರವಾದ ಹಾಗೂ ಸೃಜನಾತ್ಮಕವಾದ ಕೃತಿಗಳ(ಭಾರತೀಯ ಹಾಗೂ ವಿದೇಶಿ ಸಂಪನ್ಮೂಲ ಎರಡರಿಂದಲೂ)ಮೂಲಕ ಬೆಳೆಸೋಣ. ಭಾರತದ ಹೊಸ ಸಾಹಿತ್ಯವು ಇಂದಿನ ನಮ್ಮ ಅಸ್ತಿತ್ವದ ಮೂಲಭೂತ ಸಮಸ್ಯೆಗಳಾದ ಹಸಿವು ಮತ್ತು ಬಡತನ, ಸಾಮಾಜಿಕ ಹಿಂದುಳಿದಿರುವಿಕೆ ಹಾಗೂ ರಾಜಕೀಯ ದಾಸ್ಯಗಳ ಬಗ್ಗೆ ಇರಬೇಕೆಂದು ನಾವು ಭಾವಿಸುತ್ತೇವೆ.

ಜಡತ್ವ, ನಿಷ್ಕ್ರಿಯತೆ ಹಾಗೂ ಮೌಢ್ಯದತ್ತ ನಮ್ಮನ್ನು ಎಳೆದೊಯ್ಯುವ ಎಲ್ಲವನ್ನೂ ಪ್ರತಿಗಾಮಿಯೆಂದು ನಾವು ತಿರಸ್ಕರಿಸುತ್ತೇವೆ. ಯಾವುದು ನಮ್ಮಲ್ಲಿ ವಿಮರ್ಶಾತ್ಮಕ ಚೈತನ್ಯವನ್ನು ಬಡಿದೆಬ್ಬಿಸಿ ವಿವೇಕದ ಬೆಳಕಿನಲ್ಲಿ ಆಚಾರಗಳನ್ನು ಮತ್ತು ಸಂಪ್ರದಾಯಗಳನ್ನು ಪರಿವೀಕ್ಷಿಸುತ್ತವೆಯೋ, ನಮ್ಮನ್ನು ಕ್ರಿಯಾಶೀಲಗೊಳಿಸಿ, ಸಂಘಟಿತರಾಗಿಸಿ, ಪರಿವರ್ತನೆಗೊಳಿಸುತ್ತದೋ ಅಂಥವನ್ನು ನಾವು ಪ್ರಗತಿಪರ ಎಂದು ಸ್ವೀಕರಿಸುತ್ತೇವೆ. ಪ್ರಣಾಳಿಕೆಯು ಬರಹಗಾರರಿಗೆ ಕರೆ ನೀಡುತ್ತಾ ಕೋಮುವಾದವನ್ನು, ಜನಾಂಗೀಯ ವೈಷಮ್ಯವನ್ನು ಮತ್ತು ಮಾನವನಿಂದ ಮಾನವನ ಶೋಷಣೆಯನ್ನು ಬಿಂಬಿಸುವ ಸಾಹಿತ್ಯ ಪ್ರವೃತ್ತಿಗಳನ್ನು ಪ್ರತಿಭಟಿಸಿ ಎನ್ನುತ್ತದೆ.

ಈ ಸಂಘಟನೆಯ ಸ್ಥಾಪನೆಯಿಂದಾಗಿ ವಿಚಾರವಂತರ ಮೇಲೆ ಸೋಶಿಯಲಿಸ್ಟರ, ಸಾಮ್ರಾಜ್ಯಶಾಹಿ-ವಿರೋಧಿ, ಫ್ಯಾಸಿಸ್ಟ್ ವಿರೋಧಿ ಚಿಂತನೆಗಳು ಪ್ರಭಾವ ಬೀರಿದ್ದರ ಸ್ಪಷ್ಟ ಸೂಚನೆಯಾಗಿದೆ.

ಪುನರ್ಸಂಘಟಿತ ಸಿಪಿಐ ಉದಯ ಮತ್ತು ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷದೊಂದಿಗಿನ ಐಕ್ಯ ಕಾರ್ಯಾಚರಣೆಯು ನಮ್ಮ ದೇಶದ ಸಮಾಜೋ-ರಾಜಕೀಯ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದೆ. ವಾರ್ಷಿಕ ಕಾಂಗ್ರೆಸ್ ಅಧಿವೇಶನದಲ್ಲಿನ ಅಧ್ಯಕ್ಷೀಯ ಭಾಷಣ ಹಾಗೂ ಅಂಗೀಕರಿಸಿದ ನಿರ್ಣಯಗಳಲ್ಲಿ ಕೂಡ ಎಡ ಚಿಂತನೆಗಳು ಪ್ರತಿಧ್ವನಿಸಿದವು. ಹೊಸ ಎಡ ಪ್ರವೃತ್ತಿಯು ರಾಜಕೀಯ ಹಾಗೂ ಆರ್ಥಿಕ ವಲಯಗಳ ಮೇಲೆ ಮಾತ್ರವಲ್ಲದೇ ಸಾಂಸ್ಕೃತಿಕ ಚಳುವಳಿಯ ಮೇಲೂ ತನ್ನ ಅಚ್ಚೊತ್ತಲು ಆರಂಭಿಸಿತು.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

 

 

Leave a Reply

Your email address will not be published. Required fields are marked *