ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (ಎನ್.ಪಿ.ಆರ್.)ಯ ಗಣತಿ ಪ್ರಕ್ರಿಯೆಯ ಬಗ್ಗೆ ಹಲವು ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ, ಜನಗಣತಿ ಕಾರ್ಯಕ್ಕೆ ಮಾಹಿತಿ ಸಂಗ್ರಹ ಮತ್ತು ಎನ್.ಪಿ.ಆರ್. ಗಣತಿಯನ್ನು ಪ್ರತ್ಯೇಕಿಸಿವುದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಜನಗಣತಿ ಕಾರ್ಯಗಳು ಪ್ರತಿ ದಶಕದಲ್ಲಿ ಮಾಡಬೇಕೆಂದು ಸಂವಿಧಾನ ವಿಧಿಸಿರುವಂತವುಗಳಾದರೆ, ಎನ್.ಪಿ.ಆರ್. ಪೌರತ್ವ ತಿದ್ದುಪಡಿ ಕಾಯ್ದೆ, 2003ರ ಅಡಿಯಲ್ಲಿ ರೂಪಿಸಿದ ನಿಯಮಗಳಲ್ಲಿ ಬರುವಂತದ್ದು. ಆದ್ದರಿಂದ ಕಾನೂನು ಪ್ರಕಾರ ಇವೆರಡನ್ನು ಒಟ್ಟಿಗೆ ಜೋಡಿಸಬಾರದು ಎಂದಿರುವ ಪೊಲಿಟ್ ಬ್ಯುರೊ ಎನ್.ಪಿ.ಆರ್. ದತ್ತಾಂಶವನ್ನು ತಂತಾನೇ ರಾಷ್ಟ್ರೀಯ ಪೌರರ ರಿಜಿಸ್ಟರ್(ಎನ್. ಆರ್.ಸಿ.)ನ್ನು ಸಿದ್ಧಪಡಿಸಲು ಬಳಸಲಾಗುತ್ತದೆ ಎಂಬ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
ಎನ್. ಆರ್.ಸಿ ಯಲ್ಲಿ ಹೆಸರು ಕಾಣಿಸಿಕೊಳ್ಳದ ಕೋಟ್ಯಂತರ ಜನಗಳನ್ನು ಆಗ ದಸ್ತಾವೇಜುಗಳನ್ನು ಸಲ್ಲಿಸಿ ತಾವು ಭಾರತೀಯ ಪೌರರು ಎಂದು ಸಾಬೀತುಪಡಿಸಲು ಅನಗತ್ಯ ಕಿರುಕುಳಗಳಿಗೆ ಒಳಪಡಿಸಲಾಗುತ್ತದೆ, ಬಲಿಪಶುಗಳಾಗಿ ಮಾಡಲಾಗುತ್ತದೆ. ಈ ಹಿಂದೆ ನಡೆಸಿದ ಒಂದು ಪ್ರಾಯೋಗಿಕ ಅಧ್ಯಯನ ೪೩ಶೇ. ದಷ್ಟು ಭಾರತೀಯರು ಮಾತ್ರವೇ ಯಾವುದೇ ದಸ್ತಾವೇಜಿನ ಸಾಕ್ಷ್ಯ ಹೊಂದಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿತ್ತು ಎಂಬ ಸಂಗತಿಯತ್ತ ಗಮನ ಸೆಳೆಯುತ್ತ, ವಾಸ್ತವ ಪರಿಸ್ಥಿತಿ ಹೀಗಿರುವುದರಿಂದ ಸಿಪಿಐ(ಎಂ) ಪೊಲಿಟ್ ಬ್ಯುರೊ ಎನ್.ಪಿ.ಆರ್.ಗೆ ತನ್ನ ವಿರೋಧವನ್ನು ಪುನರುಚ್ಚರಿಸುವುದಾಗಿ ಹೇಳಿದೆ.