ಈಶಾನ್ಯ ದಿಲ್ಲಿಯ ಭೀಕರ ಕೋಮುವಾದಿ ಹಿಂಸಾಚಾರವನ್ನು ಚರ್ಚಿಸಲು ಲೋಕಸಭೆ ಮತ್ತು ರಾಜ್ಯಸಭೆ ವಿಫಲವಾಗಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾನೂನು ಮತ್ತು ವ್ಯವಸ್ಥೆ ಕೇಂದ್ರ ಸರಕಾರದ ಅಡಿಯಲ್ಲಿರುವಾಗ ಇಂತಹ ಒಂದು ಬೃಹದಾಕಾರದ ದುರಂತದ ಬಗ್ಗೆ ಚರ್ಚಿಸಲು ಸಾಧ್ಯವಾಗದಿರುವುದು ನಾಚಿಕಗೇಡಿನ ಸಂಗತಿ. ಈ ದುರಂತಕ್ಕೆ ಇದುವರೆಗೆ ಅಧಿಕೃತವಾಗಿಯೇ ೫೩ ಜೀವಗಳು ಬೆಲೆ ತೆತ್ತಿವೆ, ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಣೆಯಾಗಿರುವವರ ಸಂಖ್ಯೆಯೂ ದೊಡ್ಡದಾಗಿದ್ದು, ಅವರ ಗತಿಯೇನು ಎಂಬುದೂ ಸ್ಪಷ್ಟವಾಗಿಲ್ಲ.
ಈ ಹಿಂಸಾಚಾರವನ್ನು ಬ್ರಿಟಿಶ್ ಪಾರ್ಲಿಮೆಂಟಿನ ಕೆಳಸದನ, ಹೌಸ್ ಆಫ್ ಕಾಮನ್ಸ್ ಮೂರು ದಿನಗಳ ಹಿಂದೆ ಚರ್ಚಿಸಿರುವಾಗಲಂತೂ ನಮ್ಮ ಸಂಸತ್ತು ಇದನ್ನು ಚರ್ಚಿಸಲು ಸಾಧ್ಯವಾಗದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಎಂದು ಪೊಲಿಟ್ ಬ್ಯುರೊ ಖೇದ ವ್ಯಕ್ತಪಡಿಸಿದೆ.
ಒಂದು ಹೆಮ್ಮೆಯ ಸಂಸದೀಯ ಪ್ರಜಾಪ್ರಭುತ್ವವಾಗಿ ಕಳೆದ ೭೦ ವರ್ಷಗಳಲ್ಲಿ ನಮ್ಮ ಸಾರ್ವಭೌಮ ಸಂಸತ್ತಿನ ಸ್ಥಾನಮಾನ ಎಂದೂ ಇಷ್ಟೊಂದು ಅಸಹಾಯಕತೆಯ ಮಟ್ಟಕ್ಕೆ ಇಳಿದಿರಲಿಲ್ಲ. ಹೋಳಿ ಹಬ್ಬವನ್ನು ನೆಪವಾಗಿ ಬಳಸಿಕೊಂಡು ಶಾಸಕಾಂಗಕ್ಕೆ ಜವಾಬುದಾರಿಯಾಗಿರುವ ತುರ್ತನ್ನು ನಿರಾಕರಿಸಲಾಗಿದೆ.
ವಿಷಯ ಇಂತಹ ಸ್ಥಿತಿಗೆ ಬರುವ ವರೆಗೆ ಬಿಡಲು ಎರಡು ಸದನಗಳ ಅಧ್ಯಕ್ಷರುಗಳ ಮೇಲೆ ಹೊಣೆ ವರ್ಗಾಯಿಸಿರುವುದು ಕೂಡ ಲಜ್ಜೆಗೆಟ್ಟ ಸಂಗತಿ. ಒಂದು ಕಾರ್ಯರತ ಪ್ರಜಾಪ್ರಭುತ್ವದ ಜನತೆಗೆ ಇಂತಹ ವರ್ತನೆಯನ್ನು ಒಪ್ಪುವುದಿಲ್ಲ ಎಂದು ತಮ್ಮ ಪಕ್ಷ ನಂಬಿರುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.