ಮಲೆಯಾಳಂ ಸುದ್ದಿ ವಾಹಿನಿಗಳ ಮೇಲೆ ನಿಷೇಧ: ಮೋದಿ ಸರಕಾರದ ಸರ್ವಾಧಿಕಾರಶಾಹಿ

ಎರಡು ಮಲೆಯಾಳಂ ಸುದ್ದಿ ವಾಹಿನಿಗಳಾದ ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಮೇಲೆ  ಸುದ್ದಿ ಮತ್ತು ಪ್ರಸಾರ ಮಂತ್ರಾಲಯ 48 ಗಂಟೆಗಳ ನಿಷೇಧ ಹೇರಿರುವುದನ್ನು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ. ಮೋದಿ ಸರಕಾರದ ಈ ತೀವ್ರ ಕ್ರಮ ಮಾಧ್ಯಮಗಳ ಮೇಲೆ ನಡೆಸಿರುವ ಒಂದು ನೇರ ಪ್ರಹಾರ ಎಂದು ಅದು ವರ್ಣಿಸಿದೆ.
ಈ ನಿಷೇಧ ಆದೇಶಕ್ಕೆ ಕೊಟ್ಟಿರುವ ಕಾರಣಗಳೆಂದರೆ, ಈ ವಾಹಿನಿಗಳು ಕ್ರಿಯೆಗಿಳಿಯುವಲ್ಲಿ ಕೇಂದ್ರ ಸರಕಾರದ ವಿಳಂಬದ ಟೀಕೆ, ಆರೆಸ್ಸೆಸ್‌ನ ಪಾತ್ರವನ್ನು ಪ್ರಶ್ನಿಸಿರುವುದು ಮತ್ತು ದಿಲ್ಲಿ ಪೋಲೀಸರ ಮೇಲೆ ನಿಷ್ಕ್ರಿಯತೆಯ ಆರೋಪ.
ಆಳುವ ಪಕ್ಷಕ್ಕೆ ಇಷ್ಟವಾಗದ ಸುದ್ದಿಗಳನ್ನು ದಮನ ಮಾಡುವ ಒಂದು ಸರ್ವಾಧಿಕಾರಶಾಹಿ ಪ್ರಯತ್ನದಲ್ಲಿ ಸರಕಾರ ಈ ಕ್ರಮವನ್ನು ಕೈಗೊಂಡಿದೆ ಎಂಬುದನ್ನು ಇದು ವೇದ್ಯಗೊಳಿಸುತ್ತದೆ.
ಮಾಧ್ಯಮಗಳನ್ನು ದಮನ ಮಾಡುವ ಈ ಪ್ರಯತ್ನಗಳು ದಿಲ್ಲಿಯಲ್ಲಿ ಕೋಮುವಾದಿ ಹಿಂಸಾಚಾರವನ್ನು ಎದುರಿಸುವಲ್ಲಿ ಕೇಂದ್ರ ಸರಕಾರದ ವಿಫಲತೆಯನ್ನು ಮುಚ್ಚಿ ಹಾಕುವ ಮತ್ತು ಹಿಂಸಾಚಾರವನ್ನು ಪ್ರಚೋದಿಸಿದ ಆಳುವ ಪಕ್ಷದ ಮುಖಂಡರನ್ನು ರಕ್ಷಿಸುವ ಒಟ್ಟಾರೆ ಪ್ರಯತ್ನದ ಭಾಗವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಭಾರತ ಘೋಷಿತ ತುರ್ತು ಪರಿಸ್ಥಿಯನ್ನು ಒಪ್ಪಲಿಲ್ಲ, ಅಘೋಷಿತ ತುರ್ತು ಪರಿಸ್ಥಿತಿಯನ್ನೂ ಒಪ್ಪುವುದಿಲ್ಲ- ಯೆಚುರಿ
ಎರಡು ವಾಹಿನಿಗಳ ಮೇಲಿನ ಈ ನಿಷೇಧ ಕಾನೂನಿನ ದೃಷ್ಟಿಯಿಂದ ಕೆಟ್ಟದ್ದು, ಅಲ್ಲದೆ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹಿತನದ್ದು ಎಂದು ಟೀಕಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, “ಯಾರೂ ಟೀಕಾತೀತರಲ್ಲಿ, ಅದರಲ್ಲೂ ಸರ್ದಾರ್ ಪಟೇಲ್ ನಿಷೇಧಿಸಿದ ಆರೆಸ್ಸೆಸ್ ಅಂತೂ ಖಂಡಿತಾ ಅಲ್ಲ”  ಎಂದು ಟಿಪ್ಪಣಿ ಮಾಡಿದ್ದಾರೆ.
ಮುಂದುವರೆದು ಅವರು “ಯಾವುದೇ ಆಳ್ವಿಕೆಯ ಇಂತಹ ನಡೆಗಳ ಅಂತ್ಯ ಹೇಗೆ ಎಂಬುದನ್ನು ಇತಿಹಾಸ ನಮಗೆ ತೋರಿಸಿದೆ. ಭಾರತ ಘೋಷಿತ ತುರ್ತು ಪರಿಸ್ಥಿತಿಯನ್ನು ತಿರಸ್ಕರಿಸಿದೆ, ಈಗ ಅದು ಒಂದು ಅಘೋಷಿತ ತುರ್ತು ಪರಿಸ್ಥಿತಿಯನ್ನೂ ಒಪ್ಪುವುದಿಲ್ಲ” ಎಂದಿದ್ದಾರೆ.

Leave a Reply

Your email address will not be published. Required fields are marked *