ಬಂಟ ಬಂಡವಾಳಶಾಹಿಯ ಅತ್ಯಂತ ಕೆಟ್ಟ ಪ್ರಕರಣ

ಯಸ್ ಬ್ಯಾಂಕ್ ಕುಸಿದಿರುವುದು ಖಾಸಗಿ ಬ್ಯಾಂಕುಗಳ ಕಾರ್ಯನಿರ್ವಹಣೆ ಮತ್ತು ಅವುಗಳ ನಿಯಂತ್ರಣ ಮಾಡಬೇಕಾದ ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸದಿರುವ ಬಗ್ಗೆ ಹಲವು ಕಳವಳಕಾರೀ ಪ್ರಶ್ನೆಗಳನ್ನು ಎತ್ತಿದೆ. ಈ ಯಸ್ ಬ್ಯಾಂಕ್ ಪ್ರಕರಣ ಬಂಟ ಬಂಡವಾಳಶಾಹಿಯ ಅತ್ಯಂತ ಕೆಟ್ಟ ಉದಾಹರಣೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ವರ್ಣಿಸಿದೆ.

 

ಈ ಬ್ಯಾಂಕಿನ ಸಾಲ ಖಾತೆ ಮಾರ್ಚ್ 2014ರಲ್ಲಿ ರೂ.55,633 ಕೋಟಿ ಇದ್ದದ್ದು, ಮಾರ್ಚ್ 2019ರಲ್ಲಿ ರೂ.2,41,999ಗೆ ಭಾರೀ ಪ್ರಮಾಣದಲ್ಲಿ ಏರಿದೆ ಎಂದು ದಾಖಲೆಗಳು ತೋರಿಸುತ್ತಿವೆ. ಬ್ಯಾಂಕ್‌ನ ತಲೆಯ ಮೇಲೆ ಆಳುವ ವ್ಯವಸ್ಥೆಯ ಪ್ರೀತಿಪಾತ್ರ ಕಾರ್ಪೊರೇಟ್‌ಗಳಿಗೆ ಕೊಟ್ಟ ಅಪಾರ ಸಾಲಗಳ ಹೊರೆ ಬಿದ್ದಿದೆ. ಅನಿಲ್ ಅಂಬಾನಿಯಂತಹ ಕೆಲವು ಕಾರ್ಪೊರೇಟ್ ಸಾಲಗಾರರಿಗೆ, ಅವರ ಹಣಕಾಸು ಆರೋಗ್ಯ ಅತ್ಯಂತ ಅಭದ್ರವಾಗಿದೆ ಎಂಬುದರ ಎಲ್ಲ ದಾಖಲೆಗಳೂ ಇದ್ದರೂ, ಮೋದಿ ಸರಕಾರದ ಭಾರೀ ಬೆಂಬಲ ಇತ್ತು ಎಂಬ ಸಂಗತಿಯತ್ತ ಪೊಲಿಟ್‌ಬ್ಯುರೊ ಗಮನ ಸೆಳೆದಿದೆ.

 

ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಪ್ರಾಯೋಜಕರು ಕೆಲ ಸಮಯದಿಂದ ನಡೆಸುತ್ತಿದ್ದ ಕಿತಾಪತಿಗಳು ಚೆನ್ನಾಗಿ ಗೊತ್ತಿದ್ದರೂ, ಆರ್‌ಬಿಐ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಲಿಲ್ಲ, ಆಮೂಲಕ ಠೇವಣಿದಾರರ ಹಿತಗಳನ್ನು ಅಪಾಯಕ್ಕೀಡುಮಾಡಿದೆ. ಬಂಡ ಬಂಡವಾಳಶಾಹಿಯ ಮೇಲೆ ನಿಂತಿರುವ ಪ್ರಸಕ್ತ ಆಳ್ವಿಕೆ ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಉಂಟು ಮಾಡಿರುವ ವಿಧ್ವಂಸಕಾರೀ ಪ್ರಭಾವವನ್ನು ಇನ್ನು ಮುಂದೆ ಮುಚ್ಚಿಡಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕಟುವಾಗಿ ವಿಮರ್ಶಿಸುತ್ತ ಹೇಳಿದೆ.

 

ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಯಸ್ ಬ್ಯಾಂಕಿನ ೪೯ಶೇ. ಪಾಲನ್ನು ವಹಿಸಿಕೊಳ್ಳುವಂತೆ ಸರಕಾರ ಹೇಳಿರುವಾಗ, ಆ ಬ್ಯಾಂಕ್ ಈಗ ಅನಿವಾರ್ಯವಗಿಯೇ ಪ್ರಭುತ್ವದ ಒಡೆತನದ ಉದ್ದಿಮೆಯಾಗಿ ಬಿಡುತ್ತದೆ. ಅದು ಲಾಭಗಳ ಖಾಸಗೀಕರಣ, ನಷ್ಟಗಳ ರಾಷ್ಟ್ರೀಯಕರಣದ ಉದಾಹರಣೆಯಾಗಲು ಸಾಧ್ಯವಿಲ್ಲ. ಠೇವಣಿದಾರರ ಹಿತಗಳನ್ನು ಕಾಪಾಡುವುದು ಪರಮ ಸಂಗತಿಯಾಗುತ್ತದೆ. ಆರ್‌ಬಿಐ ಹಣ ವಾಪಾಸು ತೆಗೆಯಲು ವಿಧಿಸಿರುವ ರೂ.೫೦,೦೦೦ ಮಿತಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *