- ರೈತರು, ಕಾರ್ಮಿಕರು ಮತ್ತು ಇತರ ದುಡಿಯುವ ಜನವಿಭಾಗದಲ್ಲಿ ಮೂಡುತ್ತಿದ್ದ ಆಸೆ ಆಕಾಂಕ್ಷೆಗಳಿಗೆ ಸಂಘಟನಾ ರೂಪ ನೀಡುವಲ್ಲಿ ಕಮ್ಯುನಿಸ್ಟರು, ಸೋಶಿಯಲಿಸ್ಟರು ಹಾಗೂ ಕಾಂಗ್ರೆಸ್ಸಿನ ಎಡಪಂಥೀಯರು ಶ್ರಮಿಸಿದರು. ಸಾಮಾಜಿಕ ಬದಲಾವಣೆಗಾಗಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕೆಂದು ಮತ್ತು ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ಅಧಿಕೃತ ದಸ್ತಾವೇಜುಗಳಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕೆಂದು ಒತ್ತಡ ತರಲಾಯಿತು.
- ಕಮ್ಯುನಿಸ್ಟ್ ಪಕ್ಷ ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಯಲ್ಲಿ ಕಾರ್ಮಿಕ ವರ್ಗದ ನಾಯಕತ್ವವನ್ನು ಕ್ರೋಢೀಕರಿಸಲು ಮತ್ತು ಬಂಡವಾಳಶಾಹಿ ನಾಯಕತ್ವದ ನೀತಿಗಳ ವಿರುದ್ಧ ರೈತರು ಮತ್ತು ಇತರ ದುಡಿಯುವ ಜನರಿಗೆ ನಾಯಕತ್ವ ನೀಡಲು ಯತ್ನಿಸಿತು. ಇದರಿಂದಾಗಿ 1937-1939ರ ಅವಧಿಯಲ್ಲಿ ಅದು ಒಂದು ಸ್ವತಂತ್ರ ಸಂಘಟಿತ ನೆಲೆಯಲ್ಲಿ ರಾಷ್ಟ್ರೀಯ ಚಳುವಳಿಯಲ್ಲಿ ಒಂದು ಗಮನಾರ್ಹ ಶಕ್ತಿಯಾಗಿ ಬೆಳೆಯಿತು.
ಸಂಯುಕ್ತ ರಂಗ ಕಾರ್ಯತಂತ್ರದ ಭಾಗವಾಗಿ, ಕಮ್ಯುನಿಸ್ಟರು ಕಾಂಗ್ರೆಸ್ಸಿನೊಳಗಡೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಹಲವಾರು ಸಾಮೂಹಿಕ ಹಾಗೂ ವರ್ಗ ಸಂಘಟನೆಗಳನ್ನು ಕಟ್ಟುವ ಕೆಲಸಕ್ಕೆ ಒತ್ತು ನೀಡಿದರು. ಕೆಂಬಾವುಟದ ಮುನ್ನಡೆ ಸಾಗಿತ್ತು, ಕಾರ್ಮಿಕರು, ರೈತರು ಮತ್ತು ವಿಚಾರವಂತರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಸಾಮ್ರಾಜ್ಯಶಾಹಿಯ ವಿರುದ್ಧ ಸಂಯುಕ್ತ ರಂಗವು ಒಂದು ಬಲಶಾಲಿಯಾದ ಶಕ್ತಿಯಾಗಿ ಹೊರಹೊಮ್ಮುತ್ತಿತ್ತು. ಕಾರ್ಮಿಕ ಸಂಘ ಮತ್ತು ರೈತ ಸಂಘಗಳ ಚಟುವಟಿಕೆಗಳ ಹೆಚ್ಚಳದ ಪ್ರಭಾವವು ಕಾರ್ಮಿಕ ವರ್ಗದ ಹಾಗೂ ರೈತಾಪಿ ಜನಗಳ ಅನೇಕ ಹಕ್ಕೊತ್ತಾಯಗಳನ್ನು 1937ರ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಕಾಂಗ್ರೆಸ್ಸಿನ ಮೇಲೆ ಒತ್ತಡ ಹೇರಿತು.
ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷವು ಚುನಾವಣಾ ಚಟುವಟಿಕೆಗಳನ್ನು ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟವನ್ನು ಬಲಪಡಿಸುವ ಒಂದು ಬಹುಮುಖ್ಯ ಸಾಧನವನ್ನಾಗಿ ಪರಿಗಣಿಸಿದವು. ಶಾಸನಸಭೆಗಳ ಒಳಗಡೆಯ ಬಹುಮತ ಮತ್ತು ಶಾಸನಸಭೆಯ ಹೊರಗಡೆ ಜನಚಳುವಳಿ ಇವೆರಡನ್ನೂ ಒಂದುಗೂಡಿಸಿ ಒಂದು ಕ್ರಾಂತಿಕಾರಿ ಸಾಮೂಹಿಕ ಚಳುವಳಿಯನ್ನಾಗಿ ರೂಪಿಸಬೇಕೆಂದು ಅವರು ಬಯಸಿದರು. ಜನಬಲದೊಂದಿಗೆ ರಾಜ್ಯವ್ಯವಸ್ಥೆಯನ್ನು ಭಗ್ನಗೊಳಿಸಿ ಜನರಿಂದಲೇ ರಚಿಸಲ್ಪಟ್ಟ ಸಂವಿಧಾನ ಸಭೆಯ ಮೂಲಕ ಭಾರತಕ್ಕೊಂದು ಹೊಸ ಸಂವಿಧಾನವನ್ನು ರೂಪಿಸಬೇಕೆಂಬ ದೃಷ್ಟಿಕೋನವನ್ನು ಅವರು ಅಳವಡಿಸಿಕೊಂಡರು.
ಕಮ್ಯುನಿಸ್ಟರ ಮುತುವರ್ಜಿಯಿಂದಾಗಿ 1937ರಲ್ಲಿ ಕಾರ್ಮಿಕ ವರ್ಗದ ಕಾರ್ಯಾಚರಣೆಗಳು ಬಿರುಸಾದವು. ಮುಷ್ಕರಗಳ ಸಂಖ್ಯೆ 307ಕ್ಕೆ ತಲುಪಿ 1921ರ ನಂತರದ ಅತ್ಯಂತ ಹೆಚ್ಚಿನ ಮಟ್ಟಕ್ಕೆ ಹೋದವು; 6,06,000 ಕಾರ್ಮಿಕರು ಅವುಗಳಲ್ಲಿ ಭಾಗವಹಿಸಿದ್ದರು. ಬಂಗಾಳದಲ್ಲಿ ಭಾರಿ ಸಾರ್ವಜನಿಕ ಮುಷ್ಕರವು 2,25,000 ಕಾರ್ಮಿಕರನ್ನು ಒಳಗೊಂಡಿತ್ತು; 40,000 ಕಾರ್ಮಿಕರನ್ನು ಒಳಗೊಂಡಿದ್ದ ಕಾನ್ಪುರದ ಜವಳಿ ಮುಷ್ಕರವು ಕಾರ್ಮಿಕರ ವಿಶಾಲ ಐಕ್ಯತೆಗೆ ಇಂಬು ನೀಡಿತು. ಈ ಮುಷ್ಕರವು 55 ದಿನಗಳವರೆಗೆ ನಡೆದು ಒಂದು ಗಮನಾರ್ಹ ಗೆಲುವನ್ನು ತಂದುಕೊಟ್ಟಿತು. ಕಾನ್ಪುರ ಮುಷ್ಕರವು ಕಾರ್ಮಿಕರ ಕಾರ್ಯಾಚರಣೆಗೆ ದೇಶಾದ್ಯಂತ ಒಂದು ಮಾದರಿಯಾಗಿ ಪರಿಣಮಿಸಿತು. ಈ ಮುಷ್ಕರವು ಕಮ್ಯುನಿಸ್ಟರ, ಸೋಶಿಯಲಿಸ್ಟರ ಮತ್ತು ಸಾಮಾನ್ಯ ಕಾಂಗ್ರೆಸ್ಸಿಗರ ಐಕ್ಯತೆಯ ಶಕ್ತಿ ಏನೆಂಬುದನ್ನು ಮತ್ತು ಐಕ್ಯತೆಯ ಮೂಲಕ ಏನನ್ನು ಸಾಧಿಸಬಹುದು ಎನ್ನುವುದನ್ನು ದೇಶದ ಎಲ್ಲಾ ಸಾಮ್ರಾಜ್ಯಶಾಹಿ-ವಿರೋಧಿಗಳಿಗೆ ಸಾಬೀತುಪಡಿಸಿತು. ಇದನ್ನು ಅನುಸರಿಸಿ ದೇಶಾದ್ಯಂತ ಮುಷ್ಕರಗಳ ದೊಡ್ಡ ಅಲೆಯೇ ಎದ್ದಿತು. ಅನೇಕ ರೈತ ಜಾಥಾಗಳನ್ನು ಸಂಘಟಿಸಲಾಯಿತು, ಇದು ಎಡಪಂಥೀಯರ ಶಕ್ತಿ ಬೆಳೆಯುತ್ತಿರುವುದನ್ನು ತೋರಿಸಿತು.
ಇದೇ ಸಂದರ್ಭದಲ್ಲಿ ರಾಜರುಗಳ ಆಡಳಿತ ಇರುವ ಪ್ರದೇಶಗಳಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧ ಮತ್ತು ಪ್ರಾತಿನಿಧಿಕ ಸರ್ಕಾರಕ್ಕಾಗಿ ಹೋರಾಟಗಳು ಆರಂಭವಾದವು. ತಿರುವಾಂಕೂರು, ಕೊಚಿನ್, ಹೈದರಾಬಾದ್ ಮತ್ತಿತರ ಕಡೆಗಳಂತಹ ಸಂಸ್ಥಾನಗಳಲ್ಲಿ ಈ ಹೊಸ ಚಳುವಳಿಗಳು ಬೆಳೆಯುವಲ್ಲಿ ಕಮ್ಯುನಿಸ್ಟರು ಗಮನಾರ್ಹ ಕೊಡುಗೆ ನೀಡಿದರು. ಈ ಚಳುವಳಿಗಳ ಅನುಭವಗಳು ಅನೇಕ ಪ್ರಜಾಪ್ರಭುತ್ವ ಮನಸ್ಸಿನ ಜನರನ್ನು ಎಡಪಂಥದತ್ತ ಸೆಳೆದವು. ಬಲಪಂಥೀಯ ಕಾಂಗ್ರೆಸ್ ನಾಯಕತ್ವವು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮತ್ತು ಚುನಾವಣೆ ಗೆಲ್ಲುವ ಕೆಲಸದಲ್ಲಿ ನಿರತರಾಗಿದ್ದರೆ, ಅತ್ತ ಎಡಪಂಥೀಯರು ಸಾಮ್ರಾಜ್ಯಶಾಹಿ-ವಿರೋಧಿ ಸಾಮೂಹಿಕ ಚಳುವಳಿಯನ್ನು ಇನ್ನೂ ಬಲಪಡಿಸಲು ಚುನಾವಣಾ ಪ್ರಚಾರವನ್ನು ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿ ಬಳಕೆ ಮಾಡಿಕೊಂಡರು.
ಫೈಜ್‌ಪುರದ ಕಾಂಗ್ರೆಸ್ ವಾರ್ಷಿಕ ಅಧಿವೇಶನದ ಹೊರಗಡೆಯಲ್ಲಿ ಕಮ್ಯುನಿಸ್ಟರು, ಸೋಶಿಯಲಿಸ್ಟರು ಮತ್ತು ಎಡಪಂಥೀಯ ವಿಭಾಗಗಳು ನಡೆಸಿದ ಚಟುವಟಿಕೆಗಳು ವಿಶಾಲ ನೆಲೆ ಹೊಂದಿದ್ದವು; ಅವು ಕಾಂಗ್ರೆಸ್ ಅಧಿವೇಶನದಲ್ಲಿ ಔಪಚಾರಿಕವಾಗಿ ಅಂಗೀಕರಿಸಿದ ನಿರ್ಣಯಗಳಿಗಿಂತ ಹೆಚ್ಚು ಯಶಸ್ವಿಯಾಗಿದ್ದವು. ಈ ಅಧಿವೇಶನದ ಇಡೀ ವಾತಾವರಣ ಕಾರ್ಮಿಕರು ಹಾಗೂ ರೈತರ ಹಕ್ಕುಗಳ ಮೇಲೆ ಒತ್ತು ಕೊಡುವ, ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸಂ ವಿರುದ್ಧದ ಸಮಾಜವಾದಿ ಘೋಷಣೆಗಳಿಂದ ತುಂಬಿ ಹೋಯಿತು.
1937ರ ಚುನಾವಣೆಗಳ ನಂತರ ರಚಿಸಲಾದ ಕಾಂಗ್ರೆಸ್ ಸರ್ಕಾರಗಳು ಜನರ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಕ್ರಮ ತೆಗೆದುಕೊಳ್ಳಲಿಲ್ಲ, ಅವು ಜನರ ವಿರುದ್ಧವೂ ಹೋದವು. ಕಾರ್ಮಿಕರು ಮತ್ತು ರೈತರ ಹೋರಾಟಗಳ ಕುರಿತು ಪ್ರಾಂತೀಯ ಕಾಂಗ್ರೆಸ್ ಮಂತ್ರಿಮಂಡಲಗಳ ಧೋರಣೆ ಮತ್ತು ರಾಜರುಗಳ ಸಂಸ್ಥಾನಗಳಲ್ಲಿ ಜನರ ಪ್ರಜಾಸತ್ತಾತ್ಮಕ ಹೋರಾಟಗಳ ಬಗ್ಗೆ ಗಾಂಧಿ ಮತ್ತಿತರ ಬಲಪಂಥೀಯ ನಾಯಕರುಗಳ ನಕಾರಾತ್ಮಕ ಧೋರಣೆಗಳು ಎಡಪಂಥೀಯರ ಅತೃಪ್ತಿಗೆ, ಚಡಪಟಿಕೆಗಳಿಗೆ ಕಾರಣವಾದವು.. ದೇಶಾದ್ಯಂತ ಕಾರ್ಮಿಕರ ಮುಷ್ಕರಗಳು, ರೈತರ ಸತ್ಯಾಗ್ರಹಗಳು ಮತ್ತಿತರ ನೇರ ಕಾರ್ಯಾಚರಣೆಗಳು ನಡೆದವು. ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ಸೋಶಿಯಲಿಸ್ಟರ ಜತೆ ಸಾಮಾನ್ಯ ಕಾಂಗ್ರೆಸ್ಸಿಗರೂ ಈ ಪ್ರತಿಭಟನೆಗಳಲ್ಲಿ ಕೈಜೋಡಿಸಿದರು. ಇವು ಸಾಮಾನ್ಯ ಜನರ ಬೇಗುದಿಯ ಅಭಿವ್ಯಕ್ತಿಯಾಗಿದ್ದವು.
ಕಾಂಗ್ರೆಸ್ ಸರ್ಕಾರಗಳ ದಮನಕಾರಿ ಕ್ರಮಗಳು ಕಾಂಗ್ರೆಸ್ಸೇತರ ಸರ್ಕಾರಗಳಿಗಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿರಲಿಲ್ಲ. ಬೊಂಬಾಯಿಯ ಗೃಹ ಸಚಿವರಾಗಿದ್ದ ಕೆ.ಎಂ.ಮುನ್ಶಿಯವರು ದೊರೆಗಿಂತ ತಾನೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಕಮ್ಯುನಿಸ್ಟರು ಮತ್ತಿತರ ಎಡ ಮುಖಂಡರುಗಳನ್ನು ದಸ್ತಗಿರಿ ಮಾಡಿದರು. ಬೊಂಬಾಯಿಯ ಸುತ್ತಮುತ್ತ ಇರುವ ಕಮ್ಯುನಿಸ್ಟರೊಂದಿಗೆ ವ್ಯವಹರಿಸಲು ಸಿಐಡಿಯನ್ನು ಬಳಸಬೇಕೆಂದು ವೈಸ್‌ರಾಯ್‌ರನ್ನು ಕೋರಿಕೊಂಡರು, ಅದು ವೈಸ್ ರಾಯ್‌ರಿಗೇ ಅಚ್ಚರಿಯುಂಟು ಮಾಡಿತು.
ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ದಮನಕಾರಿ ಕಾನೂನುಗಳನ್ನು ತಡೆಹಿಡಿಯಬೇಕು ಎಂಬುದೇ ಕಾಂಗ್ರೆಸ್ ಸಚಿವರುಗಳು ಮತ್ತು ಎಡ ಚಳುವಳಿಗಳ ನಡುವಿನ ತಿಕ್ಕಾಟಗಳಲ್ಲಿನ ಮೊದಲ ವಿಚಾರವಾಗಿತ್ತು. ಬೊಂಬಾಯಿ ಮತ್ತು ಮದ್ರಾಸನ್ನೂ ಒಳಗೊಂಡಂತೆ ಅನೇಕ ಪ್ರಾಂತಗಳಲ್ಲಿ, ರಾಜಕೀಯ ಕಾರ್ಯಕರ್ತರ ವಿರುದ್ಧದ ದಮನಕಾರಿ ಕ್ರಮಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ಮತ್ತೆ ಪ್ರಾರಂಭಿಸಲಾಯಿತು. ಎಡಪಂಥೀಯರ ಪತ್ರಿಕೆಗಳು ಮತ್ತು ಮುದ್ರಣಾಲಯಗಳ ಮೇಲೆ ದಾಳಿ ಮಾಡಲು ಕಾಂಗ್ರೆಸ್ ಸರ್ಕಾರಗಳು ಮುಂದಾದವು.
ಈ ಎಲ್ಲಾ ದಮನಕಾರಿ ಕ್ರಮಗಳ ಮಧ್ಯೆಯೂ ಕಾರ್ಮಿಕರ, ರೈತರ ಹಾಗೂ ವಿದ್ಯಾರ್ಥಿಗಳ ಸಂಪು ಹಾಗೂ ಹೋರಾಟಗಳು ಮುಂದುವರಿಯುತ್ತಿದ್ದವು. ಈ ಹೋರಾಟಗಳಿಗೆ ಒಂದು ಸಂಘಟಿತ ರೂಪ ನೀಡಲು ಮತ್ತು ಆ ಮೂಲಕ ಸಾಮ್ರಾಜ್ಯಶಾಹಿ- ವಿರೋಧಿ ರಂಗವನ್ನು ಬಲಪಡಿಸಲು ಕಮ್ಯುನಿಸ್ಟರು ಮತ್ತು ಸೋಶಿಯಲಿಸ್ಟರು ಶ್ರಮವಹಿಸಿದರು. ಈ ಎಲ್ಲಾ ಹೋರಾಟಗಳ ಒತ್ತಡದ ಕಾರಣದಿಂದಾಗಿ, ಅನೇಕ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು, ಕಾರ್ಮಿಕರು ಮತ್ತು ರೈತರ ಸಮಸ್ಯೆಗಳು ಮತ್ತು ಅವರ ಹಕ್ಕೊತ್ತಾಯಗಳ ಬಗ್ಗೆ ತಿಳಿದುಕೊಳ್ಳಲು ಆಯೋಗಗಳನ್ನು ನೇಮಕ ಮಾಡಿದವು. ಕೆಲವು ನಿರ್ದಿಷ್ಟ ಪ್ರಸಂಗಗಳಲ್ಲಿ, ಕಾರ್ಮಿಕರ ಕೆಲವು ಬೇಡಿಕೆಗಳನ್ನು ಒಪ್ಪಲೇಬೇಕಾದ ಒತ್ತಡಕ್ಕೆ ಸಿಲುಕಿದ ಕಾಂಗ್ರೆಸ್ ಸರ್ಕಾರಗಳು ಕೆಲವು ಕ್ರಮಗಳನ್ನು ಕೈಗೊಂಡವು.
1937-1939ರಲ್ಲಿ ಶೇಕಡಾ 50ಕ್ಕೂ ಹೆಚ್ಚಿನ ಮುಷ್ಕರಗಳು ಭಾಗಶಃ ಅಥವಾ ಸಂಪೂರ್ಣ ಯಶಸ್ವಿಯಾದವು. ಈ ಅವಧಿಯಲ್ಲಿ, ಮುಷ್ಕರಗಳು ಮತ್ತು ಕಾರ್ಮಿಕ ಸಂಘಗಳ ಸದಸ್ಯತ್ವ ಗಣನೀಯವಾಗಿ ಏರಿಕೆ ಕಂಡವು. 1936ರಲ್ಲಿ 241 ಇದ್ದ ಕಾರ್ಮಿಕ ಸಂಘಗಳು 1939ರಲ್ಲಿ 562ಕ್ಕೆ ಏರಿದವು ಮತ್ತು ಸದಸ್ಯತ್ವವು 2,68,000 ರಿಂದ 3,90,000ಕ್ಕೆ ಏರಿತು. ಕಾರ್ಮಿಕ ಸಂಘಗಳಲ್ಲಿ ಎಡಪಂಥೀಯರ ನೇತೃತ್ವದ ಎಐಟಿಯುಸಿ ದಾಪುಗಾಲು ಹಾಕಿತು. ಕಾರ್ಮಿಕ ವರ್ಗದಿಂದ ದೂರ ಉಳಿದಿದ್ದ, ಸೌಮ್ಯವಾದಿಗಳ ನೇತೃತ್ವದ ನ್ಯಾಷನಲ್ ಟ್ರೇಡ್ ಯೂನಿಯನ್ ಫೆಡರೇಷನ್(ಎನ್.ಟಿ.ಯು.ಎಫ್) ಮತ್ತವುಗಳ ಅಡಿಯಲ್ಲಿದ್ದ ಸಂಘಗಳು ತಮ್ಮ ಸಂಘಟನೆಗಳನ್ನು ಎಐಟಿಯುಸಿಯಲ್ಲಿ ವಿಲೀನಗೊಳಿಸಿದವು.
ಈ ಅವಧಿಯು ರೈತರ ಸಂಪು ಮತ್ತು ಹೋರಾಟಗಳ ಕಾಲವೂ ಆಗಿತ್ತು. 1938ರಲ್ಲಿ 6,00,000 ಸದಸ್ಯತ್ವ ಹೊಂದಿದ್ದ ಎಐಕೆಎಸ್ ಸದಸ್ಯ ಸಂಖ್ಯೆ 1939ರಲ್ಲಿ 8,00,000ಕ್ಕೆ ಏರಿತು. ಕಾಂಗ್ರೆಸ್ ಸಚಿವರು ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಕಿಸಾನ್ ಸಭಾದ ಬೆಳವಣಿಗೆಯು ಕಾಂಗ್ರೆಸ್ ಸಚಿವರುಗಳ ಮತ್ತು ಬಲಪಂಥೀಯ ಕಾಂಗ್ರೆಸ್ ನಾಯಕತ್ವದ ಕಣ್ಣು ಕೆಂಪಗಾಗಿಸಿತ್ತು. ರೈತರ ಕೆಲವು ಬೇಡಿಕೆಗಳನ್ನು ಪರಿಗಣಿಸುವ ಮೂಲಕ ಅವರ ದಾರಿ ತಪ್ಪಿಸಲೂ ಪ್ರಯತ್ನ ಮಾಡಿದರು. ಆ ನಿಟ್ಟಿನಲ್ಲಿ ಶಾಸನಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲೇ ಅದಕ್ಕೆ ಸಮಾನಾಂತರದಲ್ಲಿ ದಮನಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಯತ್ನಗಳನ್ನೂ ಮಾಡಿದರು.
ಬಲಪಂಥೀಯ ಕಾಂಗ್ರೆಸ್ ನಾಯಕತ್ವದ ಆಶಯಕ್ಕೆ ವಿರುದ್ಧವಾಗಿ ಮತ್ತು ಅವರ ವಿರೋಧದ ನಡುವೆಯೂ ಆಲ್ ಇಂಡಿಯ ಸ್ಟೂಡೆಂಟ್ಸ್ ಫೆಡೆರೇಷನ್ ಕೂಡ ಈ ಅವಧಿಯಲ್ಲಿ ಪ್ರಗತಿ ಸಾಧಿಸಿತು. 1938ರಲ್ಲಿ 40,000 ಇದ್ದ ಸದಸ್ಯತ್ವ 1939ರಲ್ಲಿ 1,00,000ಕ್ಕೆ ಏರಿತ್ತು.
1938ರಲ್ಲಿ ಕಾಂಗ್ರೆಸ್ ಅಧಿವೇಶನ ಸೇರಿದ್ದಾಗ, ಸಿಪಿಐ ಒಂದು ಪ್ರಣಾಳಿಕೆಯನ್ನು ಸಿದ್ಧಪಡಿಸಿ ರಾಜರ ಸಂಸ್ಥಾನಗಳಲ್ಲಿ ಜನರ ಹೋರಾಟಗಳ ಬಗೆಗಿನ ಅವರ ನಿಲುವನ್ನು ಟೀಕೆ ಮಾಡಿತ್ತು. ಜನಸಮುದಾಯವನ್ನು ಅಣೆನೆರೆಸಲು ಪ್ರಚಾರ ಕೈಗೊಳ್ಳಲು ಪಕ್ಷ ಕರೆ ನೀಡಿತು; ಜನಚಳುವಳಿಯ ವಿರುದ್ಧ ದಮನಕಾರಿ ಕಾನೂನುಗಳ ಜಾರಿಯನ್ನು ತಡೆಯಬೇಕು, ಜೈಲಿನಲ್ಲಿರುವ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಬೇಕು, ಕಿಸಾನ್ ಸಭಾ ಕುರಿತು ಸ್ಪಷ್ಟ ನಿಲುವು ತಳೆಯಬೇಕು ಎಂದು ಸಚಿವರನ್ನು ಒತ್ತಾಯಿಸಲಾಗಿತ್ತು. ಕಾರ್ಮಿಕ ಸಂಘಗಳ ಮತ್ತು ಜನರ ಚಳುವಳಿಗೆ ಬೆಂಬಲ ನೀಡಬೇಕೆಂದು ಒತ್ತಾಯ ಮಾಡಲಾಯಿತು.
ಕಮ್ಯುನಿಸ್ಟರು ಜನರ ನಡುವೆ ಸಮಾಜವಾದ ಮತ್ತು ಕಮ್ಯುನಿಸಂನ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಕಿಸಾನ್ ಸಭಾವನ್ನು ಬಳಸಿಕೊಳ್ಳುತ್ತಿದ್ದುದರಿಂದ ಮತ್ತು ಕಾಂಗ್ರೆಸಿನಿಂದ ಸ್ವತಂತ್ರವಾದ ಸಂಘಟನೆಗಳಲ್ಲಿ ರೈತರನ್ನು ಸಂಘಟಿಸುತ್ತಿದ್ದುದರಿಂದ ಕಾಂಗ್ರೆಸ್ಸಿನ ಬಲಪಂಥೀಯ ನಾಯಕತ್ವವು ಗಾಬರಿಗೊಂಡಿತ್ತು. ಕೇವಲ ಕಿಸಾನ್ ಸಭಾ ಬಗ್ಗೆ ಮಾತ್ರವಲ್ಲ, ಕಾರ್ಮಿಕ ಸಂಘ ಹಾಗೂ ವಿದ್ಯಾರ್ಥಿ ಸಂಘಗಳ ಬಗ್ಗೆಯೂ ಅವರಿಗೆ ದಿಗಿಲುಂಟಾಗಿತ್ತು. ಈ ಸಿದ್ಧಾಂತಗಳ ಆಧಾರದಲ್ಲಿ ಮುಷ್ಕರಗಳನ್ನು ಮತ್ತು ಹೋರಾಟಗಳನ್ನು ನಡೆಸುತಿದ್ದ ಸಂಗತಿ ಕೇವಲ ದೊಡ್ಡ ಭೂಮಾಲಕರು ಮತ್ತು ಬ್ರಿಟಿಷ್ ಆಳರಸರಿಗೆ ಮಾತ್ರವಲ್ಲ ಕಾಂಗ್ರೆಸ್ ಸಚಿವರಿಗೂ ಮುನಿಸುಂಟುಮಾಡಿತ್ತು. ಈ ಅವಧಿಯಲ್ಲಿ ಸಮಾಜವಾದ ಮತ್ತು ಕಮ್ಯುನಿಸಂ ಸಂದೇಶ ವ್ಯಾಪಕವಾಗಿ ಹರಡಿತು; ಬೆಳೆಯುತ್ತಿದ್ದ ಹೋರಾಟಗಳಿಗೆ ನಾಯಕತ್ವ ನೀಡುತ್ತಾ ಕಮ್ಯುನಿಸ್ಟ್ ಮತ್ತು ಸೋಶಿಯಲಿಸ್ಟ್ ಪಕ್ಷಗಳ ಶಕ್ತಿಯೂ ಹೆಚ್ಚಾಯಿತು.
ರೈತರು, ಕಾರ್ಮಿಕರು ಮತ್ತು ಇತರ ದುಡಿಯುವ ಜನವಿಭಾಗದಲ್ಲಿ ಮೂಡುತ್ತಿದ್ದ ಆಸೆ ಆಕಾಂಕ್ಷೆಗಳಿಗೆ ಸಂಘಟನಾ ರೂಪ ನೀಡುವಲ್ಲಿ ಕಮ್ಯುನಿಸ್ಟರು, ಸೋಶಿಯಲಿಸ್ಟರು ಹಾಗೂ ಕಾಂಗ್ರೆಸ್ಸಿನ ಎಡಪಂಥೀಯರು ಶ್ರಮಿಸಿದರು. ಸಾಮಾಜಿಕ ಬದಲಾವಣೆಗಾಗಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕೆಂದು ಮತ್ತು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ಅಧಿಕೃತ ದಸ್ತಾವೇಜುಗಳಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕೆಂದು ಕಾಂಗ್ರೆಸ್ಸಿನ ಮೇಲೆ ಒತ್ತಡ ತರಲಾಯಿತು. ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದಮೇಲೆ ಸಿಕ್ಕ ಅಲ್ಪಸ್ವಲ್ಪ ಅವಕಾಶಗಳನ್ನು ಅವರು ಪ್ರಜ್ಙಾಪೂರ್ವಕವಾಗಿ ಬಳಸಿಕೊಂಡರು; ಆ ಮೂಲಕ ಜನಾಂದೋಲನಗಳನ್ನು ಸಂಘಟಿಸಿದರು, ಕಾರ್ಮಿಕ ಸಂಘಗಳು ಮತ್ತು ರೈತ ಸಂಘಗಳನ್ನು ರಚಿಸಿಕೊಂಡರು ಮತ್ತು ಆ ಮೂಲಕ ಎಡ ಚಳುವಳಿಯನ್ನು ಬೆಳೆಸಿದರು.
ಕಮ್ಯುನಿಸ್ಟ್ ಪಕ್ಷ, ಸಿ.ಎಸ್.ಪಿ., ಹೊಸತಾಗಿ ಸ್ಥಾಪಿಸಲ್ಪಟ್ಟಿದ್ದ ಸುಭಾಶ್ ಚಂದ್ರ ಬೋಸರ ಫಾರ್ವರ್ಡ್ ಬ್ಲಾಕ್, ರಾಯಿಸ್ಟ್ ಗುಂಪು ಮತ್ತು ಅಖಿಲ ಭಾರತ ಕಿಸಾನ್ ಸಭಾ ಇವುಗಳನ್ನು ಸೇರಿಸಿ ಒಂದು ಎಡಪಂಥೀಯ ಸಮನ್ವಯ ಸಮಿತಿಯನ್ನು ರಚಿಸುವಲ್ಲಿ ಕಮ್ಯುನಿಸ್ಟರು ಮುಂದಾಳತ್ವ ವಹಿಸಿದರು. ಕಾಂಗ್ರೆಸ್ಸಿನೊಳಗಿನ ಬಲಪಂಥೀಯರ ವಿರುದ್ಧ ಹಲವಾರು ಪ್ರತಿಭಟನಾ ಕಾರ್ಯಕ್ರಮಗಳನ್ನು ಆಚರಿಸಲು ಅವರೆಲ್ಲರೂ ಸೇರಿ ಜನರಿಗೆ ಕರೆ ನೀಡಿದರು.
ಕಾರ್ಮಿಕ ವರ್ಗದ ನೇತೃತ್ವದಲ್ಲಿ ಇಡೀ ಜನಸಮುದಾಯವನ್ನು ಅಣಿನೆರೆಸಿ ಒಂದು ಕ್ರಾಂತಿಕಾರಿ ಚಳುವಳಿಯನ್ನು ರೂಪಿಸಲು ಕಮ್ಯುನಿಸ್ಟ್ ಪಕ್ಷ ಪ್ರಯತ್ನಿಸುತ್ತಿತ್ತು. ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಯಲ್ಲಿ ಕಾರ್ಮಿಕ ವರ್ಗದ ನಾಯಕತ್ವವನ್ನು ಕ್ರೋಢೀಕರಿಸಲು ಮತ್ತು ಬಂಡವಾಳಶಾಹಿ ನಾಯಕತ್ವದ ನೀತಿಗಳ ವಿರುದ್ಧ ರೈತರು ಮತ್ತು ಇತರ ದುಡಿಯುವ ಜನರಿಗೆ ನಾಯಕತ್ವ ನೀಡಲು ಅದು ಯತ್ನಿಸಿತು. ಬೇರೆಲ್ಲಾ ಎಡ ಪಕ್ಷಗಳಿಗಿಂತ ಕಮ್ಯುನಿಸ್ಟ್ ಪಕ್ಷ ಹೇಗೆ ಭಿನ್ನ ಎನ್ನುವುದನ್ನು ಇದು ಸಾಬೀತುಮಾಡಿತು.
ಹಿಂದೆ ಬಾಂಬ್ ರಾಜಕೀಯದಲ್ಲಿ ನಂಬಿಕೆಯಿಟ್ಟಿದ್ದ ಹಳೆಯ ಕ್ರಾಂತಿಕಾರಿಗಳು ಮತ್ತು ಖೈದಿಗಳು, ಕಮ್ಯುನಿಸ್ಟ್ ಹಾಗೂ ಸೋಶಿಯಲಿಸ್ಟ್ ಸಾಹಿತ್ಯದ ಪರಿಚಯ ಮಾಡಿಕೊಂಡರು ಮತ್ತು ತಮ್ಮ ಬಿಡುಗಡೆಯಾದ ನಂತರ ಕಮ್ಯುನಿಸ್ಟ್ ಸಿದ್ಧಾಂತವನ್ನು ಒಪ್ಪಿಕೊಂಡರು, ಪ್ರಮುಖ ಕಮ್ಯುನಿಸ್ಟ್ ಮುಖಂಡರುಗಳಾದರು. ಇದು ಸಮಾಜವಾದ ಮತ್ತು ಕಮ್ಯುನಿಸಂಗೆ ದೊರೆತ ಗೆಲುವು, ಏಕೆಂದರೆ ಕಾಂಗ್ರೆಸ್‌ನ ಒಳಗಡೆ ಮತ್ತು ಹೊರಗಡೆ ಇದ್ದ ಕ್ರಾಂತಿಕಾರಿ ಶಕ್ತಿಗಳು ಕಾರ್ಮಿಕ ವರ್ಗ, ರೈತಾಪಿಗಳು ಮತ್ತು ಇತರ ದುಡಿಯುವ ಜನರ ಸಂಘಟಿತ ಕ್ರಾಂತಿಕಾರಿ ಶಕ್ತಿಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಧೋರಣೆಯನ್ನು ಅಳವಡಿಸಿಕೊಳ್ಳಲು ಶುರುಮಾಡಿದರು.
ಕಮ್ಯುನಿಸ್ಟ್ ಪಕ್ಷದೊಂದಿಗಿನ ಐಕ್ಯ ಕಾರ್ಯಾಚರಣೆಯು ಸಿ.ಎಸ್.ಪಿ. ಯಲ್ಲಿ ಪರಿವರ್ತನೆಯನ್ನು ತಂದಿತು. ಸಿ.ಎಸ್.ಪಿ.ಯಲ್ಲಿನ ಒಂದು ವಿಭಾಗವು ತಮ್ಮ ಕಮ್ಯುನಿಸ್ಟ್ ವಿರೋಧಿ ಮತ್ತು ಸೋವಿಯತ್ ವಿರೋಧಿ ನಿಲುವನ್ನು ತೊರೆಯಿತು. ವರ್ಗದ ಆಧಾರದಲ್ಲಿ ಬಲಪಂಥೀಯ ನಾಯಕತ್ವವನ್ನು ವಿಮರ್ಶೆ ಮಾಡಿ, ಅವರ ಬಂಡವಾಳಶಾಹಿ ಸ್ವಭಾವವನ್ನು ಗ್ರಹಿಸಲು ಅವರು ಆರಂಭಿಸಿದರು. ಕ್ರಮೇಣವಾಗಿ ಅವರು ಕಮ್ಯುನಿಸ್ಟರಾಗಿ ಪರಿವರ್ತನೆಗೊಂಡರು. ಕೇರಳದ ಸಿ.ಎಸ್.ಪಿ.ಯು ಇಡಿಯಾಗಿ ಕಮ್ಯುನಿಸ್ಟ್ ಪಕ್ಷವಾಗಿ ಬದಲಾಯಿತು. ದೇಶದ ಇನ್ನಿತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಬೆಳವಣಿಗೆಗಳು ನಡೆದವು.
ಈ ರೀತಿಯಲ್ಲಿ, ಕಾಂಗ್ರೆಸ್ ಸೋಶಿಯಲಿಸ್ಟರು ಮತ್ತು ಕಮ್ಯುನಿಸ್ಟ್ ಪಕ್ಷದ ನಡುವಿನ ಸಹಕಾರವು ಕಮ್ಯುನಿಸ್ಟ್ ಪಕ್ಷದ ಬೆಳವಣಿಗೆಗೆ ಕಾರಣವಾಯಿತು. ಪಕ್ಷವು ಒಂದು ಸ್ವತಂತ್ರ ಸಂಘಟಿತ ನೆಲೆಯಲ್ಲಿ ರಾಷ್ಟ್ರೀಯ ಚಳುವಳಿಯಲ್ಲಿ ಒಂದು ಗಮನಾರ್ಹ ಶಕ್ತಿಯಾಗಿ ಬೆಳೆಯಿತು.
ಅನುವಾದ : ಟಿ.ಸುರೇಂದ್ರರಾವ್