ಎಡಪಕ್ಷಗಳು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಹುತಾತ್ಮರಾದ ಮಾರ್ಚ್ 23 ರಂದು ಸಿಎಎ/ಎನ್‌ಪಿಆರ್/ಎನ್‌ಆರ್‌ಸಿ ಪ್ರಕ್ರಿಯೆಗೆ ವಿರೋಧವನ್ನು ಕ್ರೋಡೀಕರಿಸಲು ಮತ್ತು ಭಗತ್ ಸಿಂಗ್ ಕಂಡರಿಸಿದ, ಅದಕ್ಕಾಗಿ ದುಡಿದ ಮತ್ತು ಪ್ರಾಣತ್ಯಾಗ ಮಾಡಿದ ಒಂದು ಆಧುನಿಕ, ಎಲ್ಲರನ್ನೂ ಒಳಗೊಳ್ಳುವ ಭಾರತದ ಕಣ್ಣೋಟವನ್ನು ಮುಂದಿಡಲು ನಿರ್ಧರಿಸಿವೆ.
ಬಿಜೆಪಿಯ ಅಡಿಯಲ್ಲಿ ಅದರ ಕೋಮುವಾದಿ ಧ್ರುವೀಕರಣವನ್ನು ಮುನ್ನಡೆಸಲು ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಸಂಘಟಿಸುವ ಜನಗಳ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿ ನಡೆಸಲು ಪೋಲೀಸನ್ನು ಬಳಸಲಾಗುತ್ತಿದೆ. ಜಾಮಿಯ ಮಿಲಿಯ ವಿಶ್ವವಿದ್ಯಾಲಯ, ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಭಂಡ ದಾಳಿಗಳ ನಂತರ ಮುಸುಕುಧಾರಿ ಗೂಂಡಾಗಳು ಪೋಲೀಸ್ ರಕ್ಷಣೆಯಲ್ಲಿ ಜೆಎನ್‌ಯು ಮೇಲೆ ದಾಳಿ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ , ಇತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮತ್ತು ದಿಲ್ಲಿಯಲ್ಲಿ ದುಷ್ಟ ದಾಳಿಗಳು ಮುಂದುವರೆಯುತ್ತಿವೆ. ಇತ್ತೀಚೆಗೆ ರಾಷ್ಟ್ರೀಯ ರಾಜಧಾನಿಯನ್ನು ತಲ್ಲಣಗೊಳಿಸಿದ ಕೋಮುವಾದಿ ಹಿಂಸಾಚಾರದಲ್ಲಿಕನಿಷ್ಟ 53(ಅಧಿಕೃತ ಎಣಿಕೆ) ಮಂದಿ ಸತ್ತಿದ್ದಾರೆ, ಇದು ಇನ್ನೂ ಏರುವ ಸಂಭವ ಇದೆ, ನೂರಾರು ಜನ ಗಾಯಗೊಂಡಿದ್ದಾರೆ. ಕೋಟ್ಯಂತರ ರೂಪಾಯಿಗಳ ಆಸ್ತಿಗಳ ಲೂಟಿಯಾಗಿದೆ. ಇನ್ನೂ ಕೆಟ್ಟ ಸಂಗತಿಯೆಂದರೆ, ಈ ಹಿಂಸಾಚಾರ ಪೀಡಿತರನ್ನೇ ಈಗ ಪೋಲೀಸರು ಆರೋಪಿಗಳನ್ನಾಗಿ ಮಾಡುತ್ತಿದ್ದಾರೆ. ಕೇಂದ್ರ ಸರಕಾರದ ಅಡಿಯಲ್ಲಿರುವ ದಿಲ್ಲಿ ಪೋಲೀಸ್ ಹೆಚ್ಚೆಂದರೆ, ಮೂಕಪ್ರೇಕ್ಷಕರಾಗಿ ನಿಂತಿದ್ದರು, ಕೆಲವೊಮ್ಮೆಯಂತೂ ಅಪರಾಧಗಳಿಗೆ ಕುಮ್ಮಕ್ಕು ನೀಡಿದರು. ಇದನ್ನು ಬಲವಾಗಿ ಖಂಡಿಸಿರುವ ಎಡಪಕ್ಷಗಳು ಈ ಹಿಂಸಾಚಾರದ ಬಗ್ಗೆ ಒಂದು ಸಮಯಬದ್ಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿವೆ.
ಎಡಪಕ್ಷಗಳು ಇತ್ತಿಚಿನ ಬಜೆಟ್ ಪ್ರಸ್ತಾವಗಳಿಗೆ ಬಲವಾದ ವಿರೋಧವನ್ನು ವ್ಯಕ್ತಪಡಿಸಿವೆ. ಈ ಬಜೆಟ್, ಶ್ರೀಮಂತರಿಗೆ ಮತ್ತು ಕಾರ್ಪೊರೇಟ್‌ಗಳಿಗೆ ಹೆಚ್ಚಿನ ಪರಿಹಾರ, ರಿಯಾಯ್ತಿಗಳನ್ನು ನೀಡುತ್ತಲೇ, ಜನಗಳ ಜೀವನಾಧಾರಗಳ ಮೇಲೆ ತೀವ್ರ ದಾಳಿಗಳನ್ನು ಹರಿಯ ಬಿಟ್ಟಿದೆ. ಈ ಬಜೆಟ್ ವ್ಯಾಪಕ ಪ್ರಮಾಣದಲ್ಲಿ ಸಾರ್ವಜನಿಕ ವಲಯದ ಖಾಸಗೀಕರಣದ ಮೂಲಕ ನಮ್ಮ ರಾಷ್ಟ್ರೀಯ ಆಸ್ತಿಗಳನ್ನು ಮಾರಿಕೊಳ್ಳುವ ಯೋಜನೆ ಹಾಕಿದೆ. ಆರ್ಥಿಕ ಬುನಾದಿಯನ್ನು ಗಂಭೀರವಾಗಿ ಶಿಥಿಲಗೊಳಿಸುತ್ತಿದೆ, ಮತ್ತು ಅದೇ ವೇಳೆಯಲ್ಲಿ ಜನಗಳ ಮೇಲೆ ಅಭೂತಪೂರ್ವ ಹೊರೆಗಳನ್ನು ಹಾಕಿ ಅವರ ಸಂಕಟಗಳನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ.
ಮಾರ್ಚ್ 23ರಂದು ಎಡಪಕ್ಷಗಳ ಎಲ್ಲ ಘಟಕಗಳು ರಾಜ್ಯಗಳ ರಾಜಧಾನಿಗಳಲ್ಲಿ ಮತ್ತು ಜಿಲ್ಲಾ ಮುಖ್ಯಾಲಯಗಳಲ್ಲಿ ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತವೆ. ವಿವಿಧೆಡೆಗಳಿಂದ ಮೆರವಣಿಗೆಗಳನ್ನು ನಡೆಸಿ ಒಂದು ಕೇಂದ್ರ ಸ್ಥಳದಲ್ಲಿ ರಾಜಕೀಯ ಮುಖಂಡರು, ಸಾಂಸ್ಕೃತಿಕ ವ್ಯಕ್ತಿಗಳು ಮತ್ತು ಕಾರ್ಯಕರ್ತರು, ಚಿಂತಕರು ಮತ್ತು ಜನತಾ ಆಂದೋಲನಗಳು ಒಂದು ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಒಂದು ಪ್ರತಿಜ್ಞೆಯನ್ನು ಕೈಗೊಳ್ಳಲಾಗುವುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಸಿಪಿಐ(ಎಂಎಲ್)-ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೇಬಬ್ರತ ಬಿಸ್ವಾಸ್ ಮತ್ತು ಆರ್‌ಎಸ್‌ಪಿ ಮುಖಂಡ ಮನೋಜ್ ಭಟ್ಟಾಚಾರ್ಯ ಈ ಕುರಿತು ಮಾರ್ಚ್ 13ರಂದು ಒಂದು ಜಂಟಿ ಹೇಳಿಕೆಯನ್ನು ನೀಡಿದ್ದಾರೆ.
ಪ್ರತಿಜ್ಞೆ
ನಾವು ಭಾರತೀಯ ಸಂವಿಧಾನವನ್ನು ಕಾಪಾಡಿಕೊಳ್ಳುವ ಮತ್ತು ನಮ್ಮ ರಾಜಕೀಯ ಸ್ವಾತಂತ್ರ್ಯವನ್ನು, ಭಗತ್ ಸಿಂಗ್ ಹಾಗೂ ಆತನ ಹೋರಾಟದ ಸಂಗಾತಿಗಳ ಒಂದು ಆಧುನಿಕ, ಎಲ್ಲರನ್ನೂ ಒಳಗೊಳ್ಳುವ ಭಾರತದ ಕಣ್ಣೋಟದಂತೆ ಪ್ರತಿಯೊಬ್ಬ ಭಾರತೀಯನ ಆರ್ಥಿಕ ಸ್ವಾತಂತ್ರ್ಯವಾಗಿ ಪರಿವರ್ತಿಸುವ ಪ್ರತಿಜ್ಞೆ ಮಾಡುತ್ತೇವೆ.
ನಾವು ನಮ್ಮ ಸಂವಿಧಾನದ ಪೀಠಿಕೆಯ ಮೇಲೆ ಪ್ರತಿಜ್ಞೆ ಮಾಡುತ್ತೇವೆ.
ನಾವು, ಭಾರತದ ಜನತೆ, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ
ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಿಕೊಳ್ಳಲು ಮತ್ತು ಅದರ ಎಲ್ಲ ನಾಗರಿಕರಿಗೆ
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪಡೆಯಲು
ಚಿಂತನೆಯ, ಅಭಿವ್ಯಕ್ತಿಯ, ನಂಬಿಕೆಯ, ಶ್ರದ್ಧೆಯ ಸ್ವಾತಂತ್ರ್ಯವನ್ನು ಪಡೆಯಲು
ಮತ್ತು ಇವುಗಳನ್ನು ಅವರೆಲ್ಲರ ನಡುವೆ ಪ್ರೋತ್ಸಾಹಿಸಲು
ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಐಕ್ಯತೆ ಹಾಗೂಸಮಗ್ರತೆಯ
ಆಶ್ವಾಸನೆಯನ್ನು ನೀಡಿ ಸೋದರತ್ವವನ್ನು ಪಡೆಯಲು ದೃಢ ಸಂಕಲ್ಪ ಮಾಡಿ
ನಮ್ಮ ಸಂವಿಧಾನ ಸಭೆಯಲ್ಲಿ ಈ 1949ನೇ ಇಸವಿಯ ನವಂಬರ್ ತಿಂಗಳ 26ನೇ ದಿನದಂದು
ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಶಾಸನವಾಗಿ ಮಾಡಿ
ನಮಗೆ ಅರ್ಪಿಸಿಕೊಂಡಿದ್ದೇವೆ.