ಕಮ್ಯುನಿಸ್ಟ್ ಪಥಪ್ರದರ್ಶಕರು – ಸಾಮಾಜಿಕ ಸುಧಾರಣಾ ಚಳುವಳಿಯ ಮುಂದಾಳುಗಳು

  • ಮಾರ್ಕ್ಸ್‌ವಾದ-ಲೆನಿನ್‌ವಾದ ಸಿದ್ಧಾಂತ ಮಾತ್ರವೇ ಮತ್ತು ಕಮ್ಯುನಿಸ್ಟ್ ಪಕ್ಷದಂತಹ ಶಕ್ತಿ ಮಾತ್ರವೇ ಒಂದು ಸಮಸಮಾಜದ ಸ್ಥಾಪನೆಯತ್ತ ಹೋರಾಟವನ್ನು ಮುಂದೊಯ್ಯಲು ಸಾಧ್ಯ ಎನ್ನುವುದನ್ನು ಕಮ್ಯುನಿಸ್ಟ್ ಪಥಪ್ರದರ್ಶಕರು ತಮ್ಮ ಪ್ರಯೋಗಗಳ ಮೂಲಕ ಕಂಡುಕೊಂಡರು. ಅಂತಹ ಒಂದು ಸಮಾಜ ನಿರ್ಮಾಣಕ್ಕಾಗಿ ಅವರು ಹಲವಾರು ವರ್ಗ ಹಾಗೂ ಸಾಮೂಹಿಕ ಸಂಘಟನೆಗಳನ್ನು ಸ್ಥಾಪಿಸಿದರು ಮತ್ತು ತಮ್ಮ ಹೋರಾಟದ ಭಾಗವಾಗಿ ಸಾಮಾಜಿಕ ದಬ್ಬಾಳಿಕೆಗಳ ಪ್ರಶ್ನೆಗಳನ್ನೂ ಕೈಗೆತ್ತಿಕೊಂಡರು. ಈ ಪ್ರಯತ್ನಗಳು ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿದವು ಮತ್ತು ಬ್ರಿಟಿಷ್ ಆಳರಸರು ಹಾಗೂ ಸ್ಥಳೀಯ ಭೂಮಾಲಕರು ಹರಿಬಿಡುತ್ತಿದ್ದ ದಾಳಿ ದಬ್ಬಾಳಿಕೆಗಳನ್ನು ಎದುರಿಸಲು ಸಹಾಯಕವಾದವು. ಕಮ್ಯುನಿಸ್ಟ್ ಚಳುವಳಿಯನ್ನು ಬಹಳ ಮುಖ್ಯವಾಗಿ ೧೯೩೦ರ ನಂತರ ತ್ವರಿತಗತಿಯಲ್ಲಿ ಕೊಂಡೊಯ್ಯಲು ದಾರಿ ಮಾಡಿಕೊಟ್ಟವು.

Communist100 File copyಹಲವು ಕಮ್ಯುನಿಸ್ಟ್ ಪಥಪ್ರದರ್ಶಕರು ಸಾಮಾಜಿಕ ಸುಧಾರಣಾ ಚಳುವಳಿಯ ಮುಂದಾಳುಗಳೂ ಆಗಿದ್ದರು. ತನ್ನ ಆರಂಭಿಕ ದಿನಗಳಿಂದಲೂ ಕಮ್ಯುನಿಸ್ಟ್ ಪಕ್ಷವು ಅಂಗೀಕರಿಸಿರುವ ಹಲವಾರು ದಾಖಲೆಗಳಲ್ಲಿ ನಾವು ಕಂಡಂತೆ, ಜಾತಿ ಮತ್ತು ಧರ್ಮಾಧಾರಿತ ತಾರತಮ್ಯಗಳನ್ನು ಹಾಗೂ ದಬ್ಬಾಳಿಕೆಗಳನ್ನು ಅದು ಖಂಡತುಂಡವಾಗಿ ವಿರೋಧಿಸಿದೆ. ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರೆಯಬೇಕೆಂದೂ ಅದು ಪ್ರತಿಪಾದಿಸಿದೆ. ಅನೇಕ ಯುವಜನರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಈ ಚಿಂತನೆಗಳು ಮತ್ತು ಜನಸಮುದಾಯದ ನಡುವೆ ಕಮ್ಯುನಿಸ್ಟರು ಕ್ರಿಯಾಶೀಲವಾಗಿ ಮಾಡಿದ ಕೆಲಸಗಳಿಂದಾಗಿ ಕೂಡ ಪಕ್ಷದತ್ತ ಆಕರ್ಷಿತರಾದರು. ಇವು ತುಳಿತಕ್ಕೊಳಗಾದ ವಿಭಾಗದವರ ನಡುವೆ ಕಮ್ಯುನಿಸ್ಟ್ ನೆಲೆಯನ್ನು ಇನ್ನೂ ಗಟ್ಟಿಗೊಳಿಸಿತು.

ಕಾರ್ಮಿಕರು ಮತ್ತು ಕೃಷಿ ಕೂಲಿಕಾರರ ಹಕ್ಕುಗಳಿಗಾಗಿ ಹೋರಾಟಗಳನ್ನು ನಡೆಸುವಾಗಲೆಲ್ಲಾ ಕಮ್ಯುನಿಸ್ಟರು ಈ ವರ್ಗಗಳಲ್ಲಿರುವ ದಲಿತರ ಪ್ರಶ್ನೆಗಳನ್ನು ಪ್ರಜ್ಙಾಪೂರ್ವಕವಾಗಿ ಎತ್ತುತ್ತಿದ್ದರು. ಅದಕ್ಕೆ ಉದಾಹರಣೆಯಾಗಿ, ೧೯೨೮ರ ಬೊಂಬಾಯಿ ಕಾರ್ಮಿಕ ವರ್ಗದ ಮುಷ್ಕರದ ಅವಧಿಯಲ್ಲಿ, ಬಟ್ಟೆ ನೇಯುವ ವಿಭಾಗದಲ್ಲಿ ದಲಿತರು ಕೆಲಸ ಮಾಡುವ ಅವಕಾಶ ನೀಡಬೇಕೆಂದು ಕಮ್ಯುನಿಸ್ಟರು ಬೇಡಿಕೆಯನ್ನು ಮುಂದಿಟ್ಟರು; ಆ ವಿಭಾಗದಲ್ಲಿ ದಾರಗಳನ್ನು ಶಟಲ್ ಗಳಲ್ಲಿ ಸುತ್ತುವಾಗ ಕಾರ್ಮಿಕರು ಬಾಯಿಯ ಎಂಜಲಿನಿಂದ ಒದ್ದೆ ಮಾಡಬೇಕಾಗುತ್ತಿತ್ತು. ಈ ಬೇಡಿಕೆಯನ್ನು ಮುಂದಿಟ್ಟಿದ್ದರಿಂದಾಗಿ ಬಹಳಷ್ಟು ದಲಿತರು ಕಮ್ಯುನಿಸ್ಟ್ ಪಕ್ಷದತ್ತ ಆಕರ್ಷಿತರಾದರು. ಕಮ್ಯುನಿಸ್ಟರ ಇಂತಹ ಚಟುವಟಿಕೆಗಳ ಪರಿಚಯದಿಂದಾಗಿ ಆರ್.ಬಿ.ಮೋರೆ ಕಮ್ಯುನಿಸ್ಟ್ ಚಳುವಳಿಯತ್ತ ಆಕರ್ಷಿತರಾದರು. ಮೋರೆಯವರು ಡಾ.ಬಿ.ಆರ್. ಅಂಬೇಡ್ಕರ್ ಅವರ ನಿಕಟವರ್ತಿಗಳಾಗಿದ್ದರು. ಮಹಾಡ್ ದಲಿತ ಸಮ್ಮೇಳನ ಹಾಗೂ ಸತ್ಯಾಗ್ರಹ ಮತ್ತು ಅಂಬೇಡ್ಕರ್ ನೇತೃತ್ವದಲ್ಲಿ ದಲಿತರು ಚಾವುಡಾರ್ ಕೆರೆಯ ನೀರು ಕುಡಿಯುವ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದರು.

ನಿಜ ಹೇಳಬೇಕೆಂದರೆ, ಅಂಬೇಡ್ಕರ್ ಅವರ ಚಳುವಳಿಯ ಮುಂಚೂಣಿಯಲ್ಲಿದ್ದು ಮತ್ತು ಮಾರ್ಕ್ಸ್‌ವಾದ-ಲೆನಿನ್‌ವಾದದ ಅರಿವನ್ನು ಪ್ರಜ್ಙಾಪೂರ್ವಕವಾಗಿ ಪಡೆದುಕೊಂಡ ನಂತರ ಪಕ್ಷವನ್ನು ಸೇರಿದ ಮೊಟ್ಟ ಮೊದಲ ದಲಿತ ಸಮುದಾಯದ ವ್ಯಕ್ತಿ ಆರ್.ಬಿ.ಮೋರೆ. ಕಾರ್ಮಿಕ ವರ್ಗದ ಹೋರಾಟಗಳ ಸಮಯದಲ್ಲಿ ಸಾಮಾಜಿಕ ಪ್ರಶ್ನೆಗಳನ್ನು ಕಮ್ಯುನಿಸ್ಟರು ಎತ್ತುತ್ತಿದ್ದುದನ್ನು ಮೋರೆಯವರು ಅರಿತಿದ್ದರು. ದಲಿತರು ಮತ್ತು ದಲಿತೇತರ ಕಾರ್ಮಿಕರು, ಮುಸ್ಲಿಮರು ಮತ್ತು ಹಿಂದೂಗಳು ತಮ್ಮೆಲ್ಲಾ ಕಟ್ಟುಪಾಡುಗಳನ್ನು ಮರೆತು ತಮ್ಮ ಹಕ್ಕುಗಳಿಗಾಗಿ ಒಂದುಗೂಡಿ ಹೋರಾಡುತ್ತಿರುವುದನ್ನು ಕಂಡು ಅದರಿಂದ ಅವರು ಪ್ರಭಾವಿತರಾದರು. ಅಂತಹ ಹೋರಾಟಗಳು ದಲಿತರ ಮೇಲೆ ಪ್ರಭಾವ ಬೀರಿ ಕಮ್ಯುನಿಸ್ಟ್ ಪಕ್ಷವನ್ನು ಸೇರುವಂತೆ ಮಾಡಿದವು.

ಭಾರತದ ಕಮ್ಯುನಿಸ್ಟ್ ಚಳುವಳಿಯನ್ನು ಕಟ್ಟಿದ ಮೊದಲ ತಲೆಮಾರುಗಳಲ್ಲಿ ಮೋರೆಯವರು ಒಬ್ಬರು. ಅವರು ೧೯೩೦ರಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. ಮುನಿಸಿಪಲ್ ಕಾರ್ಮಿಕರಿಂದ ಹಿಡಿದು ಉಪಾಧ್ಯಾಯರನ್ನು ಮತ್ತು ಸಾಂಸ್ಕೃತಿಕ ತಂಡವನ್ನು ಕೂಡ ಸಂಘಟಿಸುವ ಮೂಲಕ ಕಾರ್ಮಿಕ ವರ್ಗದ ಹಲವಾರು ವಿಭಾಗಗಳನ್ನು ಸಂಘಟಿಸುವಲ್ಲಿ ಅವರು ಕಾರಣೀಭೂತರಾಗಿದ್ದಾರೆ. ಈ ಸಂಘಟನೆಗಳ ಮೂಲಕ ಕಮ್ಯುನಿಸ್ಟ್ ಪಕ್ಷಕ್ಕೆ ಅನೇಕ ದಲಿತ ಕಾರ್ಯಕರ್ತರನ್ನು ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕೊಂಕಣ್ ಪ್ರದೇಶದಲ್ಲಿನ ಕೃಷಿಕೂಲಿಗಾರರನ್ನು ಮತ್ತು ರೈತರನ್ನು ಕೂಡ ಅವರು ಸಂಘಟಿಸಿದ್ದರು ಮತ್ತು ದಮನಕಾರಿ ಭೂಮಾಲಕ ವ್ಯವಸ್ಥೆಯ ವಿರುದ್ಧ ಅವರನ್ನು ಅಣಿನೆರೆಸಿದ್ದರು.

ಮೋರೆಯವರು ತಮ್ಮ ಇಡೀ ಕುಟುಂಬವನ್ನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿದ್ದರು. ೧೯೪೩ರಲ್ಲಿ ಬೊಂಬಾಯಿಯಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ಮೊದಲ ಅಖಿಲ ಭಾರತ ಮಹಾಧಿವೇಶನದಲ್ಲಿ ಅವರ ಕುಟುಂಬವನ್ನು ಕೆಂಪು ಕುಟುಂಬ ಎಂದು ಸನ್ಮಾನಿಸಲಾಯಿತು.

ಮತ್ತೊಬ್ಬ ಯುವ ಕಮ್ಯುನಿಸ್ಟ್ ನಾಯಕ ಬಿ.ಟಿ.ರಣದಿವೆಯವರು ಸಾಮಾಜಿಕ ಸುಧಾರಣಾ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅವರು ತಮ್ಮ ಶಾಲಾ ದಿನಗಳಿಂದಲೂ(೧೯೧೦ರ ಉತ್ತರಾರ್ಧದಲ್ಲಿ) ಸುಧಾರಣಾವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದರು ಮತ್ತು ದಲಿತರು ಹಾಗೂ ಮಹಿಳೆಯರ ಹಕ್ಕುಗಳ ಪರವಾಗಿ ನಿಂತಿದ್ದರು. ದಲಿತ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು ಮತ್ತು ತನ್ನ ಪೋಷಕರು ಹಾಗೂ ಸಂಬಂಧಿಕರಿಂದ ಸಿಗುತ್ತಿದ್ದ ಅಲ್ಪಸ್ವಲ್ಪ ಹಣದಿಂದ ಅವರಿಗೆ ಪುಸ್ತಕ ತೆಗೆಸಿ ಕೊಡುತ್ತಿದ್ದರು. ರಣದಿವೆಯವರ ಈ ಕ್ರಿಯೆಗಳಿಂದಾಗಿ ತಾಳ್ಮೆಗೆಟ್ಟ ಮೇಲ್ಜಾತಿ ಪೋಷಕರು ಮತ್ತು ವಿದ್ಯಾರ್ಥಿಗಳು ಅವರ ಮೇಲೆ ಕಲ್ಲೆಸೆಯುತ್ತಿದ್ದರು. ಆದರೆ ಅವರು ಇದರಿಂದ ವಿಚಲಿತರಾಗಲಿಲ್ಲ. ತಮ್ಮ ಜಾತಿ ವಿರೋಧಿ ತಿಳುವಳಿಕೆ ಹಾಗೂ ಸಾಮಾಜಿಕ ಸುಧಾರಣಾ ಧೋರಣೆಗೆ ವಿರುದ್ಧವಾಗಿದ್ದ ಗಾಂಧಿ ಮತ್ತವರ ವರ್ಣಾಶ್ರಮ ಧರ್ಮದ ಪ್ರೇಮದಿಂದಾಗಿ ರಣದಿವೆಯವರು ತೀವ್ರ ಅತೃಪ್ತರಾಗಿದ್ದರು. ಕಾಂಗ್ರೆಸ್ಸಿಗೆ ಪರ್ಯಾಯವಾದ ಸುಧಾರಣವಾದಿಗಳ ಹುಡುಕಾಟದಲ್ಲಿದ್ದ ಅವರು ಕಮ್ಯುನಿಸಂ ಮತ್ತು ಕಾರ್ಮಿಕ ವರ್ಗದ ಚಳುವಳಿಯತ್ತ ಆಕರ್ಷಿತರಾದರು.

ರಣದಿವೆಯವರು ಮೋರೆಯವರೊಂದಿಗೆ ಕೆಲಸ ಮಾಡಿ ಕಾರ್ಮಿಕ ಸಂಘಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ರೂಢಿಯಲ್ಲಿದ್ದ ಜಾತಿ ತಾರತಮ್ಯಗಳನ್ನು ಹೋಗಲಾಡಿಸಲು ಶ್ರಮಿಸಿದರು. ಕಾರ್ಮಿಕ ಸಂಘಗಳ ಕಛೇರಿಗಳಲ್ಲಿ ನೀರು ಕುಡಿಯಲು ಮೇಲ್ಜಾತಿಯವರಿಗೊಂದು ಮಣ್ಣಿನ ಲೋಟ ದಲಿತರಿಗೊಂದು ಮಣ್ಣಿನ ಲೋಟ ಇಡುತ್ತಿದ್ದ ರೂಢಿಯನ್ನು ನಿಲ್ಲಿಸಿದರು. ಜಾತಿಯ ಮಲಿನತೆಯಿಂದಾಗಿ ನೀರು ಕುಡಿಯಲು ಇಷ್ಟಪಡದವರು ಹೊರಗಡೆ ಹೋಗಿ ಬೇರೆಲ್ಲಿಯಾದರೋ ನೀರು ಕುಡಿಯಬಹುದೆಂದು ಹೇಳಿದರು. ಕಮ್ಯುನಿಸ್ಟ್ ನೇತೃತ್ವದ ಸಂಘಗಳು ಜಾತಿ ತಾರತಮ್ಯದ ವಿಷಯದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರಬೇಕು ಎಂಬುದನ್ನು ತೋರಿಸಿದರು.

ತಮ್ಮ ಶಾಲಾ ದಿನಗಳಿಂದಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಿಯಾಶೀಲವಾಗಿದ್ದ ಪಿ.ರಾಮಮೂರ್ತಿಯವರು ಬನಾರಸಿನಲ್ಲಿ ಭಗತ್ ಸಿಂಗ್ ಮತ್ತು ಅವರ ಒಡನಾಡಿಗಳು ಸ್ಥಾಪನೆ ಮಾಡಿದ್ದ ನೌಜವಾನ್ ಭಾರತ್ ಸಭಾದ ಸಂಪರ್ಕಕ್ಕೆ ಬಂದರು. ನೌಜವಾನ್ ಸಭಾದವರು ಜಾತಿ ಪದ್ಧತಿಯ ವಿರುದ್ಧ ಆರಂಭಿಸಿದ್ದ ಜಾತ್ ಪಾತ್ ಥೋಡಕ್ ಸಮಾಜ್(ಜಾತಿ-ಗೀತಿ ಮುರಿಯುವ ಸಮಾಜ) ಸಂಘಟನೆಯನ್ನು ರಾಮಮೂರ್ತಿ ಸೇರಿಕೊಂಡರು ಮತ್ತು ಜಾತಿ ಪದ್ಧತಿಯ ವಿರುದ್ಧ ಹಾಗೂ ಅದರ ನಿರ್ಮೂಲನೆಗಾಗಿನ ಚಟುವಟಿಕೆಗಳಲ್ಲಿ ಮುಳುಗಿ ಹೋದರು.

ದಲಿತರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಣೆಯನ್ನು ರಾಮಮೂರ್ತಿ ವಿರೋಧಿಸುತ್ತಿದ್ದರು. ಅವರು ಚಮ್ಮಾರರಿಗೆ ಭಕ್ತಿಗೀತೆಗಳನ್ನು ಮತ್ತು ಕೆಲವು ಸಾಮಾನ್ಯ ಮಂತ್ರಗಳನ್ನು ಕಲಿಸಿದರು. ಸ್ಥಳೀಯ ವೈಷ್ಣವ ದೇವಸ್ಥಾನದ ಟ್ರಸ್ಟಿಗಳ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ ಎಂದು ಗೊತ್ತಾದಾಗ ೨೦೦ ದಲಿತರನ್ನು ಸಿದ್ಧಮಾಡಿ ಅವರ ತೋಳುಗಳ ಮೇಲೆ ವೈಷ್ಣವ ಸಂಕೇತಗಳಾದ ಶಂಖ ಮತ್ತು ಚಕ್ರ ಚಿತ್ರಗಳನ್ನು ಬರೆಸಿ ಆ ದೇವಸ್ಥಾನದ ಮತದಾರರಾಗಿ ನೋಂದಾಯಿಸಬೇಕೆಂದು ಒತ್ತಾಯಿಸಿದರು. ಇದರಿಂದ ಕೋಪಗೊಂಡ ಬ್ರಾಹ್ಮಣರು ಸಿವಿಲ್ ಕೋರ್ಟಿಗೆ ಮನವಿ ಮಾಡಿದರು. ದಲಿತರ ಈ ಪ್ರಕರಣದಲ್ಲಿ ವಾದ ಮಂಡಿಸಲು ರಾಮಮೂರ್ತಿಯವರೇ ಸಹಾಯ ಮಾಡಿದರು. ಆ ವಿವಾದ ಹೈಕೋರ್ಟಿನವರೆಗೂ ಹೋಯಿತು. ರಾಮಮೂರ್ತಿಯವರಿಂದ ತರಬೇತಿ ಪಡೆದಿದ್ದ ದಲಿತರು ನ್ಯಾಯಾಧೀಶರಿಗೆ ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾದರು ಮತ್ತು ಅವರ ಪರವಾದ ತೀರ್ಪು ಪಡೆದರು. ದಲಿತರ ದೇವಸ್ಥಾನ ಪ್ರವೇಶ ಕುರಿತ ಬ್ರಾಹ್ಮಣರ ಆಶಯಕ್ಕೆ ವಿರುದ್ಧವಾಗಿ ನ್ಯಾಯಾಲಯದ ತೀರ್ಪು ಪಡೆದಿರುವುದು ಒಂದು ಅಪರೂಪದ ಸಂಗತಿಯಾಯಿತು. ಮನಸ್ಸು ಪರಿವರ್ತನೆಯ ಪ್ರತಿಪಾದನೆ ಮಾಡುತ್ತಿದ್ದ ಗಾಂಧಿಯವರು ಈ ಬೆಳವಣಿಗೆಯನ್ನು ಮಾನ್ಯ ಮಾಡಲೇಬೇಕಾದ ಬಲವಂತಕ್ಕೆ ಒಳಗಾದರು.

ಅದಾಗಲೇ ಸಮಾಜವಾದಿ ಚಿಂತನೆಗಳ ಪರಿಚಯ ಮಾಡಿಕೊಂಡಿದ್ದ ರಾಮಮೂರ್ತಿ ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷದ ಸ್ಥಾಪನಾ ಸಮ್ಮೇಳನದಲ್ಲಿ ಭಾಗವಹಿಸಿದರು. ತಮ್ಮ ಸಾಮಾಜಿಕ ಸುಧಾರಣಾ ಚಟುವಟಿಕೆಗಳ ಜತೆಯಲ್ಲೇ, ಕಾರ್ಮಿಕರನ್ನು ಸಂಘಟಿಸಿ ರಾಜ್ಯದಲ್ಲಿ ಒಂದು ಕಾರ್ಮಿಕ ಚಳುವಳಿಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ರಾಮಮೂರ್ತಿ ಪ್ರಮುಖ ಪಾತ್ರ ವಹಿಸಿದರು.

ರಾಮಮೂರ್ತಿಯವರ ಜತೆಯಲ್ಲೇ ಪಿ.ಜೀವನಂದನ್ ಮತ್ತು ಬಿ.ಶ್ರೀನಿವಾಸ ರಾವ್ ಅವರುಗಳೂ ಸಾಮಾಜಿಕ ಸುಧಾರಣಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೆರಿಯಾರ್ ರಾಮಸ್ವಾಮಿಯವರ ಸ್ವಾಭಿಮಾನಿ ಚಳುವಳಿಯಲ್ಲಿ ಜೀವನಂದನ್ ಅವರು ಸಕ್ರಿಯ ಕಾರ್ಯಕರ್ತರಾಗಿ ದುಡಿದರು ಮತ್ತು ಆ ನಂತರ ಕಮ್ಯುನಿಸ್ಟ್ ಚಳುವಳಿಯ ಪ್ರಭಾವಿ ಮುಖಂಡರಾದರು. ಭೂಮಾಲಕರ ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧದ ಕೃಷಿಕೂಲಿಗಾರರ ಹೋರಾಟ ಮತ್ತು ಜಾತಿ ದಬ್ಬಾಳಿಕೆಯ ವಿರುದ್ಧದ ಹೋರಾಟದ ಮುಂದಾಳತ್ವವನ್ನು ಶ್ರೀನಿವಾಸ ರಾವ್ ವಹಿಸಿದ್ದರು.

ಕೇರಳದ ಜನನಾಯಕರಾಗಿದ್ದ ಎ.ಕೆ.ಗೋಪಾಲನ್ ಅವರೂ ಇದೇ ಹಾದಿ ತುಳಿದರು. ಆಗ ರೂಢಿಯಲ್ಲಿದ್ದ ತಾರತಮ್ಯದ ಸಂಪ್ರದಾಯಗಳನ್ನು ಅವರು ಒಪ್ಪುತ್ತಿರಲಿಲ್ಲ ಮತ್ತು ಅವುಗಳ ವಿರುದ್ಧ ಹೋರಾಟಗಳನ್ನು ಆರಂಭಿಸಿದರು. ಅಂತಹ ಹೋರಾಟಗಳಲ್ಲಿ ಗುರುವಾಯೂರು ದೇವಸ್ಥಾನ ಸತ್ಯಾಗ್ರಹ ಜನಪ್ರಿಯವಾದದ್ದು, ಅವರು ದಲಿತರಿಗೆ ದೇವಸ್ಥಾನ ಪ್ರವೇಶ ನೀಡಬೇಕೆಂದು ಒತ್ತಾಯಿಸಿದರು. ಮೇಲ್ಜಾತಿಯ ಹಿಂದೂಗಳು ಅವರನ್ನು ತೀವ್ರವಾಗಿ ಹೊಡೆದರು ಮತ್ತು ಬಂಧನ ಮಾಡಿಸಿ ಮನಸಾರೆ ಚಿತ್ರಹಿಂಸೆ ನೀಡಿದರು. ಇವೆಲ್ಲಾ ಕಷ್ಟಗಳನ್ನು ಎದುರಿಸಿದರೂ, ಎ.ಕೆ.ಜಿ. ತಮ್ಮ ಚಳುವಳಿಯನ್ನು ಮುಂದುವರಿಸಿದರು ಮತ್ತು ಅದು ರಾಷ್ಟ್ರಮಟ್ಟದ ಗಮನ ಸೆಳೆಯಿತು. ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯರಾಗಿದ್ದ ಪಿ.ಕೃಷ್ಣಪಿಳ್ಳೈಯವರೂ ಈ ಗುರುವಾಯೂರು ಚಳುವಳಿಯ ಪ್ರಮುಖ ಮುಖಂಡರಾಗಿದ್ದರು. ಇ.ಎಂ.ಎಸ್.ನಂಬೂದಿರಿಪಾಡ್ ಮತ್ತು ಪಿ.ಕೃಷ್ಣಪಿಳ್ಳೈಯವರು ಎ.ಕೆ.ಜಿ.ಯವರಿಗೆ ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷ ಮತ್ತು ಆ ನಂತರ ಕಮ್ಯುನಿಸ್ಟ್ ಪಕ್ಷ ಸೇರುವಲ್ಲಿ ಸಹಾಯ ಮಾಡಿದರು.

ಇ.ಎಂ.ಎಸ್.ನಂಬೂದಿರಿಪಾಡ್ ಅವರು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿರುವಾಗಲೇ ನಂಬೂದಿರಿ ಸಮುದಾಯದ ಒಳಗಡೆಯ ಸಾಮಾಜಿಕ ಸುಧಾರಣೆಯ ಅಗತ್ಯತೆಯ ಬಗ್ಗೆ ನಿರಂತರವಾಗಿ ಬರೆದರು. ಒಂದು ಸಾಂಪ್ರದಾಯಿಕ ನಂಬೂದಿರಿ ಕುಟುಂಬದಿಂದ ಬಂದ ಅವರು ಆ ಸಮುದಾಯದಲ್ಲಿನ ಮಹಿಳೆಯರ ಪಾಡಿನ ಬಗ್ಗೆ ಮತ್ತು ಇತರ ಹೇಸಿಗೆ ಹುಟ್ಟಿಸುವ ಸಂಪ್ರದಾಯಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ವಿಧವಾ ಮರುವಿವಾಹದ ಪರವಾಗಿ ಮತ್ತು ಬಹುವಿವಾಹದ ವಿರುದ್ಧ ಕ್ರಿಯಾಶೀಲ ಪ್ರಚಾರ ನಡೆಸಿದರು. ನಂಬೂದಿರಿ ಮಹಿಳೆಯರಲ್ಲಿ ರೂಢಿಗತವಾಗಿದ್ದ ಪರದಾ ಪದ್ಧತಿಯ ವಿರುದ್ಧ ಹಾಗೂ ತಮ್ಮ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳುವ ಹಕ್ಕಿಗಾಗಿ ಹೋರಾಡಿದರು ಕೂಡ. ಅವರ ಮೊದಲ ಬಂಧನದ ನಂತರ, ಅವರ ದೊಡ್ಡಣ್ಣ ಅವರ ಜತೆಗಿನ ಸಂಬಂಧಗಳನ್ನು ಕಡಿದುಕೊಂಡರು; ಏಕೆಂದರೆ ಜೈಲಿನಲ್ಲಿರುವವರನ್ನು ಜಾತಿಯಿಂದ ಹೊರಹಾಕಬೇಕೆಂಬ ಪದ್ಧತಿ ಆಗ ಜಾರಿಯಲ್ಲಿತ್ತು. ಅವಾವುದೂ ಇ.ಎಂ.ಎಸ್. ಅವರನ್ನು ಅವರ ಹೋರಾಟದ ಹಾದಿಯಿಂದ ಕದಲಿಸಲಾಗಲಿಲ್ಲ: ಅವರು ತಮ್ಮ ಸಾಮಾಜಿಕ ಹಾಗೂ ಆರ್ಥಿಕ ವಿಮೋಚನಾ ಚಳುವಳಿಯನ್ನು ಮುಂದುವರಿಸಿದರು. ಈ ಹಾದಿಯಲ್ಲೇ ಮುಂದುವರಿದ ಅವರು ಸಮಾಜವಾದಿ ಚಿಂತನೆಗಳತ್ತ ಹೊರಳಿದರು ಮತ್ತು ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷವನ್ನು ಸೇರಿದರು, ಅದರ ಅಖಿಲ ಭಾರತ ಸಹಕಾರ್ಯದರ್ಶಿಯಾಗಿ ಆಯ್ಕೆಯಾದರು. ಆ ನಂತರದಲ್ಲಿ, ಕೇರಳದ ಸಿ.ಎಸ್.ಪಿ.ಯು ಇಡಿಯಾಗಿ ಕಮ್ಯುನಿಸ್ಟ್ ಪಕ್ಷವಾಗಿ ಪರಿವರ್ತನೆಯಾಗುವಲ್ಲಿ ಇ.ಎಂ.ಎಸ್. ಮಹತ್ವದ ಪಾತ್ರ ವಹಿಸಿದರು.

ಪಿ.ರಾಮಮೂರ್ತಿ, ಇ.ಎಂ.ಎಸ್, ಎಕೆಜಿ ಇವರೆಲ್ಲರೂ ಕಮ್ಯುನಿಸ್ಟ್ ಪಕ್ಷವನ್ನು ಒಂದು ನೈಜ ಪರ್ಯಾಯವೆಂದು ಗುರುತಿಸಲು ತಮಗೆ ಸಹಾಯ ಮಾಡಿದ ಪಿ.ಸುಂದರಯ್ಯ ಅವರ ಕೊಡುಗೆಯನ್ನು ನೆನೆಯುತ್ತಾರೆ. ಪಿ.ಸುಂದರಯ್ಯ ಅವರು ತಮ್ಮ ರಾಜಕೀಯ ಬದುಕನ್ನು ಪ್ರಾರಂಭಿಸಿದ್ದೇ ಬಹುತೇಕ ದಲಿತರೇ ಇರುವ ಕೃಷಿಕೂಲಿಗಾರರನ್ನು ಸಂಘಟಿಸುವ ಮೂಲಕ. ದಲಿತರ ವಿರುದ್ಧದ ತಾರತಮ್ಯವನ್ನು ಖಂಡತುಂಡವಾಗಿ ವಿರೋಧಿಸಿದರು: ಮೇಲ್ಜಾತಿಯ ಮನೆಗಳಿಗೆ ದಲಿತರ ಪ್ರವೇಶವನ್ನೇ ನಿರ್ಬಂಧ ಮಾಡುತ್ತಿದ್ದುದನ್ನು ಮತ್ತು ಅಸ್ಪೃಶ್ಯತೆಯನ್ನು ಅವರ ಕಡುವಾಗಿ ವಿರೋಧಿಸಿದರು. ಕೃಷಿಕೂಲಿಗಾರರ ಮೊದಲ ಸಂಘವನ್ನು ಆರಂಭಿಸಿದರು ಮತ್ತು ದಲಿತರ ಜತೆ ಮೇಲ್ಜಾತಿಯವರ ಸಹಪಂಕ್ತಿ ಭೋಜನ ಸಂಘಟಿಸಿದರು. ಅಸ್ಪೃಶ್ಯತೆಯ ವಿರುದ್ಧ ದಂಗೆ ಎದ್ದಿದ್ದು ಮಾತ್ರವಲ್ಲ, ದಲಿತರ ಜತೆ ಹೊಲಗದ್ದೆಗಳಲ್ಲಿ ಭುಜಕ್ಕೆ ಭುಜ ಕೊಟ್ಟು ಕೆಲಸವನ್ನೂ ಮಾಡಿದರು; ದಲಿತರ ಸಾಮಾನ್ಯ ಖಾಯಿಲೆಗಳಿಗೆ ವೈದ್ಯಕೀಯ ಸಹಾಯ ಹಾಗೂ ಅವರ ಅನುಕೂಲಕ್ಕಾಗಿ ಪಡಿತರ ಅಂಗಡಿಗಳನ್ನೂ ತೆರೆದರು. ಈ ರೀತಿಯಲ್ಲಿ, ಅವರು ಜಾತಿ ತಾರತಮ್ಯದ ವಿರುದ್ಧ ಹೋರಾಟ ಮಾಡುವುದರ ಜತೆಯಲ್ಲೇ ತಮ್ಮ ಕಲ್ಯಾಣ ಚಟುವಟಿಕೆಗಳ ಮೂಲಕ ಪರ್ಯಾಯವನ್ನೂ ತೋರಿದರು. ಈ ಪ್ರಕ್ರಿಯೆಯಲ್ಲಿ ಸುಂದರಯ್ಯ ಅವರು ತಮ್ಮ ಹೆಸರಿನಲ್ಲಿದ್ದ ಜಾತಿಸೂಚಕ ಪದವನ್ನೂ ಕಿತ್ತುಹಾಕಿಕೊಂಡರು.

ಸಮಸಮಾಜದ ಚಿಂತನೆಗಳಿಂದ ಪ್ರೇರಿತರಾಗಿ, ದಲಿತರ ಸಾಮಾಜಿಕ ತುಳಿತ ಹಾಗೂ ಆರ್ಥಿಕ ಶೋಷಣೆಗೆ ನಿಜವಾದ ಕಾರಣಗಳೇನು ಎನ್ನುವುದನ್ನು ಕಮ್ಯುನಿಸ್ಟರು ದಲಿತರ ನಡುವೆ ಪ್ರಚಾರ ಮಾಡುವ ಪ್ರಯತ್ನ ಮಾಡಿದರು ಮತ್ತು ಅವರನ್ನು ಕಮ್ಯುನಿಸ್ಟ್ ಪಕ್ಷದ ಅಡಿಯಲ್ಲಿ ಸಂಘಟಿಸಿದರು ಕೂಡ. ಸುಂದರಯ್ಯ ಮತ್ತು ಎಂ.ಬಸವಪುನ್ನಯ್ಯ ಅವರಂತಹ ಮುಖಂಡರು ಕೃಷಿಕೂಲಿಗಾರರ ನಡುವೆ ಮಾರ್ಗದರ್ಶಕ ಕೆಲಸಗಳನ್ನು ಮಾಡಿದ ಕಾರಣದಿಂದಲೇ ಆಂಧ್ರಪ್ರದೇಶದ ಕಮ್ಯುನಿಸ್ಟ್ ಪಕ್ಷವನ್ನು ದಲಿತರ ಪಕ್ಷ ಎಂದೂ ಆಗ ಕರೆಯುತ್ತಿದ್ದರು.

ಮಾರ್ಕ್ಸ್‌ವಾದ-ಲೆನಿನ್‌ವಾದ ಸಿದ್ಧಾಂತ ಮಾತ್ರವೇ ಮತ್ತು ಕಮ್ಯುನಿಸ್ಟ್ ಪಕ್ಷದಂತಹ ಶಕ್ತಿ ಮಾತ್ರವೇ ಒಂದು ಸಮಸಮಾಜದ ಸ್ಥಾಪನೆಯತ್ತ ಹೋರಾಟವನ್ನು ಮುಂದೊಯ್ಯಲು ಸಾಧ್ಯ ಎನ್ನುವುದನ್ನು ಕಮ್ಯುನಿಸ್ಟ್ ಪಥಪ್ರದರ್ಶಕರು ತಮ್ಮ ಪ್ರಯೋಗಗಳ ಮೂಲಕ ಕಂಡುಕೊಂಡರು. ಅಂತಹ ಒಂದು ಸಮಾಜ ನಿರ್ಮಾಣಕ್ಕಾಗಿ ಅವರು ಹಲವಾರು ವರ್ಗ ಹಾಗೂ ಸಾಮೂಹಿಕ ಸಂಘಟನೆಗಳನ್ನು ಸ್ಥಾಪಿಸಿದರು ಮತ್ತು ತಮ್ಮ ಹೋರಾಟದ ಭಾಗವಾಗಿ ಸಾಮಾಜಿಕ ದಬ್ಬಾಳಿಕೆಗಳ ಪ್ರಶ್ನೆಗಳನ್ನೂ ಕೈಗೆತ್ತಿಕೊಂಡರು. ಈ ಪ್ರಯತ್ನಗಳು ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿದವು ಮತ್ತು ಬ್ರಿಟಿಷ್ ಆಳರಸರು ಹಾಗೂ ಸ್ಥಳೀಯ ಭೂಮಾಲಕರು ಹರಿಬಿಡುತ್ತಿದ್ದ ದಾಳಿ ದಬ್ಬಾಳಿಕೆಗಳನ್ನು ಎದುರಿಸಲು ಸಹಾಯಕವಾದವು. ಕಮ್ಯುನಿಸ್ಟ್ ಚಳುವಳಿಯನ್ನು ಬಹಳ ಮುಖ್ಯವಾಗಿ ೧೯೩೦ರ ನಂತರ ತ್ವರಿತ ಗತಿಯಲ್ಲಿ ಕೊಂಡೊಯ್ಯಲು ದಾರಿ ಮಾಡಿಕೊಟ್ಟವು.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *