ಕೇರಳ ಮತ್ತು ಕೊರೊನಾ ಬಿಕ್ಕಟ್ಟು

  • ಸುಗತ ಶ್ರೀನಿವಾಸ ರಾಜು   (ಅನು: ವಸಂತರಾಜ ಎನ್.ಕೆ.) 
  • ಮೂಲ ಕೃಪೆ: ಮುಂಬಯಿ ಮಿರರ್ ಮಾ.18. 2020

Covid19 pinarayi - modiಇದೊಂದು ಬೆಚ್ಚಿಬೀಳಿಸುವ ಹೋಲಿಕೆಯಾಗಿರಬಹುದು. ಆರೋಗ್ಯ ಸೇವೆಯಲ್ಲಿ ಕ್ಯೂಬಾ ಅಮೆರಿಕಕ್ಕೆ ಮಾಡಿದಂತೆ,  ಕೇರಳವು ದೆಹಲಿಯ ಮತ್ತು ಇತರ ರಾಜ್ಯಗಳ ಮನಸಾಕ್ಷಿಯನ್ನು ಚುಚ್ಚುತ್ತಿರುವಂತೆ ಕಾಣುತ್ತದೆ. ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಕ್ಯೂಬಾದ ಆರೋಗ್ಯಸೇವೆ ಸೇರಿದಂತೆ ಕಿರೀಟಪ್ರಾಯ ಕಲ್ಯಾಣ ಯೋಜನೆಗಳು ಅಮೆರಿಕವನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುವ, 2007ರಲ್ಲಿ ಮೈಕೇಲ್ ಮೂರ್ ತಯಾರಿಸಿದ ಸಿಕೊ ಡಾಕ್ಯುಮೆಂಟರಿ ಫಿಲಮನ್ನು ನೋಡಬೇಕು.

ಕಳೆದ 9 ದಿವಸಗಳಿಂದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವೈಯಕ್ತಿಕ ಟ್ವಿಟರ್ ಖಾತೆ ಕೊವಿಡ್-೧೯ ಮಹಾಮಾರಿ ಮತ್ತು ಅದರ ದೈತ್ಯನರ್ತನದ ಮೇಲೆ ಕೇಂದ್ರೀಕೃತವಾಗಿದೆ. ಅವರ ಟ್ವೀಟುಗಳಲ್ಲಿ ಸಲಹೆಗಳು, ಭರವಸೆಗಳು, ಮನವಿಗಳು, ಕಾರ್ಯಾಚರಣೆಗಳು, ನಿರ್ಣಯಗಳು, ಮಾಹಿತಿ ಇರುತ್ತವೆ. ಅವರ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಹ ಅದೇ ಒತ್ತು ಇದೆ. ಸಾಮಾಜಿಕ ಮಾಧ್ಯಮದ ಅಕೌಂಟುಗಳು ಹೆಚ್ಚಾಗಿ ಸರಳೀಕೃತ ಸೂಚಕಗಳಷ್ಟೇ. ಆದರೆ ಅವರ ಸರಕಾರ ತಳಮಟ್ಟದಲ್ಲಿ ಮಾಡಿದ ಕೆಲಸಗಳು ಇನ್ನಷ್ಟು ಅಗಾಧವಾಗಿವೆ.

ಒಬ್ಬ ಕಮ್ಯುನಿಸ್ಟನಿಗೆ ಕಾರ್ಪೊರೆಟ್ ಮಾನಕಗಳನ್ನು ಅಳವಡಿಸುವುದು ವಕ್ರದೃಷ್ಟಿ ಎನ್ನಿಸಿಕೊಳ್ಳಬಹುದು. ಆದರೆ ಯಾರಾದರೂ ಅದನ್ನು ಮಾಡಲೇಬೇಕೆಂದು ಹಟ ತೊಟ್ಟಿದ್ದರೆ, ವಿಜಯನ್ ಅವರ ಸ್ಪಂದನದ ಅವಧಿ, ವೂಹಾತ್ಮಕ ಚಿಂತನೆ, ಸಂವಹನ, ಸಂಯೋಜನೆ ಮತ್ತು ಕೆಲಸದ ನಿಯೋಜನೆ ಯಾವುದೇ ಸಿಇ.ಒ ಗಿಂತ ಉತ್ತಮವಾದ್ದು ವೇಗವಾದ್ದು ಎಂದು ಅವರಿಗೆ ತಕ್ಷಣ ಗೋಚರಿಸುತ್ತದೆ. ಒಂದು ವರದಿಯ ಪ್ರಕಾರ ಮಾರ್ಚ್ ೧೬ರ ಹೊತ್ತಿಗೆ ಕೇರಳದಲ್ಲಿ ಭಾರತದ ರಾಜ್ಯಗಳಲ್ಲೇ ಅತಿ ಹೆಚ್ಚು (೧೮೬೭) ಕೊರೊನಾವೈರಸ್ ಪರೀಕ್ಷಣೆ ನಡೆದಿದೆ. ಇದು, ಮೊದಲ ಕೊರೊನಾ ಸಾವು ಸಂಭವಿಸಿದ ಪರೀಕ್ಷಣೆಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ನಡೆದ ಪರೀಕ್ಷಣೆಗಳ ಎರಡು ಪಟ್ಟು. ವಿಜಯನ್ ಅವರ ದಕ್ಷತೆಗೆ ಕಾರ್ಪೊರೆಟ್ ಜಗತ್ತಿನಲ್ಲಿ ಸಹ ಸಾಟಿಯಿಲ್ಲ. ಯಾಕೆಂದರೆ, ಕಾರ್ಪೊರೇಟುಗಳು ಸಾಂಕ್ರಾಮಿಕಗಳ ವಿರುದ್ಧ ಹೋರಾಡಬೇಕಿಲ್ಲ; ಅವು ಸಮ್ಮಿಶ್ರ ಸರಕಾರಗಳನ್ನು ನಡೆಸುವುದಿಲ್ಲ;  ವೈವಿಧ್ಯಮಯ ಜನರೊಂದಿಗೆ ಅವು ವ್ಯವಹರಿಸಬೇಕಾಗಿಲ್ಲ.

ಆದರೆ ಸಾಮಾಜಿಕ ದೂರ ಸಾಧಿಸುವ ತಮ್ಮದೇ ಸರಕಾರದ ನಿರ್ದೇಶನಗಳನ್ನು ಗಾಳಿಗೆ ತೂರಿ, ಮಾ. ೧೫ರಂದು ಬಿಜೆಪಿ ಶಾಸಕನ ಮಗನ ಅದ್ದೂರಿ ಮದುವೆಗೆ ಹಾಜರಿದ್ದ, ಕರ್ನಾಟಕದ ಮುಖ್ಯಮಂತ್ರಿ ಯೆಡಿಯೂರಪ್ಪ ಅವರೊಂದಿಗೆ ವಿಜಯನ್ ಅವರನ್ನು ಖಂಡಿತ ಹೋಲಿಸಬಹುದು! ದೆಹಲಿಯಲ್ಲಿನ ಪ್ರಧಾನ ಮಂತ್ರಿಯವರು ಇಂತಹ ಸ್ವಚ್ಛಂದ ಭಂಡತನ ತೋರಿಸಿಲ್ಲ. ಆದರೆ ಅವರು ಖಂಡಿತ ವಿಚಲಿತರಾದಂತೆ ಕಂಡರು. ಮಾ.೧೪ರಂದು ವಿಜಯನ್ ಬರೆದ ಪತ್ರ ಇದನ್ನು ಸೂಚಿಸುತ್ತದೆ. ಆ ದಿನ ಗೃಹ ಸಚಿವಾಲಯದಿಂದ ಪತ್ರ ರಾಜ್ಯ ಪ್ರಕೋಪ ಪರಿಹಾರ ನಿಧಿಯಿಂದ (ಎಸ್.ಡಿ.ಆರ್.ಎಫ್) ಕೊವಿಡ್-೧೯ ಪರಿಹಾರಕ್ಕೆ ಹಣ ಬಳಸಿಕೊಳ್ಳಬಹುದು ಎಂದು ತಿಳಿಸಿತ್ತು. ಅದೇ ದಿನ ಸಂಜೆ ಬಂದ ಇನ್ನೊಂದು ಪತ್ರದಲ್ಲಿ ನಿಧಿಯನ್ನು ಕೆಲವು ಸವಲತ್ತುಗಳನ್ನು ಕೊಡಲು ಬಳಸುವ ಎರಡು ಕಲಮುಗಳನ್ನು ಕಿತ್ತು ಹಾಕಲಾಗಿತ್ತು. ಕೂಡಲೇ ವಿಜಯನ್ ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದರು : ಈ ಕಲಮುಗಳನ್ನು ಕಿತ್ತು ಹಾಕುವ ಮೂಲಕ ಎಸ್.ಡಿ.ಆರ್.ಎಫ್ ಕೊಡಬಹುದಾಗಿದ್ದ ಪರಿಹಾರ/ನೆರವಿನ ಆಶಯಕ್ಕೆ ತಿಲಾಂಜಲಿ ಇತ್ತಂತಾಗಿದೆ. ಈ ಎರಡು ಕಲಮುಗಳನ್ನು.. ..ತ॒ಕ್ಷಣ ಮತ್ತೆ ತರಬೇಕು.  ಮರುದಿನ, ಮಾ.೧೫ರಂದು ಪ್ರಧಾನಿಯವರು ಸಾರ್ಕ್ ದೇಶಗಳೊಂದಿಗೆ ಸಕಾಲಿಕ ಕಾರ್ಯಾಚರಣೆಯ ಕುರಿತು ಚರ್ಚೆಯಲ್ಲಿ ವ್ಯಸ್ತರಾದರು. ಆದರೆ ಅದಕ್ಕೆ ಕೇರಳದಲ್ಲಿ ತಿಲಾಂಜಲಿ ಕೊಡಲಾಗಿತ್ತು ಎಂಬುದು ಚೋದ್ಯದ ಸಂಗತಿ.

ಹಲವು ದಶಕಗಳಿಂದ ಕೇರಳ ಸಾಮಾಜಿಕ ಮತ್ತು ಸಾರ್ವಜನಿಕ ಆರೋಗ್ಯದ ತನ್ನ ಹೆಗ್ಗುರುತನ್ನು ಉಳಿಸಿಕೊಂಡಿದೆ. ಅದು ಪ್ರಗತಿಪರ ಎಂದು ಸತತವಾಗಿ ಗುರುತಿಸಲ್ಪಟ್ಟಿರುವುದು ಬರಿಯ ಗ್ರಹಿಕೆಯ ಆಧಾರದ ಮೇಲೆ ಮಾತ್ರವಲ್ಲ. ವಾಸ್ತವ ಸಾಧನೆ ಮತ್ತು ದತ್ತಾಂಶಗಳ ಆಧಾರದ ಮೇಲೆ. ನಿಫಾ ವೈರಸ್, ಮಹಾಪೂರದ ನಂತರ ಪುನರ್ವಸತಿ ಮತ್ತು ಪುನರ್ರಚನೆ, ಲಿಂಗ ಸಮಾನತೆಯ ಹಕ್ಕುಗಳು, ಮಾಧ್ಯಮ ಸ್ವಾಯತ್ತತೆ, ಹಣಕಾಸು ಫೆಡರಲಿಸಂ ಅಥವಾ ಸ್ಥಳೀಯ ಆಡಳಿತ  ಇವೆಲ್ಲವನ್ನು ನಿಭಾಯಿಸುವುದರಲ್ಲಿ ಪ್ರಗತಿಯಲ್ಲಿ ಅದು ಯಾವಾಗಲೂ ಮುಂದಿತ್ತು.  ಒಂದು ಕಾಲಾವಧಿಯಲ್ಲಿ ಕರ್ನಾಟಕ ಸಹ ಪ್ರಗತಿಪರ ಸಾಮಾಜಿಕ ಕಾನೂನುಗಳು, ಮತ್ತು ಆಡಳಿತದ ವಿಕೇಂದ್ರೀಕರಣಕ್ಕೆ ಪ್ರಸಿದ್ಧವಾಗಿತ್ತು. ಆದರೆ ಇತ್ತೀಚೆಗೆ ಅದು ರೆಸಾರ್ಟುಗಳಲ್ಲಿ ರಾಜಕೀಯ ಸರ್ಜರಿ ಮತ್ತು ಕಾಂಚಾಣದ ಪೂಜೆಗೆ ಮಾತ್ರ ಸುದ್ದಿಯಲ್ಲಿದೆ.

ಕೇರಳದ ಸಫಲತೆಗಳಿಗೆ ಅದರ ಸಾಕ್ಷರತೆ ಕಾರಣ ಎಂದು ಹೆಚ್ಚಾಗಿ ಭಾವಿಸಲಾಗಿದೆ. ಅದೊಂದು ಅಂಶವಾಗಿರಬಹುದು. ಆದರೆ ಸಾಮೂಹಿಕ ಸಾಮಾನ್ಯ ಪ್ರಜ್ಞೆ ಮತ್ತು ನಿರ್ದಿಷ್ಟ ರಾಜಕೀಯ ಸಂಸ್ಕೃತಿಗಳಿಗೆ ಸಾಕ್ಷರತೆ ಬದಲಿಯಾಗಲಾರದು. ಕರ್ನಾಟಕದ ಸಾಕ್ಷರತೆ ದರ ಸಹ ಉತ್ತಮವಾಗಿಯೇ ಇದೆ. ಆದರೆ ಅದರ ಟೆಕ್ಕಿಗಳೂ ಸಾಮಾಜಿಕವಾಗಿ ಸಂಪ್ರದಾಯಸ್ಥರು ಮತ್ತು ಪ್ರಾದೇಶಿಕ ಅಸಮಾನತೆ ಅಗಾಧವಾಗಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಕೆಲವರು ಕೇರಳದ ಸಫಲತೆಗೆ ಕಮ್ಯುನಿಸ್ಟರು ಕಾರಣ ಎಂದು ಹೇಳಬಹುದು.  ಆದರೆ ಇದು ಸಹ ಪೂರ್ಣ ನಿಜವಲ್ಲ. ಕಾಂಗ್ರೆಸ್ ಸಹ ಕೇರಳದಲ್ಲಿ ಬೇರೆ ರೀತಿಯಲ್ಲಿ ವರ್ತಿಸುತ್ತದೆ. ವೈನಾಡಿನಿಂದ ಚುನಾಯಿತರಾದ ಒಬ್ಬರು ಉತ್ತರ ಭಾರತದ ಸಂಸದರಿಗೆ ಈ ಸಾಂಸ್ಕೃತಿಕ ವ್ಯತ್ಯಾಸದ ಅನುಭವವಾಗಿರಬೇಕು. ಬೇರೆಲ್ಲೂ ಇಲ್ಲದ ಆಡಳಿತದ ಸಾತತ್ಯ ಅಲ್ಲಿದೆ. ಅದೇ ರೀತಿ ಹಲವು ಪಕ್ಷಗಳ ಮೈತ್ರಿಕೂಟಗಳು ರಾಜ್ಯಕ್ಕೆ ವರವಾಗಿವೆ.  ಬೇರೆ ರಾಜ್ಯಗಳಲ್ಲಿ ಒಂದು ಆಡಳಿತದ ಕಾರ್ಯಕ್ರಮಗಳು ಇನ್ನೊಂದು ಆಡಳಿತದ ಬದಲಾವಣೆಗಳಿಂದ ಬುಡಮೇಲಾಗುತ್ತವೆ. ಆದರೆ ಕೇರಳದಲ್ಲಿ ಹಾಗಾಗುವುದಿಲ್ಲ. ಇದು ಆರೋಗ್ಯ ಮೂಲಸೌಕರ್ಯದ ಬೆಳವಣಿಗೆಯಲ್ಲಿ ಮತ್ತು ಗ್ರಾಮ ಪಂಚಾಯತ್ ನ ಸ್ವಾಯತ್ತತೆಗೆ ಇರುವ ಖಾತ್ರಿಯಲ್ಲಿ ಕಂಡು ಬರುತ್ತದೆ. ಕೇರಳದಲ್ಲಿ ಪ್ರತಿ ೩.೯೫ ಕಿ.ಮಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ರಾಷ್ಟ್ರೀಯ ಸರಾಸರಿ ೭.೩ ಕಿ.ಮಿ. ಕರ್ನಾಟಕ ಬಹಳ ಮೊದಲೇ ಸ್ಥಾಪಿಸಿದ್ದ ಸ್ಥಳೀಯ ಆಡಳಿತzಲ್ಲಿನ ಮುನ್ನಡೆಯನ್ನು, ಶಾಸಕನನ್ನು ತನ್ನ ಅಭಿವೃದ್ಧಿ ಮಾದರಿಯ ಕೇಂದ್ರ ಮಾಡುವ ಮೂಲಕ ಚೆಲ್ಲಿಬಿಟ್ಟಿದೆ.

ಗೇಟ್ಸ್ ಫೌಂಡೇಶನ್ ನಾಯಕತ್ವದಲ್ಲಿ ವಿಶ್ವ ಆರೋಗ್ಯ ಸಂಘಟನೆ, ವಿಶ್ವ ಬ್ಯಾಂಕ್ ಮತ್ತು ಯುನಿಸೆಫ್ ಗಳ ಸಾಮೂಹಿಕ ಪ್ರಯತ್ನದಲ್ಲಿ ತಯಾರಿಸಲಾದ ವರದಿಯಲ್ಲಿ, ಕೇರಳ ಆರೋಗ್ಯದಲ್ಲಿ ಮಾಡಿದ ಸಾಧನೆಗಳಿಗೆ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಸಾರ್ವಜನಿಕ ಆರೋಗ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮೂಲಸೌಕರ್ಯ, ಹಣಕಾಸು ಯೋಜನೆ, ಹೆಣ್ಣು ಮಕ್ಕಳ ಶಿಕ್ಷಣ, ಸಾಮೂಹಿಕ ಭಾಗವಹಿಸುವಿಕೆ, ಮತ್ತು ಆಡಳಿತದ ವಿಕೇಂದ್ರೀಕರಣ  ಇವುಗಳ ಮೇಲೆ ಸತತ ಒತ್ತು ಸಾಧನೆಗೆ ಕಾರಣಗಳು  ಎನ್ನಲಾಗಿದೆ. ಇವಲ್ಲದೆ ಗುರುತಿಸಲಾದ ನ್ಯೂನತೆಗಳಿಗೆ ಸ್ಪಂದಿಸಿ ವ್ಯವಸ್ಥೆಯನ್ನು ಉತ್ತಮ ಪಡಿಸುವ ಇಚ್ಛಾಶಕ್ತಿ ಸಹ ಕಾರಣ ಎನ್ನಲಾಗಿದೆ.

ಕೊರೊನಾ ಬಿಕ್ಕಟ್ಟಿನ ಈ ಸಂದಿಗ್ಧ ಗಳಿಗೆಯಲ್ಲಿ ಕೇರಳ ಅದಕ್ಕೆ ಮಾಡಿದ ಸ್ಪಂದನೆಯಲ್ಲಿ ಮಾಡಿದ ಮೂರು ಸೃಜನಶೀಲ ಅಂಶಗಳಿಗೆ ಬರಿಯ ಹಳಸಲು ಮೆಚ್ಚುಗೆ ಸಾಲದು. ಮೊದಲನೆಯದಾಗಿ, ಮುಖಗವಸುಗಳ ಕೊರತೆ ಕಂಡು ಬಂದಾಗ , ಸಮರೋಪಾದಿಯಲ್ಲಿ ಜೈಲಿನ ಕೈದಿಗಳಿಂದ ಅವನ್ನು ತಯಾರಿಸಲಾಯಿತು. ಎರಡನೇಯದಾಗಿ, ಶಾಲೆಗಳು ಮುಚ್ಚಿದಾಗ ಬಿಸಿಯೂಟವನ್ನು ಮಕ್ಕಳಿಗೆ ಮನೆಗಳಿಗೆ ಹೋಗಿ ಕೊಡಲಾಯಿತು. ಮೂರನೆಯದಾಗಿ, ಕೊವಿದ್ ಸೋಂಕು ದೃಢಪಟ್ಟವರ ಚಲನೆಯನ್ನು ಗಂಟಾವಾರಾಗಿ ಕಂಡು ಹಿಡಿದು ಫ್ಲೋ ಚಾರ್ಟ್ ರೂಪದಲ್ಲಿ ದಾಖಲಿಸಲಾಯಿತು. ಭಾರೀ ಜಾಣತನದ ಕೆಲಸ. ಇದು ಸೋಂಕು ಹರಡುವಿಕೆಯ ಕೇಂದ್ರವಾಗಿದ್ದ ಪತ್ತನಮಿತ್ತದಲ್ಲಿ ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಬಹಳ ಪ್ರಯೋಜನಕಾರಿಯಾಯಿತು. ಆರೋಗ್ಯ ಮಂತ್ರಿ ಶೈಲಜ ಟೀಚರ್ ಅವರ ಕರ್ತವ್ಯಪರತೆಯಂತೂ ಈಗ ದಂತಕತೆಯಾಗಿ ಬಿಟ್ಟಿದೆ.

ಇದೊಂದು ಬೆಚ್ಚಿಬೀಳಿಸುವ ಹೋಲಿಕೆಯಾಗಿರಬಹುದು. ಆರೋಗ್ಯ ಸೇವೆಯಲ್ಲಿ ಕ್ಯೂಬಾ ಅಮೆರಿಕಕ್ಕೆ ಮಾಡಿದಂತೆ,  ಕೇರಳವು ದೆಹಲಿಯ ಮತ್ತು ಇತರ ರಾಜ್ಯಗಳ ಮನಸಾಕ್ಷಿಯನ್ನು ಚುಚ್ಚುತ್ತಿರುವಂತೆ ಕಾಣುತ್ತದೆ. ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಕ್ಯೂಬಾದ ಆರೋಗ್ಯಸೇವೆ ಸೇರಿದಂತೆ ಕಿರೀಟಪ್ರಾಯ ಕಲ್ಯಾಣ ಯೋಜನೆಗಳು ಅಮೆರಿಕವನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುವ ೨೦೦೭ರಲ್ಲಿ ಮೈಕೇಲ್ ಮೂರ್ ತಯಾರಿಸಿದ ಸಿಕೊ ಡಾಕ್ಯುಮೆಂಟರಿ ಸಿನೆಮಾವನ್ನು ನೋಡಬೇಕು.

 

Leave a Reply

Your email address will not be published. Required fields are marked *