11 ಬೇಡಿಕೆಗಳೊಂದಿಗೆ ನಡೆಸಲು ಜನತೆಗೆ ಸಿಪಿಐ(ಎಂ) ಮನವಿ
ಮಾರ್ಚ್ 22ನ್ನು ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತೆಯ ದಿನವಾಗಿ ಆಚರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಜನತೆಗೆ ಮನವಿ ಮಾಡಿದೆ. ಆದರೆ ಪ್ರಧಾನ ಮಂತ್ರಿಗಳು ಈ ಹೋರಾಟದ ಆರೋಗ್ಯ ಮತ್ತು ಆರ್ಥಿಕ ಆಯಾಮಗಳನ್ನು ನಿಭಾಯಿಸುವ ಬಗ್ಗೆ ಯಾವುದೇ ಮೂರ್ತ ಹೆಜ್ಜೆಗಳನ್ನು ಮುಂದಿಟ್ಟಿಲ್ಲವಾದ್ದರಿಂದ ಈ ಸೌಹಾರ್ದತೆಯ ದಿನವನ್ನು ಈ ಕೆಳಗಿನ ಬೇಡಿಕೆಗಳೊಂದಿಗೆ ಆಚರಿಸಬೇಕು ಎಂದು ಪೊಲಿಟ್ಬ್ಯುರೊ ಜನತೆಗೆ ಮನವಿ ಮಾಡಿದೆ.
- ವೈರಸ್ ಬಗ್ಗೆ ಪರೀಕ್ಷಣೆಯ ಪ್ರಮಾಣವನ್ನು ಸಾಕಷ್ಟು ವ್ಯಾಪಕವಾಗಿ, ವಿಶೇಷವಾಗಿ ನೆಗಡಿ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳಿರುವವರನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ಹೆಚ್ಚಿಸಬೇಕು.
- ಸಾಕಷ್ಟು ಉಚಿತ ಪರೀಕ್ಷಣೆ, ಆಸ್ಪತ್ರೆ ಸೌಲಭ್ಯಗಳು, ಪ್ರತ್ಯೇಕವಾಗಿಡುವ ವಾರ್ಡ್ಗಳು ಮತ್ತು ವೆಂಟಿಲೇಟರ್ಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ವೆಚ್ಚವನ್ನು ಪ್ರಕಟಿಸಬೇಕು.
- ಜನಧನ್ ಖಾತೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ ರೂ.೫೦೦೦ ನಗದು ವರ್ಗಾವಣೆ ಮಾಡಬೇಕು.
- ಎಲ್ಲ ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಒಂದು ತಿಂಗಳ ಉಚಿತ ರೇಶನ್ನ್ನು ಕೊಡಬೇಕು, ಇದಕ್ಕೆ ಎಫ್ಸಿಐ ಗೋದಾಮುಗಳಲ್ಲಿರುವ ೭.೫ ಕೋಟಿ ಟನ್ಗಳ ಅಗಾಧ ದಾಸ್ತಾನನ್ನು ಬಳಸಬೇಕು.
- ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ೧೫೦ ದಿನಗಳಿಗೆ ವಿಸ್ತರಿಸಿ ಕೆಲಸ ಕೇಳುವವರಿಗೆಲ್ಲರಿಗೂ ಕೊಡಬೇಕು.
- ಎಲ್ಲ ಅಗತ್ಯ ಸರಕುಗಳನ್ನು ಒಳಗೊಳ್ಳುವಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಬೇಕು.
- ಶಾಲೆಗಳಲ್ಲಿ ಮಧ್ಯಾಹ್ನದ ಉಟದ ಯೋಜನೆಯ ಬದಲು, ರೇಶನ್ ಕಿಟ್ಗಳನ್ನು ಮಕ್ಕಳ ಮನೆಗಳಿಗೆ/ ಕುಟುಂಬಗಳಿಗೆ ಒದಗಿಸಬೇಕು.
- ಈ ಮಹಾಮಾರಿಯಿಂದ ಬಾಧಿತಗೊಂಡಿರುವ ವಲಯಗಳಿಗೆ ಹಣಕಾಸು ಪ್ಯಾಕೇಜುಗಳನ್ನು ಸ್ಥಾಪಿಸಬೇಕು. ಈ ಹಣಕಾಸು ಬೆಂಬಲವನ್ನು ಕಂಪನಿಗಳು ಮತ್ತು ಉದ್ದಿಮೆಗಳಿಗೆ ಮುಂದಿನ ಮೂರು ತಿಂಗಳು ಲೇ-ಆಫ್ ಮಾಡುವುದಿಲ್ಲ, ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ ಷರತ್ತಿನ ಮೇಲೆ ಕೊಡಬೇಕು.
- ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳಲ್ಲಿ ಜೀವನಾಧಾರಗಳಿಗೆ ತೊಂದರೆಯಾಗಿರುವ ಎಲ್ಲ ಕಾರ್ಮಿಕರಿಗೆ ಹಣಕಾಸು ನೆರವು/ಭತ್ಯೆಯನ್ನು ನೀಡಲು ಒಂದು ನಿಧಿಯನ್ನು ಸ್ಥಾಪಿಸಬೇಕು.
- ಕೊರೊನ ವೈರಸ್ನಿಂದಾಗಿ ಕೆಲಸದಿಂದ ದೂರವಿರಬೇಕಾದ ಕಾರ್ಮಿಕರು ಮತ್ತು ನೌಕರರಿಗೆ ಸಂಬಳ ಸಹಿತ ಕಾಯಿಲೆ ರಜಾ ನೀಡಬೇಕು.
- ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಬ್ಯಾಂಕು ಸಾಲಗಳ ಮರುಪಾವತಿಯಲ್ಲಿ ಒಂದು ವರ್ಷದ ಋಣವಿಳಂಬದ ಸೌಲಭ್ಯವನ್ನು ನೀಡಬೇಕು.