ಇದೀಗ ಜನಗಳ ಜೀವಗಳನ್ನು ಉಳಿಸಲು ಸಂಪನ್ಮೂಲಗಳನ್ನೆಲ್ಲ ಬಳಸಬೇಕಾದ ಸಮಯ

ಪ್ರಧಾನ ಮಂತ್ರಿಗಳಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ

ಇಂದು(ಮಾರ್ಚ್ 23ರಂದು)  ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಕೋವಿಡ್-19ರ ಕುರಿತು ಬರೆದಿರುವ ಪತ್ರದಲ್ಲಿ ಇದೀಗ ಸರಕಾರ ಹಣಕಾಸು ಶಿಸ್ತಿನ ಬಗ್ಗೆಯೇ ಚಿಂತಿಸುತ್ತ ಕೂರುವ ಸಮಯವಲ್ಲ, ನಮ್ಮ ಸಂಪನ್ಮೂಲಗಳನ್ನು ಜೀವಗಳು, ಜೀವನಾಧಾರಗಳನ್ನು ಉಳಿಸಲು ಬಳಸಬೇಕಾದ ಸಮಯ ಎಂದು ನೆನಪಿಸಿದ್ದಾರೆ.

ಅಲ್ಲದೆ, ಕೇವಲ ಅಮೆರಿಕಾದ, ಯುರೋಪಿನ ಸಂಸ್ಥೆಗಳು ಮಂಜೂರು ಮಾಡಿದ ಪರೀಕ್ಷಣಾ ಕಿಟ್‌ಗಳನ್ನು ಬಳಸಬೇಕೆಂಬ ವಿಚಿತ್ರ ಸುತ್ತೋಲೆಯನ್ನು ಹಿಂತೆಗೆದುಕೊಂಡು ನಮ್ಮ  ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಮಂಜೂರು ಮಾಡಿರುವ ಎಲ್ಲಾ ಪರೀಕ್ಷಣಾ ಕಿಟ್‌ಗಳನ್ನು ಬಳಸಲೇಬೇಕಾಗಿದೆ ಎಂದೂ ಯೆಚುರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ದೇಶ ಮತ್ತು ಜನತೆ ಈಗ ಕೋವಿಡ್-19ರ ಹರಡಿಕೆ ವಿರುದ್ಧ ಒಂದು ಗಂಭೀರ ಯುದ್ಧದಲ್ಲಿ ತೊಡಗಿದ್ದಾರೆ. ಹಲವು ರಾಜ್ಯಗಳಲ್ಲಿ ಈ ಮಾರಕ ವೈರಸ್‌ನ ಸಾಮುದಾಯಿಕ ಹರಡಿಕೆಯನ್ನು ತಡೆಯಲು ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.

ಇಂತಹ ನಿರ್ಬಂದಿತ ಅವಧಿಯಲ್ಲಿ ಜನಗಳ, ಅದರಲ್ಲೂ ರೋಗಲಕ್ಷಣಗಳುಳ್ಳವರ ಪರೀಕ್ಷಣೆಯ ಪ್ರಮಾಣವನ್ನು ಹೆಚ್ಚಿಸಲೇ ಬೇಕಾಗುತ್ತದೆ. ಇದರ ಆಧಾರದಲ್ಲಿ ವೈರಸ್‌ನ ಹರಡಿಕೆ ಹೆಚ್ಚು ಸಂಭವವಿರುವ ಸ್ಥಳಗಳನ್ನು ಗುರುತಿಸಿ ನಿರ್ಬಂಧಗಳನ್ನು ಜಾರಿ ಮಾಡಬಹುದು. ಇದಕ್ಕೆ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ (ನ್ಯಾಶನಲ್ ಇನ್ಸ್‌ಟಿಟ್ಯುಟ್ ಆಫ್ ವೈರೋಲೊಜಿ-ಎನ್‌ಐವಿ) ಮಂಜೂರು ಮಾಡಿರುವ ಎಲ್ಲ ಪರೀಕ್ಷಣಾ ಕಿಟ್‌ಗಳನ್ನು ಬಳಸಲೇಬೇಕಾಗುತ್ತದೆ.

ಆದರೆ ಕೇಂದ್ರ ಆರೋಗ್ಯ ಮಂತ್ರಾಲಯ ಅಮೆರಿಕದ ಯುಎಸ್‌ಎಫ್‌ಡಿಎ ಮತ್ತು ಯುರೋಪಿಯನ್ ಇಸಿ ಮಂಜೂರು ಮಾಡಿದ ಕಿಟ್ ಗಳನ್ನು ಮಾತ್ರ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿರುವುದು ವಿಚಿತ್ರವಾಗಿದೆ. ಇಂತಹ ಕಿಟ್‌ಗಳ ತಯಾರಕರು ನಮ್ಮ ದೇಶದಲ್ಲಿ ಇರುವುದು ಒಬ್ಬರು ಮಾತ್ರ. ಈ ಕಂಪನಿ ಗುಜರಾತಿನಲ್ಲಿದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಈ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಎನ್‌ಐವಿ ಮಂಜೂರು ಮಾಡಿದ ಎಲ್ಲ ಕಿಟ್‌ಗಳನ್ನು ತುರ್ತಾಗಿ ಪರೀಕ್ಷಣೆಗೆ ಬಳಸುವಂತಾಗಬೇಕು ಎಂದು ಯೆಚುರಿ ಹೇಳಿದ್ದಾರೆ.

ಕೋಟ್ಯಂತರ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರ ದಿನಗೂಲಿಗಳಿಂದ ಬದುಕುಳಿದಿದ್ದಾರೆ. ವೈರಸ್ ಹರಡಿಕೆ ತಡೆಯಲು ಹಾಕಿರುವ ನಿರ್ಬಂಧಗಳಿಂದಾಗಿ ಈ ಕಟುಂಬಗಳೀಗ ತೀವ್ರ ಸಂಕಟಕ್ಕೊಳಗಾಗಿವೆ. ಆದ್ದರಿಂದ ತಕ್ಷಣವೇ ಜನಧನ ಖಾತೆಗಳಿಗೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ 5000ರೂ.ಗಳನ್ನು ವರ್ಗಾಯಿಸುವುದು ಅಗತ್ಯವಾಗಿದೆ.

ಮಧ್ಯಾಹ್ನದ ಊಟದ ಸ್ಕೀಮಿನ ಫಲ ಅನುಭವಿಸುತ್ತಿರುವ ಮಕ್ಕಳ ಕುಟುಂಬಗಳಿಗೆ ರೇಶನ್ ಕಿಟ್‌ಗಳನ್ನು ಪೂರೈಸಬೇಕು. ಎಲ್ಲ ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ ಒಂದು ತಿಂಗಳ ಉಚಿತ ರೇಷನ್ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಕೊಡಬೇಕು.

ಜಗತ್ತಿನಲ್ಲಿ ಹಲವು ಸರಕಾರಗಳು ಈಗ ಕೆಲಸಕ್ಕೆ ಹಾಜರಾಗಲಾರದ ಕಾರ್ಮಿಕರು ಇದುವರೆಗೆ ಪಡೆಯುತ್ತಿದ್ದ ಸಂಬಳದ ಕನಿಷ್ಟ 80ಶೇ.ದಷ್ಟು ಕೊಡುವ ಗ್ಯಾರಂಟಿ ಪ್ರಕಟಿಸಿವೆ. ಭಾರತ ಸರಕಾರವೂ ಇದನ್ನು ಅನುಸರಿಸಬೇಕು. ಇದರೊಂದಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಹಾಗೂ ಚಿಲ್ಲರೆ ವ್ಯಾಪಾರಸ್ಥರ ಬ್ಯಾಂಕ್ ಸಾಲಗಳ ಮರುಪಾವತಿಗೆ ಮತ್ತು ಇಎಂಐಗಳಿಗೂ ಒಂದು ವರ್ಷದ ವಿಂಬದ ಅವಕಾಶ ನೀಡಬೇಕು.

ವಿತ್ತೀಯ ಮಸೂದೆ ಈಗಾಗಲೇ ಸಂಸತ್ತಿನ ಮಂಜೂರಾತಿ ಪಡೆದಿರುವುದರಿಂದ ಕೇಂದ್ರ ಸರಕಾರ ಕೋಟ್ಯಂತರ ಜನಗಳ ಜೀವ ಮತ್ತು ಜೀವನಾಧಾರಗಳನ್ನು ಉಳಿಸಲು ಒಂದು ಗಮನಾರ್ಹ ಮೊತ್ತದ ಪ್ಯಾಕೇಜಿಗೆ ಹಣ ತೆಗೆದಿಡಬೇಕು.

ಇದು ಹಣಕಾಸು ಶಿಸ್ತಿನ ಬಗ್ಗೆಯೇ ಚಿಂತಿಸುತ್ತ ಕೂರುವ ಸಮಯವಲ್ಲ, ನಮ್ಮ ಸಂಪನ್ಮೂಲಗಳನ್ನು ಜೀವಗಳ ರಕ್ಷಣೆಗೆ ಬಳಸಬೇಕಾದ ಸಮಯ ಎಂದು ಸೀತಾರಾಂ ಯೆಚುರಿಯವರು ಪ್ರಧಾನ ಮಂತ್ರಿಗಳಿಗೆ ಬರೆದ ತಮ್ಮ ಪತ್ರದ ಕೊನೆಯಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *