ಎರಡನೇ ಪ್ರಸಾರ ಭಾಷಣದಲ್ಲೂ ಅಗತ್ಯ ನೆರವಿನ ಕ್ರಮಗಳನ್ನು ಅಥವ ಪರಿಹಾರಗಳನ್ನು ಪ್ರಕಟಿಸದಿರುವುದರಿಂದ ನಿರಾಶೆಯಾಗಿದೆ: ಪ್ರಧಾನಿಗಳಿಗೆ ಯೆಚುರಿ ಬಹಿರಂಗ ಪತ್ರ
ಪ್ರಧಾನ ಮಂತ್ರಿಗಳು ಕೋವಿಡ್-೧೯ರ ವಿರುದ್ಧ ಸಮರದ ಸಂದರ್ಭದಲ್ಲಿ ಮಾರ್ಚ್ ೨೪ರಂದು ಇಡೀ ದೇಶವನ್ನುದ್ದೇಶಿಸಿ ಮತ್ತೊಂದು ಪ್ರಸಾರ ಭಾಷಣ ಮಾಡಿದರು. ಆದರೆ ಇದರಲ್ಲೂ ಬಡವರು ಮತ್ತು ನೆರವಿನ ಅಗತ್ಯವಿರುವವವರಿಗೆ ಪರಿಹಾರ ಒದಗಿಸುವ, ಮತ್ತು ಈ ದಿಗ್ಬಂಧನದಲ್ಲಿ ಬದುಕುಳಿಯಲು ತುರ್ತು ಸಹಾಯ ಬೇಕಾದವರ ಸಂಕಟಗಳನ್ನು ಶಮನ ಮಾಡುವ, ಯಾವುದೇ ಮೂರ್ತ ಕ್ರಮಗಳನ್ನು ಪ್ರಕಟಿಸಿಲ್ಲ ಎಂದು ಇದರಿಂದ ಜನಗಳಿಗಾಗಿರುವ ನಿರಾಸೆಗೆ ದನಿ ನೀಡಿ ಸಿಪಿಐ(ಎಂ) ಪ್ರಧಾನಮಂತ್ರಿಗಳಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ನಿಜ, ೧೫,೦೦೦ ಕೋಟಿ ರೂ.ಗಳ ಆರೋಗ್ಯಪಾಲನೆಯ “ಪ್ಯಾಕೇಜ್” ಪ್ರಕಟಿಸಿದ್ದಾರೆ, ಆದರೆ ಇದರಲ್ಲೂ ಕೆಲವು ಅಚ್ಚರಿಗಳಿವೆ. “೫ ಟ್ರಿಲಿಯನ್ ಅರ್ಥವ್ಯವಸ್ಥೆ”ಯ ಬಗ್ಗೆ, ಆರ್ಥಿಕ ರಂಗದಲ್ಲಿ ದಾಪುಗಾಲಿನ ಮುನ್ನಡೆಯ ಬಗ್ಗೆ ಹೇಳುವುದನ್ನು ಪದೇ-ಪದೇ ಕೇಳುತ್ತ ಬಂದಿದ್ದೇವೆ. ಅದು ನಿಜವಾಗಿದ್ದರೆ, ನಮಗೆ ಕೇವಲ ೧೫,೦೦೦ ಕೋಟಿ ರೂ.ಗಳನ್ನು ಮಾತ್ರವೇ ಇದಕ್ಕೆ ವೆಚ್ಚ ಮಾಡುವ ಶಕ್ತಿಯಿರುವುದೇ? ಅಂದರೆ ಒಬ್ಬ ನಾಗರಿಕರಿಗೆ ಆರೋಗ್ಯಕ್ಕಾಗಿ ಕೇವಲ ೧೧೨ ರೂ. ಮಾತ್ರ? ೭.೭೮ ಲಕ್ಷ ಕೋಟಿ ರೂ.ಗಳನ್ನು ಶ್ರೀಮಂತ ಕಾರ್ಪೊರೇಟ್ಗಳನ್ನು ಪಾರುಮಾಡಲು, ಅಥವ ಅವರಿಗೆ ೧.೭೬ಲಕ್ಷ ಕೊಟಿರೂ.ಗಳ ತೆರಿಗೆ ರಿಯಾಯ್ತಿಗಳನ್ನು ಪ್ರಕಟಿಸಬಹುದಾದರೆ, ಇಂತಹ ಒಂದು ಗಂಭೀರ ಅಪಾಯವನ್ನು ಎದುರಿಸುತ್ತಿರುವ ನಮ್ಮ ಜನಗಳ ಆರೋಗ್ಯಕ್ಕೆ ಇದಕ್ಕಿಂತ ಹೆಚ್ಚು ಹಣ ಕೊಡಲು ಖಂಡಿತಾ ನಮಗೆ ಸಾಧ್ಯವಿದೆ ಎಂದು ಹೇಳಿರುವ ಯೆಚುರಿ “ನೀವು ಬಡ ಜೀವಗಳನ್ನು ಉಳಿಸಲು ಬೇಕಾದ ಹಣಕಾಸಿಗಾಗಿ ಸೂಪರ್ ಶ್ರೀಮಂತರ ಮೇಲೆ ತೆರಿಗೆ ಹಾಕುತ್ತಿಲ್ಲವೇಕೆ?” ಎಂದು ತಮ್ಮ ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಈಗ ಈ ಕ್ಷಣದಲ್ಲಿ ಮಹಾಮಾರಿಯನ್ನು ಎದುರಿಸಲು ನಮಗೆ ಬೇಕಾದ ಸಾಮಾಜಿಕ ಅಂತರಕ್ಕೆ ತದ್ವಿರುದ್ಧವಾಗಿದೆ. ಈ ವರ್ಷದ ಆರಂಭದಲ್ಲೇ ಇಂತಹ ಒಮದು ಮಾಹಾಮಾರಿ ಹರಡುವ ಎಚ್ಚರಿಕೆಗಳಿದ್ದರೂ ಬಜೆಟಿನಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ವೆಚ್ಚವನ್ನು ಕಡಿತ ಮಾಡಿದ್ದು ಕ್ರಿಮಿನಲ್ ನಡೆ, ಅದು ಭಾರತವನ್ನು ಹೆಚ್ಚು ಅಪಾಯಕ್ಕೀಡು ಮಾಡಿದೆ. ಆದರೆ ಈಗಲಾದರೂ ಅದನ್ನು ಸರಿಪಡಿಸಿಲ್ಲ.
ಕೋವಿಡ್-೧೯ನ್ನು ಎದುರಿಸಿ ನಿಲ್ಲಲು ಭಾರತಕ್ಕೆ ಸುಮಾರು ಎರಡೂವರೆ ತಿಂಗಳ ಸಮಯಾವಕಾಶವಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಅಗ್ಗದಲ್ಲಿ ಪರೀಕ್ಷಣಾ ಕಿಟ್ಗಳನ್ನು ಪಡೆಯಲು, ಎದುರಿಸುವ ರೀತಿಗಳನ್ನು ಗುರುತಿಸಲು ಅಥವ ಹೆಚ್ಚು ಮುಖಕವಚಗಳನ್ನು ಮತ್ತು ವೆಂಟಿಲೇಟರ್ಗಳನ್ನು ಖರೀದಿಸಲು ಏನೇನೂ ಮಾಡಲಿಲ್ಲ. ಈ ಪ್ರಾಣರಕ್ಷಕ ಉಪಕರಣಗಳ ರಫ್ತಿನ ಮೇಲೆ ಮಾರ್ಚ್ ೨೪ರ ವರೆಗೂ ಯಾವುದೇ ನಿರ್ಬಂಧಗಳನ್ನು ಹಾಕಲಿಲ್ಲ ಎಂಬ ಸಂಗತಿಯತ್ತ ಯೆಚುರಿ ಪ್ರಧಾನಿಗಳ ಗಮನ ಸೆಳೆದಿದ್ದಾರೆ.
ಸೋಂಕು ಪರೀಕ್ಷಣೆಗೆ, ಸೋಂಕು ಗುರುತಿಸಲು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅತ್ಯುನ್ನತ ಆದ್ಯತೆ ನೀಡಲು, ಜತೆಗೆ ಅತ್ಯಂತ ಹೆಚ್ಚು ಬಾಧೆಗಳಿಗೆ ಒಳಗಾಗಿರುವ ವಿಭಾಗಗಳಿಗೆ ಗಮನಾರ್ಹ ಆರ್ಥಿಕ ಪ್ಯಾಕೇಜ್ಗಳನ್ನು ನೀಡುವುದರೊಂದಿಗೆ ಒಳ್ಳೆಯ ಕೆಲಸ ಮಾಡಿರುವ ಕೇರಳದ ಎಡಪಂಥೀಯರ ನೇತೃತ್ವದ ಸರಕಾರ ಮತ್ತು ಬೇರೆ ಕೆಲವು ಪ್ರತಿಪಕ್ಷಗಳ ಆಳ್ವಿಕೆಯ ಸರಕಾರಗಳ ಪ್ರಯತ್ನಗಳನ್ನು ಗುರುತಿಸುವ ಬದಲು ಪ್ರಧಾನಿಗಳು ರಾಜ್ಯ ಸರಕಾರಗಳು ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯದ ಬಗ್ಗೆ ಮಾತಾಡಿದ್ದಾರೆ! ಅದೂ ಇಂತಹ ಒಂದು ಸೂಕ್ಷ್ಮ ಸಮಯದಲ್ಲಿ ಬಿಜೆಪಿ ಮಧ್ಯಪ್ರದೇಶದಲ್ಲಿ ಒಂದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವನ್ನು ಅಸ್ಥಿರಗೊಳಿಸಿರುವಾಗ!
ಈ ಕಷ್ಟಕರ ದಿಗ್ಬಂಧನದ ಸಮಯದಲ್ಲಿ ಆರ್ಥಿಕ ನೆರವಿಗೂ ಮತ್ತು ನಾವು ಈಗಿಂದಲೇ ಕೈಗೊಳ್ಳಬೇಕಾದ ಪರೀಕ್ಷಣೆ, ಸೋಂಕು ಗುರುತಿಸುವುದು ಮತ್ತು ಸಾರ್ವಜನಿಕ ಆರೋಗ್ಯದ ಕ್ರಮಗಳಿಗೂ ಸ್ಪಷ್ಟ ಹೆಚ್ಚೆಗಳನ್ನು ಪ್ರಕಟಿಸಬೇಕು. ಇವೆರಡೂ, ಈ ಮಹಾಮಾರಿಯನ್ನು ಸೋಲಿಸಲು ನಮಗೆ ಸಾಧ್ಯವಾಗಬೇಕಾದರೆ ಮಹತ್ವದ್ದಾಗುತ್ತವೆ, ಇಲ್ಲವಾದರೆ ಬಹಳ ತಡವಾದೀತು ಎಂದು ಯೆಚುರಿ ತಮ್ಮ ಬಹಿರಂಗ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸಮಯದಲ್ಲಿ ಕೋವಿಡ್-೧೯ನ ಎದುರು ಸಮರಕ್ಕೆ ದೇಶ ಒಟ್ಟಾಗಿ ನಿಂತಿದೆ. “ಆದರೆ ನಿಮ್ಮ ಸರಕಾರ ನಾಗರಿಕರಿಂದ ಪ್ರತಿಯೊಂದನ್ನೂ ಕೇಳುತ್ತಿದೆ, ನೀವು ಮಾತ್ರ ಸರಕಾರ ಅವರ ಜೀವನಾಧಾರಗಳನ್ನು ನೋಡಿಕೊಳ್ಳುವ ಬಗ್ಗೆ ಯಾವುದೇ ಆಶ್ವಾಸನೆಗಳನ್ನು ಕೊಟ್ಟಿಲ್ಲ” ಎನ್ನುತ್ತ ನಮ್ಮ ಜನರು ಜೀವಂತವಾಗುಳಿಯಲು ಮತ್ತು ಆರೋಗ್ಯವಂತರಾಗಿ ಇರಲಿಕ್ಕಾಗಿ ಇದನ್ನು ಮಾಡಿ ಎಂದು ಸೀತಾರಾಂ ಯೆಚುರಿ ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಅವರ ಬಹಿರಂಗದ ಪತ್ರದ ಪೂರ್ಣ ಪಾಟ ಈ ಕೆಳಗಿನಂತಿದೆ.
ಶ್ರೀ ನರೇಂದ್ರ ಮೋದಿ
ಭಾರತದ ಪ್ರಧಾನ ಮಂತ್ರಿಗಳು
ಸೌತ್ ಬ್ಲಾಕ್, ನವದೆಹಲಿ-೧೧೦೦೦೧
ಪ್ರಿಯ ಪ್ರಧಾನ ಮಂತ್ರಿಗಳೇ,
ಮಾರಕ ಕೋವಿಡ್-೧೯ರ ಈ ದಿನಗಳಲ್ಲಿ ತಾವು ಚೆನ್ನಾಗಿದ್ದೀರೆಂದು ಆಶಿಸುತ್ತೇವೆ.
ನಾವು ಗಾಂಧೀಜಿಯವರಿಗೆ ೧೫೦ ವರ್ಷಗಳಾಗಿರುವ ಜನ್ಮದಿನಾಚರಣೆ ನಡೆಸುತ್ತಿದ್ದೇವೆ. ಇಂತಹ ಸಮಯದಲ್ಲಿ ರಾಷ್ಟ್ರಪಿತನ ನೆನಪಾಗುತ್ತದೆ.
ಅವರು ನಮಗೆ ಸದಾ ಹಸಿರಾಗಿರುವ ಒಂದು ತಾಯಿತವನ್ನು ಕೊಟ್ಟಿದ್ದಾರೆ: “ನೀವು ನೋಡಿರಬಹುದಾದ ಅತ್ಯಂತ ಬಡ ಮತ್ತು ದುರ್ಬಲ ವ್ಯಕ್ತಿಯ ಮುಖವನ್ನು ನೆನಪಿಸಿಕೊಳ್ಳಿ, ನೀವು ಯೋಚಿಸುತ್ತಿರುವ ಕ್ರಮದಿಂದ ಆತನಿಗೆ ಪ್ರಯೋಜನವಾಗುತ್ತದೆಯೇ ಎಂದು ನಿಮ್ಮನ್ನೇ ಕೇಳಿಕೊಳ್ಳಿ.” ಈ ತಾಯಿತವನ್ನು ವಾಚಾ, ಮನಸಾ ಪಾಲಿಸುವ ಯಾವುದೂ ಭಾರತ ಕೋವಿದ್-೧೯ರ ನಡೆಸಬೇಕಾದ ಸಮರವನ್ನು ಕುರಿತಂತೆ ನಿಮ್ಮ ಪ್ರಸಾರ ಭಾಷಣದಲ್ಲಾಗಲೀ ಅಥವ ನಿಮ್ಮ ಸರಕಾರದ ಕ್ರಿಯೆಗಳು ಮತ್ತು ನಡೆಗಳಲ್ಲಾಗಲೀ ನಮಗೆ ಕಾಣಿಸುತ್ತಿಲ್ಲ.
ನಾವು ೨೧ ದಿನಗಳ ದಿಗ್ಬಂಧನವನ್ನು ಸಾರುವ ನಿಮ್ಮ ಪ್ರಸಾರ ಭಾಷಣವನ್ನು ನೋಡಿದೆವು.
ನಮಗೆ ತುಂಬಾ ನಿರಾಸೆಯಾಗಿದೆ, ಬಡವರು ಮತ್ತು ನೆರವಿನ ಅಗತ್ಯವಿರುವವವರಿಗೆ ಪರಿಹಾರ ಒದಗಿಸುವ, ಮತ್ತು ಈ ದಿಗ್ಬಂಧನದಲ್ಲಿ ಬದುಕುಳಿಯಲು ತುರ್ತು ಸಹಾಯ ಬೇಕಾದವರ ಸಂಕಟಗಳನ್ನು ಶಮನ ಮಾಡುವ, ಯಾವುದೇ ಮೂರ್ತ ಕ್ರಮಗಳನ್ನು ಪ್ರಕಟಿಸಿಲ್ಲ.
ಇಂತಹ ದಿಗ್ಬಂಧನಗಳಿಂದ ಅತ್ಯಂತ ಹೆಚ್ಚು ನೋವನುಭವಿಸುವ ಬಡ ವಲಸಿಗರಿಗೆ ಸಹಾಯ ಮಾಡುವ ಯಾವುದೇ ಕ್ರಮಗಳಿಲ್ಲ. ಅವರಲ್ಲಿ ಬಹಳಷ್ಟು ಮಂದಿ ತಮ್ಮೂರುಗಳಿಗೆ ಮರಳುವ ದಾರಿಯಲ್ಲಿ ಆಹಾರ, ಅಥವ ಆಶ್ರಯವಿಲ್ಲದೆ ನಿಂತಿದ್ದಾರೆ. ಅವರು ಸುರಕ್ಷಿತ ಸ್ಥಳಗಳನ್ನು ತಲುಪುವುದಾದರೂ ಹೇಗೆ? ಅವರು ಹಣ, ಆಹಾರವಿಲ್ಲದೆ, ಜತೆಗೆ . ವರದಿಯಾಗಿರುವಂತೆ ಪೋಲೀಸ್ ಕಿರುಕುಳಗಳಿಂದಲೂ, ಬದುಕುಳಿಯುವುದಾದರೂ ಹೇಗೆ? ಅವರು ಸುರಕ್ಷಿತತೆಗಾಗಿ ಅಲ್ಲಿ-ಇಲ್ಲಿ ಓಡಾಡಬೇಕಾಗಿ ಬಂದಿದೆ, ಸಾರಿಗೆ ಅವರಿಗೆ ಲಭ್ಯವಿಲ್ಲ, ಮೂಲ ಅಗತ್ಯಗಳನ್ನು ಖರೀದಿಸಲು ಯಾವುದೇ ಹಣವನ್ನೂ ಅವರಿಗೆ ಕೊಡಲಾಗಿಲ್ಲ.
ಕನಿಷ್ಟ ೪೫ ಕೋಟಿ ಭಾರತೀಯರು ದಿನಗೂಲಿಗೆ ಕೆಲಸ ಮಾಡುವವರು. ಹೇಗೋ ಬದುಕು ಸಾಗಿಸುತ್ತಿದ್ದವರನ್ನು ನೋಡಿಕೊಳ್ಳಲು ಯಾವುದೇ ಕ್ರಮಗಳಿಲ್ಲದೆಯೇ ೨೧ ದಿನಗಳ ದಿಗ್ಬಂಧನ ಪ್ರಕಟಿಸಿರುವುದರಿಂದ ಹಲವು ಉದ್ಯೋಗಗಳು ಇಲ್ಲವಾಗಿ ಬಿಟ್ಟಿವೆ. ಅವರ ಜೀವಗಳು ಅಪಾಯದಲ್ಲಿವೆ, ಕೂಲಿ, ಸಂಬಳಗಳ ಭದ್ರತೆಯಿಲ್ಲವಾಗಿದೆ, ಅಲ್ಲದೆ ಯಾವುದೇ ಆಶ್ವಾಸನೆಗಳೂ ಇಲ್ಲದೆ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಇದು, ಈಗ ಈ ಕ್ಷಣದಲ್ಲಿ ಮಹಾಮಾರಿಯನ್ನು ಎದುರಿಸಲು ನಮಗೆ ಬೇಕಾದ ಸಾಮಾಜಿಕ ಅಂತರಕ್ಕೆ ತದ್ವಿರುದ್ಧವಾಗಿದೆ.
ಆರೋಗ್ಯಪಾಲನೆಗೆ ೧೫,೦೦೦ ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿದ್ದನ್ನು ನಾವು ಕೇಳಿದೆವು, ಆದರೆ ಇದರಲ್ಲೂ ಕೆಲವು ಅಚ್ಚರಿಗಳಿವೆ. ನೀವು ೫ ಟ್ರಿಲಿಯನ್ ಅರ್ಥವ್ಯವಸ್ಥೆಯ ಬಗ್ಗೆ, ಆರ್ಥಿಕ ರಂಗದಲ್ಲಿ ದಾಪುಗಾಲಿನ ಮುನ್ನಡೆಯ ಬಗ್ಗೆ ಹೇಳುವುದನ್ನು ಪದೇ-ಪದೇ ಕೇಳುತ್ತ ಬಂದಿದ್ದೇವೆ. ಅದು ನಿಜವಾಗಿದ್ದರೆ, ನಮಗೆ ಕೇವಲ ೧೫,೦೦೦ ಕೋಟಿ ರೂ.ಗಳನ್ನು ಮಾತ್ರವೇ ಇದಕ್ಕೆ ವೆಚ್ಚ ಮಾಡುವ ಶಕ್ತಿಯಿರುವುದೇ? ಅಂದರೆ ಒಬ್ಬ ನಾಗರಿಕರಿಗೆ ಕೇವಲ ೧೧೨ ರೂ.? ೭.೭೮ ಲಕ್ಷ ಕೋಟಿ ರೂ.ಗಳನ್ನು ಶ್ರೀಮಂತ ಕಾರ್ಪೊರೇಟ್ಗಳನ್ನು ಪಾರುಮಾಡಲು, ಅಥವ ಅವರಿಗೆ ೧.೭೬ಲಕ್ಷ ಕೊಟಿರೂ.ಗಳ ತೆರಿಗೆ ರಿಯಾಯ್ತಿಗಳನ್ನು ಪ್ರಕಟಿಸಬಹುದಾದರೆ, ಇಂತಹ ಒಂದು ಗಂಭೀರ ಅಪಾಯವನ್ನು ಎದುರಿಸುತ್ತಿರುವ ನಮ್ಮ ಜನಗಳ ಆರೋಗ್ಯಕ್ಕೆ ಇದಕ್ಕಿಂತ ಹೆಚ್ಚು ಹಣ ಕೊಡಲು ಖಂಡಿತಾ ನಮಗೆ ಸಾಧ್ಯ. ನೀವು ಬಡ ಜೀವಗಳನ್ನು ಉಳಿಸಲು ಬೇಕಾದ ಹಣಕಾಸಿಗಾಗಿ ಸೂಪರ್ ಶ್ರೀಮಂತರ ಮೇಲೆ ತೆರಿಗೆ ಹಾಕುತ್ತಿಲ್ಲವೇಕೆ?
ವಾರ್ಷಿಕ ಬಜೆಟ್ ಮಂಡಿಸುವಾಗಲೇ ಒಂದು ಜಾಗತಿಕ ಕಾಯಿಲೆ ಹರಡುವ ಲಕ್ಷಣಗಳಿದ್ದವು. ಆದರೆ ಬಜೆಟಿನಲ್ಲಿ ಆರೋಗ್ಯದ ಮೇಲೆ ಸರಕಾರದ ವೆಚ್ಚವನ್ನು ಇಳಿಸಲಾಯಿತು. ಆಸ್ಪತ್ರೆಗಳಿಗೆ ಹಣನೀಡಿಕೆಯಲ್ಲಿ ದೊಡ್ಡ ಕಡಿತ ಮಾಡಲಾಗಿದೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕೇವಲ ೦.೧ಶೇ ಹೆಚ್ಚಿಸಲಾಯಿತು. ಅತ್ಯಂತ ದೊಡ್ಡ ಇಳಿಕೆಯೆಂದರೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನಾಕ್ಕೆ; ಹಣವನ್ನು ೧೫೬ ಕೋಟಿ ರೂ.ಗಳಿಂದ ೨೯ ಕೋಟಿ ರೂ.ಗಳಿಗೆ ಇಳಿಸಲಾಯಿತು. ಆಯುಷ್ಮಾನ್ ಭಾರತ ಯೋಜನೆಗೆ ಹಣ ನೀಡಿಕೆಯನ್ನು ಹೆಚ್ಚಿಸಬೇಕಾಗಿತ್ತು. ಅದು ೬೪೦೦ ಕೋಟಿ ರೂ.ಗಳಲ್ಲೇ ನಿಂತಿದೆ. ಆಹಾರ ಸುರಕ್ಷಿತತೆ ಮತ್ತು ಮಾನಕ ಪ್ರಾಧಿಕಾರಕ್ಕೆ ಹಣ ನೀಡಿಕೆ ೩೬೦ ಕೋಟಿ ರೂ.ಗಳಿಂದ ೨೮೩.೭೧ ಕೋಟಿ ರೂ.ಗಳಿಗೆ ಇಳಿಯಿತು. ಆಘಾತಕಾರೀ ಸಂಗತಿಯೆಂದರೆ, ಸಾಂಸರ್ಗಿಕ ರೋಗಗಳಿಗೆ ಸಂಬಂಧಪಟ್ಟಂತೆ ಹಣ ನೀಡಿಕೆ ಕೂಡ ೨,೧೭೮ ಕೋಟಿ ರೂ.ನಲ್ಲೇ ನಿಂತಿದೆ.
ನಿಜಸಂಗತಿಯೆಂದರೆ, ಈ ಖರ್ಚುಗಳಲ್ಲಿ ನಿಮ್ಮ ಸರಕಾರ ಮಾಡಿರುವ ಕ್ರಿಮಿನಲ್ ಕಡಿತಗಳು ಭಾರತವನ್ನು ಹೆಚ್ಚು ಅಪಾಯಕ್ಕೀಡು ಮಾಡಿವೆ. ಕೋವಿಡ್-೧೯ನ್ನು ಎದುರಿಸಿ ನಿಲ್ಲಲು ಭಾರತಕ್ಕೆ ಸುಮಾರು ಎರಡೂವರೆ ತಿಂಗಳ ಸಮಯಾವಕಾಶವಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಅಗ್ಗದಲ್ಲಿ ಪರೀಕ್ಷಣಾ ಕಿಟ್ಗಳನ್ನು ಪಡೆಯಲು, ಎದುರಿಸುವ ರೀತಿಗಳನ್ನು ಗುರುತಿಸಲು ಅಥವ ಹೆಚ್ಚು ಮುಖಕವಚಗಳನ್ನು ಮತ್ತು ವೆಂಟಿಲೇಟರ್ಗಳನ್ನು ಖರೀದಿಸಲು ಏನೇನೂ ಮಾಡಲಿಲ್ಲ. ಈ ಪ್ರಾಣರಕ್ಷಕ ಉಪಕರಣಗಳ ರಫ್ತಿನ ಮೇಲೆ ಮಾರ್ಚ್ ೨೪ರ ವರೆಗೂ ಯಾವುದೇ ನಿರ್ಬಂಧಗಳನ್ನು ಹಾಕಲಿಲ್ಲ.
ನೀವು ರಾಜ್ಯ ಸರಕಾರಗಳು ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯದ ಬಗ್ಗೆ ಮಾತಾಡಿದ್ದೀರಿ! ಬಹುಶಃ ನೀವು, ಇಂತಹ ಒಂದು ಸೂಕ್ಷ್ಮ ಸಮಯದಲ್ಲಿ ಬಿಜೆಪಿ ಮಧ್ಯಪ್ರದೇಶದಲ್ಲಿ ಒಂದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಯಿತು, ಮತ್ತು ಸಂಸತ್ತು ನಿಮಗೆ ಬೇಕಾದ ಶಾಸನಗಳನ್ನು ಮಾಡಲು ಬಿಡಲಾಯಿತು ಎಂಬುದನ್ನು ಮರೆತಿರುವಂತೆ ಕಾಣುತ್ತದೆ.
ಕೇರಳದ ಎಡಪಂಥೀಯರ ನೇತೃತ್ವದ ಸರಕಾರ ಮತ್ತು ಬೇರೆ ಕೆಲವು ಪ್ರತಿಪಕ್ಷಗಳ ಆಳ್ವಿಕೆಯ ಸರಕಾರಗಳು ಪರೀಕ್ಷಣೆಗೆ, ಸೋಂಕು ಗುರುತಿಸಲು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅತ್ಯುನ್ನತ ಆದ್ಯತೆ ನೀಡಲು, ಜತೆಗೆ ಅತ್ಯಂತ ಹೆಚ್ಚು ಬಾಧೆಗಳಿಗೆ ಒಳಗಾಗಿರುವ ವಿಭಾಗಗಳಿಗೆ ಗಮನಾರ್ಹ ಆರ್ಥಿಕ ಪ್ಯಾಕೇಜ್ಗಳನ್ನು ನೀಡುವುದರೊಂದಿಗೆ ಒಳ್ಳೆಯ ಕೆಲಸ ಮಾಡಿವೆ. ಈ ನಡೆಗಳನ್ನು, ಚೈತನ್ಯವನ್ನು, ಆಡಳಿತ ಸಾಮರ್ಥ್ಯವನ್ನು ಮತ್ತು ಅದರ ಹಿಂದಿರುವ ಭಾವನೆಯನ್ನು ಅನುಕರಿಸುವುದಂತೂ ದೂರ, ಅವನ್ನು ಇದುವರೆಗೆ ಎಂದಿಗೂ ನೀವು ಸ್ವೀಕರಿಸಿಲ್ಲ.
ಈ ಕಷ್ಟದ ಸಮಯದಲ್ಲಿ ನೀವು ಪ್ರತಿಯೊಬ್ಬ ಭಾರತೀಯರಿಗೂ ಅವರಿಗೆ ಸಲ್ಲತಕ್ಕದ್ದನ್ನು ಕೊಡಬೇಕು. ಇದರ ಅರ್ಥವೆಂದರೆ, ನೀವು, ಈ ಕಷ್ಟಕರ ದಿಗ್ಬಂಧನದ ಸಮಯದಲ್ಲಿ ಆರ್ಥಿಕ ನೆರವಿಗೂ ಮತ್ತು ನಾವು ಈಗಿಂದಲೇ ಕೈಗೊಳ್ಳಬೇಕಾದ ಪರೀಕ್ಷಣೆ, ಸೋಂಕು ಗುರುತಿಸುವುದು ಮತ್ತು ಸಾರ್ವಜನಿಕ ಆರೋಗ್ಯದ ಕ್ರಮಗಳಿಗೂ ಸ್ಪಷ್ಟ ಹೆಚ್ಚೆಗಳನ್ನು ಪ್ರಕಟಿಸಬೇಕು. ಇವೆರಡೂ, ಈ ಮಹಾಮಾರಿಯನ್ನು ಸೋಲಿಸಲು ನಮಗೆ ಸಾಧ್ಯವಾಗಬೇಕಾದರೆ ಮಹತ್ವದ್ದಾಗುತ್ತವೆ, ಇಲ್ಲವಾದರೆ ಬಹಳ ತಡವಾದೀತು.
ಈ ಸಮಯದಲ್ಲಿ ಕೋವಿಡ್-೧೯ನ ಎದುರು ಸಮರಕ್ಕೆ ಒಟ್ಟಾಗಿ ನಿಂತಿದ್ದೇವೆ.
ಆದರೆ ನಿಮ್ಮ ಸರಕಾರ ನಾಗರಿಕರಿಂದ ಪ್ರತಿಯೊಂದನ್ನೂ ಕೇಳುತ್ತಿದೆ, ನೀವು ಮಾತ್ರ ಸರಕಾರ ಅವರ ಜೀವನಾಧಾರಗಳನ್ನು ನೋಡಿಕೊಳ್ಳುವ ಬಗ್ಗೆ ಯಾವುದೇ ಆಶ್ವಾಸನೆಗಳನ್ನು ಕೊಟ್ಟಿಲ್ಲ.
ದಯವಿಟ್ಟು, ನಮ್ಮ ಜನರು ಜೀವಂತವಾಗುಳಿಯಲು ಮತ್ತು ಆರೋಗ್ಯವಂತರಾಗಿ ಇರಲಿಕ್ಕಾಗಿ ಇದನ್ನು ಮಾಡಿ ಎಂದು ಆಗ್ರಹಿಸುತ್ತೇನೆ.
ಸೀತಾರಾಂ ಯೆಚುರಿ
ಪ್ರಧಾನ ಕಾರ್ಯದರ್ಶಿ ಸಿಪಿಐ(ಎಂ)