ಬಂಗಾಲದ ೧೯೪೩ರ ಬರದ ಸಮಯದಲ್ಲಿ ಆಹಾರ ಮತ್ತು ಬಟ್ಟೆ ಹಂಚುತ್ತಿರುವ ಸಿಪಿಐ ಮಾರ್ಗದರ್ಶನದ ಜನರಕ್ಷಾ ಸಮಿತಿ ಸದಸ್ಯರು ಮತ್ತು ಕಳ್ಳದಾಸ್ತಾನುಗಳನ್ನು ಹೊರಗೆಳೆಯುತ್ತಿರುವ ವಿದ್ಯಾರ್ಥಿಗಳು
- ಜೂನ್ ೧೯೪೧ರಲ್ಲಿ ಸೋವಿಯತ್ ಯೂನಿಯನ್ನಿನ ಮೇಲೆ ಹಿಟ್ಲರ್ ಆಕ್ರಮಣ ಮಾಡಿದಾಗ ಮಹಾಯುದ್ಧದ ಸ್ವರೂಪವೇ ಬದಲಾಯಿತು. ಪಕ್ಷದೊಳಗಿನ ಹಲವು ಚರ್ಚೆಗಳ ಪರಿಣಾಮವಾಗಿ ಡಿಸೆಂಬರ್ ೧೯೪೧ರಲ್ಲಿ ಸೋವಿಯತ್ ಯೂನಿಯನ್ನಿನ ಮೇಲೆ ಹಿಟ್ಲರ್ ದಾಳಿ ಮಾಡಿದ ನಂತರ ಯುದ್ಧದ ಸ್ವರೂಪವು ಆಮೂಲಾಗ್ರವಾಗಿ ಬದಲಾಗಿದೆ ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಯುದ್ಧವೀಗ ಸಾಮ್ರಾಜ್ಯಶಾಹಿ ಯುದ್ಧದ ಬದಲಾಗಿ ಜನ ಸಂಗ್ರಾಮವಾಗಿ ಬಿಟ್ಟಿದೆ, ದೇಶದಲ್ಲಿ ಒಂದು ಜನಸಂಗ್ರಾಮ ಚಳುವಳಿಯನ್ನು ಬೆಳೆಸಬೇಕೆಂದು ಎಂದು ಪಕ್ಷ ಕರೆಕೊಟ್ಟಿತು. ಫ್ಯಾಸಿಸಂ ವಿರುದ್ಧದ ಈ ಯುದ್ಧದಲ್ಲಿನ ಗೆಲುವು ವಿಮೋಚನೆಗಾಗಿನ ಭಾರತೀಯ ಜನರ ಹೋರಾಟಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿತು. ಆದರೆ ಇದು ಅದಾಗಲೇ ಜನಸಮುದಾಯದಲ್ಲಿ ಬೆಳೆದುಬರುತ್ತಿದ್ದ ಸಾಮ್ರಾಜ್ಯಶಾಹಿ ವಿರೋಧಿ ಭಾವನೆಗಳ ವಿರುದ್ಧ ಹೋಯಿತು. ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ವಿರೋಧಿಸಿದ ನಿಲುವು ರಾಷ್ಟ್ರೀಯ ರಾಜಕೀಯ ಹೋರಾಟಗಳಿಂದ ಪಕ್ಷವನ್ನು ಪ್ರತ್ಯೇಕಗೊಳಿಸಿ ಒಂಟಿಯಾಗಿಸಿತು. ಪಕ್ಷವೂ ನಂತರ ಈ ಬಗ್ಗೆ ಸ್ವವಿಮರ್ಶೆ ಮಾಡಿಕೊಂಡಿತು. ಆದರೆ ಈ ಅವಧಿಯಲ್ಲೂ ಪಕ್ಷವು ಬ್ರಿಟಿಷ್ ಆಳರಸರೊಂದಿಗೆ ಎಂದಿಗೂ ಶಾಮೀಲಾಗಲಿಲ್ಲ ಎಂಬುದನ್ನು ಬ್ರಿಟಿಶ್ ಗುಪ್ರ ದಾಖಲೆಗಳೇ ಹೇಳುತ್ತವೆ.
೧೯೩೯ರಲ್ಲಿ ಎರಡನೇ ವಿಶ್ವ ಸಮರ ಶುರುವಾದಾಗ ಕಮ್ಯುನಿಸ್ಟರು ಅದರ ವಿರುದ್ಧ ತಮ್ಮ ವಿರೋಧ ಸಾರಿದರು. ಯುದ್ಧವನ್ನು ವಿರೋಧಿಸಲು ಭಾರತದ ಜನಕ್ಕೆ ಪಕ್ಷವು ಕರೆ ನೀಡಿತು ಮತ್ತು ಈ ಯುದ್ಧದ ಪರಿಣಾಮವಾಗಿ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಲು ಮುಂದಾಳುತ್ವ ವಹಿಸಿತು. ಪಕ್ಷ ಮತ್ತು ಅದರ ಸಾಹಿತ್ಯಗಳ ಮೇಲೆ ನಿಷೇಧ ಹೇರಿ ಅದರ ನೂರಾರು ಕಾರ್ಯಕರ್ತರನ್ನು ಬಂಧಿಸುವ ಮೂಲಕ ತೀವ್ರತರದ ದಾಳಿ ನಡೆದಾಗ್ಯೂ, ಬೆಲೆ ಏರಿಕೆ, ಆಹಾರ ಕೊರತೆಗಳ ವಿರುದ್ಧ ಪಕ್ಷದ ನೇತೃತ್ವದಲ್ಲಿ ಅದರ ಸದಸ್ಯರು ಅನೇಕ ಹೋರಾಟಗಳಿಗೆ ಮತ್ತು ಕಾರ್ಮಿಕರ ಮುಷ್ಕರಗಳಿಗೆ ನಾಯಕತ್ವ ನೀಡಿದರು.
ಜೂನ್ ೧೯೪೧ರಲ್ಲಿ ಸೋವಿಯತ್ ಯೂನಿಯನ್ನಿನ ಮೇಲೆ ಹಿಟ್ಲರ್ ಆಕ್ರಮಣ ಮಾಡಿದಾಗ ಯುದ್ಧದ ಸ್ವರೂಪವೇ ಬದಲಾಯಿತು. ಸಮಾಜವಾದದ ಸುಭದ್ರ ನೆಲೆಯ ಮೇಲೆ ಫ್ಯಾಸಿಸ್ಟ್ ಶಕ್ತಿಗಳು ದಾಳಿ ಮಾಡಿದರು ಮತ್ತು ಜರ್ಮನಿ, ಜಪಾನ್ ಹಾಗೂ ಇಟಲಿ ನೇತೃತ್ವದ ಮೂರು ದೇಶಗಳ ಕೂಟದ ಫ್ಯಾಸಿವಾದದ ವಿರುದ್ಧ ವಿಶ್ವವ್ಯಾಪೀ ಹೋರಾಟವಾಗಿ ಆ ಯುದ್ಧವು ಮಾರ್ಪಟ್ಟಿತು.
ಯುದ್ಧದ ಈ ಸ್ವರೂಪ ಬದಲಾವಣೆಯನ್ನು ಆಗ ಸಿಪಿಐ ಒಪ್ಪಿಕೊಂಡಿರಲಿಲ್ಲ. ಜುಲೈ ೧೯೪೧ರ ತನಕವೂ ಅದನ್ನು ಸಾಮ್ರಾಜ್ಯಶಾಹೀ ಯುದ್ಧವೆಂದೇ ವಿರೋಧಿಸಿತು; ಅದನ್ನು ಕ್ರಾಂತಿಕಾರಿ ಯುದ್ಧವಾಗಿ ಬದಲಾಯಿಸಬೇಕೆಂದು ಪೊಲಿಟ್ ಬ್ಯೂರೋ ನಿರ್ಣಯ ಕೈಗೊಂಡಿತ್ತು.
ಈ ಮಧ್ಯೆ, ದಿಯೋಲಿ ಬಂಧನ ಶಿಬಿರದಲ್ಲಿದ್ದ ಕಮ್ಯುನಿಸ್ಟ್ ಖೈದಿಗಳು ಯುದ್ಧ ಕುರಿತ ಪಕ್ಷದ ನಿಲುವನ್ನು ಪ್ರಶ್ನೆ ಮಾಡಿದರು. ಬಿ.ಟಿ.ರಣದಿವೆ ನೇತೃತ್ವದ ಈ ಗುಂಪು ಒಂದು ದಸ್ತಾವೇಜನ್ನು ಪೊಲಿಟ್ಬ್ಯೂರೋಗೆ ಕಳಿಸಿ ಯುದ್ಧದ ಬಗೆಗಿನ ನಿರ್ಧಾರವನ್ನು ಬದಲಾಯಿಸಬೇಕೆಂದು ಕೇಳಿಕೊಂಡಿತು. ಸೋವಿಯತ್ ಯೂನಿಯನ್ನಿನ ಮೇಲೆ ನಾಜಿ ಆಕ್ರಮಣದೊಂದಿಗೆ ಯುದ್ಧವು ಫ್ಯಾಸಿಸಂ ವಿರುದ್ಧ ಜನ ಸಂಗ್ರಾಮವಾಗಿ ಸ್ವರೂಪ ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಸಿಪಿಐ ನಾಯಕರ ಗುಂಪು ದಿಯೋಲಿಯಿಂದ ಕಳಿಸಿದ ಈ ದಸ್ತಾವೇಜನ್ನು ಜೈಲ್ ದಸ್ತಾವೇಜು ಎಂದು ಪರಿಚಿತವಾಗಿದೆ. ಅದು ಹೀಗೆ ಹೇಳಿತ್ತು: ಏಕೈಕ ಶ್ರಮಜೀವಿ ದೇಶದ ಮೇಲೆ ತನ್ನ ಮಾರಣಾಂತಿಕ ದಾಳಿಯ ಮೂಲಕ ನಾಜಿಸಂ ಅಂತರ್ ರಾಷ್ಟ್ರೀಯ ಶ್ರಮಜೀವಿಗಳ ಮತ್ತು ವಸಾಹತು ಶ್ರಮಜೀವಿಗಳ ಪ್ರಧಾನ ಶತ್ರುವಾಗಿ ಬದಲಾಗಿದೆ. ಆದ್ದರಿಂದ ಭಾರತದ ಶ್ರಮಜೀವಿಗಳ ಪಕ್ಷವು ಯುದ್ಧದಲ್ಲಿ ಖಚಿತವಾಗಿ ಮಧ್ಯಪ್ರವೇಶ ಮಾಡಬೇಕು, ಅದನ್ನು ಜನ ಸಂಗ್ರಾಮವೆಂದು ಘೋಷಿಸಬೇಕು ಮತ್ತು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆ ಯುದ್ಧವನ್ನು ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಬೇಕು.
ಯುದ್ಧದ ಬದಲಾದ ಸ್ವರೂಪದ ಬಗ್ಗೆ ಗ್ರೇಟ್ ಬ್ರಿಟನ್ನಿನ ಕಮ್ಯುನಿಸ್ಟ್ ಪಕ್ಷ ಕೂಡ ಸಿಪಿಐ ನಾಯಕತ್ವಕ್ಕೆ ಒಂದು ದಸ್ತಾವೇಜನ್ನು ಕಳಿಸಿಕೊಟ್ಟಿತು.
ಈ ಚರ್ಚೆಗಳ ಪರಿಣಾಮವಾಗಿ ಪೊಲಿಟ್ಬ್ಯೂರೋವು ಡಿಸೆಂಬರ್ ೧೯೪೧ರಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸಿತು. ಸೋವಿಯತ್ ಯೂನಿಯನ್ನಿನ ಮೇಲೆ ಹಿಟ್ಲರ್ ದಾಳಿ ಮಾಡಿದ ನಂತರ ಯುದ್ಧದ ಸ್ವರೂಪವು ಆಮೂಲಾಗ್ರವಾಗಿ ಬದಲಾಗಿದೆ ಎಂಬುದನ್ನು ಆ ನಿರ್ಣಯವು ಒಪ್ಪಿಕೊಂಡಿತು. ಯುದ್ಧವೀಗ ಸಾಮ್ರಾಜ್ಯಶಾಹೀ ಯುದ್ಧದ ಬದಲಾಗಿ ಜನ ಸಂಗ್ರಾಮವಾಗಿ ಬಿಟ್ಟಿದೆ. ಅದು ದೇಶದಲ್ಲಿ ಒಂದು ಜನಸಂಗ್ರಾಮ ಚಳುವಳಿಯನ್ನು ಬೆಳೆಸಬೇಕೆಂದು ಕರೆಕೊಟ್ಟಿತು. ಫ್ಯಾಸಿಸಂ ವಿರುದ್ಧದ ಈ ಯುದ್ಧದಲ್ಲಿನ ಗೆಲುವು ವಿಮೋಚನೆಗಾಗಿನ ಭಾರತೀಯ ಜನರ ಹೋರಾಟಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿತು.
ಪಕ್ಷದ ಮೇಲಿನ ನಿಷೇಧವನ್ನು ೧೯೪೨ ಜುಲೈನಲ್ಲಿ ತೆಗೆಯಲಾಯಿತು. ಬಂಧನದಲ್ಲಿದ್ದ ಎಲ್ಲಾ ನಾಯಕರನ್ನು ಸರ್ಕಾರವು ಬಿಡುಗಡೆ ಮಾಡಿತು.
ಆದರೆ, ಭಾರತದ ವಿಮೋಚನೆಗಾಗಿನ ಹೋರಾಟವನ್ನು ಫ್ಯಾಸಿಸಮ್ಮಿನ ವಿರುದ್ಧದ ವಿಶ್ವವ್ಯಾಪೀ ಹೋರಾಟದ ಭಾಗವಾಗಿ ಸಂಯೋಜಿಸಬೇಕೆಂಬ ನಿಲುವು ರಾಷ್ಟ್ರೀಯವಾದಿಗಳು ಮತ್ತು ಎಡ ರಾಷ್ಟ್ರೀಯವಾದಿ ಬಣಗಳಿಗೆ ಇಷ್ಟವಾಗಲಿಲ್ಲ. ಆದರೆ ಪಕ್ಷದ ನಿಲುವು ವಿಚಾರವಾದಿಗಳ ವಿಭಾಗಗಳಲ್ಲಿ ಮೆಚ್ಚುಗೆ ಪಡೆಯಿತು.
ಯುದ್ಧದ ವಿಷಯದಲ್ಲಿನ ಸಹಕಾರಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಬೇಡಿಕೆಗಳನ್ನು ಚರ್ಚೆ ಮಾಡಲು ಬ್ರಿಟಿಷ್ ಸರ್ಕಾರ ನಿರಾಕರಿಸಿ ನಂತರ, ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಅಕ್ಟೋಬರ್ ೧೯೪೦ರಲ್ಲಿ ವೈಯಕ್ತಿಕ ಸತ್ಯಾಗ್ರಹ ಪ್ರಾರಂಭಿಸಿತು. ಕೇಂದ್ರ ಸರ್ಕಾರದ ಆಡಳಿತ ಯಂತ್ರದಲ್ಲಿ ಡೊಮಿನಿಯನ್ (ಅಧೀನ) ಸ್ಥಾನಮಾನಕ್ಕೆ ಸಮನಾದ ಬದಲಾವಣೆಗಳನ್ನು ಒಪ್ಪಲು ಬ್ರಿಟಿಷ್ ಸರ್ಕಾರ ನಿರಾಕರಿಸಿತು.
ವೈಯಕ್ತಿಕ ಸತ್ಯಾಗ್ರಹದ ಒಂದು ವರ್ಷದ ನಂತರ, ಯುದ್ಧ-ಕಾಲ ಸಂಪುಟದ ಸದಸ್ಯ ಸರ್ ಸ್ಟಾಫರ್ಡ್ ಕ್ರಿಪ್ಸ್ ಅವರನ್ನು ಭಾರತದ ನಾಯಕರೊಂದಿಗೆ ಸಂಧಾನ ಮಾಡಲು ಬ್ರಿಟಿಷ್ ಸರ್ಕಾರವು ಭಾರತಕ್ಕೆ ಕಳಿಸಿಕೊಟ್ಟಿತು. ಸ್ವಾತಂತ್ರ್ಯ ನೀಡುವ ವಿಷಯದಲ್ಲಿ ಮಹತ್ವವುಳ್ಳ ಏನನ್ನೂ ಮುಂದಿಡಲು ಕ್ರಿಪ್ಸ್ ನಿಯೋಗ ವಿಫಲವಾದಾಗ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನೊಂದಿಗೆ ಸಂಧಾನ ಮಾಡಿ ಒಂದು ಒಪ್ಪಂದಕ್ಕೆ ಬರುವಂತೆ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹೇರಲು ಸಾಮೂಹಿಕ ಹೋರಾಟ ಮಾಡಬೇಕೆಂದು ಗಾಂಧೀಜಿ ನಿರ್ಧರಿಸಿದರು. ಇದನ್ನು ಮನದಲ್ಲಿಟ್ಟುಕೊಂಡ ಗಾಂಧೀಜಿ ತನ್ನ ಕಾರ್ಯಾಚರಣೆಯ ಯೋಜನೆಗೆ ಬೆಂಬಲ ನೀಡಿ ಎಂದು ಕಾಂಗ್ರೆಸ್ ನಾಯಕತ್ವವನ್ನು ಒಲಿಸಲು ಮುಂದಾದರು; ಅಂತಹ ಹೋರಾಟಕ್ಕೆ ಕಾಲ ಈಗ ಪಕ್ಷವಾಗಿಲ್ಲ ಎಂಬುದು ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗದ ಅಭಿಪ್ರಾಯವಾಗಿತ್ತು. ಆಗಸ್ಟ್ ೯, ೧೯೪೨ರಿಂದ ಕ್ವಿಟ್ ಇಂಡಿಯಾ(ಭಾರತ ಬಿಟ್ಟು ತೊಲಗಿ) ಚಳುವಳಿ ಆರಂಭಿಸಲು ಎಐಸಿಸಿಯು ಆಗಸ್ಟ್ ೮, ೧೯೪೨ರಂದು ಬೊಂಬಾಯಿಯಲ್ಲಿ ಕರೆ ಕೊಟ್ಟಿತು. ಅದಕ್ಕೆ ಪ್ರತೀಕಾರವಾಗಿ ಬ್ರಿಟಿಷ್ ಸರ್ಕಾರವು ನಾಯಕರನ್ನು ಬಂಧಿಸಿ ಜೈಲಿಗೆ ಕಳಿಸಿತು. ಗಾಂಧೀಜಿಯವರ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಬ್ರಿಟಿಷರು ಹಿಂದಡಿಯಿಡಲು ಒಪ್ಪಲಿಲ್ಲ ಮತ್ತು ಪ್ರತಿಭಟನಾಕಾರರ ವಿರುದ್ಧ ತೀವ್ರ ದಾಳಿ ದಬ್ಬಾಳಿಕೆ ನಡೆಸಿತು. ಇದಕ್ಕೆ ಪ್ರತೀಕಾರವಾಗಿ, ರೈಲ್ವೇ ಹಳಿಗಳನ್ನು ಮತ್ತು ಟೆಲಿಫೋನ್ ತಂತಿಗಳನ್ನು ಕಡಿತಗೊಳಿಸಲಾಯಿತು ಹಾಗೂ ಅಂಚೆ ಕಛೇರಿಗಳು ಮತ್ತು ಸರ್ಕಾರಿ ಕಛೇರಿಗಳ ಮೇಲೆ ದಾಳಿ ಮಾಡಲಾಯಿತು. ಹತ್ತಾರು ಸಾವಿರ ಜನರು ಈ ಸಮರಶೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಸಿಪಿಐ ತನ್ನ ಯುದ್ಧ ಧೋರಣೆಯನ್ನು ಜಾರಿಮಾಡುವಾಗ ಫ್ಯಾಸಿಸಂ ವಿರುದ್ಧದ ಯುದ್ಧವು ಗೆಲುವು ಸಾಧಿಸಲು ಮಾಡಬೇಕಾದ ಪ್ರಯತ್ನಗಳು ಮತ್ತು ಯುದ್ಧ ಯತ್ನಗಳನ್ನು ಬಲಪಡಿಸಲು ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯತೆ ಬಗ್ಗೆ ಒತ್ತು ನೀಡಿತು. ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರನ್ನು ಬಿಡುಗಡೆ ಮಾಡಬೇಕು ಮತ್ತು ಕಾಂಗ್ರೆಸ್-ಲೀಗ್ ಐಕ್ಯತೆಯ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ಸ್ಥಾಪಿಸಬೇಕು ಹಾಗೂ ರಾಷ್ಟ್ರೀಯ ಸರ್ಕಾರವನ್ನು ರಚಿಸಬೇಕು ಎಂದು ಒತ್ತಾಯಿಸಿತು.
ಮುಖ್ಯವಾಗಿ ಜಪಾನಿ ಸೇನೆಯು ಬರ್ಮಾವನ್ನು ವಶಪಡಿಸಿಕೊಂಡು ಭಾರತದ ಗಡಿಯತ್ತ ಧಾವಿಸುತ್ತಿದ್ದ ಆ ಸಮಯದಲ್ಲಿ ಯುದ್ಧ ಯತ್ನಗಳಿಗೆ ತೊಡಕುಂಟುಮಾಡುವ ಯಾವುದೇ ರೀತಿಯ ಹೋರಾಟ ಮಾಡುವುದನ್ನೂ ಸಿಪಿಐ ವಿರೋಧಿಸಿತು. ಜಪಾನಿಯರ ಮುನ್ನಡೆಯನ್ನು ತಡೆಯಲು ಅಗತ್ಯವಾದ ಐಕ್ಯ ಪ್ರಯತ್ನಗಳಿಗೆ ಧಕ್ಕೆ ಉಂಟುಮಾಡಬಹುದೆಂಬ ಭೀತಿಯಿಂದ ಭಾರತ ಬಿಟ್ಟು ತೊಲಗಿ ಚಳುವಳಿಯನ್ನೂ ಅದು ವಿರೋಧಿಸಿತು.
ಆದರೆ, ಸ್ವಾತಂತ್ರ್ಯ ಹೋರಾಟಗಾರರ ಮೇಲಿನ ದಾಳಿ ದಬ್ಬಾಳಿಕೆಯನ್ನು ಪಕ್ಷ ಖಂಡಿಸಿತು ಮತ್ತು ರಾಷ್ಟ್ರೀಯ ಮುಖಂಡರುಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕರೆ ಕೊಟ್ಟಿತು.
ಪಕ್ಷದ ಈ ದೃಷ್ಟಿಕೋನವು ಅದಾಗಲೇ ಜನಸಮುದಾಯದಲ್ಲಿ ಬೆಳೆದುಬರುತ್ತಿದ್ದ ಸಾಮ್ರಾಜ್ಯಶಾಹಿ ವಿರೋಧಿ ಭಾವನೆಗಳ ವಿರುದ್ಧ ಹೋಯಿತು. ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ವಿರೋಧಿಸಿದ ನಿಲುವು ರಾಷ್ಟ್ರೀಯ ರಾಜಕೀಯ ಹೋರಾಟಗಳಿಂದ ಪಕ್ಷವನ್ನು ಪ್ರತ್ಯೇಕಗೊಳಿಸಿ ಒಂಟಿಯಾಗಿಸಿತು.
ಆನಂತರದಲ್ಲಿ, ಸ್ವಾತಂತ್ರ್ಯಾ ನಂತರ, ಪಕ್ಷವು ತನ್ನ ನಿಲುವನ್ನು ವಿಮರ್ಶೆಗೆ ಒಳಪಡಿಸಿತು ಮತ್ತು ಈ ಕೆಳಗಿನ ತೀರ್ಮಾನಗಳಿಗೆ ಬಂತು: ಜನಸಂಗ್ರಾಮದ ವಿಷಯದಲ್ಲಿ ಕೈಗೊಂಡ ರಾಜಕೀಯ ನಿಲುವುಗಳು ಬಹುತೇಕ ಸರಿಯಾಗಿ ಇದ್ದವಾದರೂ, ಪಕ್ಷವು ಕೆಲವು ಗಂಭೀರ ಪ್ರಮಾದಗಳನ್ನು ಎಸಗಿತ್ತು ಮತ್ತು ಅದಕ್ಕಾಗಿ ಪಕ್ಷ ಬಹಳ ಬೆಲೆ ತೆರಬೇಕಾಯಿತು. ಜನಸಂಗ್ರಾಮವನ್ನು ಸರಿಯಾಗಿಯೇ ಬೆಂಬಲಿಸಿತಾದರೂ ಅಂತರ್ ರಾಷ್ಟ್ರೀಯ ವಲಯದ ವೈರುಧ್ಯಗಳನ್ನು ರಾಷ್ಟ್ರೀಯ ಮಟ್ಟದ ವೈರುಧ್ಯದೊಂದಿಗೆ ಬೆಸೆಯುವಲ್ಲಿ ಪಕ್ಷ ವಿಫಲವಾಯಿತು. ಅಂತರ್ ರಾಷ್ಟ್ರೀಯ ವಲಯದಲ್ಲಿ ಫ್ಯಾಸಿಸಮ್ಮಿನ ವಿರುದ್ಧದ ಹೋರಾಟವು ಪ್ರಧಾನವಾಗಿತ್ತು, ರಾಷ್ಟ್ರೀಯ ಮಟ್ಟದಲ್ಲಿ ಜನರು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಗಳೊಂದಿಗಿನ ವೈರುಧ್ಯವು ಪ್ರಬಲವಾಗಿತ್ತು. ಆದಕಾರಣ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಪಕ್ಷ ವಿರೋಧಿಸಿದ್ದು ಮತ್ತು ಯುದ್ಧ ಯತ್ನಗಳಿಗೆ ತೊಡಕಾಗಬಹುದು ಎಂಬ ಕಾರಣ ನೀಡಿ ಸಾಮೂಹಿಕ ಹೋರಾಟಗಳನ್ನು ಮಾಡದಿರಲು ಪಕ್ಷ ತಳೆದ ನಿಲುವು ತಪ್ಪಾಗಿತ್ತು.
ದುಡಿಯುವ ಜನರಿಗಾಗಿ ಹೋರಾಡುವ ಸಂಘಟನೆಗಳಿಗೆ ಬಹು ಮುಖ್ಯವಾಗಿ ಕಾರ್ಮಿಕ ಸಂಘಗಳು ಹಾಗೂ ಕಿಸಾನ್ ಸಭಾಗಳಿಗೆ ನೀಡಿದ ಮಾರ್ಗದರ್ಶನವು ಪರಿಷ್ಕರಣವಾದಿ ಮಾರ್ಗಚ್ಯುತಿಯಿಂದ ಬಾಧಿತವಾಗಿತ್ತು. ಯುದ್ಧ ಯತ್ನಗಳಿಗೆ ಸಹಾಯಕವಾಗುವಂತೆ ಕೈಗಾರಿಕಾ ಹಾಗೂ ಕೃಷಿ ಉತ್ಪಾದನೆಗಳನ್ನು ಹೆಚ್ಚು ಮಾಡಿ ಎಂದು ನೀಡಿದ ಕರೆಯ ರೀತಿ ಹೇಗಿತ್ತೆಂದರೆ ಅವು ದುಡಿಯುವ ಜನರ ಸಮರಶೀಲ ಹೋರಾಟಗಳನ್ನು ನಿರುತ್ಸಾಹಗೊಳಿಸಿತು. ಅದು ಕಾರ್ಮಿಕ ಸಂಘಗಳು, ಕಿಸಾನ್ ಸಭಾಗಳು ಮತ್ತು ಇತರ ಸಾಮೂಹಿಕ ಸಂಘಟನೆಗಳ ನಡುವಿನ ಐಕ್ಯತೆಯನ್ನು ನಾಶ ಮಾಡಲು ಪಕ್ಷ-ವಿರೋಧಿಗಳಿಗೆ ಅವಕಾಶಗಳನ್ನು ಒದಗಿಸಿತು. ಮೊಟ್ಟ ಮೊದಲ ಬಾರಿಗೆ, ಎಲ್ಲಾ ರೀತಿಯ ಸಾಮೂಹಿಕ ಸಂಘಟನೆಗಳು ಎಲ್ಲಾ ಮಟ್ಟದಲ್ಲೂ ಪಕ್ಷ-ರಾಜಕೀಯ ಧೋರಣೆಗಳ ಆಧಾರದಲ್ಲಿ ಒಡೆದು ಹೋದವು.
ಸ್ಟ್ಯಾಲಿನ್ಗ್ರಾಡಿನಲ್ಲಿ ಕೆಂಪು ಸೇನೆಯ ವಿಜಯದೊಂದಿಗೆ ದೊರೆತ ನಿರ್ಣಾಯಕ ಘಟ್ಟವನ್ನು ಗ್ರಹಿಸುವಲ್ಲಿ ಪಕ್ಷ ಸೋತಿತು. ಅದರ ನಂತರವೂ ಭಾರತಕ್ಕೆ ಫ್ಯಾಸಿಸಂನ ಅಪಾಯವು ಹಾಗೆಯೇ ಮುಂದುವರಿದಿದೆ ಎಂಬ ತಿಳುವಳಿಕೆಯಲ್ಲೇ ಪಕ್ಷ ಇತ್ತು. ಸ್ಟ್ಯಾಲಿನ್ಗ್ರಾಡಿನ ಗೆಲುವಿನ ನಂತರದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟಗಳನ್ನು ತೀವ್ರಗೊಳಿಸುವ ಸಂದರ್ಭಕ್ಕೆ ಹೆಚ್ಚು ಹೊಂದಿಕೊಳ್ಳುವಂಥಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಗಬೇಕಿತ್ತು.
೧೯೪೫ರಲ್ಲಿ ಯುದ್ಧ ಕೊನೆಗೊಂಡ ನಂತರ, ಯುದ್ಧಾನಂತರ ಬೆಳೆದು ಬಂದ ಅನೇಕ ಸಮರಶೀಲ ಸಾಮೂಹಿಕ ಹೋರಾಟಗಳಿಗೆ ಪಕ್ಷ ನಾಯಕತ್ವ ನೀಡಿತು.
ಈ ಅವಧಿಯಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಸಮರಶೀಲ ಹೋರಾಟಗಳಿಂದ ಪಕ್ಷವು ಸ್ವಲ್ಪ ಮಟ್ಟಿನ ಒಂಟಿತನವನ್ನು ಅನುಭವಿಸಿತಾದರೂ, ಯುದ್ಧ ಸನ್ನಿವೇಶದಿಂದಾಗಿ ಕಷ್ಟವನ್ನು ಎದುರಿಸಿದ ಜನರ ಮಧ್ಯೆ ಮಾಡಿದ ಕೆಲಸವು ಹೊಸ ಪ್ರದೇಶಗಳಲ್ಲಿ ಹೊಸ ಜನವಿಭಾಗಗಳೊಂದಿಗೆ ಸಂಬಂಧಗಳನ್ನು ಬೆಸೆಯುವಲ್ಲಿ ಪಕ್ಷಕ್ಕೆ ಸಹಾಯಕವಾಯಿತು. ಬೆಲೆ ಏರಿಕೆ ಮತ್ತು ಆಹಾರ ಕೊರತೆಗಳ ವಿರುದ್ಧದ ಹೋರಾಟ, ಕಾಳಸಂತೆಕೋರರು ಮತ್ತು ಕಳ್ಳದಾಸ್ತಾನಿನ ವಿರುದ್ಧ ಹಾಗೂ ಅಗತ್ಯ ವಸ್ತುಗಳ ಕೊರತೆಯ ವಿರುದ್ಧದ ಹೋರಾಟಗಳನ್ನು ಪಕ್ಷದ ಘಟಕಗಳು ನಿರಂತರವಾಗಿ ನಡೆಸಿದವು; ಅವುಗಳಲ್ಲಿ ಕೇರಳದ ಮಲಬಾರ್ ಪ್ರದೇಶಗಳಲ್ಲಿ ನಡೆದ ಹೋರಾಟ ಉತ್ತಮ ಉದಾಹರಣೆ. ಬಂಗಾಳದಲ್ಲಿ, ೧೯೪೩ರ ಭೀಕರ ಬರಗಾಲದ ಸಂದರ್ಭದಲ್ಲಿ ಕಮ್ಯುನಿಸ್ಟರು ಕೈಗೊಂಡ ಪರಿಹಾರ ಕಾರ್ಯಗಳು ವಿವಿಧ ಜನವಿಭಾಗಗಳೊಂದಿಗೆ ಸಖ್ಯ ಬೆಳೆಸಲು ಪಕ್ಷಕ್ಕೆ ದೊಡ್ಡ ರೀತಿಯಲ್ಲಿ ಸಹಾಯ ಒದಗಿಸಿದವು.
ಜನರ ನಡುವಿನ ಕಮ್ಯುನಿಸ್ಟ್ ಪಕ್ಷದ ಕೆಲಸಕಾರ್ಯಗಳು ಮತ್ತು ಅದರ ಸಾಮ್ರಾಜ್ಯಶಾಹಿ-ವಿರೋಧಿ ನಿಲುವು ಅಂತಿಮವಾಗಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದವರನ್ನು ಹಾಗೂ ನೇತೃತ್ವ ವಹಿಸಿದ್ದವರನ್ನೂ ಪಕ್ಷದತ್ತ ಆಕರ್ಷಿಸಿದವು. ಅರುಣಾ ಅಸಫ್ ಅಲಿಯಂತಹ ನಾಯಕರು ಪಕ್ಷವನ್ನು ಸೇರಿದರು.
ತಪ್ಪು ತಿಳುವಳಿಕೆಯ ಹೊರತಾಗಿಯೂ, ಪಕ್ಷವು ಬ್ರಿಟಿಷ್ ಆಳರಸರೊಂದಿಗೆ ಎಂದಿಗೂ ಶಾಮೀಲಾಗಲಿಲ್ಲ. ಲಂಡನ್ನಲ್ಲಿದ್ದ ಗೃಹ ಕಾರ್ಯದರ್ಶಿಗೆ ಸೆಪ್ಟೆಂಬರ್ ೨, ೧೯೪೨ರಲ್ಲಿ ಭಾರತದಿಂದ ಗೃಹ ಇಲಾಖೆಯು ಕಳಿಸಿದ ವರದಿಯು ಹೀಗೆ ಹೇಳಿತ್ತು: ಸಿಪಿಐ ಸದಸ್ಯರ ನಡವಳಿಕೆಗಳು ಯಾವಾಗಿನಂತೆ ಬಹಳ ಸ್ಪಷ್ಟವಾಗಿದ್ದವು, ಅವರೆಲ್ಲರೂ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿಗಳಾಗಿಯೇ ಇದ್ದಾರೆ. ಅಂದಿನ ಬ್ರಿಟಿಷ್ ಸರ್ಕಾರವು ಸೆಪ್ಟೆಂಬರ್ ೨೦, ೧೯೪೩ಲ್ಲಿ ಸಿದ್ಧಪಡಿಸಿದ ಮತ್ತೊಂದು ಗುಪ್ತ ವರದಿಯ ಪ್ರಕಾರ: ಮೂಲತಃ ಸಿಪಿಐ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಅಂತರ್ ರಾಷ್ಟ್ರೀಯವಾದದ ಮಾತುಗಳನ್ನು ಆಡುತ್ತಿದ್ದರೂ, ಅದು ಭಾರತದ ವಿಮೋಚನೆಗೆ ಹೋರಾಡುತ್ತಿದೆ; ಅದರ ಬಹುಪಾಲು ಸದಸ್ಯರು ಅದರ ತೆಕ್ಕೆಗೆ ಬಂದಿದ್ದೇ ಅದು ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಬದ್ಧವಾಗಿದೆಯೆಂದು.
ಕನ್ನಡಕ್ಕೆ: ಟಿ.ಸುರೇಂದ್ರ ರಾವ್