ಕೊರೊನ ಲಾಕ್‌ ಡೌನಿನ ನಡುವೆಯೂ ಜಮ್ಮು-ಕಾಶ್ಮೀರಕ್ಕೆ ನೆಲಸಿಕೆ ಕಾಯ್ದೆಯ ಅವಮಾನ

ದೇಶಾದ್ಯಂತ ಕೊರೊನ ವೈರಸ್‍ ವಿರುದ್ಧ ಹೋರಾಟ ನಡೆಯುತ್ತಿರುವಾಗ, ಅದಕ್ಕಾಗಿ ಲಾಕ್‍ಡೌನ್‍ ಹಾಕಿ ಎಲ್ಲ ಗಮನವನ್ನೂ ಕೇಂದ್ರೀಕರಿಸಿರುವಾಗ, ಅದರ ನಡುವೆಯೇ ಕೇಂದ್ರ ಗೃಹ ಮಂತ್ರಾಲಯ ಇದ್ದಕ್ಕಿದ್ದಂತೆ ‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನೆಲಸಿಕೆ ಕಾಯ್ದೆ’ ತಂದಿದೆ. ಇದು ಸ್ಥಳೀಯರಿಗೆ ನೌಕರಿಗಳಲ್ಲಿ ಅವಕಾಶಗಳನ್ನು ಕಡಿತ ಮಾಡುವ ಮೂಲಕ ಅವಮಾನ ಮಾಡಿದೆ, ಮೋಸ ಮಾಡಿದೆ ಎಂದು ರಾಜ್ಯದಲ್ಲಿ ಸಕ್ರಿಯವಾಗಿರುವ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಬಲವಾಗಿ ಖಂಡಿಸಿವೆ.

ಕಲಮು 370ರ ರದ್ಧತಿಯ ನಂತರ ಕೇಂದ್ರದ ಆಳುವ ಪಕ್ಷದ ಆಶೀರ್ವಾದದೊಂದಿಗೆ ರಚನೆಯಾಗಿದೆ ಎಂದು ಗುರುತಿಸಲ್ಪಟ್ಟಿರುವ ‘ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಾರ್ಟಿ’  ‍ಕೂಡ, ಉದ್ಯೋಗ ಮತ್ತು ತಮ್ಮ ಇತರ ಹಕ್ಕುಗಳು ಸುರಕ್ಷಿತವಾಗಿರುತ್ತವೆ ಎಂಬ ಜನರ(ತಮ್ಮ?) ನಂಬಿಕೆಗೆ ವಂಚನೆಯಾಗಿದೆ ಎಂದು ಖೇದ ವ್ಯಕ್ತಪಡಿಸಬೇಕಾಗಿ ಬಂದಿದೆ. 15 ದಿನಗಳ ಹಿಂದೆಯಷ್ಟೇ  ಕೇಂದ್ರ ಗೃಹಮಂತ್ರಿಗಳೂ ತಮ್ಮನ್ನು ಭೇಟಿಯಾದ ಈ ಪಕ್ಷದ ಉನ್ನತ ನಿಯೋಗಕ್ಕೆ, ಬೇರೆ ರಾಜ್ಯಗಳಿಗಿಂತ ಉತ್ತಮವಾದ ಒಂದು ನೆಲಸಿಕೆ(ಡೊಮಿಸೈಲ್) ಕಾಯ್ದೆಯನ್ನು ತರುವುದಾಗಿ ಆಶ್ವಾಸನೆ ನೀಡಿದ್ದರಂತೆ!

ಇದು ಇನ್ನೊಂದು ದೊಡ್ಡ ಮೋಸ ಎಂದು ಸಿಪಿಐ(ಎಂ)ನ ಹಿರಿಯ ಮುಖಂಡ ಮಹಮ್ಮದ್ ಯುಸುಫ್‍ ತರಿಗಾಮಿ ಹೇಳಿದ್ದಾರೆ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಕಲಮು 370ನ್ನು ನಿಷ್ಪ್ರಯೋಜಕಗೊಳಿಸಿದ ಮೇಲೆ ತಮ್ಮ ಉದ್ಯೋಗಗಳು ಮತ್ತು ಭೂಮಿಯನ್ನೂ ಹೊರಗಿನವರಿಗೆ ಬಿಟ್ಟುಕೊಡಬೇಕಾದೀತು ಎಂಬ  ರಾಜ್ಯದ ನಿವಾಸಿಗಳ ಭಯವನ್ನು ಈ ಕಾಯ್ದೆ ಇನ್ನಷ್ಟು ಹೆಚ್ಚಿಸಿದೆ  ಎಂಧು ಅವರು ಹೇಳಿದ್ದಾರೆ.

ಹೊಸ ಆದೇಶದ ಪ್ರಕಾರ ನಾಲ್ಕನೇ ಮಟ್ಟದ ವರೆಗಿನ ಉದ್ಯೋಗಗಳಿಗೆ ಮಾತ್ರವ ಡೊಮಿಸೈಲ್(ನೆಲಸಿಕೆ) ಪ್ರಮಾಣ ಪತ್ರಗಳು ಬೇಕು, ಇತರ ಗೆಜೆಟೆಡ್‍ ಮತ್ತು ನಾನ್‍ ಗೆಜೆಟೆಡ್ ‍ಹುದ್ದೆಗಳಿಗೆ ಅದರ ಅಗತ್ಯವಿಲ್ಲ, ಅಂದರೆ ಕೆಲವು ಸಮಯದ ನಂತರ ಇಂತಹ ಹುದ್ದೆಗಳಲ್ಲಿ ಬಹುಪಾಲು ಹೊರಗಿವರೇ ಇರುತ್ತಾರೆ.  ಈ ಕಾಯ್ದೆಯಿಂದಾಗಿ  ಐದು ವರ್ಷಗಳ ನಂತರ ಭದ್ರತಾ ಪಡೆಗಳು ಮತ್ತು ಇತರ ಕೇಂದ್ರ ಸರಕಾರದ ನೌಕರರ ಕುಟುಂಬಗಳು ಇಲ್ಲಿಯ ನೆಲಸುವಂತಾಗಬಹುದು.

ಜಮ್ಮ ಮತ್ತು ಕಾಶ್ಮೀರದಲ್ಲಿ ಈಗಾಗಲೇ ನಿರುದ್ಯೋಗ ದರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ಈ ಕಾಯ್ದೆಯ ನಂತರ ಅವರಿಗೆ ಮಾತ್ರವೇ ತೆರೆದಿದ್ದ ಕೆಲವೇ ಹುದ್ದೆಗಳು ಕೂಡ ಅವರಿಗೆ ದೊರೆಯದಂತಾಗುತ್ತದೆ ಎಂದು ತರಿಗಾಮಿ ಹೇಳಿದ್ದಾರೆ.

ಈಗಿನ ಸನ್ನಿವೇಶದಲ್ಲಿ ಸರಕಾರ ಜೈಲುಗಳಲ್ಲಿ ಕೊಳೆಯುತ್ತಿರುವ ಎಲ್ಲ ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಿ ಒಂದು ಸಂವಾದವನ್ನು ಏರ್ಪಡಿಸಬೇಕಾಗಿತ್ತು, ಬದಲಿಗೆ ಅದು ಇಂತಹ ಕಾಯ್ದೆಯನ್ನು ತಂದಿದೆ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *