ಆರ್ಥಿಕ ರಂಗ ವಿಫಲತೆ ಮುಚ್ಚಿಕೊಳ್ಳಲು ಕೇಂದ್ರೀಕರಣ -ಕೊವಿಡ್-19ರ ಸಮರ ದುರ್ಬಲಗೊಳಿಸುವ ಯತ್ನ

ಕೇಂದ್ರ ಸಂಪುಟ ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ಯೋಜನೆ(ಎಂಪಿಎಲ್‌ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. 2020-21 ಮತ್ತು 2021-22ಕ್ಕೆ ಇದರ ಮೊತ್ತ 7900 ಕೋಟಿ ರೂ. ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಇದನ್ನು ಕೊವಿಡ್-19 ರ ವಿರುದ್ಧ ಸಮರಕ್ಕೆ ಬಳಸಿಕೊಳ್ಳಬಹುದಾಗಿತ್ತು. ಕೊವಿಡ್-19ರ ವಿರುದ್ಧ ಸಮರ ಮುಖ್ಯವಾಗಿ ರಾಜ್ಯಗಳು ಮತ್ತು ಕ್ಷೇತ್ರಗಳ ಮಟ್ಟದಲ್ಲಿ ನಡೆಸಬೇಕಾಗಿದೆ ಎಂಬುದು ಸ್ಪಷ್ಟ. ಆದರೆ ಈಗ ಅದನ್ನು ಅಮಾನತುಗೊಳಿಸುವ ಮೂಲಕ ಸರಕಾರ ಒಂದು ಕ್ಷೇತ್ರದ ವಿಶಿಷ್ಟ ಅಗತ್ಯಗಳಿಗೆ ಬಳಸಬಹುದಾದ ಹಣವು ಸಿಗದಂತೆ ಮಾಡಿದೆ.

ಈ ಹಣವನ್ನು ಭಾರತದ ಕ್ರೋಢೀಕೃತ ನಿಧಿ(ಕನ್ಸೋಲಿಡೇಟೆಡ್ ಫಂಡ್ ಆಫ್ ಇಂಡಿಯಾ)ಕ್ಕೆ ವರ್ಗಾಯಿಸಲು ನಿರ್ಧರಿಸಿರುವುದಾಗಿಯೂ ವರದಿಯಾಗಿದೆ.

ಅಂದರೆ ಈ ನಿರ್ಧಾರವನ್ನು ಕೊವಿಡ್-19ರ ವಿರುದ್ಧ ಸಮರದ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದ್ದರೂ ವಾಸ್ತವವಾಗಿ ಆರ್ಥಿಕ ರಂಗದಲ್ಲಿನ ಕೊರತೆಯನ್ನು ತುಂಬಿಸುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂಬ  ಸಂಗತಿಯತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಗಮನ ಸೆಳೆದಿದ್ದಾರೆ.

ಕೊವಿಡ್-19ರ ಮೊದಲೇ ಈ ಸರಕಾರದ ಧೋರಣೆಗಳು ಅರ್ಥವ್ಯವಸ್ಥೆಯನ್ನು ಪ್ರಪಾತಕ್ಕೆ ತಳ್ಳಲಾರಂಭಿಸಿದ್ದವು. ಆದರೆ ಅದರ ಅಂಕಿ-ಅಂಶಗಳನ್ನು ಸರಕಾರ ಅಡಗಿಸಿಟ್ಟಿತ್ತು. ಅದನ್ನು ಮುಚ್ಚಿಕೊಳ್ಳಲು ಈಗ ಈ ನಿರ್ಧಾರ ಕೈಗೊಂಡಿದೆ. ಇದು ಕೇಂದ್ರೀಕರಣದ ಮತ್ತೊಂದು ಉದಾಹರಣೆ ಕೂಡ. ಇದು ಒಕ್ಕೂಟ ತತ್ವ ಮತ್ತು ಅಭಿವೃದ್ಧಿಗೆ ತದ್ವಿರುದ್ಧವಾದದ್ದು, ಜತೆಗೆ ಇದು ಕೊವಿಡ್-19 ರ ವಿರುದ್ಧ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಯೆಚುರಿ ಹೇಳಿದ್ದಾರೆ.

ಸರಕಾರ ಸತತವಾಗಿ ದೊಡ್ಡ-ದೊಡ್ಡ ಪ್ರತಿಮೆಗಳು. ವೆಚ್ಚದಾಯಕ ವೈಯಕ್ತಿಕ ಪ್ರಚಾರದ ಅಭಿಯಾನಗಳು ಮತ್ತು ಇವೆಂಟ್‌ಗಳಿಗೆ ಸಾರ್ವಜನಿಕ ಹಣವನ್ನು ವೆಚ್ಚ ಮಾಡುತ್ತ ಬಂದಿದೆ, ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ; ಇನ್ನೊಂದೆಡೆಯಲ್ಲಿ ಕಳೆದ ಆರು ವರ್ಷಗಳಿಂದ ಆರೋಗ್ಯಪಾಲನೆ ವಲಯವನ್ನು ಕಡೆಗಣಿಸುತ್ತ ಬಂದಿದೆ. ಇದು ನಮ್ಮ ದೇಶವನ್ನು ಬೃಹತ್ ಬಿಕ್ಕಟ್ಟಿನತ್ತ ಒಯ್ದಿದ್ದು, ಈಗ ಸರಕಾರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸರಕಾರದ ಬಳಿ ಹಣವಿಲ್ಲದಿದ್ದರೆ 20,000 ಕೋಟಿ ರೂ. ವೆಚ್ಚದ ದಿಲ್ಲಿಯ ರಾಜಧಾನಿ ಕ್ಷೇತ್ರವನ್ನು ಸುಂದರಗೊಳಿಸುವ ಹೆಸರಿನ ಸೆಂಟ್ರಲ್ ವಿಸ್ತಾದಂತಹ ಪರಿಯೋಜನೆಗಳನ್ನು ಎತ್ತಿಕೊಳ್ಳುತ್ತಿರುವುದೇಕೆ? ಲಕ್ಷಾಂತರ ಜನಗಳ ಆರೋಗ್ಯಕ್ಕಿಂತ ಇಂತಹ ದುಂದುವೆಚ್ಚಗಳಿಗೆ ಆದ್ಯತೆ ಏಕೆ?

ಬಿಜೆಪಿ ಅಪಾರದರ್ಶಕವಾದ ಚುನಾವಣಾ ಬಾಂಡುಗಳಿಂದ ಅಪಾರ ನಿಧಿ ಸಂಗ್ರಹಿಸಿದೆ. ಅವನ್ನೆಲ್ಲ ಈ ಬಿಕ್ಕಟ್ಟಿನ ಸಮಯದಲ್ಲಿ ಸರಕಾರಕ್ಕೆ ವರ್ಗಾಯಿಸುತ್ತಿಲ್ಲ  ಏಕೆ ಎಂದು ಯೆಚುರಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *