ರಾಜ್ಯ ಸರ್ಕಾರವು ನಿರಂತರವಾಗಿ ಬದಲಾಯಿಸುತ್ತಿರುವ ಕ್ರಮಗಳೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಪರಿಹಾರವನ್ನು ನೀಡಲು ಅಡ್ಡಿಯಾಗುತ್ತಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸಿದೆ.
ಲಾಕ್ ಡೌನ್ ಆರಂಭವಾದಾಗ ಊರಿಗೆ ಹೋಗಲು ಬಯಸಿದವರನ್ನು ಊರಿಗೆ ಹೋಗಲು ಬಿಡಲಿಲ್ಲ. ಆನಂತರ ಹೋಗುವವರು ಹೋಗಬಹುದು ಎಂದು ಮೊದಲ ಗೊಂದಲ ಸೃಷ್ಟಿ ಮಾಡಿತು.
ಆನಂತರ ಇಂದಿರಾ ಕ್ಯಾಂಟೀನ್ ಗಳಲ್ಲಿ ದಿನದ ಮೂರು ಹೊತ್ತು ಉಚಿತ ಆಹಾರ ನೀಡುವುದಾಗಿ ಹೇಳಿ ಒಂದೇ ದಿನದಲ್ಲಿ ಅದನ್ನು ಕುಂಟು ನೆಪ ನೀಡಿ ನಿಲ್ಲಿಸಿತು. ಮತ್ತೆ ಇಂದಿರಾ ಕ್ಯಾಂಟೀನಲ್ಲಿ ಪ್ಯಾಕೇಟ್ ಊಟ ನೀಡಲು ಪ್ರಾರಂಭಿಸಿ ಇತ್ತೀಚೆಗೆ ಅದನ್ನು ನಿಲ್ಲಿಸಿ ಬಿಟ್ಟಿತ್ತು.
ಈ ನಡುವೆ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಅಸಂಘಟಿತರಿಗೆ ಉಚಿತ ಆಹಾರ ಮತ್ತು ಫುಡ್ ಹ್ಯಾಂಪರ್ಸ್ ನೀಡಲು ಕಳೆದ ಒಂದು ವಾರದಿಂದ ಅಗತ್ಯ ಮೂಲ ಸೌಕರ್ಯಗಳನ್ನು ಸನ್ನದ್ದುಗೊಳಿಸಿಕೊಂಡಿತ್ತು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಣವನ್ನು ಅದಕ್ಕೆ ವಿನಿಯೋಗಿಸಿತ್ತು. ಸುಸಜ್ಜಿತ ಸಹಾಯವಾಣಿ ಕೇಂದ್ರ ಮತ್ತು ಆಹಾರ ತಯಾರಿಕೆಗೆ ಕ್ರಮ ಮತ್ತು ಒಂದು ಲಕ್ಷ ಫುಡ್ ಹ್ಯಾಂಪರ್ಸ್ಗಳನ್ನು ಸಿದ್ಧಪಡಿಸಿಕೊಂಡಿತ್ತು. ದಾಸೋಹ 2020 ಉಚಿತ ಆಹಾರ ವಿತರಣೆಗೆ ಕ್ರಮ ವಹಿಸಿ ಅದರ ಉಧ್ಫಾಟನೆಯನ್ನು ಕಾರ್ಮಿಕ ಸಚಿವರು ನೆರೆವೇರಿಸಿದ್ದರು. ಉಚಿತ ಸಿದ್ದ ಆಹಾರ ಮತ್ತು ಫುಡ್ ಹ್ಯಾಂಪರ್ಸ್ ವಿತರಣೆಯನ್ನು ಸಹಾ ಆರಂಭಿಸಲಾಗಿತ್ತು. ಅದಕ್ಕಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಸ್ವಯಂ ಸೇವಕರು, ಕಾರ್ಮಿಕ ಅಧಿಕಾರಿಗಳು ಮತ್ತು ನಾಗರೀಕ ಪ್ರತಿನಿಧಿಗಳನ್ನು ಒಳಗೊಂಡು 198 ವಾರ್ಡ್ ಸಮಿತಿಗಳನ್ನು ರಚಿಸಲಾಗಿತ್ತು.
ಕೆಲಸ ಆರಂಭವಾದೊಡನೆ , ಫುಡ್ ಹ್ಯಾಂಪರ್ಸ್ಗಳ ವಿತರಣೆ ಆರಂಭವಾದ ಒಂದೇ ದಿನದಲ್ಲಿ ವಿತರಣೆ ಕಾರ್ಯವನ್ನು ಬಿಬಿಎಂಪಿಗೆ ವಹಿಸಲು ರಾಜ್ಯ ಸಕಾ೯ರವು ದಿಡೀರನೆ ತೀರ್ಮಾನ ಮಾಡಿರುವುದು ರಾಜಕೀಯ ಪ್ರೇರಿತ ಕ್ರಮವಾಗಿದೆ. ತನ್ನ ರಾಜಕೀಯ ಹಿತಾಸಕ್ತಿಗಾಗಿ ಪರಿಹಾರ ಕಾರ್ಯವನ್ನೆ ಬಲಿ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ತೀರ್ವವಾಗಿ ಖಂಡಿಸಿದೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕರಿಗೆ ಸಮರ್ಪಕ ಹಾಗೂ ಸಮರ್ಥ ಪರಿಹಾರ ನೀಡುವುದಕ್ಕಿಂತ ತನ್ನ ರಾಜಕೀಯ ಹಿತಾಸಕ್ತಿಯೆ ಪ್ರಧಾನವಾಗಿದೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಖಂಡಿಸಿದೆ.
ಕಾರ್ಮಿಕ ಇಲಾಖೆಯ ಅದರಲ್ಲೂ ಕಲ್ಯಾಣ ಮಂಡಳಿ ಹಣದಲ್ಲಿ ನೀಡಲಾಗುವ ಪರಿಹಾರ ಕಾರ್ಯವು ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಲ್ಲೆ ಸಮರ್ಪಕವಾಗಿ ನಡೆಸಲು ರಾಜ್ಯ ಸರ್ಕಾರವು ಅನುವುಗೊಳಿಸಬೇಕು. ಅದಕ್ಕಾಗಿ ಬಿಬಿಎಂಪಿ ಮೂಲಕವೇ ವಿತರಿಸಬೇಕೆಂಬ ತೀರ್ಮಾನವನ್ನು ಕೊಡಲೆ ಹಿಂಪಡೆಯಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.