ಭಂಡ ಟ್ರಂಪ್ ಬೆದರಿಕೆಗೆ ತಲೆಬಾಗಿದ ಮೋದಿ ಸರಕಾರ
ಮೋದಿ ಸರಕಾರ ಮಲೇರಿಯಾದ ಜೆನೆರಿಕ್(ಸಾರ್ವತ್ರಿಕ) ಔಷಧಿ ಹೈಡ್ರೋ ಕ್ಸೈಕ್ಲೋರೋಕ್ವಿನ್(ಹೆಚ್ಸಿ ಕ್ಯು) ರಫ್ತಿನ ಮೇಲೆ ಹಾಕಿದ್ದ ನಿಷೇಧವನ್ನು ತೆಗೆದಿರುವುದಾಗಿ ಏಪ್ರಿಲ್ 7ರಂದು ಪ್ರಕಟಿಸಿದೆ. ಇದಕ್ಕೆ ಮೊದಲು ದೇಶದಲ್ಲಿ ಕೊವಿಡ್-19 ಹಾವಳಿಯ ಸೂಚನೆ ಜನವರಿ ತಿಂಗಳ ಕೊನೆಯಲ್ಲೇ ಸ್ಪಷ್ಟವಾಗಿ ಕಾಣಬಂದರೂ ಅಗತ್ಯ ಔಷಧಿಗಳು ಮತ್ತು ವೈದ್ಯಕೀಯ ಪರಿಕರಗಳ ರಫ್ತನ್ನು ಸರಕಾರ ನಿಲ್ಲಿಸಲಿಲ್ಲ ಎಂಬ ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ಮಾರ್ಚ್ 25ರಂದು ಹೆಚ್ಸಿಕ್ಯು ಔಷಧಿಯನ್ನು ಕೂಡ ರಫ್ತಿಗೆ ನಿರ್ಬಂಧಗಳಿರುವ ಪಟ್ಟಿಯಲ್ಲಿ ಸೇರಿಸಲಾಯಿತು.
ಈಗ ಇದು ಕೊವಿಡ್-19ಕ್ಕೆ ಒಂದು ತಡೆಗಟ್ಟುವ ಔಷಧಿಯಾಗಬಹುದು ಎಂದು ಕೆಲವು ಸಂಶೋಧಕರು, ಡಾಕ್ಟರುಗಳು ಭಾವಿಸುತ್ತಿದ್ದಾರೆ. ಇದು ಇನ್ನೂ ಸಾಬೀತಾಗಿಲ್ಲ. ಆದರೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೂಡ ಇದನ್ನು ಸೋಂಕು ತಡೆ ಔಷಧಿಯಾಗಿ ಬಳಸಬಹುದು ಎಂಬ ವರದಿಗಳಿವೆ. ಎಪ್ರಿಲ್ 4ರಂದು ಸರಕಾರ ಇದರ ರಫ್ತನ್ನು ಪೂರ್ಣವಾಗಿ ನಿಷೇಧಿಸಿತು.
ಆದರೆ ಕೊವಿಡ್-19 ಹಾವಳಿ ತೀವ್ರವಾಗಿ ಬಾಧಿಸುತ್ತಿರುವ ಅಮೆರಿಕಾದ ಅಧ್ಯಕ್ಷ ಟ್ರಂಪ್ ಇದನ್ನು ತಮ್ಮಲ್ಲಿ ಕೊವಿಡೊ-19ಕ್ಕೆ ಔಷಧಿಯಾಗಿ ಬಳಸುವ ನಿರ್ಧಾರ ಮಾಡಿ, ತಾನು ಮೋದಿಯವರೊಂದಿಗೆ ಮಾತಾಡಿದ್ದೇನೆ, .ಇದರ ರಫ್ತಿನ ಮೇಲೆ ನಿಷೇಧವನ್ನು ಅವರು ತೆಗೆಯುತ್ತಾರೆ, ತೆಗೆಯದಿದ್ದರೆ ಭಾರತ ತಕ್ಕ ಪ್ರತ್ಯುತ್ತರವನ್ನು ಎದುರಿಸಬೇಕಾದೀತು ಎಂದು ವಾಶಿಂಗ್ಟನ್ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಬೆದರಿಸಿರುವುದಾಗಿ ವರದಿಯಾಯಿತು. ಈ ಬೆದರಿಕೆಯ ಕೆಲವೇ ಗಂಟೆಗಳೊಳಗೆ ಮೋದಿ ಸರಕಾರದ ಈ ಪ್ರಕಟಣೆ ಬಂದಿದೆ.
ಈ ಬಗ್ಗೆ ಟಿಪ್ಪಣಿ ಮಾಡುತ್ತ, ಸಿಪಿಐ(ಎಂ) ಪೊಲಿಟ್ಬ್ಯುರೊ, ಹೆಚ್ಸಿಕ್ಯು ಸೇರಿದಂತೆ ಮಹತ್ವದ ಜೆನೆರಿಕ್ ಔಷಧಿಗಳ ರಫ್ತಿನ ಮೇಲಿನ ನಿರ್ಬಂಧಗಳನ್ನು ಸಡಿಲಿಸಬೇಕೆಂಬ ಟ್ರಂಪ್ ಬೆದರಿಕೆ ಕೈ ತಿರುಚುವ ಒಂದು ನೇರ ಪ್ರಯತ್ನ ಎಂದು ಹೇಳಿದೆ. ಮೋದಿ ಸರಕಾರ ಈ ಭಂಡ ಬ್ಲಾಕ್ಮೇಲ್ ಎದುರು ಮಂಡಿಯೂರಿದೆ, ಇದು ಈ ವೈರಸ್ ಮಹಾಮಾರಿಯ ವಿರುದ್ಧ ನಮ್ಮ ಸಮರದ ಮಹತ್ವದ ಕಾಳಜಿಗಳನ್ನು ಶಿಥಿಲಗೊಳಿಸುತ್ತದೆ, ಅಮೆರಿಕಾದ ಹಿತಾಸಕ್ತಿಗಳಿಗೆ ಮೋದಿ ಸರಕಾರ ಶರಣಾಗಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ಅದು ಟೀಕಿಸಿದೆ.
ತೀರಾ ಇತ್ತಿಚಿನವರೆಗೂ ನಮ್ಮ ಸರಕಾರ ಶಸ್ತ್ರಚಿಕಿತ್ಸೆಯ ಮುಖಗವಸು, ಕೈಗವಸು ಮುಂತಾದ ಎಲ್ಲ ರೀತಿಯ ವೈಯಕ್ತಿಕ ಸುರಕ್ಷಾ ಪರಿಕರಗಳ ರಫ್ತಿನಲ್ಲಿ ಯಾವುದೇ ಯೋಜನೆಯಿಲ್ಲದೆ ಬೇಕಾಬಿಟ್ಟಿ ರಫ್ತುಗಳಿಗೆ ಅವಕಾಶ ಕೊಟ್ಟಿತ್ತು. ಅದು ಈಗ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ನಮ್ಮ ಆರೋಗ್ಯ ಕಾರ್ಯಕರ್ತರ ಸುರಕ್ಷೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ.
ಹೆಚ್ಸಿಕ್ಯು ರಫ್ತಿನ ಮೇಲೆ ನಿಷೇಧದ ಮೊದಲು ಬೇರೆ ಹಲವು ದೇಶಗಳಿಂದಲೂ ಅದಕ್ಕೆ ಬೇಡಿಕೆಯಿತ್ತು. ಈಗ ಈ ಔಷಧಿಯನ್ನು ಮತ್ತು ಇತರ ಮಹಾಮಾರಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಭಾರತ ಆ ದೇಶಗಳಿಗೆ ಕಳಿಸದೆ ಕೇವಲ ಅಮೆರಿಕಾಕ್ಕೆ ಮಾತ್ರ ಕಳಿಸುವಂತೆ ಬೆದರಿಸುವ ಹೊಲಸು ಪ್ರಯತ್ನ ಅಮೆರಿಕಾದ ಅಧ್ಯಕ್ಷ ಟ್ರಂಪ್ರದ್ದು.
ಮಹಾಮಾರಿಯಿಂದ ಒಂದು ದೊಡ್ಡ ಬೆದರಿಕೆಯನ್ನು ಎದುರಿಸುತ್ತಿರುವ ನಮ್ಮ ಜನಗಳ ಆರೋಗ್ಯದ ಪರಮ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಸಿಕ್ಯು ಔಷಧಿಯ ರಫ್ತಿನ ಮೇಲೆ ನಿಷೇದ ತೆಗೆಯುವ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.