ಜನವರಿ ತಿಂಗಳಲ್ಲೇ ವಿಶ್ವ ಆರೋಗ್ಯ ಸಂಘಟನೆ ಕೊವಿಡೊ-19 ಒಂದು ಮಹಾಮಾರಿ ಎಂದು ಘೋಷಿಸಿ ಸರಕಾರಗಳು ಕೈಗೊಳ್ಳಬೇಕಾದ ಕ್ರಮಗಳೇನು ಎಂದು ತಿಳಿಸಿತ್ತು. ಫೆಬ್ರುವರಿ ತಿಂಗಳಿಂದಲೇ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಮತ್ತು ಇತರ ಪ್ರತಿಪಕ್ಷಗಳ ಮುಖಂಡರು ಈ ಕುರಿತು ಸರ್ವ ಪಕ್ಷ ಸಭೆ ಕರೆಯುವಂತೆ ಕೇಳುತ್ತ ಬಂದಿದ್ದಾರೆ. ಇದು ಇಡೀ ದೇಶದ ಸಮರ. ಆದ್ದರಿಂದ ಪ್ರತಿಪಕ್ಷಗಳೊಡನೆ ವಿಚಾರ ವಿನಿಮಯ ಮಾಡಿಕೊಂಡು ಸೂಕ್ತ ನಿರ್ದೇಶನಗಳನ್ನು ರೂಪಿಸಲು ಸಾಧ್ಯವಾಗಬೇಕಿತ್ತು. ಆದರೆ ಪ್ರಧಾನ ಮಂತ್ರಿಗಳು ಮತ್ತು ಆಳುವ ಪಕ್ಷ ನಮಸ್ತೆ ಟ್ರಂಪ್ ಮುಂತಾದವುಗಳಲ್ಲೇ ಮಗ್ನವಾಗಿದ್ದರು.
ಕೊನೆಗೂ ಸುಮಾರು ಎರಡೂವರೆ ತಿಂಗಳ ನಂತರವೇ ಪ್ರಧಾನ ಮಂತ್ರಿಗಳು ಕೆಲವು ಪ್ರತಿಪಕ್ಷಗಳ ಮುಖಂಡರೊಡನೆ, ಗೃಹಮಂತ್ರಿಗಳು ಇನ್ನು ಕೆಲವರೊಡನೆ ಮತ್ತು ಸಂಸದಿಯ ವ್ಯವಹಾರಗಳ ಮಂತ್ರಿ ಮತ್ತೆ ಕೆಲವು ಪ್ರತಿಪಕ್ಷಗಳ ಮುಖಂಡರೊಡನೆ ಅಲ್ಪಸ್ವಲ್ಪ ಮಾತನಾಡಿದ್ದು. ಎಪ್ರಿಲ್ 8 ರಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸದನ ಮುಖ್ಯಸ್ಥರೊಂದಿಗೆ ಡಿಜಿಟಲ್ ಸಮ್ಮೇಳನ ನಡೆಯಿತು. ಆದರೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಇಂತಹ ಸಮ್ಮೇಳನವನ್ನು ಇದುವರೆಗೂ ನಡೆಸಿಲ್ಲ.
ಎಪ್ರಿಲ್ 8 ರಂದು ನಡೆದ ಸದನ ಮುಖಂಡರುಗಳ ಡಿಜಿಟಲ್ ಸಮ್ಮೇಳನದಲ್ಲಿ ಸಿಪಿಐ(ಎಂ) ಪರವಾಗಿ ಎಳಮಾರಂ ಕರೀಮ್ ಹಲವು ಅಂಶಗಳನ್ನು ಎತ್ತಿದರು.
ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರಕಾರದ ವಿಳಂಬದ ಬಗ್ಗೆ ಖೇದ ವ್ಯಕ್ತಪಡಿಸುತ್ತ ಅವರು ನಾಗರಿಕರಲ್ಲಿ ಆರ್ಥಿಕವಾಗಿ ಅಸ್ಥಿರತೆ ಬಾರದಂತೆ ತಡೆಯಲು ಮತ್ತು ಸೋಂಕಿನ ಹರಡಿಕೆಯನ್ನು ತಡೆಯಲು ಕೈಗೊಳ್ಳಬೇಕಾದ, ಈಗಾಗಲೇ ವಿವಿಧ ಸಂದರ್ಭಗಳಲ್ಲಿ ಸಿಪಿಐ(ಎಂ) ಮುಂದಿಟ್ಟ ಪ್ರಸ್ತಾಪಗಳನ್ನು ಸ್ಥೂಲವಾಗಿ ಹೇಳಿದರು.
ಲಾಕ್ಡೌನಿನ ನಂತರ ಉದ್ಯೋಗ ನಷ್ಟ, ಸಂಬಳ ಕಡಿತ ಅಥವ ರಿಟ್ರೆಂಚ್ಮೆಂಟ್ ಯಾವುದೇ ವಲಯದಲ್ಲಿ ನಡೆಯದಂತೆ ಖಾತ್ರಿಪಡಿಸಬೇಕು, ತಕ್ಷಣವೇ ಕಟ್ಟಡ ನಿರ್ಮಾಣ ವಲಯದಲ್ಲಿ ಕಾಮಗಾರಿಗಳು ಸೇರಿದಂತೆ ಕೈಗಾರಿಕಾ ಚಟುವಟಿಕೆಗಳನ್ನು ಪುನರಾರಂಭಗೊಳಿಸಿ ಲಕ್ಷಾಂತರ ಕಾರ್ಮಿಕರು, ನೌಕರರು, ಮುಖ್ಯವಾಗಿ ವಲಸೆ ಕಾರ್ಮಿಕರನ್ನು ಉಳಿಸಬೇಕು, ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಬಂಡವಾಳ ಹೂಡಿಕೆಯಾಗುವಂತೆ ಮಾಡಬೇಕು, ಕೃಷಿ ವಲಯಕ್ಕೆ ತುರ್ತು ಗಮನವನ್ನು ಕೊಡಬೇಕು, ಕೆಲಸ ಕಳಕೊಂಡು ವಾಪಾಸು ಬಂದಿರುವ ಅನಿವಾಸಿ ಭಾರತೀಯರಿಗೆ ಉದ್ಯೋಗ ಪ್ಯಾಕೇಜನ್ನು ಪ್ರಕಟಿಸಬೇಕು, ಎಲ್ಲ ಜಿಲ್ಲೆಗಳಲ್ಲಿ ತಕ್ಷಣವೇ ಸರಕಾರೀ ವೈದ್ಯಕೀಯ ಕಾಲೇಜುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರಂಭಿಸಬೇಕು ಮತ್ತು ಲಾಕ್ಡೌನಿನಿಂದಾಗಿ ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕೊಕೊಂಡಿರುವ ವಲಸೆ ಕಾರ್ಮಿಕರು ತಂತಮ್ಮ ಊರುಗಳಿಗೆ ಮರಳಲು ಸಾಧ್ಯವಾಗುವಂತೆ ವಿಶೇಷ ರೈಲುಗಳನ್ನು ಓಡಿಸಬೇಕು ಮುಂತಾದ ಸೂಚನೆಗಳನ್ನು ಕರೀಮ್ ಅವರು ನೀಡಿದರು.
ನಿರ್ದಿಷ್ಟವಾಗಿ ಅವರು ಮುಂದಿಟ್ಟ ಕೇರಳ ಕುರಿತಾದ ಬೇಡಿಕೆಗಳು ಇತರ ರಾಜ್ಯಗಳಿಗೂ ಪ್ರಸ್ತುತವಾದಂತವುಗಳು. ಜಿಎಸ್ಟಿ ಪರಿಹಾರಗಳನ್ನು, 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ರೆವಿನ್ಯೂ ಕೊರತೆ ಅನುದಾನದ 50ಶೇ. ವನ್ನು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಿಗೆ ಶಿಫಾರಸು ಮಾಡಿರುವ ಅನುದಾನಗಳನ್ನು ಕೂಡಲೆ ಬಿಡುಗಡೆ ಮಾಡಬೇಕು, ರಾಜ್ಯ ಅನಾಹುತ ಪರಿಹಾರ ನಿಧಿಯಿಂದ ಹಣವನ್ನು ರಾಜ್ಯ ಸರಕಾರಗಳು ತಂತಮ್ಮ ರಾಜ್ಯದ ಅಗತ್ಯಗಳಿಗೆ ಅನುಗುಣವಾಗಿ ಖರ್ಚು ಮಾಡಲು ವಿಶೇಷ ಅವಕಾಶ ನೀಡಬೇಕು ಮುಂತಾದ ಬೇಡಿಕೆಗಳನ್ನು ಅವರು ಮುಂದಿಟ್ಟರು.