“ಸಾಮಾಜಿಕ ಸೌಹಾರ್ದತೆಯೊಂದಿಗೆ ದೈಹಿಕ ಅಂತರವೇ ಹೊರತು ಸಾಮಾಜಿಕ ಅಂತರ ಅಲ್ಲ”
ಎಡಪಕ್ಷಗಳು ಎಪ್ರಿಲ್ 14ರಂದು ಸಂಜೆ 5 ಗಂಟೆಗೆ ಲಾಕ್ ಡೌನ್ ನಿರ್ಬಂಧಗಳ ಮಿತಿಗಳೊಳಗೆ ಈ ಕೆಳಗಿನ ವಿಷಯಗಳ ಮೇಲೆ ಪ್ರತಿಜ್ಞೆಯನ್ನು ಕೈಗೊಂಡು ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕು ಎಂದು ಕರೆ ನೀಡಿವೆ:
1. ನಮ್ಮ ಸಂವಿಧಾನವನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು;
2. ಲಾಕ್ ಡೌನಿನ ಅಡಿಯಲ್ಲಿ ಸಂಕಟಪಡುತ್ತಿರುವ ಬಡವರು ಮತ್ತು ನಿರ್ಗತಿಕರಿಗೆ ತಕ್ಷಣವೇ ನಗದು ವರ್ಗಾವಣೆ ಮತ್ತು ಆಹಾರ ವಿತರಣೆ ಮಾಡಬೇಕೆಂದು ಆಗ್ರಹಿಸಿ;
3. ಜಾತಿ, ಮತ, ಲಿಂಗ ಅಥವ ವಿಕಲತೆಯ ಭೇದಬಾವಗಳಿಲ್ಲದೆ, ನಮ್ಮ ಜನಗಳ ನಡುವಿನ ಸಾಮಾಜಿಕ ಐಕ್ಯತೆಯ ಬಂಧಗಳನ್ನು ಗಟ್ಟಿಗೊಳಿಸುವುದು; ಲಾಕ್ ಡೌನ್ ನಿರ್ಬಂಧಗಳ ಸಮಯದಲ್ಲಿ ಮಹಾಮಾರಿಯ ವಿರುದ್ಧ ಹೋರಾಟದ ಹೆಸರಿನಲ್ಲಿ ಜೀವ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಪ್ರಹಾರಗಳು ಅಥವ ಅಸ್ಪೃಶ್ಯತೆಯ , ಪಕ್ಷಪಾತದ ಅಭಿವ್ಯಕ್ತಿಗಳು ಸಾಧ್ಯವಾಗಬಾರದು.
ನಮ್ಮ ಕರೆ ಸಾಮಾಜಿಕ ಸೌಹಾರ್ದತೆಯೊಂದಿಗೆ ದೈಹಿಕ ಅಂತರವೇ ಹೊರತು ಸಾಮಾಜಿಕ ಅಂತರ ಅಲ್ಲ.
4. ನಾವು ಈ ಪ್ರತಿಜ್ಞೆಯನ್ನು ಡಾ. ಅಂಬೇಡ್ಕರ್ ಪ್ರೇರೇಪಿಸಿರುವಂತೆ, ಗೊಡ್ಡು ಸಂಪ್ರದಾಯಶರಣತೆ, ಮೂಢನಂಬಿಕೆಗಳು ಮತ್ತು ಪೂರ್ವಾಗ್ರಹಗಳ ವಿರುದ್ದ ಜನಗಳಿಗೆ ಶಿಕ್ಷಣ ನೀಡುವ ಭಾವನೆಯಿಂದ ಕೈಗೊಳ್ಳುತ್ತೇವೆ. ಲಾಕ್ ಡೌನ್ ಅವಧಿಯಲ್ಲಿ ಬದುಕುಳಿಯಲು ಮತ್ತು ಜೀವನಾಧಾರಕ್ಕೆ ನೆರವು ಮತ್ತು ಬೆಂಬಲದ ಅಗತ್ಯವಿರುವವರಿಗೆ ಅವನ್ನು ನೀಡುವುದಕ್ಕಾಗಿ ನಮ್ಮ ಪ್ರತಿಜ್ಞೆ
ಸಾರ್ವಜನಿಕವಾಗಿ ಸಭೆ ಸೇರುವುದು ಅಥವ ಪ್ರತಿಮೆಗಳಿಗೆ ಹೂಮಾಲೆ ಹಾಕುವುದು ಸಾಧ್ಯವಿಲ್ಲವಾದ್ದರಿಂದ, ಜನಗಳು ಈ ಪ್ರತಿಜ್ಞೆಯನ್ನು ಎಪ್ರಿಲ್ 14 ರಂದು ಸಂಜೆ 5 ಗಂಟೆಗೆ ನಿರಪಾಯದ ಮತ್ತು ಅನುಕೂಲಕರ ಸ್ಥಳಗಳಲ್ಲಿ ಕೈಗೊಳ್ಳಬೇಕು ಎಂದು ಸೀತಾರಾಂ ಯೆಚುರಿ, ಡಿ. ರಾಜ, ದೀಪಂಕರ್ ಭಟ್ಟಾಚಾರ್ಯ, ದೇಬಬ್ರತ ಬಿಸ್ವಾಸ್ ಮತ್ತು ಮನೋಜ್ ಭಟ್ಟಾಚಾರ್ಯ, ಅನುಕ್ರಮವಾಗಿ, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂ-ಎಲ್)-ಲಿಬರೇಷನ್, ಎಐಎಫ್ಬಿ ಮತ್ತು ಆರ್ ಎಸ್ ಪಿಯ ಪ್ರಧಾನ ಕಾರ್ಯದರ್ಶಿಗಳು ಜಂಟಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.