ತಮಿಳುನಾಡಿಗೆ ಬರಬೇಕಾಗಿದ್ದ ತ್ವರಿತ ತಪಾಸಣಾ ಕಿಟ್ಗಳೂ ಅಮೆರಿಕಾಕ್ಕೆ ತಿರುಗಿವೆ!
ಹೈಡ್ರೊಕ್ಸೈಕ್ಲೊರೊಕ್ವಿನ್(ಹೆಚ್ಸಿ ಕ್ಯು) ಔಷಧಿಯ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಿಸಿದ್ದು ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರವರ ಬ್ಲಾಕ್ ಮೇಲ್ಗೆ ನಮ್ರವಾಗಿ ತಲೆಬಾಗಿದ್ದಲ್ಲ, ಅದು ಮಾನವೀಯ ಪರಿಗಣೆಯ ಮೇಲೆ ಕೈಗೊಂಡ ಕ್ರಮ ಎಂದು ಸರಕಾರಕ್ಕೆ ಆಪ್ತರಾದ ಕೆಲವರು ಸಮರ್ಥಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂತಹ ಉದಾತ್ತ ವಿಚಾರಗಳಿಗೆ ಅಮೆರಿಕಾದ ಆಳುವ ಮಂದಿಯಿಂದ ಯಾವುದೇ ಸ್ಪಂದನವನ್ನು ನಿರೀಕ್ಷಿಸುವಂತಿಲ್ಲ ಎಂಬುದಕ್ಕೆ ಇಲ್ಲಿದೆ ಹೊಚ್ಚ ಹೊಸ ಸಾಕ್ಷಿ.
ಇದಕ್ಕೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಕೊರಿಯಾ ಯುದ್ಧದ ಸಮಯದ ರಕ್ಷಣಾ ಉತ್ಪಾದನಾ ಕಾಯ್ದೆಯನ್ನು, ಅದರ ವ್ಯಾಪ್ತಿಯನ್ನು ಮೀರಿ ಬಳಸಿದ್ದಾರೆ. ನಮ್ಮ ಆಂತರಿಕ ಬಳಕೆಗೆ ಇವು ನಮಗೆ ಬೇಕು. ಅದನ್ನು ನಾವು ಪಡೆಯಲೇ ಬೇಕು ಎನ್ನುತ್ತ ಅಮೆರಿಕನ್ ಕಂಪನಿಗಳು ಆಂತರಿಕ ಬೇಡಿಕೆಗಳನ್ನು ಪೂರೈಸಬೇಕು ಎಂದು ಆದೇಶಿಸಿದ್ದಾರೆ. ಭಾರತ ಸರಕಾರ ಇದೇ ಕಾರಣ ಕೊಟ್ಟು ಎಪ್ರಿಲ್ ೪ರಿಂದ ಮಹಾಮಾರಿ ನಿರ್ವಹಣೆಗೆ ಸಂಬಂಧಪಟ್ಟ ಎಲ್ಲ ರಫ್ತುಗಳ ಮೇಲೆ ಹಾಕಿದ್ದ ನಿಷೇಧಗಳನ್ನು ಅಮೆರಿಕ ಬಲವಂತದಿಂದ ತೆಗೆಸಿತ್ತು ಎಂಬುದೊಂದು ವ್ಯಂಗ್ಯವೇ ಸರಿ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಚೀನಾದಿಂದ ಭಾರತಕ್ಕೆ ಬರಬೇಕಾಗಿದ್ದ ಕೊರೊನ ತಪಾಸಣಾ ಕಿಟ್ಗಳ ರವಾನೆಯನ್ನು ಅಮೆರಿಕಾದತ್ತ ತಿರುಗಿಸಲಾಗಿದೆ ಎಂಬುದು ಈಗ ಬೆಳಕಿಗೆ ಬಂದಿದೆ.
ಇಂತಹ ವಸಾಹುಶಾಹೀ ಕಾಲದ ಸಮುದ್ರಗಳ್ಳತನಕ್ಕೆ ಬಲಿಯಾಗಿರುವುದು ಭಾರತ ಮಾತ್ರವೇ ಅಲ್ಲ! ತಮ್ಮ ದೇಶಗಳ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲೆಂದು ತರಿಸಿಕೊಳ್ಳುತ್ತಿದ್ದ ಪಿ.ಪಿ.ಇ.ಗಳನ್ನು ಮಧ್ಯದಲ್ಲೇ ಅಡ್ಡಗಟ್ಟಿರುವ ಅಮೆರಿಕಾದ ಈ ಪುಂಟಾಟಿಕೆಯನ್ನು ಜರ್ಮನಿ, ಫ್ರಾನ್ಸ್, ಕೆನಡ, ಬ್ರೆಝಿಲ್ ಮತ್ತು ಬಡ ಬಾರ್ಬಡೋಸ್ ಕೂಡ ತೀಕ್ಷ್ಣವಾಗಿ ತರಾಟೆಗೆ ತಗೊಂಡಿವೆ.
ಅಮೆರಿಕಾ ಕ್ಯೂಬಾದ ಮೇಲೆ ಹೇರಿರುವ ಕ್ರಿಮಿನಲ್ ಆರ್ಥಿಕ ನಿಷೇಧಗಳಿಂದಾಗಿ ಆ ದೇಶಕ್ಕೆ ಅಂತರ್ರಾಷ್ಟ್ರೀಯ ನೆರವು ಸಿಗದಂತೆ ತಡೆದಿರುವುದು ಮಾತ್ರವೇ ಅಲ್ಲ, ಕ್ಯೂಬಾ ಹಲವು ದೇಶಗಳಿಗೆ ಬೇಷರತ್ತಾಗಿ ನೀಡಿರುವ ಔಷಧಿಗಳು, ಡಾಕ್ಟರುಗಳು ಮತ್ತು ಆರೋಗ್ಯ ನೆರವುಗಳನ್ನು ಅವು ಸ್ವೀಕರಿಸದಂತೆಯೂ ತಡೆಗಟ್ಟುತ್ತಿದೆ. ಕ್ಯೂಬಾ ಕೊವಿಡ್ನ್ನು ಬೇರೆ ದೇಶಗಳಿಗಿಂತ ಹೆಚ್ಚು ಯಶಶ್ವಿಯಾಗಿ ಎದುರಿಸಿದೆ ಮಾತ್ರವೇ ಅಲ್ಲ,
ಅಂತರ್ರಾಷ್ಟ್ರೀಯ ವೈದ್ಯಕೀಯ ಸೌಹಾರ್ದತೆಯ ನಿಷ್ಕಳಂಕ ದಾಖಲೆಯನ್ನೂ ಹೊಂದಿದೆ. ಅಮೆರಿಕ ಇರಾನಿನ ಮೇಲೆ ತಾನು ಏಕಪಕ್ಷೀಯವಾಗಿ ಹೇರಿರುವ ನಿರ್ಬಂಧಗಳನ್ನು ಉಲ್ಲೇಖಿಸಿ ಅದಕ್ಕೆ ಕೊಟ್ಟಿರುವ ನೆರವು ತಲುಪದಂತೆ ನಿಲ್ಲಿಸುವ ಕ್ರಿಮಿನಲ್ ಕೆಲಸ ಮಾಡಿದೆ, ಈ ಮೂಲಕ ಇರಾನ್ ಮೇಲೆ ಗಂಭೀರ ಮಾನವೀಯ ಬಿಕ್ಕಟ್ಟನ್ನು ಹೇರಿದೆ, ಅನಗತ್ಯವಾಗಿ ಹಲವು ಸಾವುಗಳು ಇದರಿಂದಾಗಿ ಸಂಭವಿಸುವಂತಾಗಿದೆ.
ಈ ರೀತಿಯಲ್ಲಿ ಸ್ವತಂತ್ರ ದೇಶಗಳ ಸಾರ್ವಭೌಮ ಹಕ್ಕುಗಳನ್ನು ಬುಡಮೇಲು ಮಾಡಲು ಅಮೆರಿಕಾ ಸಂಯುಕ್ತ ಸಂಸ್ಥಾನ ಏಕಪಕ್ಷೀಯವಾಗಿ ಬಲವಂತದ ವಿಧಾನಗಳನ್ನು ಬಳಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಅಮೆರಿಕಾದ ಈ ಮೊಂಡುತನ, ಜಾಗತಿಕ ಮಹಾಮಾರಿಯ ಎದುರು ಸೆಣಸುವಲ್ಲಿ ಅಂತರ್ರಾಷ್ಟ್ರೀಯ ಸಹಕಾರ ಬೇಕೆಂದು ವಿಶ್ವ ಆರೋಗ್ಯ ಸಂಘಟನೆ ಮತ್ತೆ-ಮತ್ತೆ ಮಾಡಿಕೊಳ್ಳುತ್ತಿರುವ ಮನವಿಗಳಿಗೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.
ಮೋದಿ ಸರಕಾರ ಅಮೆರಿಕನ್ ಸಾಮ್ರಾಜ್ಯಶಾಹಿಯ ಈ ಹೊಲಸು ವರ್ತನೆಯಿಂದ ಪಾಟ ಕಲಿಯಬೇಕು ಎಂದಿರುವ ಪೊಲಿಟ್ ಬ್ಯುರೊ, ಅಮೆರಿಕಾವನ್ನು ಆಲಿಂಗಿಸಿಕೊಳ್ಳಲು ಅತ್ಯುನ್ನತ ಆದ್ಯತೆ ನೀಡುವುದರಿಂದ ಮಹಾಮಾರಿಯ ವಿರುದ್ಧ ಹೋರಾಟವನ್ನು ಗಟ್ಟಿಗೊಳಿಸುವಲ್ಲಿ ಭಾರತೀಯ ಜನತೆಗೆ ಯಾವುದೇ ಸಹಾಯ ಅಥವ ಪರಿಹಾರ ಸಿಗಲಾರದು ಎಂದು ಹೇಳಿದೆ.