ರಾಜ್ಯ ಸರ್ಕಾರವು ಸಂಪನ್ಮೂಲಗಳ ಕ್ರೋಡಿಕರಣಕ್ಕೆ ಬಿಡಿಎ ಮೂಲೆ ನಿವೇಶನಗಳನ್ನು ಮತ್ತು ರಾಜ್ಯದ ಇತರೆಡೆಗಳಲ್ಲಿ ಸರ್ಕಾರಿ ನಿವೇಶನಗಳ ಹರಾಜು ಮಾಡಲು ಮುಂದಾಗಿರುವುದು ರಾಜ್ಯದ ಖಜಾನೆ ಖಾಲಿಯಾಗಿರುವುದರ ಮತ್ತು ಸರ್ಕಾರದ ದಿವಾಳಿತನದ ಸಂಕೇತವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಗತ್ಯ ಅನುದಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಕಾರಣವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸಿದೆ.
ಇತ್ತೀಚಿನ ರಾಜ್ಯ ಬಜೆಟ್ ರಾಜ್ಯದ ಗಂಭೀರ ಆರ್ಥಿಕ ಪರಿಸ್ಥಿತಿ ಮತ್ತು ಕೇಂದ್ರ ನೀಡಬೇಕಿರುವ ಅನುದಾನ ಆರ್ಥಿಕ ನೆರವು ನೀಡದಿರುವುದನ್ನು ತೋರಿತ್ತು. ಅದರಿಂದಾಗುವ ಪರಿಣಾಮವನ್ನು ಮನಗಾಣಲಾಗಿತ್ತು.
ಇದೀಗ ಕೋವಿಡ್ ೧೯ ಲಾಕ್ಡೌನಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ರಾಜ್ಯ ಸಿಲುಕಿದೆ. ಕೇಂದ್ರ ಸರ್ಕಾರ ಕೊರೋನ ಪರಿಹಾರವಾಗಿ ರಾಜ್ಯಕ್ಕೆ ಕೇವಲ ಸುಮಾರು ರೂ. ೧೪ ಕೋಟಿಯಷ್ಟು ನೆರವು ನೀಡಿದೆ.
ರಾಜ್ಯದಿಂದ ಪಿಎಂ ಕೇರ್ಸ ಗೆ ನೂರಾರು ಕೋಟಿ ಹಣ ಸಂದಾಯವಾಗಿದೆ. ರಾಜ್ಯದಲ್ಲಿರುವ ಹಲವು ಸಾರ್ವಜನಿಕ ಹಾಗೂ ಖಾಸಗಿ ಉದ್ದಿಮೆಗಳ ಕಾರ್ಮಿಕರು ಮತ್ತು ಆಡಳಿತ ಮಂಡಳಿಗಳು ಹಾಗೂ ಪ್ರಜೆಗಳು ನೂರಾರು ಕೋಟಿ ರೂ. ಗಳ ದೇಣಿಗೆಯನ್ನು ನೀಡಿವೆ. ಇತ್ತೀಚೆಗೆ ರಾಜ್ಯ ಮುಖ್ಯಮಂತ್ರಿ ವಿಕೋಪ ಪರಿಹಾರ ನಿಧಿಗೆ ಸಲ್ಲಿಸಿದ ದೇಣಿಗೆ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಡಿ ಬರುವುದಿಲ್ಲ ಎಂಬ ಘೋಷಣೆ ಮುಖ್ಯ ಮಂತ್ರಿಯವರ ನಿಧಿಗೆ ಬರುವ ದೇಣಿಗೆಗೆ ತೊಡಕಾಗಿವೆ.
ಈ ಎಲ್ಲಾ ಪರಿಣಾಮ ರಾಜ್ಯ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಅದರಿಂದ ಹೊರ ಬರಲು ಇದೀಗ ರಾಜ್ಯದ ಮೂಲೆ ನಿವೇಶನಗಳನ್ನು ಹರಾಜಾಕಲು ಅಕ್ರಮ ಕಟ್ಟಡಗಳ ಸಕ್ರಮಗೊಳಿಸಿ ಹಣ ಸಂಗ್ರಹಕ್ಕೆ ಮುಂದಾಗಿರುವುದು ಬಿಜೆಪಿಯ ಕೇಂದ್ರ ರಾಜ್ಯ ಸರ್ಕಾರಗಳ ದಿವಾಳಿತನ ತೋರುತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ.
ಭವಿಷ್ಯದಲ್ಲಿ ಸಾರ್ವಜನಿಕ ಉದೇಶಕ್ಕೆ ಬಳಕೆಯಾಗ ಬಹುದಾದ ಮೂಲೆ ನಿವೇಶನಗಳು ಈ ಪ್ರಕ್ರಿಯಲ್ಲಿ ಖಾಸಗಿ ಪಾಲಾಗಲಿವೆ. ಇದಕ್ಕೆ ಬಿಜೆಪಿಯ ಕೇಂದ್ರ ರಾಜ್ಯ ಸರ್ಕಾರಗಳೆ ಹೊಣೆಯಾಗಿವೆ ಎಂದು ಸಿಪಿಐ(ಎಂ) ಖಂಡಿಸಿದೆ.