ಕಾರ್ಮಿಕರ ಕೆಲಸ-ವೇತನ ಉಳಿಸಲು ಅಗತ್ಯ ಕ್ರಮಕ್ಕೆ ಆಗ್ರಹ

ಕೋವಿಡ್ ೧೯ ವಿಸ್ತರಿತ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗು ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆ ಆರಂಭಕ್ಕೆ ಅನುಮತಿಯನ್ನು ನೀಡಿರುವ ಕಾರಣ ಮಾಲೀಕರು ಕಾರ್ಮಿಕರನ್ನು ಕೆಲಸಕ್ಕೆ ಹಾಜರಾಗಲು ಕೋರುತ್ತಿದ್ದಾರೆ. ಕೆಲಸಕ್ಕೆ ಬಾರದಿದ್ದರೆ ಸಂಬಳವಿಲ್ಲ ಎನ್ನುತ್ತಿದ್ದಾರೆ, ಕೆಲಸದಿಂದಲೂ ತೆಗೆಯುವ ಮಾತನಾಡುತ್ತಿದ್ದಾರೆ.

ಆದರೆ ಯುಗಾದಿ ಹಬ್ಬಕ್ಕೆಂದು ಊರಿಗೆ ಹೋದ ಲಕ್ಷಾಂತರ ಕಾರ್ಮಿಕರು ಲಾಕ್ಡೌನಿಂದಾಗಿ ವಾಪಸ್ಸು ಬರಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ವೇತನ ಹಾಗೂ ಉದ್ಯೋಗ ಉಳಿಸಲು ಅಗತ್ಯ ಕ್ರಮವಹಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಕಳೆದ ಹಲವು ವರ್ಷಗಳಲ್ಲಿ ರಾಷ್ಟ್ರದಲ್ಲಿನ ಕಾರ್ಖಾನೆಗಳ ವಾರ್ಷಿಕ ನಿವ್ವಳ ಮೌಲ್ಯ ವರ್ಧನೆಯಲ್ಲಿ ಕಾರ್ಮಿಕರ ವೇತನದ ಪಾಲು ಕೇವಲ ೧೫ ಶೇಕಡವಾಗಿದ್ದರೆ ಮಾಲೀಕರ ಲಾಭದ ಪಾಲು ೪೭ ಶೇಕಡವಾಗಿದೆ. ಹೀಗಿದ್ದೂ ಸಹಾ ಮಾಲೀಕರು ರಾಷ್ಟ್ರವು ಸಂಕಷ್ಟದಲ್ಲಿರುವಾಗ ಕಾರ್ಮಿಕರಿಗೆ ವೇತನ ನೀಡಲು ಮುಂದೆ ಬಾರದೆ ಸಬೂಬು ನೀಡುತ್ತಿರುವುದು ಅವರ ಲಾಭಕೋರತನದ ಬಂಡವಾಳಶಾಹಿ ವರ್ಗ ಗುಣವನ್ನು ತೋರುತ್ತದೆ. ಬಂಡವಾಳದ ಲಾಭಿಗೆ ಸರ್ಕಾರ ಮಣಿದು ಕಾರ್ಮಿಕರಿಗೆ ದ್ರೋಹ ಬಗೆಯ ಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.

೨೩.೩.೨೦೨೦ ರಂದು ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶದಂತೆ ೩೦.೩.೨೦೨೦ ರವರೆಗೆ ವೇತನ ಪಾವತಿಸಲು ಮತ್ತು ಲಾಕ್ ಡೌನ್ ಕಾರಣ ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗಯ ಬಾರದೆಂದಿದೆ. ಅದನ್ನೂ ಹಲವು ಕಂಪನಿಗಳು ಪಾಲಿಸದಿರುವ ಮಾರ್ಚ್ ತಿಂಗಳ ಸಂಬಳವನ್ನೆ ಇದುವರೆಗೆ ನೀಡದಿರುವ ಹಲವು ಪ್ರಕರಣಗಳಿವೆ. ಇದೀಗ ಏಪ್ರಿಲ್ ತಿಂಗಳ ಸಂಬಳ ನೀಡದಿರಲು ಹಲವು ದಾರಿಗಳನ್ನು ಕಂಪನಿಗಳು/ ಮಾಲೀಕರು ಹುಡುಕುತ್ತಿದಾರೆ, ಸಬೂಬುಗಳನ್ನು ನೀಡುತ್ತಿದ್ದಾರೆ.

ಈ ಕಾರಣಗಳಿಂದಾಗಿ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ೧೩.೪.೨೦೨೦ ರಂದು ಆದೇಶ ಹೊರಡಿಸಿ ಲಾಕ್ಡೌನ್ ಕಾಲಾವಧಿಯ ವೇತನ ಉದ್ಯೋಗ ಸಂರಕ್ಷಣೆಗೆ ಆದೇಶಿಸಿದ್ದರು. ಆದರೆ ಸದರಿ ಆದೇಶವನ್ನು ೧೫.೪.೨೦೨೦ ರಂದು ಹಿಂಪಡೆದಿದ್ದಾರೆ. ರಾಜ್ಯ ಸರ್ಕಾರವು ಮಾಲೀಕರ ಲಾಭಿಗೆ ಮಣಿದು ಆದೇಶ ಹಿಂಪಡೆದಿರುವುದನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ.

ಮಾತಿನಲ್ಲಿ ವೇತನ ನೀಡಿ ಕೆಲಸದಿಂದ ತೆಗೆಯ ಬೇಡಿ ಎನ್ನುವ ಬಿಜೆಪಿ ಸರ್ಕಾರವು ಕೃತಿಯಲ್ಲಿ ಮಾಲೀಕರಿಗೆ ಅನುವುಗೊಳಿಸಿ ಕಾರ್ಮಿಕರನ್ನು ವಂಚಿಸುತ್ತಿದೆ ಎಂದು ಸಿಪಿಐ(ಎಂ) ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದೆ. ಕೂಡಲೆ ಕಾರ್ಮಿಕರ ವೇತನ ಹಾಗು ಉದ್ಯೋಗ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *