ಕೋವಿಡ್ ೧೯ ವಿಸ್ತರಿತ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಮಾಡಿ ದಿನದ ಕೆಲಸದ ಅವಧಿಯನ್ನು ಹಾಲಿ ೮ ಗಂಟೆಯಿಂದ ೧೨ ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸಿದೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಸೊಂಕಿನ ಹರಡುವಿಕೆ ತಡೆಯಲು ದಿನದ ಕೆಲಸದ ಶಿಫ್ಟ್ ಅವಧಿಯನ್ನು ಹೆಚ್ಚಿಸಲು ಮಾಲೀಕರ ಸಂಘಗಳು ಪ್ರಸ್ತಾವನೆ ಇರಿಸಿರುವುದು, ಅದರಂತೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ನೆಡೆಸಿರುವುದನ್ನು ಸಿಪಿಐ(ಎಂ) ಖಂಡಿಸಿದೆ.
ಕೇಂದ್ರ ಸರ್ಕಾರವು ಕೋವಿಡ್ ನೆಪದಲ್ಲಿ ಬಂಡವಾಳಗಾರರಿಗೆ ನೆರವಾಗಲು ಮತ್ತು ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ಮೇಲೆ ಹೊರೆ ಹೊರಿಸಲು ಮುಂದಾಗಿದೆ. ಶತಮಾನಗಳ ಹೋರಾಟದ ಫಲವಾಗಿ ಗಳಿಸಿರುವ ೮ ಗಂಟೆಯ ಕೆಲಸದ ಹಕ್ಕನ್ನು ಇಂತಹ ಕ್ರಮ ಕಸಿದುಕೊಂಡು ಕಾರ್ಮಿಕರನ್ನು ಗುಲಾಮರನ್ನಾಗಿಸಲಿದೆ ಎಂದು ಸಿಪಿಐ(ಎಂ) ಟೀಕಿಸಿದೆ.
ಮಾಲೀಕರ ಸಂಘಗಳು ಲಾಕ್ಡೌನ್ ಕಾಲಾವಧಿಯ ವೇತನ ನೀಡುವ ಹೊಣೆಗಾರಿಕೆಯಿಂದ ನುಣಿಚಿಕೊಳ್ಳಲು ರಾಷ್ಟ್ರದ ೩.೫ ಕೋಟಿ ಇ.ಎಸ್.ಐ. ಸೌಲಭ್ಯವಿರುವ ಕಾರ್ಮಿಕರಿಗೆ ಇ.ಎಸ್.ಐ. ನಿಂದ ೭೫ ಶೇಕಡ ವೇತನ ನೀಡಬೇಕೆಂಬ ಪ್ರಸಾಪವಿರಿಸಿವೆ. ಅದರಂತೆ ಇಎಸ್ಐ ನಲ್ಲಿರುವ ೮೫೦೦೦ ಸಾವಿರ ಕೋಟಿ ರೂಗಳ ನಿಧಿ ಬಳಸಿ ೨ ತಿಂಗಳ ವೇತನ ನೀಡಬೇಕೆಂಬ ಪ್ರಸ್ತಾಪ ಇರಿಸಿದೆ. ಈ ಪ್ರಸ್ತಾಪವನ್ನು ಯಾವುದೆ ಕಾರಣಕ್ಕು ಒಪ್ಪಬಾರದೆಂದು ಸಿಪಿಐ(ಎಂ) ಆಗ್ರಹಿಸಿದೆ.
ಇದನ್ನೇನಾದರು ಸರ್ಕಾರ ಒಪ್ಪಿಕೊಂಡು ಜಾರಿಗೊಳಿಸಲು ಮುಂದಾದಲ್ಲಿ ಇಡಿ ಇ.ಎಸ್.ಐ. ಅನ್ನು ಸರ್ಕಾರವೇ ದಿವಾಳಿಯತ್ತ ದೂಡಲಿದೆ ಎಂದು ಪ್ರತಿಪಾದಿಸಿದೆ. ಕಾರ್ಮಿಕರಿಗೆ ಇರುವ ಏಕಮಾತ್ರ ಆರೋಗ್ಯ ವ್ಯವಸ್ಥೆಯು ಕಳಚಿ ಬೀಳಲಿದೆ. ಅಂತಹ ಅನಾಹುತಕಾರಿ ಕ್ರಮಕ್ಕೆ ಮುಂದಾಗ ಬಾರದೆಂದು ಸಿಪಿಐ(ಎಂ) ಸರ್ಕಾರವನ್ನು ಎಚ್ಚರಿಸಿದೆ.
ಮಾಲೀಕರ ಸಂಘಗಳು ಮತ್ತೊಂದು ಪ್ರಸ್ತಾಪದಲ್ಲಿ ಗುತ್ತಿಗೆ ಮತ್ತು ಹಂಗಾಮಿ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ವೇತನ ನೀಡಲು ಕೋರಿರುವುದು ಮಾಲೀಕರ ಭಂಡತನದ ಪ್ರತೀಕವಾಗಿದೆ. ಸೆಸ್ ಕಾಯ್ದೆ ಪ್ರಕಾರ ಕಟ್ಟಡ ಕಾರ್ಮಿಕರಲ್ಲದವರಿಗೆ ಅದರ ಕಲ್ಯಾಣ ನಿಧಿ ಬಳಕೆ ಮಾಡುವಂತಿಲ್ಲ. ಆದರೂ ಅದನ್ನು ಇತರರಿಗೆ ಬಳಕೆ ಮಾಡಲು ಕೋರಿರುವ ಮಾಲೀಕರ ಸಂಘಗಳ ಪ್ರಸ್ತಾಪವು ತಮ್ಮ ಹೊಣೆ ತಪ್ಪಿಸಿಕೊಳ್ಳಲು ಏನುಬೇಕಾದರು ಮಾಡುವ ಬಂಡವಾಳಶಾಹಿ ವರ್ಗದ ಲಾಭ ಕೋರತನವಾಗಿದೆ. ರಾಜ್ಯ ಸರ್ಕಾರವು ಇಂತಹ ಪ್ರಸ್ತಾಪಗಳನ್ನು ಸಾರಸಗಟು ತಿರಸ್ಕರಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.