ಬಂಗಾಳದ ಬರಗಾಲ ಕುರಿತು ಪಕ್ಷವು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಪ್ರಚಾರಾಂದೋಲನ ಮತ್ತು ಪರಿಹಾರ ಕಾರ್ಯವು ಭಾರತೀಯ ರಾಜಕೀಯದ ಮೇಲೆ ಪರಿಣಾಮ ಬೀರಿತು. ಬರಗಾಲ, ಬೆಲೆ ಏರಿಕೆ ಮತ್ತು ಹೊಟ್ಟೆಗಿಲ್ಲದೇ ಸಾಯುವ ಸ್ಥಿತಿ ಬಂಗಾಳದಲ್ಲಿ ತೀವ್ರವಾಗಿತ್ತಾದರೂ, ದೇಶದಾದ್ಯಂತ ಅದು ಸಾಮಾನ್ಯವಾಗಿತ್ತು. ಪ್ರತಿಯೊಂದು ಪ್ರಾಂತದಲ್ಲೂ ಅದರದೇ ಆದ ಗುಣ ಲಕ್ಷಣಗಳಿಗೆ ಅನುಸಾರವಾಗಿ ಅದು ಕಾಣಿಸಿಕೊಂಡಿತ್ತು. ದೇಶದ ಎಲ್ಲಾ ಕಡೆಗಳಲ್ಲಿಯೂ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟು ಎದ್ದುಕಾಣುತ್ತಿತ್ತು. ಭಾರತದಲ್ಲಿ ಆಗ ಅಸ್ತಿತ್ವದಲ್ಲಿದ್ದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ ಬದಲಾಯಿಸುವುದೊಂದೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಪ್ರಗತಿಪರ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ಮನಸ್ಸುಳ್ಳ ಜನರಿಗೆ ಮನದಟ್ಟಾಗಿತ್ತು. ಆದಷ್ಟು ಬೇಗ ಈ ಕೆಲಸವನ್ನು ಈಡೇರಿಸಬೇಕು ಎಂಬ ವಿಚಾರದಲ್ಲಿ ಹಲವಾರು ಜನವಿಭಾಗಗಳಲ್ಲಿ ಭಿನ್ನಾಭಿಪ್ರಾಯವಿರಲಿಲ್ಲ.
೧೯೪೩ರಲ್ಲಿ ಬಂಗಾಳವು ಭಾರತದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಬರಗಾಲವನ್ನು ಎದುರಿಸಿತು. ಬಂಗಾಳ, ಒರಿಸ್ಸಾ, ಬಿಹಾರ ಮತ್ತು ಅಸ್ಸಾಂಗಳಲ್ಲಿ ಭೀಕರ ಪರಿಸ್ಥಿತಿ ಉಂಟಾಗಿತ್ತು. ಹಸಿವಿನ ಸಾವುಗಳು, ಅಭಾವ ಮತ್ತು ಸರ್ಕಾರಿ ಆಡಳಿತದ ವೈಫಲ್ಯದ ಕಾಲವೆಂದೇ ಈ ಅವಧಿಯನ್ನು ಗುರುತಿಸಲಾಗುತ್ತದೆ. ಆಹಾರ ಬೆಲೆಗಳು ೩೦೦% ನಿಂದ ೧೦೦೦%ನಷ್ಟು ಏರಿದ್ದವು. ಜನಸಾಮಾನ್ಯರಿಗೆ ಆಹಾರ ಸಿಗುವುದೇ ದುಸ್ತರವಾಗಿತ್ತು. ಆಹಾರಕ್ಕಾಗಿ ಜನರ ಸರತಿಸಾಲುಗಳು ದಿನನಿತ್ಯದ ಲಕ್ಷಣಗಳಾಗಿದ್ದವು. ಪತ್ರಿಕಾ ವರದಿಗಳ ಪ್ರಕಾರ, ೧೨.೫ ಕೋಟಿ ಜನರು ಹೊಟ್ಟೆಗಿಲ್ಲದೇ ಸತ್ತರು ಮತ್ತು ಅನೇಕ ಜನ ತಮ್ಮ ಜೀವ ಉಳಿಸಿಕೊಳ್ಳಲು ಕಕ್ಕೆ ಬೀಜ ಮತ್ತು ಎಲೆಗಳನ್ನು ತಿನ್ನುತ್ತಿದ್ದರು. ಇಂತಹ ಗೋಳಿನ ಸನ್ನಿವೇಶದಲ್ಲಿ, ಕಮ್ಯುನಿಸ್ಟ್ ಪಕ್ಷ ವಹಿಸಿದ ಪಾತ್ರ ವಿಶೇಷ ಉಲ್ಲೇಖ ಯೋಗ್ಯವಾದದ್ದು.
ಕಮ್ಯುನಿಸ್ಟ್ ಪಕ್ಷವು ೧೯೪೩ರ ಸ್ವಾತಂತ್ರ್ಯ ದಿನ(ಆಗ ಜನವರಿ ೨೬ರಂದು)ದ ಸಂದರ್ಭದಲ್ಲಿ ಹೊರತಂದ ತನ್ನ ಪ್ರಣಾಳಿಕೆಯಲ್ಲಿ ಈ ಬರಗಾಲವನ್ನು ಭಾರತದ ಭೀಕರ ಆಂತರಿಕ ಗಂಡಾಂತರವೆಂದು ಮತ್ತು ಅದು ಇಡೀ ದೇಶದ ಮೇಲೆ ಕರಿನೆರಳನ್ನು ಹರಡಿದೆ ಎಂದು ಸಾರಿತು. “ಆಹಾರವಿಲ್ಲದೇ ಬಂಗಾಳದ ೫೦ ಲಕ್ಷ ಜನರು ಅದಾಗಲೇ ಅಳಿದುಹೋಗಿದ್ದಾರೆ. ಕಾಂಗ್ರೆಸ್ಸಿಗರು ನಮ್ಮೆಲ್ಲಾ ಜನರನ್ನು ಒಟ್ಟುಗೂಡಿಸಿ, ಎಲ್ಲ ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ತಮ್ಮ ಕುಟುಂಬಗಳ ಅನ್ನವನ್ನು ಮತ್ತು ಮಕ್ಕಳ ಹಾಲನ್ನು ರಕ್ಷಿಸಿಕೊಳ್ಳಬೇಕೆಂದು ಕರೆ ಕೊಡದಿದ್ದರೆ ಇದೇ ದುರ್ಗತಿ ಪ್ರತಿಯೊಂದು ಪ್ರಾಂತಕ್ಕೂ, ಇಡೀ ಭಾರತಕ್ಕೂ ಕಾದಿದೆ” ಎಂದು ಹೇಳಿತು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗಿನ ಐಕ್ಯತೆಗಾಗಿ, ಒಂದು ಐಕ್ಯ ರಂಗಕ್ಕಾಗಿ ಮನವಿ, ಪಕ್ಷದ ಪ್ರಚಾರಾಂದೋಲನದ ಪ್ರಮುಖ ಅಂಶವಾಗಿತ್ತು. ಈ ಜಂಟಿ ಪ್ರಯತ್ನವನ್ನು ಆ ಸಮಯದಲ್ಲಿ ಬಲಹೀನಗೊಂಡಿದ್ದ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಬೆಸೆಯುವ ಒಂದು ಸೇತುವಾಗಿಯೂ ಕಾಣಲಾಗಿತ್ತು.
“ಆಹಾರ ಹೋರಾಟದ ಮುಂಚೂಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸಮಾಡುವುದು ರಾಷ್ಟ್ರೀಯ ಮುಖಂಡರ ಬಿಡುಗಡೆಯ ಚಳುವಳಿಯನ್ನು ಬೆಂಬಲಿಸಬೇಕು ಎಂದು ಮುಸ್ಲಿಮರಿಗೆ ಮನವರಿಕೆಯಾಗುವ ದಿಕ್ಕಿನಲ್ಲಿ ಬಹು ಮಹತ್ವದ ತರ್ಕವಾಗುತ್ತದೆ; ನಾವು ನಮ್ಮ ದೇಶಬಾಂಧವರ ಸೇವೆಯಲ್ಲಿ ಜೊತೆಯಾಗಿ ಮಾಡುವ ಕೆಲಸಗಳು ಲೀಗಿನ ಬಗ್ಗೆ ಮತ್ತು ಅದರ ಬೇಡಿಕೆಗಳ ಬಗ್ಗೆ ಕಾಂಗ್ರೆಸ್ಸಿಗರ ತಪ್ಪುತಿಳುವಳಿಕೆಯನ್ನು ಹೋಗಲಾಡಿಸುತ್ತದೆ. ಆಹಾರಕ್ಕಾಗಿ ಸಂಗ್ರಾಮವು ನಿಜವಾಗಿಯೂ ಅಧಿಕಾರ ಮತ್ತು ಸ್ವಾತಂತ್ರ್ಯಕ್ಕಾಗಿನ ಸಂಗ್ರಾಮವಾಗಿ ಬಿಡುತ್ತದೆ” ಎಂದ ಆ ಪ್ರಣಾಳಿಕೆ ’ಆಹಾರಕ್ಕಾಗಿ, ರಕ್ಷಣೆಗಾಗಿ ಮತ್ತು ರಾಷ್ಟ್ರೀಯ ಮುಖಂಡರ ಬಿಡುಗಡೆಗಾಗಿ ನಮ್ಮ ಜನರ, ಕಾಂಗ್ರೆಸ್ನ ಮತ್ತು ಲೀಗಿನ ಅಬೇಧ್ಯ ಐಕ್ಯತೆಯತ್ತ ಮುನ್ನಡೆಯೋಣ.’ ಎನ್ನುವ ಕರೆಯೊgದಿಗೆ ತನ್ನ ಮನವಿಯನ್ನು ಕೊನೆಗೊಳಿಸಿತ್ತು.
ಆಹಾರ ಸಮಸ್ಯೆ, ಯುದ್ಧ ಮತ್ತು ಯುದ್ಧದಿಂದ ಹುಟ್ಟಿದ ಸಮಸ್ಯೆಗಳ ಬಗ್ಗೆ ಕೂಡ ಪಕ್ಷದ ಧೋರಣೆಯು ಸರ್ಕಾರ ಮತ್ತು ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿತ್ತು. ಅದು ಕಾರ್ಮಿಕರ, ರೈತರ ಮತ್ತು ಇತರೆ ಸಾಮಾನ್ಯ ಜನವಿಭಾಗಳ ದಿನನಿತ್ಯದ ಬದುಕಿನ ಸಮಸ್ಯೆಗಳ ಪರಿಹಾರಕ್ಕೆ ತಳಕುಹಾಕಿಕೊಂಡಿತ್ತು.
ಬೆಲೆ ನಿಯಂತ್ರಣ, ಆಹಾರ ಧಾನ್ಯಗಳು ಹಾಗೂ ಇತರೆ ಅಗತ್ಯ ವಸ್ತುಗಳ ವಿತರಣೆಗಳಿಗೆ ಸಂಬಂಧಪಟ್ಟಂತೆ ಪಕ್ಷವು ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾಗಲೂ ಸಹ ಅದರ ದುಷ್ಕೃತ್ಯಗಳ ವಿರುದ್ಧ ಚಳುವಳಿ ನಡೆಸಿತು ಮತ್ತು ಜನರನ್ನು ಅದರ ವಿರುದ್ಧ ಅಣಿನೆರೆಸಿತು. ಅಗತ್ಯ ವಸ್ತುಗಳ ಸಂಗ್ರಹ ಮತ್ತು ವಿತರಣೆ ಕೆಲಸಗಳಲ್ಲಿ ಆ ಉದ್ದೇಶಕ್ಕಾಗಿಯೇ ಪ್ರತ್ಯೇಕ ಸಂಘಟನೆಗಳನ್ನು ಹುಟ್ಟುಹಾಕಿ ಪಕ್ಷವು ಕ್ರಿಯಾಶೀಲವಾಗಿ ಭಾಗವಹಿಸಿತು. ಕೈಗಾರಿಕಾ ಹಾಗೂ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂಬ ಧ್ಯೇಯಮಂತ್ರವನ್ನು ಪಕ್ಷವು ಪಟ್ಟು ಹಿಡಿದು ಮುಂದುವರಿಸಿತು.
ದೊಡ್ಡ ಭೂಮಾಲಕರು, ಸಗಟು ವ್ಯಾಪಾರಿಗಳು ಮತ್ತು ಇತರ ಪಟ್ಟಭದ್ರ ಹಿತಾಸಕ್ತಿಗಳ ಲಾಭಕೋರತನವನ್ನು ತಡೆಯದೆ ಆಹಾರದ ಅಭಾವ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂದು ಕಮ್ಯುನಿಸ್ಟ್ ಪಕ್ಷವು ಸ್ಪಷ್ಟವಾಗಿ ಹೇಳಿತ್ತು. ದೊಡ್ಡ ಭೂಮಾಲಕರು ಮತ್ತು ಇತರರ ದಾಸ್ತಾನುಗಳನ್ನು ವಶಕ್ಕೆ ಪಡೆದು ಜನರಿಗೆ ವಿತರಿಸಬೇಕೆಂಬ ಪ್ರಾಯೋಗಿಕ ಸಲಹೆಗಳನ್ನು ಮುಂದಿಟ್ಟಿತು. ಬರಗಾಲ ಪೀಡಿತ ಪ್ರದೇಶಗಳಿಂದ ಆಹಾರಧಾನ್ಯಗಳನ್ನು ಬೇರೆ ಕಡೆಗೆ ರವಾನೆ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯ ಮಾಡುವುದರ ಜತೆಯಲ್ಲೇ ಅಧಿಕಾರಿಗಳು ಮಾಡಲು ಸಿದ್ಧರಿಲ್ಲದ ಕಡೆಗಳಲ್ಲಿ ಆ ಕೆಲಸ ಕೈಗೊಳ್ಳಲು ಸ್ವಯಂಸೇವಕ ಸಂಘಟನೆಗಳನ್ನು ರಚಿಸಿತು.
ಸ್ವಯಂಸೇವಕ ಸಂಘಟನೆಗಳು ಆಹಾರ ಧಾನ್ಯಗಳು ಮತ್ತಿತರ ಅಗತ್ಯ ವಸ್ತುಗಳನ್ನು ಕಳ್ಳದಾಸ್ತಾನು ಮಾಡುತ್ತಿದ್ದ ವರ್ತಕರು ಮತ್ತು ಭೂಮಾಲಕರ ವಿರುದ್ಧ ಕೂಡ ಕಾರ್ಯಾಚರಣೆ ಮಾಡಿದವು. ಭೂಮಾಲಕರು, ಸಗಟುವ್ಯಾಪಾರಿಗಳ ಸುಲಿಗೆಗಳ ವಿರುದ್ಧ ಮತ್ತು ಈ ಸುಲಿಗೆಗಾರರಿಗೆ ಕುಮ್ಮಕ್ಕು ನೀಡುತ್ತಿದ್ದ ಬ್ರಿಟಿಷ್ ಆಳರಸರ ವಿರುದ್ಧ ಚಳುವಳಿಯನ್ನು ಕಟ್ಟಿಬೆಳೆಸಲು ಕಮ್ಯುನಿಸ್ಟ್ ಪಕ್ಷವು ಕ್ರಿಯಾಶೀಲವಾಗಿ ತೊಡಗಿಕೊಂಡಿತ್ತು.
ಬಂಗಾಳದ ಬರಗಾಲ ಕುರಿತು ಪಕ್ಷವು ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಪ್ರಚಾರಾಂದೋಲನ ಮತ್ತು ಪರಿಹಾರ ಕಾರ್ಯವು ಭಾರತೀಯ ರಾಜಕೀಯದ ಮೇಲೆ ಪರಿಣಾಮ ಬೀರಿತು. ಬಂಗಾಳ ಬರಗಾಲಕ್ಕೆ ಸಂಬಂಧಪಟ್ಟ ಆಂದೋಲನದ ಸಮಯದಲ್ಲಿ ಪಕ್ಷದ ಧೋರಣೆಯು ಎಂತಹ ಸಂದರ್ಭದಲ್ಲಿಯೂ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಜನರ ಸೇವೆ ಸಲ್ಲಿಸಬೇಕು ಎಂಬುದಾಗಿತ್ತು.
ಬಂಗಾಳದಲ್ಲಿ ಪರಿಹಾರ ಕಾರ್ಯ ಸಂಘಟಿಸುವ ಸಲುವಾಗಿ ಪಕ್ಷವು ದೇಶದ ಎಲ್ಲಾ ಕಡೆಗಳಿಂದಲೂ ಆಹಾರ ಧಾನ್ಯಗಳನ್ನು ಕಲೆ ಹಾಕಿತು, ಹಣ ಸಂಗ್ರಹ ಮಾಡಿತು ಮತ್ತು ಅಗತ್ಯ ವಸ್ತುಗಳನ್ನು ಒಟ್ಟುಗೂಡಿಸಿತು. ಬಂಗಾಳದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸ್ವಯಂಸೇವಕರನ್ನು ಮತ್ತು ವೈದ್ಯರುಗಳ ತಂಡವನ್ನೂ ಅಣಿನೆರೆಸಿತು. ಈ ಪರಿಹಾರ ಚಟುವಟಿಕೆಗಳಲ್ಲಿ ಪಕ್ಷದ ತೊಡಗಿಸಿಕೊಂಡದ್ದು ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಜನರ ವಿಶ್ವಾಸ ಮತ್ತು ನಂಬಿಕೆ ಗಳಿಸುವಲ್ಲಿಯೂ ಸಹಾಯ ಮಾಡಿತು. ಬರಗಾಲ, ಬೆಲೆ ಏರಿಕೆ ಮತ್ತು ಹೊಟ್ಟೆಗಿಲ್ಲದೇ ನರಳುವ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ಒದಗಿಸುವ ಮೂಲಕ ಭೂಮಾಲಕರ, ಕಳ್ಳಸಂತೆಕೋರರ ಮತ್ತು ಆಳುವವರ ಪಟ್ಟಭದ್ರ ವರ್ಗ ಹಿತಾಸಕ್ತಿಗಳನ್ನು ಬಯಲುಮಾಡಬೇಕಾದ್ದು ತನ್ನ ತಕ್ಷಣದ ಕೆಲಸ ಎಂದು ಕಮ್ಯುನಿಸ್ಟ್ ಪಕ್ಷ ಭಾವಿಸಿತು.
ಬರಗಾಲ, ಬೆಲೆಏರಿಕೆ ಮತ್ತು ಹೊಟ್ಟೆಗಿಲ್ಲದೇ ಸಾಯುವ ಸ್ಥಿತಿ ಬಂಗಾಳದಲ್ಲಿ ತೀವ್ರವಾಗಿತ್ತಾದರೂ, ದೇಶದಾದ್ಯಂತ ಅದು ಸಾಮಾನ್ಯವಾಗಿತ್ತು. ಪ್ರತಿಯೊಂದು ಪ್ರಾಂತದಲ್ಲೂ ಅದರದೇ ಆದ ಗುಣ ಲಕ್ಷಣಗಳಿಗೆ ಅನುಸಾರವಾಗಿ ಅದು ಕಾಣಿಸಿಕೊಂಡಿತ್ತು. ದೇಶದ ಎಲ್ಲಾ ಕಡೆಗಳಲ್ಲಿಯೂ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟು ಎದ್ದುಕಾಣುತ್ತಿತ್ತು. ಭಾರತದಲ್ಲಿ ಆಗ ಅಸ್ತಿತ್ವದಲ್ಲಿದ್ದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ ಬದಲಾಯಿಸುವುದೊಂದೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಪ್ರಗತಿಪರ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ಮನಸ್ಸುಳ್ಳ ಜನರಿಗೆ ಮನದಟ್ಟಾಗಿತ್ತು. ಆದಷ್ಟು ಬೇಗ ಈ ಕೆಲಸವನ್ನು ಈಡೇರಿಸಬೇಕು ಎಂಬ ವಿಚಾರದಲ್ಲಿ ಹಲವಾರು ಜನವಿಭಾಗಗಳಲ್ಲಿ ಭಿನ್ನಾಭಿಪ್ರಾಯವಿರಲಿಲ್ಲ.
ಯುದ್ಧದ ಸಮಯದಲ್ಲಿ ಮತ್ತು ನಂತರ ತಲೆದೋರಿದ ಬರಗಾಲ, ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆ, ವೇತನದಾರರ ನಿಜ ಆದಾಯದಲ್ಲಿನ ಕುಸಿತ ಮತ್ತು ಇತರ ಸಂಕಷ್ಟಗಳು ಕಾರ್ಮಿಕರ ಮತ್ತು ಮಧ್ಯಮ-ವರ್ಗದ ನೌಕರರ ಸಂಘಟಿತ ಹೋರಾಟಗಳಿಗೆ ಚಾಲನೆ ನೀಡಿದವು. ಯುದ್ಧದ ಸಮಯದಲ್ಲಿ ಕಾಣಿಸಿಕೊಂಡಿದ್ದ ಆಹಾರದ ಅಭಾವವು ೧೯೪೫ರ ಹೊತ್ತಿಗೆ ಉಲ್ಬಣಗೊಂಡಿತು. ವೈಸ್ರಾಯ್ ಲಾರ್ಡ್ ವೇವೆಲ್ ಪ್ರಕಾರ ಈ ಬರಗಾಲದಿಂದ ೧೦ ಕೋಟಿ ಜನರು ಬಾಧಿತರಾಗಿದ್ದರು.
ಯುದ್ಧ ಮುಗಿದ ಕೂಡಲೇ ಭಾರಿ ದೊಡ್ಡ ರೀತಿಯಲ್ಲಿ ಆಹಾರಕ್ಕಾಗಿ ಆರಂಭವಾದ ಕಾರ್ಮಿಕರ ಮುಷ್ಕರಗಳು ಮತ್ತು ಜನಪರ ಹೋರಾಟಗಳು ಜನರು ಮತ್ತು ಪೋಲಿಸರು ಹಾಗೂ ಮಿಲಿಟರಿ ಪಡೆಗಳ ನಡುವೆ ಪದೇ ಪದೇ ಕಾದಾಟಕ್ಕೆ ಕಾರಣವಾದವು. ಆಗಸ್ಟ್ ೧೯೪೫ರಲ್ಲಿ ವಾರಣಾಸಿಯಲ್ಲಿ ೧೭ ಮತಪ್ರದರ್ಶಕರು ಹತರಾದರೆ, ೨೦೦೦ ಜನ ಬಂಧಿಸಲ್ಪಟ್ಟರು. ಬೊಂಬಾಯಿಯಲ್ಲಿ, ಸೆಪ್ಟೆಂಬರಿನಲ್ಲಿ ಮುಷ್ಕರದ ನಂತರ ದಂಗೆಯ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪ್ರತಿಗಾಮಿ ರಾಜಕಾರಣಿಗಳು ಮತ್ತು ಆಳರಸರ ಪ್ರಯತ್ನಗಳಿಂದಾಗಿ ಅದಕ್ಕೆ ಹಿಂದೂ-ಮುಸ್ಲಿಂ ಗಲಾಟೆ ಎಂಬ ಬಣ್ಣ ಕೊಡುವಲ್ಲಿ ಯಶಸ್ವಿಯಾದರು. ಅದರಿಂದಾಗಿ ಉಂಟಾದ ಗಲಭೆಗಳಲ್ಲಿ ಹತ್ತಾರು ಜನ ಕೊಲಲ್ಪಟ್ಟರು ಮತ್ತು ನೂರಾರು ಜನ ಗಾಯಗೊಂಡರು.
ಈ ಹಿಂದಿನ ಸಾಮ್ರಾಜ್ಯಶಾಹಿ-ವಿರೋಧಿ ಜನಾಕ್ರೋಶಗಳಿಂದ ಭಿನ್ನವಾಗಿ, ಈಗ ಅದರಲ್ಲಿ ಭಾಗವಹಿಸುವ ಜನರು ಕಾರ್ಮಿಕರ ಮತ್ತು ದುಡಿಯುವ ಜನರ ಹೋರಾಟದ ಸಂಘಟನೆಗಳಿಂದ ಮತ್ತು ಅದಕ್ಕೆ ಕ್ರಾಂತಿಕಾರಿ ಕಣ್ಣೋಟವನ್ನು ಒದಗಿಸಿದ ಎಡ ಶಕ್ತಿಗಳಿಂದ ಗಮನಾರ್ಹವಾಗಿ ಪ್ರಭಾವಿತರಾಗಿದ್ದರು. ಯುದ್ಧದ ಮತ್ತು ’ಭಾರತ ಬಿಟ್ಟು ತೊಲಗಿ’ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಹೋಗಿ ಒಂದು ಸಾಮೂಹಿಕ ಪಕ್ಷವಾಗಿ ಬೆಳೆದಿದ್ದ ಕಮ್ಯುನಿಸ್ಟ್ ಪಕ್ಷ ಮತ್ತು ’ಭಾರತ ಬಿಟ್ಟು ತೊಲಗಿ’ ಹೋರಾಟಕ್ಕೆ ಒಂದು ಸಂಘಟಿತ ನಾಯಕತ್ವ ಒದಗಿಸಿದ ಸಮಾಜವಾದಿಗಳು ಹಾಗೂ ಎಡಪಂಥೀಯರು ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಸಾಮೂಹಿಕ ಹೋರಾಟದಲ್ಲಿ ಗಣನೀಯ ಪಾತ್ರಗಳನ್ನು ವಹಿಸಲು ಸಮರ್ಥರಾದರು.
ಬೆಳೆಯುತ್ತಿದ್ದ ಕಮ್ಯುನಿಸ್ಟ್ ಪಕ್ಷದ ಪ್ರಭಾವವನ್ನು ತಗ್ಗಿಸುವ ಸಲುವಾಗಿ, ನೆಹರೂ ಮತ್ತು ಕಾಂಗ್ರೆಸ್ಸಿನ ಉನ್ನತ ನಾಯಕರುಗಳು ಒಂದು ಪ್ರಬಲವಾದ ಕಮ್ಯುನಿಸ್ಟ್-ವಿರೋಧಿ ಪ್ರಚಾರವನ್ನು ಹರಿಬಿಟ್ಟರು. ಸಾಮೂಹಿಕ ಸಂಘಟನೆಗಳನ್ನು ಒಡೆಯುವ ಯೋಜನೆ ಹೊಂದಿದ್ದ ಸಮಾಜವಾದಿಗಳ ಬೆಂಬಲದೊಂದಿಗೆ ಕಮ್ಯುನಿಸ್ಟರಿಗೆ ಕಷ್ಟಗಳನ್ನು ಸೃಷ್ಟಿಮಾಡಿದರು. ಮತ್ತೊಮ್ಮೆ ಕಮ್ಯುನಿಸ್ಟ್ ಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿದ್ದವರಲ್ಲಿ ಗಣನೀಯ ವಿಭಾಗದ ಸಾಮ್ರಾಜ್ಯಶಾಹಿ-ವಿರೋಧಿ ಭಾವನೆಗಳ ಪ್ರವಾಹದ ವಿರುದ್ಧ ನಡೆಯಬೇಕಾದ ಸನ್ನಿವೇಶವನ್ನು ಎದುರಿಸಬೇಕಾಯಿತು.
ಈ ಸಮಾಜವಾದಿ ಮತ್ತು ಎಡಪಂಥೀಯರಲ್ಲಿ ಅನೇಕರು ಕಾಂಗ್ರೆಸ್ಸಿನ ಬಲಪಂಥೀಯ ನಾಯಕರ ಸೈದ್ಧಾಂತಿಕ ಪ್ರಭಾವಕ್ಕೆ ಒಳಗಾಗಿದ್ದರು. ’ಭಾರತ ಬಿಟ್ಟು ತೊಲಗಿ’ ಚಳುವಳಿಗೆ ವಿಶ್ವಾಸದ್ರೋಹ ಬಗೆದರು ಎಂದು ದೂಷಿಸುತ್ತಾ ’ಕಮ್ಯುನಿಸ್ಟರನ್ನು ಮೂಲೆಗುಂಪಾಗಿಸುವ’ ಕಾಂಗ್ರೆಸ್ ನಾಯಕತ್ವದ ಪ್ರಯತ್ನಗಳ ಜತೆ ತಮ್ಮನ್ನು ಪೂರ್ಣವಾಗಿ ಗುರುತಿಸಿಕೊಂಡಿದ್ದರೂ, ಈ ಶಕ್ತಿಗಳು ಮುಷ್ಕರಗಳು ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ದೊಡ್ಡ ಅಲೆಗಳಲ್ಲಿ ಸಿಲುಕಿಕೊಂಡು, ಈ ಚಳುವಳಿಗಳಿಗೆ ಶಕ್ತಿ ಮತ್ತು ರಣೋತ್ಸಾಹ ತುಂಬಲು ಕಮ್ಯುನಿಸ್ಟರ ಜತೆ ಸಹಕರಿಸಲು ಮುಂದಾದರು.
ಎರಡನೇ ವಿಶ್ವ ಯುದ್ಧ ಮತ್ತು ’ಭಾರತ ಬಿಟ್ಟು ತೊಲಗಿ’ ಚಳುವಳಿಯ ಕೊನೆಯ ಹೊತ್ತಿಗೆ, ಕಾಂಗ್ರೆಸ್ಸಿನ ರಾಜಕೀಯ ನಾಯಕತ್ವಕ್ಕೆ ಸವಾಲು ಒಡ್ಡುವ, ತನ್ನ ಸ್ವತಂತ್ರ ಕಾರ್ಮಿಕ ವರ್ಗದ ಧೋರಣೆ ಹಾಗೂ ಕಾರ್ಯಾಚರಣೆಯ ಕಾರ್ಯಕ್ರಮದೊಂದಿಗೆ, ಪಕ್ಷದ ಗಣನೀಯ ಪ್ರಭಾವ ಹೊಂದಿದ ಹಲವಾರು ಸಾಮೂಹಿಕ ಸಂಘಟನೆಗಳೊಂದಿಗೆ ಕಮ್ಯುನಿಸ್ಟ್ ಪಕ್ಷವು ದೇಶಾದ್ಯಂತ ವಿಸ್ತಾರಗೊಂಡಿತ್ತು.
ಕಮ್ಯುನಿಸ್ಟ್ ಪಕ್ಷವು ಕೇರಳ, ಆಂಧ್ರ ಮತ್ತು ಬಂಗಾಳ ಹಾಗೂ ಸ್ಥಳೀಯವಾಗಿ ಅನೇಕ ಪ್ರಾಂತಗಳಲ್ಲಿ ವ್ಯಾಪಕ ಜನಬೆಂಬಲವನ್ನು ಪಡೆದ ಒಂದು ಪಕ್ಷದ ಸ್ಥಾನಮಾನವನ್ನು ಗಳಿಸಿಕೊಂಡಿತ್ತು. ಭವಿಷ್ಯದಲ್ಲಿ ಕಾಂಗ್ರೆಸಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದ ಒಂದು ಪಕ್ಷವಾಗಿ ಮತ್ತು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತ್ತು. ಕಾರ್ಮಿಕರು, ರೈತರು ಮತ್ತು ವಿದ್ಯಾರ್ಥಿಗಳಂತಹ ವಿವಿಧ ವಿಭಾಗಗಳ ಜನರಲ್ಲಿ ಗಣನೀಯ ಪ್ರಭಾವವನ್ನು ಹೊಂದಿದ್ದ ಪಕ್ಷದ ಬೆಳವಣಿಗೆಯು ಕಾಂಗ್ರೆಸ್ಸಿಗೆ ಒಂದು ಪ್ರಬಲ ಎದುರಾಳಿಯಾಗಿ ನಿಂತಿತ್ತು.
ಈ ಬೆಳವಣಿಗೆಗಳ ರಾಜಕೀಯ ಹಿನ್ನೆಲೆಗಳನ್ನೂ ಗಮನಿಸಬೇಕು. ಎರಡನೇ ವಿಶ್ವ ಯುದ್ಧದಲ್ಲಿ ಸೋವಿಯತ್ ಯೂನಿಯನ್ ವಹಿಸಿದ ಐತಿಹಾಸಿಕ ಪಾತ್ರವು ಸಮಾಜವಾದಿ ಸಿದ್ಧಾಂತವು ಮತ್ತಷ್ಟು ಹರಡಲು ಕಾರಣವಾಗಿತ್ತು. ’ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಯುವಜನಗಳು ಬಹುಪಾಲು ಕಮ್ಯುನಿಸಂನ ಕಡೆ ಒಲವು ಹೊಂದಿದ್ದರು. ಅಂತಹ ಭಾವನೆಗಳನ್ನು ಹೊಂದಿದ್ ಕಾಂಗ್ರೆಸ್ಸಿಗರು, ಕಾಂಗ್ರೆಸ್ ನಾಯಕತ್ವದ ಧೋರಣೆಯನ್ನು ಭಾವನಾತ್ಮಕವಾಗಿ ಮೈಗೂಡಿಸಿಕೊಳ್ಳಲು ಅಸಮರ್ಥವಾದವರು, ಏಕೆಂದರೆ ಕಮ್ಯುನಿಸ್ಟರು ಜನಸಮುದಾಯದ ನಡುವೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದರು.
ಕನ್ನಡಕ್ಕೆ: ಟಿ. ಸುರೇಂದ್ರ ರಾವ್