150ನೇ ಜನ್ಮದಿನದ ಸಂದರ್ಭದಲ್ಲಿ ಲೆನಿನ್ ಅವರನ್ನು ನೆನೆಯುತ್ತ……….

ಪ್ರಕಾಶ್ ಕಾರಟ್

ಒಂದು ಶತಮಾನದ ಹಿಂದೆ ೧೯೧೮-೧೯ರಲ್ಲಿ ’ಸ್ಪಾನಿಶ್ ಫ್ಲೂ ಎಂದು ಕರೆಯಲಾಗುವ ಇನ್‌ಫ್ಲುಯೆಂಜಾ ಎಂಬ ಈವರೆಗಿನ ಅತಿ ಭೀಕರ ಜಾಗತಿಕ ಪಿಡುಗು ಬಂದಿತ್ತು.  ಅಕ್ಟೋಬರ್ ಕ್ರಾಂತಿಯ ಕೆಲವಾರಗಳಲ್ಲೇ ಇದು ಆರಂಭವಾಗಿತ್ತು. ಸಾರ್ವಜನಿಕ ಆರೋಗ್ಯ ಮತ್ತು ಶುಶ್ರೂಷೆಗೆ ವ್ಯವಸ್ಥೆ ಬೊಲ್ಶೇವಿಕ್ ಕ್ರಾಂತಿಕಾರಿ ಸರಕಾರ ತೆಗೆದುಕೊಂಡ ಮೊದಲ ಕ್ರಮವಾಗಿತ್ತು. ಇದಕ್ಕಾಗಿ ಸಾರ್ವಜನಿಕ ಆರೋಗ್ಯದ ಸಚಿವಾಲಯವನ್ನು ಸ್ಥಾಪಿಸಲಾಯಿತು. ಹರಡುತ್ತಿದ್ದ ಇನ್‌ಫ್ಲುಯೆಂಜಾ ಪಿಡುಗನ್ನು ನಿಯಂತ್ರಿಸುವುದೇ ಅದರ ಮೊದಲ ಆದ್ಯತೆಯಾಗಿತ್ತು. ಲೆನಿನ್ ಮತ್ತು ಹೊಸ ಸಮಾಜವಾದಿ ಪ್ರಭುತ್ವವು ಹೀಗೆ, ಸಾರ್ವಜನಿಕ ಆರೋಗ್ಯದ ಮೂಲಕ ಪ್ರಯೋಗ ನಡೆಸಿ ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧ ಸಾರಿದವರಲ್ಲಿ ಮೊದಲಿಗರಾಗಿದ್ದರು. ಇಂದಿನ ಪ್ರಮುಖ ಸಾಮ್ರಾಜ್ಯಶಾಹಿ ಶಕ್ತಿಯ ನಡೆಗೆ ಎಷ್ಟು ತದ್ವಿರುದ್ಧವಾಗಿದೆ!

ಏಪ್ರಿಲ್ ೨೨, ೨೦೨೦ ಇಪ್ಪತ್ತನೇ ಶತಮಾನದ ಮಹಾನ್ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಇಲ್ಯಿಚ್ ಲೆನಿನ್‌ರ ೧೫೦ನೆಯ ಜಯಂತಿ. ಮಾಕ್ಸ್ ಮತ್ತು ಏಂಗೆಲ್ಸ್‌ರ ನಂತರ ಮಾರ್ಕ್ಸ್‌ವಾದದ ತತ್ವ ಮತ್ತು ಆಚರಣೆಗೆ ಅತಿ ದೊಡ್ಡ ಕೊಡುಗೆ ನೀಡಿದ ನಾಯಕರೆಂದರೆ ಲೆನಿನ್. ಸಾಮ್ರಾಜ್ಯಶಾಹಿಯ ಕುರಿತಾದ ಅವರ ವಿಶ್ಲೇಷಣೆಯಂತಹ ಪ್ರಮುಖ ಸೈದ್ಧಾಂತಿಕ ಮುನ್ನಡೆಯು, ಅಕ್ಟೋಬರ್ ೧೯೧೭ ರಲ್ಲಿ ಜಗತ್ತಿನಲ್ಲೇ ಪ್ರಪ್ರಥಮವಾಗಿ ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿಗೆ ವೇದಿಕೆಯನ್ನು ಸಜ್ಜುಗೊಳಿಸಿತು.

ಕೈಗಾರಿಕಾ ಶ್ರಮಿಕರು, ವಸಾಹತುಗಳ ಮತ್ತು ದಮನಿತ ದೇಶಗಳ ಜನತೆಯನ್ನು ಒಳಗೊಂಡಂತಹ ಕ್ರಾಂತಿಕಾರಿ ರಣನೀತಿಯೊಂದನ್ನು ಲೆನಿನ್ ರೂಪಿಸಿದ್ದರು. ಈ ರಣನೀತಿಯ ಇನ್ನೊಂದು ಪ್ರಮುಖ ಅಂಶವೆಂದರೆ ರೈತ-ಕಾರ್ಮಿಕ ವರ್ಗಗಳ ಐಕ್ಯತೆ. ಅವರು ದುಡಿಯುವ ವರ್ಗದ ಮುಂಚೂಣಿಯಲಿರುವ ಕ್ರಾಂತಿಕಾರಿ ಪಕ್ಷದ ಪಾತ್ರದ ಪ್ರವರ್ತಕರಾಗಿದ್ದರು.

ಲೆನಿನ್‌ರು ಎಲ್ಲ ರೀತಿಯ ಸುಧಾರಣಾವಾದ ಮತ್ತು ವರ್ಗ ಸಖ್ಯತೆಯ ರೂಪಗಳಿಗೆ ವಿರೋಧಿಸುತ್ತಾ ದುಡಿಯುವ ವರ್ಗದ ಕ್ರಾಂತಿಕಾರಿ ಗುಣಲಕ್ಷಣಗಳನ್ನು ಕಾಪಾಡಲು ಅವಿರತ ಹೋರಾಟ ನಡೆಸಿದ್ದರು. ಅಲ್ಪಾವಧಿಗೆ ಮಾತ್ರ ಹೊಸದಾಗಿ ಸ್ಥಾಪಿತವಾಗಿದ್ದ ಸೋವಿಯತ್ ಯೂನಿಯನ್‌ನ ನಾಯಕರಾಗಿದ್ದರೂ, ಅವರು ಅಸಂಖ್ಯಾತ ಅಡೆತಡೆಗಳ ನಡುವೆಯೂ ಸಮಾಜವಾದಿ ರಚನೆಗೆ ಸ್ಪಷ್ಟ ನಿರ್ದೇಶನ ನೀಡಲು ಶ್ರಮಿಸಿದರು. ಅದು ಭವಿಷ್ಯಕ್ಕೆ ಅತ್ಯಪಯುಕ್ತ ಅನುಭವವಾಗಿತ್ತು.

ಈ ಸಂಕ್ಷಿಪ್ತ ಶ್ರದ್ಧಾಂಜಲಿಯಲ್ಲಿ ಸಾಮ್ರಾಜ್ಯಶಾಹಿಯನ್ನು ಅರಿಯುವಲ್ಲಿ ಲೆನಿನ್‌ರ ಮೂಲ ಕೊಡುಗೆ, ಅದರ ಪ್ರಸ್ತುತತೆ ಹಾಗೂ ರೋಗರುಜಿನಗಳ ವಿರುದ್ಧ ಹೋರಾಟದಲ್ಲಿ ಅವರ ಮತ್ತು ಯುವ ಸೋವಿಯತ್‌ನ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ.

ಇಂದಿನ ಸಾಮ್ರಾಜ್ಯಶಾಹಿ

ಬಂಡವಾಳಶಾಹಿಯು ಜಗತ್‌ವ್ಯಾಪಿ ವ್ಯವಸ್ಥೆಯಾಗಿ ಸ್ಥಾಪಿತವಾಗುವುದು ಎಂಬ ಮುನ್ನೋಟವನ್ನು ಮಾರ್ಕ್ಸ್ ಹೊಂದಿದ್ದರೂ, ಅದು ಏಕಸ್ವಾಮ್ಯದ ಬಂಡವಾಳಶಾಹಿಯ ಹಂತಕ್ಕೆ ಬೆಳೆದಿದ್ದು ಅವರ ಜೀವಿತಾವಧಿಯ ನಂತರವೇ. ಲೆನಿನ್‌ರ ಸೈಧ್ಧಾಂತಿಕ ಗ್ರಹಿಕೆಯು, ಏಕಸ್ವಾಮ್ಯದ ಬಂಡವಾಳದ ಅಂತರ್ಗತವಾದ ಕಾರಣದಿಂದಾಗಿಯೇ ಹೇಗೆ ಸಾಮ್ರಾಜ್ಯಶಾಹಿಯು ಜಗತ್‌ವ್ಯಾಪಿ ವ್ಯವಸ್ಥೆಯಾಗಿ ಅಭಿವೃದ್ಧಿಗೊಂಡಿದೆಯೆಂಬುದನ್ನು ಅರಿಯಲು ಸಹಕಾರಿಯಾಗಿತ್ತು. ಹಾಗಾಗಿ ಸಾಮ್ರಾಜ್ಯಶಾಹಿಯ ಸಿದ್ಧಾಂತವನ್ನು ಜಾಗತಿಕ ಶ್ರಮಿಕರ ಕ್ರಾಂತಿಯ ರಣನೀತಿ ಮತ್ತು ತಂತ್ರಗಳೊಂದಿಗೆ ಸಮ್ಮಿಳಿತಗೊಳಿಸಲು ಅವರಿಗೆ ಸಾಧ್ಯವಾಗಿತ್ತು.

ಸಾಮ್ರಾಜ್ಯಶಾಹಿಯ ಬಗ್ಗೆ ಲೆನಿನರಿಗಿದ್ದ ಆಳವಾದ ತಿಳಿವಿನ ಕಾರಣದಿಂದಾಗಿ, ಸಮಾಜವಾದಿ ಕ್ರಾಂತಿಯು ಕೇವಲ ಬಂಡವಾಳಶಾಹಿ ವ್ಯವಸ್ಥೆ ಸಂಪೂರ್ಣವಾಗಿ ಬೆಳೆದ ಹಂತಕ್ಕೆ ತಲುಪಿರುವ ಸಮಾಜಗಳಲ್ಲಿ ಮಾತ್ರವೇ ಸಾಧ್ಯವಿದೆಯೆಂಬ ಸಾಂಪ್ರ್ರದಾಯಿಕ ತಿಳಿವನ್ನು ತಿರಸ್ಕರಿಸಿದ ಮೊದಲ ಮಾರ್ಕ್ಸ್‌ವಾದಿ ಅವರಾದರು. ಸಾಮ್ರಾಜ್ಯಶಾಹಿಯ ಯುಗದಲ್ಲಿ ಅಸಮಾನ ಬಂಡವಾಳಶಾಹಿ ವ್ಯವಸ್ಥೆಯ ಬೆಳವಣಿಗೆಯಿಂದಾಗಿ, ಸಮಾಜವಾದಿ ಕ್ರಾಂತಿಯು ಅತ್ಯಂತ ಹಿಂದುಳಿದಿರುವ ಬಂಡವಾಳಶಾಹಿ ದೇಶದಲ್ಲೇ ಯಶಸ್ವಿಯಾಗುವ ಸಾಧ್ಯತೆಯಿದೆಯೆಂದು ಲೆನಿನ್ ಗಮನಿಸಿದರು. ಸಾಮ್ರಾಜ್ಯಶಾಹಿ ಯುಗದಲ್ಲಿ, ಬಂಡವಾಳಶಾಹಿ ಶೋಷಣೆಯ ಜಗತ್‌ವ್ಯಾಪಿ ಸರಪಳಿಯ ಒಡೆಯಬಹುದಾದ ಅತ್ಯಂತ ದುರ್ಬಲ ಕೊಂಡಿಯಿರುವಲ್ಲಿ ಈ ಕ್ರಾಂತಿ ಫಲಿಸಬಲ್ಲದು. ವಿವಿಧ ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ಪೈಪೋಟಿಯ ಕಾರಣದಿಂದಾಗಿ, ಮೊದಲ ವಿಶ್ವ ಸಮರ ನಡೆದಾಗ ಝಾರ್ ಆಳುತ್ತಿದ್ದ ರಷ್ಯ ಅಂತಹ ದುರ್ಬಲ ಕೊಂಡಿಯೆಂದು ಗುರುತಿಸಿದ್ದು ಲೆನಿನ್.

ಮುಂದುವರೆದಿದ್ದ ರಾಷ್ಟ್ರಗಳ ದುಡಿಯುವ ವರ್ಗದ ಹೋರಾಟಗಳು ಮತ್ತು ವಸಾಹತು ದೇಶಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಜನತೆ ನಡೆಸುತ್ತಿದ್ದ ರಾಷ್ಟ್ರೀಯ ವಿಮೋಚನಾ ಹೋರಾಟಗಳನ್ನು ಸಂಯೋಜಿಸುವುದಕ್ಕೆ ಲೆನಿನ್‌ರ ಸಾಮ್ರಾಜ್ಯಶಾಹಿಯ ಈ ತಿಳುವಳಿಕೆ ಬುನಾದಿ ಹಾಕಿತ್ತು.

Pale Tider - Spanish Flu - Book Coverಇಂದಿನ ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ಎದುರಿಸಲೂ ಲೆನಿನ್‌ರ ಸಾಮ್ರಾಜ್ಯಶಾಹಿಯ ತಿಳುವಳಿಕೆ ಮತ್ತು ಸಿದ್ಧಾಂತವೇ ಬುನಾದಿ. ಲೆನಿನ್‌ರು ಸಾಮ್ರಾಜ್ಯಶಾಹಿಯನ್ನು ವಿಶ್ಲೇಷಿಸಿದ ಸಮಯದಿಂದ ಇಂದಿನವರೆಗೆ ಹಣಕಾಸು ಬಂಡವಾಳದ ಗುಣಲಕ್ಷಣಗಳು ಬಹಳಷ್ಟೂ ಬದಲಾಗಿವೆ. ಕಳೆದ ಮೂರು ದಶಕಗಳಲ್ಲಂತೂ ಬಂಡವಾಳದ ಸಾಂದ್ರೀಕರಣ ಮತ್ತು ಕೇಂದ್ರೀಕರಣದಲ್ಲಿ ಅಗಾಧ ಪ್ರಮಾಣದ ಹೆಚ್ಚಳವುಂಟಾಗಿದೆ. ತನ್ನ ಲಾಭದ ಹುಡುಕಾಟದಲ್ಲಿ ಈ ಹಣಕಾಸು ಬಂಡವಾಳವು ಜಗತ್ತಿನಾದ್ಯಂತ ತಡೆರಹಿತ ಅವಕಾಶಗಳಿಗಾಗಿ ಒತ್ತಾಯಿಸುತ್ತದೆ. ಹಣಕಾಸು ಬಂಡವಾಳ ಮತ್ತು ನವ-ಉದಾರೀಕರಣ ನೀತಿಗಳ ಜೊತೆಗೂಡಿ ಹಲವು ಸ್ವತಂತ್ರ ದೇಶಗಳ ಆರ್ಥಿಕ ಮತ್ತು ರಾಜಕೀಯ ಸ್ವಾಯತ್ತತೆಗೆ ತೀವ್ರ ಅಪಾಯ ತಂದೊಡ್ಡಿ ದುಡಿಯುವ ಜನರ ಬದುಕಿನ ಮೇಲೆ ತೀವ್ರ ದಾಳಿಗಳನ್ನು ಮಾಡಿದೆ.

ಈ ಬದಲಾವಣೆಯು ಸಾಮ್ರಾಜ್ಯಶಾಹಿಯ ದರೋಡೆಕೋರ, ಆಕ್ರಮಣಕಾರಿ ಗುಣವನ್ನು ಕಡಿಮೆ ಮಾಡಿದೆಯೆಂದೆಲ್ಲ. ಸಾಮ್ರಾಜ್ಯಶಾಹಿ ಶಕ್ತಿಗಳ ನಡುವಿನ ವೈರುಧ್ಯಗಳು ಅವುಗಳ ನಡುವೆ ಯುದ್ಧಕ್ಕೆ ದಾರಿ ಮಾಡಿಲ್ಲ, ನಿಜ. ಆದರೆ ಈ ಶಕ್ತಿಗಳ ನಾಯಕನಾದ ಅಮೇರಿಕಾವು ವಿವಿಧ ರಾಷ್ಟ್ರಗಳ ವಿಮೋಚನಾ ಚಳುವಳಿಗಳ ಮೇಲೆ ಯುದ್ಧ ಸಾರಿದೆ. ಸಾಮ್ರಾಜ್ಯಶಾಹಿ ಕೂಟಗಳು ಇತರೆ ದೇಶಗಳ ಮೇಲೆ ತಮ್ಮ ಅಧಿಪತ್ಯ ಸಾರಲು ಮತ್ತು ಅವುಗಳನ್ನು ಹತ್ತಿಕ್ಕಲು ಯುದ್ಧ ನಡೆಸಿವೆ. ಅಮೇರಿಕಾವು ತನ್ನ ಅಧಿಪತ್ಯಕ್ಕೆ ಅಡ್ಡಿ ಪಡಿಸುವ ರಾಷ್ಟ್ರಗಳ ಮೇಲೆ ಆರ್ಥಿಕ ದಿಗ್ಬಂಧನ ಮತ್ತು ದಮನಕಾರಿ ನಿರ್ಬಂಧಗಳನ್ನು ಬಳಸುತ್ತದೆ.

ಅಭಿವೃದ್ಧಿಶೀಲ ದೇಶಗಳಲ್ಲಿನ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿ, ಅವುಗಳನ್ನು ಕಸಿದುಕೊಂಡು ಶೋಷಿಸುವ ಮೂಲಕ ಬಂಡವಾಳದ ಅಪಹರಣ ಮತ್ತು ಶೇಖರಣೆಯ ಕ್ರಮಗಳಲ್ಲಿ ಸಾಮ್ರಾಜ್ಯಶಾಹಿಯ ದರೋಡೆಕೋರತನವನ್ನು ಕಾಣಬಹುದಾಗಿದೆ. ನವ ಉದಾರೀಕರಣದಡಿಯಲ್ಲಿ ಮೂಲಭೂತ ಸೇವೆಗಳಾದ ಶಿಕ್ಷಣ ಮತ್ತು ಆರೋಗ್ಯವನ್ನು ಖಾಸಗೀಕರಣ ಮಾಡಲಾಗಿದೆ. ಸಾರ್ವಜನಿಕ ಬಳಕೆಗೆ ಸೇರಿದ ನೀರು ಮತ್ತು ಶಕ್ತಿ ಸಂಪನ್ಮೂಲಗಳನ್ನು ಖಾಸಗಿಯವರ ಹಿಡಿತಕ್ಕೆ ತಂದು, ಎಲ್ಲ ದುಡಿಯುವ ಜನತೆಯನ್ನು ತೀವ್ರವಾಗಿ ಶೋಷಿಸಲಾಗುತ್ತಿದೆ ಎಂಬುದರಲ್ಲೂ ಸಾಮ್ರಾಜ್ಯಶಾಹಿಯ ದರೋಡೆಕೋರತನವನ್ನು ಕಾಣಬಹುದು.

೧೯೧೮-೧೯ ರ ಫ್ಲೂ ಪಿಡುಗು:

ಇಡೀ ಜಗತ್ತು ಕೋವಿಡ್-೧೯ ರ ಪಿಡುಗಿನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಲೆನಿನ್‌ರ ೧೫೦ ನೆಯ ಹುಟ್ಟು ಹಬ್ಬ ಬಂದಿದೆ. ಜಗತ್ತಿನ ೧೮೫ ದೇಶಗಳು ಈ ವೈರಸ್‌ನಿಂದ ಪೀಡಿತವಾಗಿವೆ. ಏಪ್ರಿಲ್ ೧೫ ರ ವೇಳೆಗೆ ಜಗತ್ತಿನಾದ್ಯಂತ ಸುಮಾರು ಇಪ್ಪತ್ತು ಲಕ್ಷ ಜನ ಬಾಧೆಗೆ ಒಳಗಾಗಿದ್ದಾರೆ.

ಒಂದು ಶತಮಾನದ ಹಿಂದೆ ೧೯೧೮-೧೯ರಲ್ಲಿ ಬಹುದೊಡ್ಡ ಪಿಡುಗು ಉಂಟಾಗಿತ್ತು. ಅದೆಂದರೆ ಇನ್‌ಫ್ಲುಯೆಂಜಾ (ಅದು ಸ್ಪೈನ್ ನಲ್ಲಿ ಆರಂಭವಾಗಿರದಿದ್ದರೂ ಅದನ್ನು ತಪ್ಪಾಗಿ ’ಸ್ಪಾನಿಷ್ ಫ್ಲೂ ಎಂದು ಕರೆಯಲಾಗುತ್ತಿತ್ತು) ಈ ಪೀಡೆಯು ಸುಮಾರು ೫ ರಿಂದ ೧೦ ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಮೊದಲ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರಿಗೆ ಸೋಂಕು ತಗಲಿದ್ದರಿಂದ ಮತ್ತು ಎಲ್ಲೆಡೆ ಓಡಾಡುತ್ತಿದ್ದ ಸೈನ್ಯದ ತುಕಡಿಗಳಿಂದಾಗಿ ಈ ಕಾಯಿಲೆ ಜಾಗತಿಕವಾಗಿ ಹರಡಿತ್ತು. ಬ್ರಿಟಿಷರ್ ಆಡಳಿತದಲ್ಲಿದ್ದ ಭಾರತವೂ ಇದಕ್ಕೆಂದು ಪ್ರಮುಖ ಬಲಿಯಾಗಿತ್ತು. ಯುದ್ಧನಿರತ ಸೈನಿಕರು ಭಾರತಕ್ಕೆ ಮರಳಿದಾಗ ಈ ಕಾಯಿಲೆಯಿಂದ ಸುಮಾರು ೧.೬-೧.೮ ಕೋಟಿ ಜನ ಸತ್ತಿದ್ದರೆಂದು ಅಂದಾಜು ಮಾಡಲಾಗಿದೆ.

ಅಕ್ಟೋಬರ್ ಕ್ರಾಂತಿಯ ಕೆಲವಾರಗಳಲ್ಲೇ ಈ ರೋಗ ಆರಂಭವಾಗಿತ್ತು. ಎಲ್ಲ ಹಗೆತನವನ್ನೂ ಕೊನೆಗೊಳಿಸಿ ಶಾಂತಿಗೆ ದಾರಿ ಮಾಡಿಕೊಡಬೇಕೆಂದು ಲೆನಿನ್ ಆಳ್ವಿಕೆಯಲ್ಲಿದ್ದ ರೈತ-ಕಾರ್ಮಿಕ ಸರ್ಕಾರದ ಪರವಾಗಿ ಯುದ್ಧನಿರತ ಶಕ್ತಿಗಳಿಗೆ ಮನವಿ ಮಾಡಿದ್ದರು. ಆದರೆ ಒಂದೆಡೆ ಬ್ರಿಟನ್, ಫ್ರಾನ್ಸ್ ಮತ್ತು ಅಮೇರಿಕಾ ಹಾಗೂ ಇನ್ನೊಂದೆಡೆ ಜರ್ಮನಿಯ ಮಿತ್ರ ರಾಷ್ಟ್ರಗಳು ಈ ಮನವಿಯನ್ನು ತಳ್ಳಿ ಹಾಕಿದ್ದವು. ಜಯದ ಅವಕಾಶ ಕಂಡಿದ್ದ ಬ್ರಿಟನ್ ಮತ್ತು ಮಿತ್ರರಾಷ್ಟ್ರಗಳು ಯುದ್ಧ ಮುಂದುವರೆಸಲು ಉತ್ಸುಕವಾಗಿದ್ದವು. ಶಾಂತಿ ಒಪ್ಪಂದ ಮಾಡಿಕೊಂಡಿದ್ದರೆ ಇನ್‌ಫ್ಲುಯೆಂಜಾ ವಿರುದ್ಧ ಹೋರಾಟ ಸಾಧ್ಯವಿತ್ತು. ಅಕ್ಟೋಬರ್ ೧೯೧೮ ರಲ್ಲಿ ಎರಡನೆಯ ಹಂತದ ಇನ್‌ಫ್ಲುಯೆಂಜ ಭುಗಿಲೆದ್ದಾಗ ಹತ್ತಾರು ಸಾವಿರಾರು ಸೈನಿಕರು ಕ್ಷಿಪ್ರ ಸಾವಿಗೀಡಾದರು.

ಮೊದಲ ಮಹಾಯುದ್ಧದ ಈ ಕರಾಳ ಇತಿಹಾಸ ಸಾಮ್ರಾಜ್ಯಶಾಹಿಯ ಅಮಾನವೀಯ ಮುಖವನ್ನು ತೋರುತ್ತದೆ. ರೋಗ ಪೀಡಿತರು ಮತ್ತು ಸಾವಿಗೀಡಾಗುತ್ತಿದ್ದವರ ಬಗ್ಗೆ ಇರಬೇಕಿದ್ದ ಮಾನವೀಯ ಕಾಳಜಿಯನ್ನು ಸಾಮ್ರಾಜ್ಯಶಾಹಿಯ ಅಧಿಪತ್ಯದ ಲಾಲಸೆ ನುಂಗಿಹಾಕಿತ್ತು.

ರಷ್ಯಾದಲ್ಲಿ ಇದೇ ಸಮಯದಲ್ಲಿ ಆಂತರಿಕ ಯುದ್ಧ ನಡೆದಿತ್ತು. ಕ್ರಾಂತಿ ಮತ್ತು ದುಡಿಯುವ ವರ್ಗದ ಅಧಿಕಾರವನ್ನು ಇಲ್ಲವಾಗಿಸಲು ಪ್ರತಿಕ್ರಾಂತಿ ಶಕ್ತಿಗಳು ಅವಮಾನವೀಯ ದಾಳಿ ಆರಂಭಿಸಿದ್ದವು. ಇದೇ ಅವಧಿಯಲ್ಲಿ ಬರಗಾಲ ಮತ್ತು ಸಾಂಕ್ರಾಮಿಕ ರೋಗಗಳು ಹರಡಿದವು. ಇನ್‌ಫ್ಲುಯೆಂಜಾದಿಂದ ಎಷ್ಟು ಜನ ಸತ್ತರೋ ತಿಳಿಯದು, ಅಂದಿನ ಯುವ ಸರ್ಕಾರದ ಯುವ ನಾಯಕನಾಗಿದ್ದ ೩೪ ಕ್ಕೂ ಚಿಕ್ಕ ಪ್ರಾಯದ ಬೊಲ್ಶೆವಿಕ್ ನಾಯಕ ಯಾಕೊವ್ ಸ್ವೆರ‍್ಟೋಲ್ವ್ ಇದಕ್ಕೆ ಬಲಿಯಾದ ಪ್ರಮುಖ. ಮೊದಲ ಮಹಾಯುದ್ಧ ಮುಗಿಯುತ್ತಿದ್ದಂತೆ ಎಲ್ಲ ಸಾಮ್ರಾಜ್ಯಶಾಹಿ ಶಕ್ತಿಗಳೂ ರಷ್ಯಾದ ಮೇಲೆ ದಾಳಿ ನಡೆಸಿ ಕ್ರಾಂತಿಯನ್ನು ಮುರಿಯುವತ್ತ ತಮ್ಮ ಗಮನ ಹರಿಸಿದವು. ಪ್ರತಿಕಾಂತಿ ಶಕ್ತಿಗಳನ್ನು ಬೆಂಬಲಿಸಿ ಹನ್ನೊಂದು ದೇಶಗಳು ತಮ್ಮ ಪಡೆಗಳನ್ನು ಕಳಿಸಿದ್ದವು. ತಮ್ಮ ರಾಷ್ಟ್ರಗಳಲ್ಲಿ ಹರಡುತ್ತಿದ್ದ ಪಿಡುಗಿನ ಬಗ್ಗೆ ಅವರಿಗೆ ಗಮನವಿರಲಿಲ. ಅವರ ಗಮನವಿದ್ದದ್ದು ರಷ್ಯಾದ ಕ್ರಾಂತಿಯನ್ನು ತಡೆಯುವತ್ತ.

ಸಾರ್ವಜನಿಕ ಆರೋಗ್ಯ ರಕ್ಷಣೆಯ ಪ್ರವರ್ತಕ

ಲೆನಿನ್ ಕೌನ್ಸಿಲ್ ಆಫ್ ಕೊಮಿಸಾರ್ಸ್ (ಸಚಿವ ಸಂಪುಟದಂತೆ)ನ ಅಧ್ಯಕ್ಷರಾಗಿದ್ದರು. ಇದು ಕ್ರಾಂತಿಕಾರಿ ಸರ್ಕಾರದ ಪ್ರಧಾನಿ ಪಟ್ಟಕ್ಕೆ ಸಮಾನವಾದುದು. ಸಾರ್ವಜನಿಕ ಆರೋಗ್ಯ ಮತ್ತು ಶುಶ್ರೂಷೆಯು ಅವರು ತೆಗೆದುಕೊಂಡ ಮೊದಲ ಕ್ರಮವಾಗಿತ್ತು. ಸಾರ್ವಜನಿಕ ಆರೋಗ್ಯದ ಸಚಿವಾಲಯವನ್ನು (ಪೀಪಲ್ಸ್ ಕೊಮಿಸರೇಟ್ ಆಫ್ ಪಬ್ಲಿಕ್ ಹೆಲ್ತ್) ಜುಲೈ ೧೯೧೮ರಲ್ಲಿ ಸ್ಥಾಪಿಸಲಾಯಿತು. ಹರಡುತ್ತಿದ್ದ ಇನ್‌ಫ್ಲುಯೆಂಜಾ ಪಿಡುಗನ್ನು ನಿಯಂತ್ರಿಸುವುದೇ ಅದರ ಮೊದಲ ಆದ್ಯತೆಯಾಗಿತ್ತು. ೧೯೨೦ರಲ್ಲಿ ಲೆನಿನ್ “ಈ ಕಾಯಿಲೆಯನ್ನೆದುರಿಸುವಲ್ಲಿ ನಮ್ಮೆಲ್ಲ ದೃಢ ನಿಶ್ಚಯ ಮತ್ತು ಆಂತರಿಕ ಯುದ್ಧವೆನ್ನೆದುರಿಸಿದ ಅನುಭವ ಬಳಕೆಯಾಗಬೇಕು” ಎಂದು ಬರೆದಿದ್ದರು.

ಲಾರಾ ಸ್ಪಿನ್ನಿಯವರು ೨೦೧೭ ರಲ್ಲಿ ಸ್ಪಾನಿಷ್ ಫ್ಲೂನ ಕುರಿತಾಗಿ ಬರೆದಿರುವ “ಪೇಲ್ ರೈಡರ್ ಎಂಬ ಆಸಕ್ತಿಕಾರಕ ಕೃತಿಯಲ್ಲಿ ಸೋವಿಯತ್‌ನ ಈ ನಿರ್ಧಾರದ ಪ್ರಾಮುಖ್ಯತೆಯ ಬಗ್ಗೆ ಬರೆಯಲಾಗಿದೆ. “೧೯೨೦ ರಲ್ಲಿ ಒಂದು ಕೇಂದ್ರೀಕೃತ, ಸಂಪೂರ್ಣ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಜಾರಿಗೆ ತಂದ ಪ್ರಥಮ ರಾಷ್ಟ್ರ ರಷ್ಯಾ. ಅದು ಗ್ರಾಮೀಣ ಜನತೆಯನ್ನು ಒಳಗೊಳ್ಳದ ಕಾರಣ ಸಾರ್ವತ್ರಿಕವಾಗಿರಲಿಲ್ಲ. ಆದರೂ ಅದೊಂದು ಬಹುದೊಡ್ಡ ಸಾಧನೆಯಾಗಿತ್ತು ಮತ್ತು ಆ ಸಾಧನೆಯ ಹಿಂದಿದ್ದ ಶಕ್ತಿ ಲೆನಿನ್.

ವೈದ್ಯರು ಅಥವ ಚಿಕಿತ್ಸಕರು ಹೇಗಿರಬೇಕೆಂಬ ಅವರ ದೃಷ್ಟಿಕೋನವು ೧೯೨೪ ರಲ್ಲಿ ಸರ್ಕಾರವು ವೈದ್ಯಕೀಯ ಶಾಲೆಗಳಿಗೆ ನೀಡಿದ ನಿರ್ದೇಶನದಿಂದ ತಿಳಿಯುತ್ತದೆ. “ವೈದ್ಯರೆಂದರೆ ಖಾಯಿಲೆಗೆ ಕಾರಣವಾಗುವ ವೃತ್ತಿ ಮತ್ತು ಸಾಮಾಜಿಕ ಸ್ಥಿತಿಗಳನ್ನು ಅಭ್ಯಸಿಸಿ ಖಾಯಿಲೆಗೆ ಔಷಧಿ ನೀಡುವಂತಹವರು ಮಾತ್ರವಲ್ಲ, ಖಾಯಿಲೆಗಳನ್ನು ತಡೆಗಟ್ಟುವಂತಹವರೂ ಆಗಿರಬೇಕು” ಎಂದೂ ನಿರ್ದೇಶಿಸಿದ್ದರು. ಲೆನಿನ್‌ರ ಪಾಲಿಗೆ ಔಷಧವೆಂಬುದು ಕೇವಲ ಪ್ರಯೋಗಾತ್ಮಕ ಅಥವ ಜೈವಿಕವಾದುದಲ್ಲ. ಅದು ಸಾಮಾಜಿಕವಾದುದೂ ಆಗಿತ್ತು. ಇದೇ ಸಮಯದಲ್ಲಿ ಸೋಂಕುಶಾಸ್ತ್ರ – ರೋಗದ ಲಕ್ಷಣ, ಕಾರಣ ಮತ್ತು ಪರಿಣಾಮಗಳನ್ನು ಅಧ್ಯಯನವನ್ನು – ಒಂದು  ವಿಜ್ಞಾನವೆಂದು ಗುರುತಿಸಲಾಯ್ತು. ಸಾರ್ವಜನಿಕ ಆರೋಗ್ಯಕ್ಕೆ ಇಂತಹ ಅಧ್ಯಯನ ಬುನಾದಿಯಾಗುವ ಮಹತ್ವವನ್ನು ಅರಿಯಲಾಯಿತು. (ಲಾರಾ ಸ್ಪಿನ್ನಿ, “ಪೇಲ್ ರೈಡರ್, ದ ಸ್ಪಾನೀಷ್ ಫ್ಲೂ ೧೯೧೮ ಅಂಡ್ ಹೌ ಇಟ್ ಚೇಂಜ್ಡ್ ದಿ ವರ್ಲ್ಡ್).

ಲೆನಿನ್ ಮತ್ತು ಹೊಸ ಸಮಾಜವಾದಿ ಪ್ರಭುತ್ವವು ಹೀಗೆ ಸಾರ್ವಜನಿಕ ಆರೋಗ್ಯದ ಮೂಲಕ ಪ್ರಯೋಗ ನಡೆಸಿ ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧ ಸಾರಿದ್ದವರಲ್ಲಿ ಮೊದಲಿಗರಾಗಿದ್ದರು. ಇಂದಿನ ಪ್ರಮುಖ ಸಾಮ್ರಾಜ್ಯಶಾಹಿ ಶಕ್ತಿಯ ನಡೆಗೆ ಎಷ್ಟು ತದ್ವಿರುದ್ಧವಾಗಿದೆ! ಪಿಡುಗಿರಲಿ ಇಲ್ಲದಿರಲಿ, ಸಾಮ್ರಾಜ್ಯಶಾಹಿ ಅಮೆರಿಕಾ ಕ್ಯೂಬಾ, ವೆನಿಜುವೆಲ ಮತ್ತು ಇರಾನ್ ಗಳ ವಿರುದ್ಧ ಆರ್ಥಿಕ ಮತ್ತು ರಾಜಕೀಯ ದಾಳಿ ನಡೆಸುತ್ತಲೇ ಇದೆ. ತನ್ನದೇ ಮಿತ್ರ ರಾಷ್ಟ್ರಗಳಿಗೂ ಇಲ್ಲದಂತೆ ಎಲ್ಲ ಆರೋಗ್ಯ ಸಲಕರಣೆಗಳನ್ನೂ ತಾನೇ ವಶಪಡಿಸಿಕೊಳ್ಳ ಬಯಸುತ್ತದೆ. ಜರ್ಮನಿಗೆ ತೆರಳಬೇಕಿದ್ದ ಮುಖಕವಚಗಳನ್ನು ತನಗಾಗಿ ತರಿಸಿಕೊಂಡ ಅಮೆರಿಕದ ನಡೆಯನ್ನು ಬರ್ಲಿನ್‌ನ ಆಂತರಿಕ ಮಂತ್ರಿವರ್ಯರು “ಆಧುನಿಕ ಕಡಲ್ಗಳ್ಳತನವೆಂದು” ಧಿಕ್ಕರಿಸಿದ್ದಾರೆ. ಅಮೆರಿಕೆಯ ಅತಿದುಬಾರಿ ಖಾಸಗೀ ಆರೋಗ್ಯ ಸೇವೆಗಳ ಕಾರಣದಿಂದ ಅಲ್ಲಿ ಸಾವಿರಾರು ಜನ ಸಾಯುತ್ತಿರುವಾಗ, ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಗೆ ದೇಶದ ವಂತಿಗೆಯನ್ನು ನಿಲ್ಲಿಸಿದ್ದಾರೆ. ಏಕೆಂದರೆ ಈ ಸಂಸ್ಥೆಯು ಕೊರೊನ ವೈರಸ್‌ನ ಹರಡುವಿಕೆಯನ್ನು ಮುಚ್ಚಿಡಲು ಚೀನಾದ ಜೊತೆ ಕೈಗೂಡಿಸಿದೆಯೆಂದು ಆರೋಪಿಸುತ್ತಿದ್ದಾರೆ.

ಜಗತ್ತು ಕೊರೊನಾ ಪಿಡುಗಿನಿಂದ ಪೀಡಿತವಾಗಿರುವ ಈ ಕಾಲದಲ್ಲಿ ಸಾಮ್ರಾಜ್ಯಶಾಹಿಯ ಬಗ್ಗೆ ಲೆನಿನ್‌ರ ದೂರದೃಷ್ಟಿಯ ತಿಳುವಳಿಕೆಯನ್ನು ನೆನೆಯೋಣ; ರಷ್ಯಾದಲ್ಲಿ ಮಾನವೀಯ ವ್ಯವಸ್ಥೆಯಾದ ಸಮಾಜವಾದವನ್ನು ತರಲು ಅವರು ನಡೆಸಿದ ಪ್ರಯತ್ನಗಳನ್ನು ಸ್ಮರಿಸೋಣ.

Leave a Reply

Your email address will not be published. Required fields are marked *