ಉಚಿತವಾಗಿ ರೇಷನ್‍ ಹಂಚುವುದು ಸರಕಾರದ ಹೊಣೆ

ಹೆಚ್ಚುವರಿ ಆಹಾರಧಾನ್ಯಗಳ ದಾಸ್ತಾನಿರುವಾಗ, ಕೋಟ್ಯಂತರ ಕುಟುಂಬಗಳು ಉಪವಾಸ ಬೀಳುತ್ತಿರುವಾಗ ಉಚಿತವಾಗಿ ರೇಷನ್‍ ಹಂಚುವುದು ಸರಕಾರದ ಹೊಣೆ-ಆಹಾರ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

ಮೋದಿ ಸರಕಾರದ ಆಹಾರ  ಮತ್ತು ಸಾರ್ವಜನಿಕ ವಿತರಣೆಯ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್‍ ಗೋಧಿಗೆ ಕೆ.ಜಿ.ಗೆ 21.50 ರೂ. ಮತ್ತು ಅಕ್ಕಿಗೆ 22.50ರೂ. ನಿಗದಿ ಮಾಡಿದ್ದು, ರಾಜ್ಯಗಳು ರೇಷನ್‍ ಫಲಾನುಭವಿಗಳನ್ನು ಹೆಚ್ಚಿಸದಂತೆ ಕೇಂದ್ರವೇನೂ ಅಡ್ಡಿಪಡಿಸಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಇಲಾಖೆ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಎನ್‍.ಜಿ.ಒ.(ಸರ್ಕಾರೇತರ ಸಂಘಟನೆ)ಗಳು ಕೂಡ ಭಾರತ ಆಹಾರ ನಿಗಮ(ಎಫ್‍.ಸಿ.ಐ)ದ ಗೋದಾಮುಗಳಿಂದ ನೇರವಾಗಿ ಇ-ಹರಾಜು ಇಲ್ಲದೆ ಆಹಾರಧಾನ್ಯಗಳನ್ನು ಒಂದು ಮೀಸಲು ಬೆಲೆಗೆ ಪಡೆಯಬಹುದು ಎಂದು ಹೇಳಿತ್ತು. ಆದರೆ ಇದನ್ನು ಕುರಿತ ಪ್ರೆಸ್‍ ಇನ್ಫೋರ್ಮೇಶನ್ ಬ್ಯುರೊ(ಪಿಐಬಿ) ಪ್ರಕಟಣೆ ಈ ಬೆಲೆಯನ್ನು ಹೇಳಿರಲಿಲ್ಲ.

ಈ ಕುರಿತು ಹಿರಿಯ ಸಿಪಿಐ(ಎಂ) ಮುಖಂಡರಾದ ಬೃಂದಾ ಕಾರಟ್‍ ಅವರು  ರಾಮ್‍ ವಿಲಾಸ್‍ ಪಾಸ್ವಾನ್‍ರಿಗೆ  ಪತ್ರ ಬರೆದು ಲಾಕ್‍ ಡೌನಿನ ಹೊರೆ ಭಾರತದ ಶ್ರಮಜೀವಿ ವರ್ಗಗಳ ಮೇಲೆಯೇ ಹೆಚ್ಚಾಗಿ ಬಿದ್ದಿದೆ. ಸರಕಾರದ ಧೋರಣೆಯನ್ನು  ಇದನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾಗಿ ಬದಲಿಸಬೇಕು, ರೇಷನ್ ವ್ಯವಸ್ಥೆಯ ಮೂಲಕ ಅದನ್ನು ಉಚಿತವಾಗಿ ಹಂಚಬೇಕು ಎಂದು ಆಗ್ರಹಿಸಿದ್ದಾರೆ.

ಸರಕಾರ ಪ್ರಕಟಿಸಿರುವ ಮೀಸಲು ಬೆಲೆ ಬಹಿರಂಗ ಮಾರುಕಟ್ಟೆಯಲ್ಲಿರುವ ಗೋಧಿ ಬೆಲೆಗಳಿಗಿಂತಲೂ ಹೆಚ್ಚಿದೆ ಎಂಬುದನ್ನು ಇಲಾಖೆಯ ವೆಬ್‍ ತಾಣದಲ್ಲೇ ಲಭ್ಯವಿರುವ ಸಗಟು ಬೆಲೆಗಳ ಮಾಹಿತಿಯಲ್ಲೇ ಕಾಣಬಹುದು. ಸರಕಾರ 5.42 ಕೋಟಿ ಟನ್‍ ಆಹಾರಧಾನ್ಯಗಳ ದಾಸ್ತಾನು ಹೊಂದಿದೆ. ಇದನ್ನು ಮಂತ್ರಿಗಳೇ ಹೇಳಿದ್ದಾರೆ. ಇದು ದೇಶಕ್ಕೆ ಬೇಕಾದುದಕ್ಕಿಂತ ಬಹಳ ಹೆಚ್ಚು. ಈ ಹೆಚ್ಚುವರಿ ದಾಸ್ತಾನನ್ನು ಅದು ವಾಣಿಜ್ಯ ಉದ್ದೇಶಗಳಿಗಾಗಿ ಇ-ಹರಾಜು ಮೂಲಕ ಮಾರಲು ಪ್ರಯತ್ನಿಸಿತು.

ಆದರೆ ವಿಫಲವಾಯಿತು. ಆದ್ದರಿಂದ ಅದು ಇನ್ನೂ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಇದನ್ನು ಈಗ ಖರೀದಿಸ ಬೇಕಾದ ಹಿಂಗಾರು ಗೋದಿ ಬೆಳೆಗೆ ಸ್ಥಳಾವಕಾಶ ಕಲ್ಪಿಸಿಲು ಖಾಲಿ ಮಾಡಬೇಕಾಗಿದೆ. ಆದ್ದರಿಂದ ದಾಸ್ತಾನು ಖಾಲಿ ಮಾಡಲು ಎನ್‍.ಜಿ.ಒ.ಗಳಿಗೆ ಪರಿಹಾರದ ಹೆಸರಿನಲ್ಲಿ ಇಷ್ಟೊಂದು ಹೆಚ್ಚು ಬೆಲೆ ಹೇಳುವುದು ಆಘಾತಕಾರಿ, ಮತ್ತು ಅನೈತಿಕ ಎಂದೇ ಹೇಳಬೇಕಾಗುತ್ತದೆ ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಟಿಪ್ಪಣಿ ಮಾಡಿದ್ದಾರೆ.

ಆಹಾರಧಾನ್ಯಗಳನ್ನು ಒದಗಿಸುವುದು ಸರಕಾರದ ಜವಾಬ್ದಾರಿ. ಯಾವುದೇ ಆದಾಯ ಮತ್ತು ಕೆಲಸ ಇಲ್ಲದ್ದರಿಂದ ಕೋಟ್ಯಂತರ ಕುಟುಂಬಗಳನ್ನು ಉಪವಾಸದ ಪರಿಸ್ಥಿತಿ ಕಾಡುತ್ತಿರುವ ಸಮಯದಲ್ಲಿ ಸರಕಾರ  ದಾಸ್ತಾನನ್ನು ಉಚಿತವಾಗಿ ಹಂಚಬೇಕಾಗಿದೆ. ಎನ್‍.ಜಿ.ಒ.ಗಳು ಮತ್ತು ದಾನ-ಧರ್ಮದ ಸಂಘಟನೆಗಳನ್ನು ಪರಿಹಾರ ಕೆಲಸದಲ್ಲಿ ತೊಡಗಿಸಬೇಕೆಂದಿದ್ದರೆ, ಖಂಡಿತವಾಗಿಯೂ ಯಾರೂ ಖರೀದಿಸ ಬಯಸದ ದಾಸ್ತಾನುಗಳನ್ನು ಪರಿಹಾರದ ಹೆಸರಿನಲ್ಲಿ ಮಾರಿ ಲಾಭ ಮಾಡಿಕೊಳ್ಳುವಂತಹ ಆಶಯ ಖಂಡಿತಾ ಸರಿಯಲ್ಲ ತಾನೇ ಎಂದು ಬೃಂದಾ ಅವರು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

“ರೇಷನ್ ವ್ಯವಸ್ಥೆಯ ಮೂಲಕ ದಾಸ್ತಾನನ್ನು ಉಚಿತವಾಗಿ ಹಂಚಬೇಕು ಎಂದು ಆಹಾರ ಮಂತ್ರಿಯಾಗಿ ನಿಮ್ಮನ್ನು ಬಲವಾಗಿ ಆಗ್ರಹಿಸುತ್ತೇನೆ. ಆಧಾರ್ ಮತ್ತು ರೇಷನ್‍ ಕಾರ್ಡ್ ಗಳ ಎಂದಿನ ಶರತ್ತುಗಳು ಅನ್ವಯವಾಗಬಾರದು, ಏಕೆಂದರೆ ಬಹಳಷ್ಟು ಜನಗಳ ಬಳಿ , ನಿರ್ದಿಷ್ಟವಾಗಿ ವಲಸೆ ಕಾರ್ಮಿಕರ ಬಳಿ ಇಂತಹ ಗುರುತು ಸಾಧನಗಳಿರುವುದಿಲ್ಲ. ಲಾಕ್‍ ಡೌನಿನ ಹೊರೆ ಭಾರತದ ಶ್ರಮಜೀವಿ ವರ್ಗಗಳ ಮೇಲೆಯೇ ಹೆಚ್ಚಾಗಿ ಬಿದ್ದಿದೆ. ಈ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಲಾಕ್‍ ಡೌನಿನ ಮತ್ತು ನಂತರದ ಅವಧಿಯಲ್ಲಿ ಸರಕಾರದ ಧೋರಣೆಯನ್ನು  ಸೂಕ್ತವಾಗಿ ಬದಲಿಸಬೇಕು” ಎಂದು ಕೇಂದ್ರ ಆಹಾರ ಮಂತ್ರಿಗಳಿಗೆ ಬರೆದಿರುವ  ಪತ್ರದಲ್ಲಿ ಬೃಂದಾ ಕಾರಟ್‍ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *