ಕೋವಿಡ್-19 ಸಮಸ್ಯೆಯಿಂದ ಎದುರಾಗಿರುವ ಸಮಸ್ಯೆಗಳು ಹಾಗೂ ಆರೋಗ್ಯ ಕಾರ್ಯಕರ್ತಿಗೆ ಹೆಚ್ಚಿನ ರಕ್ಷಣೆ ಮತ್ತು ಅಗತ್ಯ ನೆರವಿಗಾಗಿ ಸರಕಾರವು ಕೂಡಲೇ ಕ್ರಮ ಜರುಗಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮಾನ್ಯ ಪ್ರಧಾಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
ದಿನಾಂಕ: 21-04-2020
ಗೆ,
ಮಾನ್ಯ ಪ್ರಧಾನ ಮಂತ್ರಿಗಳು,
ಭಾರತ ಒಕ್ಕೂಟ ಸರಕಾರ, ಪಾರ್ಲಿಮೆಂಟ್ ಭವನ, ನವದೆಹಲಿ.
ಮತ್ತು
ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.
ಮಾನ್ಯರೇ,
ವಿಷಯ: ಕೋವಿಡ್ – 19 ನ್ನು ಪರಿಣಾಮಕಾರಿಯಾಗಿ ಎದುರಿಸಲು ಆರೋಗ್ಯ ಕಾರ್ಯಕರ್ತರಿಗೆ ಮತ್ತು ದುಡಿಯುವ ಜನತೆಗೆ ಅಗತ್ಯ ನೆರವು ಒದಗಿಸಲು ಒತ್ತಾಯಿಸಿ ಮನವಿ.
ದೇಶದಾದ್ಯಂತ ಹಾಗೂ ರಾಜ್ಯದಾದ್ಯಂತ ವಿಸ್ತರಿಸಲ್ಪಟ್ಟ ಲಾಕ್ ಡೌನ್ ಅವಧಿಯಲ್ಲೂ ರಾಜ್ಯದ ಜನತೆ ಸಂಕಷ್ಠದ ನಡುವೆಯೂ ಕೋವಿಡ್ – ೧೯ ನ್ನು ಎದುರಿಸಿ ಹೋರಾಟದಲ್ಲಿ ತೊಡಗಿರುವುದು ತಮಗೆ ತಿಳಿದ ವಿಚಾರವಾಗಿದೆ.
ರಾಜ್ಯದಲ್ಲಿ ಆರೋಗ್ಯ ತಪಾಸಣೆಯ ಕೆಲಸ ಮತ್ತಷ್ಠು ವ್ಯಾಪಕತೆ ಪಡೆಯಬೇಕಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಅಗತ್ಯದಷ್ಠು ಪಿಪಿಇ ಕಿಟ್ ದೊರೆತಿಲ್ಲವೆಂದು ದೂರುತ್ತಿದ್ದಾರೆ.
ಆದೇ ರೀತಿ, ರಾಜ್ಯದ ಒಟ್ಟು ಜನತೆಯಲ್ಲಿ ಶೇ. ೮೦ ಕ್ಕೂ ಅಧಿಕ ಜನತೆ ಹಾಗೂ ಕುಟುಂಬಗಳು ಬಹುತೇಕ ಕೃಷಿಕೂಲಿಕಾರರು, ಬಡರೈತರು, ಕಟ್ಟಡ ಮತ್ತಿತರೆ ಅಸಂಘಟಿತ ಮತ್ತು ಸಂಘಟಿತ ವಲಯದ ಕಾರ್ಮಿಕರು, ಸ್ವಯಂ ವೃತ್ತಿ ಆಧಾರಿತ ಕೆಲಸಗಾರರು, ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳು, ತಮ್ಮ ದಿನದ ದುಡಿಮೆಯ ಆಧಾರದಲ್ಲಿ ಬದುಕುತ್ತಿರುವುದು ಗುಟ್ಟಾದ ವಿಚಾರವೇನಲ್ಲಾ. ಈ ಕುಟುಂಬಗಳು ಲಾಕ್ ಡೌನ್ ಮೊದಲ ಅವಧಿ ೨೧ ದಿನಗಳು ಮುಗಿದು, ಎರಡನೆ ಅವಧಿಯಲ್ಲಿ ಸುಮಾರು ಆರು ದಿನಗಳನ್ನು ಪೂರೈಸಿವೆ. ಇನ್ನೂ ಮೇ-೦೩, ೨೦೨೦ ರವರೆಗೆ ಮುನ್ನಡೆಯ ಬೇಕಿದೆ. ಈ ಕುಟುಂಬಗಳು ಬಹುತೇಕ ಒಂದೆಡೆ ಕೋವಿಡ್-೧೯ ರಿಂದ ಮತ್ತೊಂದೆಡೆ ಆರ್ಥಿಕ ಸಂಕಷ್ಠದಿAದ ನಲುಗಿವೆ.
ಈ ಕುಟುಂಬಗಳು ಕೋವಿಡ್- ೧೯ ವೈರಾಣುವನ್ನು ಮತ್ತಷ್ಠು ಪರಿಣಾಮಕಾರಿಯಾಗಿ ಎದುರಿಸಲು, ಅವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯದಷ್ಠು ನೆರವು ನೀಡಬೇಕಿದೆ. ಇದುವರೆಗಿನ ಕ್ರಮಗಳು ಖಂಡಿತಾ ಸಮರ್ಪಕವಾಗಿಲ್ಲ. ಕೇಂದ್ರ ಸರಕಾರ ಘೋಷಿಸಿದ ನೆರವು ಏನೇನು ಸಾಕಾಗಲ್ಲ ಮಾತ್ರವಲ್ಲಾ, ಘೋಷಿಸಿದ ಅರೆ ಬರೆ ನೆರವು ಇನ್ನೂ ಜನರಿಗೆ ತಲುಪಲಿಲ್ಲ. ರಾಜ್ಯ ಸರಕಾರವು ನೆರವನ್ನು ಘೋಷಿಸಲೇ ಇಲ್ಲ. ಮುಂಗಡ ಪಡಿತರ ನೀಡುವುದಷ್ಠೇ ತನ್ನ ಕರ್ತವ್ಯವೆಂದು ಭಾವಿಸಿ ಕೈತೊಳೆದುಕೊಂಡಿದೆ. ಮುಂಗಡ ಮಾಸಿಕ ಸಹಾಯಧನ ಅಥವಾ ಬಡವರ ಪಿಂಚಣಿ ಬಾಕಿ ಸಮೇತ ನೀಡಲಾಗಿಲ್ಲ.
ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯದೇ ಕೃಷಿ ಉತ್ಪನ್ನಗಳನ್ನು ನಾಶಪಡಿಸಿದ್ದಾರೆ. ಮಂಡ್ಯ ಮುಂತಾದೆಡೆ ನಷ್ಠದ ಸಾಲಬಾಧೆಯಿಂದ ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಗಳಿವೆ. ಈಗಲೂ ಸರಕಾರ ರೈತರ ಕೃಷಿ ಉತ್ಪನ್ನಗಳನ್ನು ಏಜೆನ್ಸಿಗಳ ಮೂಲಕ ಬೆಂಬಲ ಬೆಲೆಗೆ ಖರೀದಿಸುತ್ತಿಲ್ಲ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಉದ್ಯೋಗ ಉಳಿಸಲು ವೇತನ ಸಹಿತ ರಜೆಯೆಂದು ಘೋಷಿಸಿದುದು ಕೇವಲ ಘೋಷಣೆ ಮಾತ್ರವಾಗಿ ಉಳಿದಿದೆ. ಮಾಲೀಕ ವರ್ಗ ಇದಕ್ಕೆ ಯಾವುದೇ ಕವಡೆ ಕಿಮ್ಮತ್ತಿನ ಬೆಲೆಯನ್ನು ನೀಡುತ್ತಿಲ್ಲ. ಬದಲಿಗೆ ಸರಕಾರಗಳೇ ವೇತನ ನೀಡುವಂತೆ ವಿವಿಧ ಕಾರ್ಮಿಕರ ಕಲ್ಯಾಣ ನಿಧಿಗಳನ್ನು ದುರ್ಬಳಕೆ ಮಾಡಲು ಮತ್ತು ಸದರಿ ಸಂಕಷ್ಠದ ಸಂದರ್ಭವನ್ನು ದುರುಪಯೋಗಿಸಿಕೊಂಡು ಕಾರ್ಮಿಕರ ಕೆಲಸದ ಅವಧಿಯನ್ನು ೧೨ ಗಂಟೆಗೆ ಹೆಚ್ಚಿಸಲು ಹುನ್ನಾರ ನಡೆಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇವುಗಳ ಜೊತೆ ಶಾಮೀಲಾಗದೇ ತಿರಸ್ಕರಿಸಬೇಕಿದೆ ಮತ್ತು ಕಾಯ್ದೆಯ ಪ್ರಸ್ತಾಪಗಳನ್ನು ಕೈ ಬಿಡಬೇಕು.
ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಿ ಕುಟುಂಬಗಳ ಜೊತೆ ಬೆರೆಯಲು ಇನ್ನೂ ಕ್ರಮವಹಿಸಲಿಲ್ಲ.
ಬದಲಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇವಲ ಭಾಷಣಗಳ ಮೂಲಕ ಜನಗಳ ಹಸಿದ ಹೊಟ್ಟೆಗಳನ್ನು ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಆದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾಷಣಗಳು, ಉಪದೇಶಗಳು ಕೋವಿಡ್ -೧೯ ವೈರಾಣುವನ್ನು ಎದುರಿಸಲು ದುಡಿಯುವ ಬಡ ಜನತೆಗೆ ಹೊಟ್ಟೆ ತುಂಬಿಸಲಾರವು ಎಂಬುದನ್ನು ಅರಿಯಬೇಕು ಮತ್ತು ಅವರಿಗೆ ಅಗತ್ಯ ಆರ್ಥಿಕ ನೆರವು ನೀಡಬೇಕೆಂದು ಸಿಪಿಐಎಂ ಮರಳಿ ಒತ್ತಾಯಿಸುತ್ತದೆ. ಹಕ್ಕೊತ್ತಾಯಗಳು :
- ಹಣಕಾಸು ಉತ್ತೇಜನೆ ಪ್ಯಾಕೇಜನ್ನು ಈಗಿರುವ ೦.೮% ಜಿ.ಡಿ.ಪಿ.ಯಿಂದ ಕನಿಷ್ಟ ೫% ಜಿ.ಡಿ.ಪಿ.ಗೆ ಏರಿಸುವುದು. ರಾಜ್ಯ ಸರಕಾರಗಳಿಗೆ ಉದಾರ ನಿಧಿ ಒದಗಿಸಬೇಕು.
- ಅಗತ್ಯ ಪಿ.ಪಿ.ಇ.ಗಳನ್ನು ಖರೀದಿಸಿ ತಪಾಸಣೆಗಳನ್ನು ತ್ವರಿತವಾಗಿ ವಿಸ್ತರಿಸಿರಿ. ಆಶಾ, ಅಂಗನವಾಡಿ ಮತ್ತಿತರೇ ಆರೋಗ್ಯ ಕಾರ್ಯಕರ್ತರಿಗೆ ವಿಮೆ ಹಾಗೂ ಸುರಕ್ಷತಾ ಕ್ರಮ ಒದಗಿಸಬೇಕು.
- ತಕ್ಷಣವೇ ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದ ಜನಗಳಿಗೆ ರೂ.೭೫೦೦ ನಗದು ವರ್ಗಾವಣೆ ಮಾಡಿರಿ.
- ಆಹಾರದ ಅಗತ್ಯವಿರುವ ಎಲ್ಲರಿಗೂ ಅಗತ್ಯದಷ್ಠು ಆಹಾರ ಧಾನ್ಯಗಳು ಮತ್ತು ಆರೋಗ್ಯ ಸುರಕ್ಷತಾ ಪರಿಕರಗಳನ್ನು ಮನೆ ಮನೆಗೆ ಉಚಿತ ವಿತರಣೆ ಮಾಡಿರಿ.
- ಮಾರುಕಟ್ಟೆ ತೊಂದರೆಯಿAದ ನಷ್ಠ ಹೊಂದಿದ ರೈತರ ಗಣತಿ ಮಾಡಿ ಪರಿಹಾರ ನೀಡಿರಿ. ಘೋಷಿತ ಸಿ೨+೫೦% ಬೆಂಬಲ ಬೆಲೆಗಳಲ್ಲಿ ಕಟಾವು ಆಗಿರುವ ಬೆಳೆಗಳ ಖರೀದಿ, ಮತ್ತು ಮನರೇಗ ಸ್ಕೀಮಿನ ಅಡಿಯಲ್ಲಿ ದಾಖಲಾಗಿರುವ ಎಲ್ಲರಿಗೂ ಕೆಲಸವಿದ್ದರೂ, ಇಲ್ಲದಿದ್ದರೂ ಕೂಲಿ ಪಾವತಿಸಿರಿ.
- ಕಾರ್ಮಿಕರನ್ನು ಉದ್ಯೋಗ ನಷ್ಟ, ಸಂಬಳ ಕಡಿತದಿಂದ ರಕ್ಷಿಸಲು ಉದ್ಯೋಗದಾತರಿಗೆ ಹಣಕಾಸು ನೆರವು ನೀಡಿರಿ. ಅದೇ ರೀತಿ, ಕೆಲಸದ ಅವಧಿಯ ವಿಸ್ತರಣೆ ಬೇಡಾ. ಹಾಗೂ ಅದಕ್ಕಾಗಿ ಕಾಯ್ದೆಗೆ ತಿದ್ದುಪಡಿ ಮಾಡುವುದು ಬೇಡಾ! ಹಾಗೇ ಇಎಸ್‌ಐ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ಮಾಡುವುದು ಬೇಡಾ!
- ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಮರಳಲು ಅಗತ್ಯ ವ್ಯವಸ್ಥೆ ಮಾಡಿರಿ.
- ಎಲ್ಲಾ ಪಿಂಚಣಿ ಹಾಗೂ ಮಾಸಿಕ ಸಹಾಯಧನ ಪಡೆಯುವವರಿಗೆ ಹಳೆಯ ಬಾಕಿಯೂ ಸೇರಿದಂತೆ ಎರಡು ತಿಂಗಳ ಮುಂಗಡ ಹಣ ತಕ್ಷಣ ಒದಗಿಸಬೇಕು.
- ಮಕ್ಕಳಿಲ್ಲದ ವಯೋವೃದ್ಧರು, ಅನಾಥರು, ಅಂಗವಿಕಲರು, ಸೌಖ್ಯವಿಲ್ಲದವರು, ಭಿಕ್ಷುಕರು, ಮತ್ತಿತರೆ ನಿರಾಶ್ರಿತರಿಗೆ ಪ್ರತಿ ದಿನ ಆಹಾರ ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಿರಿ.
- ಮುಸ್ಲಿಂ ಅಲ್ಪ ಸಂಖ್ಯಾತರ ವಿರುದ್ಧದ ಹಿಂದೂ ಮತಾಂಧರ ದ್ವೇಷ ಪೂರಿತ ಅಪ ಪ್ರಚಾರವನ್ನು ತಡೆಯಲು ಪರಿಣಾಮಕಾರಿ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು.
ಯು. ಬಸವರಾಜ, ಕಾರ್ಯದರ್ಶಿ