ಮಹಾರಾಷ್ಟ್ರದ ಗಡಿ ಜಿಲ್ಲೆ ಪಾಲ್ಘರ್ ನ ದಹಾಣು ತಹಸೀಲಿನ ಗಡಚಿಂಚ್ಲೆ ಎಂಬ ಹಳ್ಳಿಯಲ್ಲಿ ಎಪ್ರಿಲ್ 16ರ ರಾತ್ರಿ ಒಂದು ಜನಜಂಗುಳಿ ಮೂವರನ್ನು ಹೊಡೆದು ಸಾಯಿಸಿರುವ ಘಟನೆಯನ್ನು ಸಿಪಿಐ(ಎಂ) ಮಹಾರಾಷ್ಟ್ರ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ. ಸತ್ತವರಲ್ಲಿ ಇಬ್ಬರು ಸಾಧುಗಳಾಗಿದ್ದು, ಅವರು ಮುಂಬಯಿಯಿಂದ ಸೂರತ್ ಗೆ ಕಾರಿನಲ್ಲಿ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಇದಕ್ಕೆ ಬಿಜೆಪಿ-ಆರೆಸ್ಸೆಸ್ ಕೋಮು ಬಣ್ಣ ಹಚ್ಚಲು ಪ್ರಯತ್ನ ಮಾಡುತ್ತಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇದನ್ನು ಬಲವಾಗಿ ನಿರಾಕರಿಸಿದ್ದಾರೆ. ಅವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಇದು ದೇಶದ ಹಲವೆಡೆಗಳಲ್ಲಿ ಕಳೆದ ಆರು ವರ್ಷಗಳಲ್ಲಿ ನಡೆದಿರುವಂತಹ ಕೋಮುವಾದಿ ದೊಂಬಿ ಹತ್ಯೆಯಲ್ಲ, ಬದಲಿಗೆ ಒಂದು ತಪ್ಪು ಭಾವನೆಯಿಂದ ಆಗಿರುವಂತದ್ದು ಮತ್ತು ಇದರಲ್ಲಿ ಕೋಮುವಾದಿ ಅಂಶ ಏನೂ ಇಲ್ಲ, ಯಾರೂ ಇದಕ್ಕೆ ಕೊಮುವಾದಿ ಬಣ್ಣ ಹಚ್ಚಬಾರದು ಎಂದು ಹೇಳಿರುವುದನ್ನು ಸಿಪಿಐ(ಎಂ) ಸ್ವಾಗತಿಸಿದೆ.
ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಹಾಗೂ ಇಬ್ಬರು ಪೋಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ; ಒಂದು ಗಂಭೀರ ವಿಚಾರಣೆಯನ್ನು ನಡೆಸಲಾಗುತ್ತದೆ ಮತ್ತು ತಪ್ಪಿತಸ್ಥರು ಎಂದು ಕಂಡುಬಂದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದೂ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈ ವಿಚಾರಣೆಯಲ್ಲಿ, ಈ ಕಾರು ಮುಂಬೈಯಿಂದ ಸೂರತ್‌ಗೆ ಹೋಗಲು ಅಧಿಕೃತ ಪರವಾನಿಗೆ ಇತ್ತೇ, ಅವರು ಮುಂಬೈ-ಸೂರತ್ ಹೆದ್ದಾರಿಯಲ್ಲಿ ಹೋಗುವ ಬದಲು ನಡುರಾತ್ರಿಯಲ್ಲಿ ದೂರದ ನಿರ್ಜನ ಪ್ರದೇಶದಲ್ಲಿ ಸುತ್ತುಬಳಸಿ ಮಹಾರಾಷ್ಟ್ರ ಮತ್ತು ದಾದ್ರ-ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದ ಗಡಿಭಾಗದಲ್ಲಿ ಪಯಣಿಸಲು ಬಿಟ್ಟದ್ದೇಕೆ ಎಂಬುದರ ತನಿಖೆಯನ್ನೂ ಮಾಡಬೇಕು ಎಂದು ಸಿಪಿಐ(ಎಂ) ಮಹಾರಾಷ್ಟ್ರ ರಾಜ್ಯ ಸಮಿತಿ ಆಗ್ರಹಿಸಿದೆ.
ಇದಕ್ಕೆ ಕೋಮು ಬಣ್ಣವನ್ನು ಹಚ್ಚಲು ಆರೆಸ್ಸೆಸ್-ಬಿಜೆಪಿ ಭಾರೀ ಪ್ರಯತ್ನ ನಡೆಸಿರುವುದನ್ನು ಸಿಪಿಐ(ಎಂ) ಖಂಡಿಸಿದೆ. ಈ ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯ ಇದುವರೆಗೆ ಕೋಮುವಾದಿ ವೈರತ್ವದ ಚರಿತ್ರೆಯನ್ನೇನೂ ಹೊಂದಿಲ್ಲ. ಇದು ಈ ಮಂದಿಗೂ ಗೊತ್ತು. ಆದರೂ ರಾಜ್ಯ ಸರಕಾರಕ್ಕೆ ಮಸಿ ಬಳೆಯಲು ಇದನ್ನು ಬಳಸುವ ಪ್ರಯತ್ನ ನಡೆಸಿದ್ದಾರಷ್ಟೇ.
ಆರೆಸ್ಸೆಸ್-ಬಿಜೆಪಿ ಮುಖಂಡರಾದ ಸಂಬಿತ್ ಪಾತ್ರ, ಸುನಿಲ್ ದೇವಧರ್ ಮುಂತಾದವರು ಫೇಸ್‌ಬುಕ್‌ನಲ್ಲಿ ಸಿಪಿಐ(ಎಂ) ಕುರಿತಂತೆಯೂ ಹಲವಾರು ಸುಳ್ಳುಗಳನ್ನು ಹರಡಿಸುತ್ತಿದ್ದಾರೆ. ಈ ಘಟನೆ ನಡೆದಿರುವ ದಹಾಣುವಿನಲ್ಲಿ ಸಿಪಿಐ(ಎಂ) ಬಲಿಷ್ಟ ನೆಲೆ ಹೊಂದಿದೆ, ಇತ್ತೀಚಿನ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಆದ್ದರಿಂದ ಈ ಕೊಲೆಗಳ ಹಿಂದೆ ಸಿಪಿಐ(ಎಂ) ಕೈವಾಡ ಇದೆ ಎಂದು ಕತೆ ಕಟ್ಟುತ್ತಿದ್ದಾರೆ.
ಆದರೆ ವಾಸ್ತವ ಸಂಗತಿ ತದ್ವಿರುದ್ಧವಾಗಿದೆ. ಈ ಬಾರಿ ದಹಾಣು ಮೀಸಲು ಕ್ಷೇತ್ರದಲ್ಲಿ ಸಿಪಿಐ(ಎಂ)ನ ವಿನೋದ್ ನಿಖೊಲೆ ಹಿಂದಿನ ಬಿಜೆಪಿ ಶಾಸಕರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರೂ, ಈ ಗಡಚಿಂಚ್ಲೆ ಹಳ್ಳಿ ಈಗಲೂ ಬಿಜೆಪಿಯ ಸರಪಂಚರನ್ನು ಹೊಂದಿದೆ. ಕಳೆದ ೧೦ ವರ್ಷಗಳಿಂದ ಇಲ್ಲಿ ಬಿಜೆಪಿ ಗೆದ್ದುಕೊಂಡು ಬಂದಿದೆ. ಅಲ್ಲದೆ ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಬಹಳಷ್ಟು ಮಂದಿ ಬಿಜೆಪಿಯವರು ಎಂಬುದೂ ಗಮನಾರ್ಹ.