ಸರಕಾರದ ಗೋದಾಮುಗಳಲ್ಲಿ ಇರುವ ಹೆಚ್ಚುವರಿ ಅಕ್ಕಿಯನ್ನು ಎಥನೋಲ್ ಆಗಿ ಪರಿವರ್ತಿಸಿ, ಇದನ್ನು ಅಲ್ಕೋಹಾಲ್ ಆಧಾರಿತ ಕೈಗಳ ಶುಚಿಕಾರಕ (ಹ್ಯಾಂಡ್ ಸೆನಿಟೈಸರ್)ಗಳನ್ನು ತಯಾರಿಸಲು ಬಳಸಲಾಗುವುದಂತೆ. ಈ ಕುರಿತು ಕೇಂದ್ರದ ಪೆಟ್ರೋಲಿಯಂ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯೊಂದರಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ವಲಸೆ ಕಾರ್ಮಿಕರು ಮತ್ತು ಅನೌಪಚಾರಿಕ ವಲಯದ ದಿನಗೂಲಿ ಕೆಲಸಗಾರರ ಕುಟುಂಬಗಳು ಆದಾಯವಿಲ್ಲದೆ ಅನ್ನಕ್ಕೆ ಪರದಾಡುತ್ತಿರುವ ಸಮಯದಲ್ಲಿ ಕೇಂದ್ರ ಸರಕಾರದ ಈ ನಿರ್ಣಯ ಭಾರೀ ಟೀಕೆಗೆ ಒಳಗಾಗಿದೆ.
ಕೋಟ್ಯಂತರ ಭಾರತೀಯ ಬಡಕುಟುಂಬಗಳಿಗೆ ಈಗ ಆಹಾರಧಾನ್ಯಗಳ ಪೂರೈಕೆ ಅತ್ಯಗತ್ಯವಾಗಿರುವಾಗ, ಎಫ್‌ಸಿಐ ಗೋದಾಮುಗಳಲ್ಲಿ ಕೊಳೆಯುತ್ತಿರುವ ಹೆಚ್ಚುವರಿ ಆಹಾರ ಧಾನ್ಯಗಳನ್ನು ಪಡಿತರ ವ್ಯವಸ್ಥೆಯ ಮೂಲಕ ಉಚಿತವಾಗಿ ಹಂಚಬೇಕು ಎಂದು ಎಲ್ಲೆಡೆಗಳಿಂದ ಒತ್ತಾಯಗಳು ಕೇಳಬರುತ್ತಿವೆ.
ಅಲ್ಲದೆ ದೇಶದಲ್ಲಿ ಈಗ ಸೆನಿಟೈಸರುಗಳಿಗೆ ಇಥೈಲ್ ಅಲ್ಕೋಹಾಲ್‌ನ ಉತ್ಪಾದನೆಯ ಕೊರತೆಯೇನೂ ಇಲ್ಲ.
“ರಾಷ್ಟ್ರೀಯ ಜೈವಿಕ ಇಂಧನ ಧೋರಣೆ, ೨೦೧೮ರ ಅಡಿಯಲ್ಲಿ ಪರಿಚ್ಛೇದ ೫.೩ ರ ಪ್ರಕಾರ ಒಂದು ಕೃಷಿ ಬೆಳೆ ವರ್ಷದಲ್ಲಿ ಆಹಾರಧಾನ್ಯಗಳು ಹೆಚ್ಚುವರಿ ಪೂರೈಕೆಯಾಗಬಹುದು ಎಂದು ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ನಿರೀಕ್ಷಿಸಿದ್ದರೆ, ಈ ಹೆಚ್ಚುವರಿ ಆಹಾರಧಾನ್ಯಗಳನ್ನು ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿ(ಎನ್‌ಬಿಸಿಸಿ)ಯ ಮಂಜೂರಾತಿ ಪಡೆದು ಇಥನೊಲ್ ಆಗಿ ಪರಿವರ್ತಿಸಲು ಅವಕಾಶವಿದೆ” ಎಂದು ಎಪ್ರಿಲ್ ೨೦ರಂದು ಪೆಟ್ರೋಲಿಯಂ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಈ ಸಮನ್ವಯ ಸಮಿತಿ(ಎನ್‌ಬಿಸಿಸಿ) ನಿರ್ಧರಿಸಿರುವುದಾಗಿ ಪೆಟ್ರೋಲಿಯಂ ಮತ್ತು ನೈಸಗಿಕ ಅನಿಲ ಮಂತ್ರಾಲಯದ ಆದೇಶ ಹೇಳಿದೆ.
“ಇದು ಅಪರಾಧಿತ್ವವನ್ನೂ ದಾಟಿ ಹೋಗುವಂತದ್ದು. ಈ ಅಯೋಜಿತ ಮತ್ತು ಯಾವುದೇ ಸಿದ್ಧತೆಯಿಲ್ಲದ ಲಾಕ್ ಡೌನಿನಿಂದಾಗಿ ಬದುಕುಳಿಯುವ ಸಾಮರ್ಥ್ಯವನ್ನೇ ಕಳಕೊಂಡು ಉಪವಾಸ ಬಿದ್ದಿರುವ ಲಕ್ಷಾಂತರ ಜನಗಳಿಗೆ ಆಹಾರವುಣ್ಣಿಸುವ ಬದಲು ಮೋದಿ ಕೇಂದ್ರೀಯ ಗೋದಾಮುಗಳಲ್ಲಿರುವ ಅಪಾರ ಅಕ್ಕಿ ದಾಸ್ತಾನನ್ನು ಸೆನಿಟೈಸರಿಗೆ ಎಥನೋಲ್ ಆಗಿ ಬಳಸುವ ಯೋಜನೆ ಹಾಕುತ್ತಾರೆ!
ಭಾರತದಲ್ಲಿ ಸೆನಿಟೈಸರುಗಳಿಗೆ ಇಥೈಲ್ ಅಲ್ಕೋಹಾಲ್‌ನ ಉತ್ಪಾದನೆಯ ಕೊರತೆಯೇನೂ ಇಲ್ಲ. ಮೋದಿ ಲಕ್ಷಾಂತರ ಜನಗಳನ್ನು ಹಸಿವಿನ ಸಾವಿನ ದವಡೆಗೆ ಎಸೆಯುತ್ತಿರುವ ಈ ಅತಿವಾಸ್ತವವಾದಿ ಕ್ರಿಮಿನಲ್ ಸರಕಾರದ ಮುಖ್ಯಸ್ಥರಾಗಿದ್ದಾರೆ. ೭.೫ ಕೋಟಿ ಟನ್ ಆಹಾರಧಾನ್ಯಗಳನ್ನು ಅದು ಬಹಳವಾಗಿ ಅಗತ್ಯವಿರುವ ಜನಗಳಿಗೆ ಅನ್ನವಿಕ್ಕಲು ಬಿಡುಗಡೆ ಮಾಡಿ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಈ ಸುದ್ದಿಗೆ ಪ್ರತಿಕ್ರಿಯಿಸುತ್ತ ಹೇಳಿದ್ದಾರೆ.