ಇಲ್ಲದಿದ್ದರೆ ಅಯೋಜಿತ ಲಾಕ್ ಡೌನ್ ಬಡಜನಗಳನ್ನು ಕಾಪಾಡದು
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಅಡಿಯಲ್ಲಿರುವ ಉನ್ನತ ಮಟ್ಟದ ಕಾರ್ಯಪಡೆಯ ಸದಸ್ಯರೂ ಸೇರಿದಂತೆ ನಮ್ಮ ವಿಜ್ಞಾನಿ ಸಮುದಾಯದಲ್ಲಿ ಕೊವಿಡ್ ವಿರುದ್ಧ ಕಾರ್ಯಾಚರಣೆ ಕುರಿತಂತೆ ಕಳವಳ ಹೆಚ್ಚುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ.
ಆಂತರಿಕ ಚರ್ಚೆಗಳು ಮತ್ತು ಇವನ್ನು ಕುರಿತ ಸಾರ್ವಜನಿಕವಾಗಿ ಈಗ ಲಭ್ಯವಿರುವ ಕಲಾಪ ಟಿಪ್ಪಣಿಗಳು ಲಾಕ್ ಡೌನಿನಿಂದ ವೈರಸ್ನ ಹರಡಿಕೆ ನಿಲ್ಲುವುದಿಲ್ಲ, ಅದು ತಾತ್ಕಾಲಿಕವಾಗಿ ವೈರಸ್ ನ ಹರಡಿಕೆಯನ್ನು ದಮನಗೊಳಿಸಬಹುದಷ್ಟೇ ಎಂದು ಸ್ಪಷ್ಟವಾಗಿ ಬೊಟ್ಟು ಮಾಡಿ ಹೇಳುತ್ತಿವೆ. ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ಮಹಾಮಾರಿಯನ್ನು ನಿಭಾಯಿಸುವುದು ನಮಗೆ ಸಾಧ್ಯವಾಗದು. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ರಕ್ಷಣೆ ಇನ್ನೊಂದು ತುರ್ತು ಆವಶ್ಯಕತೆ.
ದೈಹಿಕ ಅಂತರಕ್ಕೆ ಸರಿಯಾದ ಸೌಕರ್ಯಗಳಿಲ್ಲದಲ್ಲಿ ಜನನಿಬಿಡ ವ್ಯಸ್ತ, ಮತ್ತು ಪ್ರತ್ಯೇಕ ಶೌಚಾಲಯಗಳಿಲ್ಲದ ವಾಸಪ್ರದೇಶಗಳಲ್ಲಿ ಹರಡಿಕೆ ಹೆಚ್ಚುವ ಅಪಾಯವಿದೆ ಎಂದು ವಿಜ್ಞಾನಿಗಳು ಗುರುತಿಸಿರುವುದಾಗಿ ವರದಿಗಳಿವೆ. ಇಂತಹ ಸ್ಥಳಗಲ್ಲಿ ಹೊರಗೆ ಹೋಗುವ ಆವಶ್ಯಕತೆ ಇಲ್ಲದಂತೆ ಮಾಡಲು ಸಾಕಷ್ಟು ಆಹಾರ ರೇಷನ್ಗಳನ್ನು ಖಾತ್ರಿಪಡಿಸಬೇಕು.
ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ತಪಾಸಣೆ, ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರ ಪತ್ತೆ, ಸರಿಯಾದ ಕ್ವಾರಂಟೈನ್, ಪ್ರತ್ಯೇಕವಾಗಿಡುವುದು ಮತ್ತು ಶುಶ್ರೂಷೆ ಈ ಸಾಬೀತಾಗಿರುವ ಕ್ರಮಗಳನ್ನು ಕೈಗೊಳ್ಳದೆ, ಅಯೋಜಿತ ಲಾಕ್ಡೌನ್ ಹೆಚ್ಚೆಂದರೆ ಸಂಪತ್ತುಳ್ಳವರು ಮತ್ತು ಪ್ರಭಾವಿಗಳಿಗೆ ರಕ್ಷಣೆ ಒದಗಿಸಬಹುದೇ ಹೊರತು ಬಡವರನ್ನು ಕಾಪಾಡಲು ಏನೂ ಮಾಡಲಾರದು.
ನಾಗರಿಕರ ಜೀವಗಳನ್ನು ರೋಗಾಣುಗಳ ವಿಧ್ವಂಸದಿಂದ ರಕ್ಷಿಸಲು ಮತ್ತು ಜೀವನೋಪಾಯದ ಅನಿವಾರ್ಯತೆಗಳನ್ನು ನಿಭಾಯಿಸಲು, ವಿಶೇಷವಾಗಿ ಹಸಿವು ಮತ್ತು ಅಪೌಷ್ಟಿಕತೆಯಿಂದ ಸಾವುಗಳು ಸಂಭವಿಸದಂತೆ ತಡೆಯಲು ಕೇಂದ್ರ ಸರಕಾರ ತುರ್ತಾಗಿ ಈ ಶಿಫಾರಸುಗಳ ಮೇಲೆ ಕಾರ್ಯಾಚರಣೆ ಆರಂಭಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಕರೆ ನೀಡಿದೆ.