ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸಿಪಿಐ(ಎಂ) ಒತ್ತಾಯ

ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಸಿ ಸಾರಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ ರಾಜ್ಯ ಸರಕಾರವು ಸಾರಿಗೆ ಸಂಸ್ಥೆಯ ದರಗಳನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ. ಉಚಿತ ಸಾರಿಗೆ ವ್ಯವಸ್ಥೆ ಮಾಡಲು ಒತ್ತಾಯಿಸಿವೆ. ಸಾರಿಗೆ ಸಂಸ್ಥೆಗಳಿಗೆ ಸರಕಾರ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಬೇಕು, ಹೆದ್ದಾರಿ ಟೋಲ್ ವಿನಾಯಿತಿ ನೀಡಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ದುಬಾರಿ ದರ ನಿಗದಿ ಮಾಡಿ ರಾಜ್ಯ ಸರಕಾರವು ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ದೋಚುತ್ತಿದೆ. ಮೇ ದಿನದಂದು ಕಾರ್ಮಿಕರಿಗೆ ಶುಭಾಶಯ ಕೋರಿ ಅದೇ ದಿನ ಅವರನ್ನು ವಂಚಿಸಿದೆ.

ಕಾರ್ಮಿಕರು ದುಬಾರಿ ದರ ನೀಡಲಾರದೆ ಇರುವಲ್ಲೆ ಉಳಿದು ಬದುಕುಳಿಯಲು ತಮ್ಮಪ್ರಾಣವನ್ನು ಪಣಕ್ಕಿಟ್ಟು ಬಿಲ್ಡರ್‌ ಗಳ ಚಾಕರಿಗೆ ಸಿಗುವಂತಾಗಲಿ ಎಂಬುದು ಸರ್ಕಾರದ ದುರುದ್ದೇಶವಾಗಿದೆ. ಬಿಲ್ಡರ್ ಗಳ ಲಾಭಿಗೆ ಮಣಿದು ಲಾಕ್‌ ಡೌನ್ ಕಾಲಾವಧಿಯಲ್ಲಿ ಮೊದಲಿಗೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ  ಅನುಮತಿಸಿದ್ದ ರಾಜ್ಯ ಸರಕಾರವು ಇದೀಗ ವಲಸೆ ಕಾರ್ಮಿಕರು ಅವರ ಊರುಗಳಿಗೆ ಹೋಗಲು ಒಲ್ಲದ ಮನಸ್ಸಿನಿಂದ ಅನುಮತಿಸಿದ್ದು ಹೋಗದಂತೆ ಮಾಡಲು ಹೂಡಿರುವ ಕುತಂತ್ರವೇ ದುಬಾರಿ ದರ ನಿಗದಿ ಹಿಂದಿರುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಅಂತರ ರಾಜ್ಯ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗಲು ನೆರೆಯ ಕೇರಳ ಹಾಗು ತೆಲಂಗಾಣ ರಾಜ್ಯ ಸರಕಾರಗಳು ವಿಶೇಷ ರೈಲುಗಳ ವ್ಯವಸ್ಥೆ ಮಾಡಿ ಈಗಾಗಲೆ ಸಾವಿರಾರು ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿ ಕೊಟ್ಟಿವೆ. ಅದರೆ ಕನಾ೯ಟಕದ ಬಿಜೆಪಿ ಸಕಾ೯ರವು ಅಂತಹ ಯಾವುದೇ ಕ್ರಮವಹಿಸದೆ ರಾಜ್ಯದ ಬಿಲ್ಡರ್‌ ಗಳ ಹಿತಾಸಕ್ತಿಗಾಗಿ ಶ್ರಮಿಸುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ. ಕೂಡಲೇ ಅಂತರ ರಾಜ್ಯ ವಲಸಿಗರಿಗೆ ತಮ್ಮ ಊರುಗಳಿಗೆ ಹೋಗಲು ಉಚಿತ ರೈಲಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದೆ.

ಕೆ. ಎನ್. ಉಮೇಶ್, ಕಾರ್ಯದರ್ಶಿ, ಸಿಪಿಐ(ಎಂ), ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ.

ಎನ್. ಪ್ರತಾಪ್ ಸಿಂಹ, ಕಾರ್ಯದರ್ಶಿ, ಸಿಪಿಐ(ಎಂ) , ಬೆಂಗಳೂರು ಉತ್ತರ ಜಿಲ್ಲಾ ಸಮಿತಿ.

Leave a Reply

Your email address will not be published. Required fields are marked *