ಲಾಕ್‌ ಡೌನ್ ವಿಸ್ತರಣೆ: ಸಿಪಿಐ(ಎಂ)ನಿಂದ ನಿರ್ದಿಷ್ಟ ಆರ್ಥಿಕ ಕ್ರಮಗಳ ಮಂಡನೆ

GettyImages-1216484638ರಾಷ್ಟ್ರವ್ಯಾಪಿ ಲಾಕ್ ಡೌನನ್ನು ಇನ್ನೂ ಎರಡು ವಾರಗಳಿಗೆ ವಿಸ್ತರಿಸಲಾಗಿದೆ. ಲಾಕ್‌ ಡೌನಿನ ಆರಂಭದಿಂದಲೇ ಎದ್ದು ಬಂದಿರುವ ಸಮಸ್ಯೆಗಳು ಮತ್ತು ಕೋಟ್ಯಂತರ ಭಾರತೀಯ ಜನತೆ, ಅದರಲ್ಲೂ ವಲಸೆ ಕಾರ್ಮಿಕರು, ದಿನಗೂಲಿಯವರು ಮತ್ತು ಬಡಜನರು ಬದುಕುಳಿಯಲು ಅಸಮರ್ಥರಾದವರು ಎದುರಿಸುತ್ತಿರುವ ಸಂಕಷ್ಟಗಳು  ಆಳಗೊಳ್ಳುತ್ತಲೇ ಹೋಗುತ್ತವೆ ಎಂದಿರುವ ಸಿಪಿಐ(ಎಂ) ಈ ಸಂದರ್ಭದಲ್ಲಿ, ಸರಕಾರ ಪ್ರಸಕ್ತ ಅವಧಿಯಲ್ಲಿ ಕೈಗೊಳ್ಳಬೇಕಾದ ಆರ್ಥಿಕ ಕ್ರಮಗಳನ್ನು ಸಾರ್ವಜನಿಕವಾಗಿ ಮುಂದಿಟ್ಟಿದೆ. ಇವಕ್ಕೆ ತುರ್ತಾಗಿ ಗಮನ ಹರಿಸಬೇಕು. ಕೇಂದ್ರ ಸರಕಾರ ತಕ್ಷಣವೇ ಈ ಆರ್ಥಿಕ ಮಾರ್ಗನಕಾಶೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದೆ. ಈ ಮಾರ್ಗನಕಾಶೆಯನ್ನು ಪಕ್ಷ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಗೆ ಕಳಿಸಿದೆ.

ಈ ಆರ್ಥಿಕ ಕ್ರಮಗಳಲ್ಲಿ ೧೭ ಅಂಶಗಳಿದ್ದು, ೧೦ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತಾದ್ದು,, ೫ ಮಧ್ಯಮಾವಧಿ ಹಾಗೂ ಎರಡು ದೀಘಾವಧಿಯ ಕ್ರಮಗಳನ್ನು ಕುರಿತಾದ್ದು.

ತಕ್ಷಣದ ಕ್ರಮಗಳಲ್ಲಿ ಪ್ರತಿ ಆದಾಯ ತೆರಿಗೆದಾರರಲ್ಲದ ಕುಟುಂಬಕ್ಕೆ ಮೂರು ತಿಂಗಳ ಕಾಲ ಮಾಸಿಕ ೭೫೦೦ ರೂ. ಮತ್ತು ಆರು ತಿಂಗಳ ಕಾಲ ಪ್ರತಿ ವ್ಯಕ್ತಿಗೆ ೧೦ ಕೆ.ಜಿ.ಯಂತೆ ಉಚಿತವಾಗಿ ಆಹಾರಧಾನ್ಯಗಳ ಹಂಚಿಕೆ, ಇತರ ಕಾಯಿಲೆಗಳಿಂದ ನರಳುತ್ತಿರುವವರಿಗೆ ಶುಶ್ರೂಷೆ, ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳುವುದು, ಉದ್ಯೋಗ ನಷ್ಟ, ಸಂಬಳ ಕಡಿತಗಳಾಗದಂತೆ  ಖಾತ್ರಿಪಡಿಸುವುದು ಸೇರಿದೆ. ಈ ತಕ್ಷಣದ ಕ್ರಮಗಳಿಗೆ ಎಷ್ಟು  ಹಣ ಬೇಕಾದೀತು ಮತ್ತು ಅದನ್ನು ಹೇಗೆ ಹೊಂದಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನೂ ಪಕ್ಷ ಇದರಲ್ಲಿ ವಿಶದಪಡಿಸಿದೆ.

ಈ ತಕ್ಷಣದ ಕ್ರಮಗಳ ನಂತರ ನಿಧಾನವಾಗಿ ಲಾಕ್‌ಡೌನನ್ನು ತೆಗೆಯುತ್ತಿದ್ದಂತೆ ಮಧ್ಯಮಾವಧಿಯ ಕ್ರಮಗಳನ್ನು ಎತ್ತಿಕೊಳ್ಳಬೇಕು. ಇದರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪುನರುಜ್ಜೀವನ, ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಮತ್ತು ಕೃಷಿಗೆ ಹೆಚ್ಚುವರಿ ಬೆಂಬಲ, ವಲಸೆ ಕಾರ್ಮಿಕರು ಮತ್ತೆ ಕೆಲಸಕ್ಕೆ ಬರುವಂತೆ ಪ್ರೋತ್ಸಾಹ, ಆವಶ್ಯಕ ಸರಕುಗಳ ಪೂರೈಕೆ ಮತ್ತು ಗ್ರಾಮೀಣ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ಸೇರಿದೆ.

ದೀರ್ಘಕಾಲೀನ ಕ್ರಮಗಳನ್ನೂ ಈಗಲೇ ಆರಂಭಿಸಬೇಕು. ಇದರಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವುದು ಮತ್ತು ಧ್ರುವೀಕರಣದ ಹಾಗೂ ಸರ್ವಾಧಿಕಾರಶಾಹಿ ದಾಳಿಗಳನ್ನು ತೊರೆಯುವುದು ಸೇರಿದೆ.

Leave a Reply

Your email address will not be published. Required fields are marked *