ಲಾಕ್‌ಡೌನ್ ವಿಸ್ತರಣೆ- ಬಡವರ ಬಗ್ಗೆ ಕಾಳಜಿ ಇಲ್ಲ-ಸರಕಾರ ಇನ್ಯಾವುದಕ್ಕೆ ಕಾಯುತ್ತಿದೆ ?- ಸೀತಾರಾಮ್ ಯೆಚುರಿ

ಲಾಕ್‌ ಡೌನನ್ನು ಮತ್ತೊಮ್ಮೆ ಎರಡು ವಾರಗಳ ವರೆಗೆ, ಅಂದರೆ ಮೇ 3ರಿಂದ ಮೇ 17ರ ವರೆಗೆ ವಿಸ್ತರಿಸಲಾಗಿದೆ. ಈ ಬಾರಿ ಇದಕ್ಕೆ ಪೂರ್ವಭಾವಿಯಾಗಿ ಪ್ರಧಾನ ಮಂತ್ರಿಗಳು ದೇಶವನ್ನುದ್ದೇಶಿಸಿ ಮಾತನಾಡಿಲ್ಲ. ಗೃಹ ವ್ಯವಹಾರಗಳ ಮಂತ್ರಾಲಯ ಯಥಾಪ್ರಕಾರ ಹೊಸ ಲಾಕ್‌ಡೌನ್ ’ಮಾರ್ಗಸೂಚಿ’ಗಳನ್ನು ಪ್ರಕಟಿಸಿದೆ. (ಇವನ್ನು ಓದಿ ಅರಗಿಸಿಕೊಳ್ಳುವುದು ಈ ಬಾರಿಯ ಟಾಸ್ಕ್ ಎಂದು ಒಬ್ಬ ವಿಶ್ಲೇಷಕರು ಟಿಪ್ಪಣಿ ಮಾಡಿದ್ದಾರೆ!). ಮಧ್ಯಮ, ಸಣ್ಣ ಮತ್ತು ಅತಿಸಣ್ನ ಉದ್ದಿಮೆಗಳಿಗೆ ಹಣಕಾಸು ಬೆಂಬಲದ ಮಾತಿಲ್ಲ, ಜೀವನೋಪಾಯಗಳನ್ನು ಕಳಕೊಂಡಿರುವ ದಿನಗೂಲಿಗಳಿಗೆ ಹಣಕಾಸು ಬೆಂಬಲದ ಮಾತಿಲ್ಲ. ಈಗಾಗಲೇ ಸಿಪಿಐ(ಎಂ) ಆಗ್ರಹಿಸುತ್ತಿರುವ, ಮಾತ್ರವಲ್ಲ, ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರೂ ಸಮರ್ಥಿಸಿರುವ ಕನಿಷ್ಟ ಪರಿಹಾರವಾದ ಆದಾಯ ತೆರಿಗೆದಾರರಲ್ಲದವರಿಗೆ ಮುಂದಿನ ಮೂರು ತಿಂಗಳು ಮಾಸಿಕ ೭೫೦೦ ರೂ.ನಗದು ಬೆಂಬಲ, ಮತ್ತು ತುಂಬಿ ತುಳಿಕುತ್ತಿರುವ ಆಹಾರಧಾನ್ಯ ದಾಸ್ತಾನುಗಳಿಂದ ಉಚಿತ ಆಹಾರಧಾನ್ಯಗಳ ವಿತರಣೆಯ ಮಾತೂ ಇಲ್ಲ.

ಸರಕಾರ ಇನ್ನೂ ಯಾವುದಕ್ಕೆ ಕಾಯುತ್ತಿದೆ ಎಂದು ಈ ಕುರಿತು ಪ್ರತಿಕ್ರಿಯಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪ್ರಶ್ನಿಸಿದ್ದಾರೆ.

ಲಾಕ್‌ಡೌನ್ ವಿಧಿಸುವುದು ಮಹಾಮಾರಿಯನ್ನು ಎದುರಿಸಲು ಸರ್ವಸಿದ್ಧತೆ ನಡೆಸುವುದಕ್ಕಷ್ಟೇ. ಅದರಿಂದಲೇ ಮಹಾಮಾರಿಯನ್ನು ಸೋಲಿಸಲು ಸಾಧ್ಯವಿಲ್ಲ. ಆದರೆ ಕಳೆದ ಆರು ವಾರಗಳಲ್ಲಿ ಈ ಸರಕಾರ ಏನು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿಲ್ಲ, ಈ ವಿಸ್ತರಿಸಿದ ಲಾಕ್‌ ಡೌನಿಗೆ ಮಾರ್ಗ-ನಕಾಶೆಯೇನು ಎಂದೂ ವಿಶದಪಡಿಸಿಲ್ಲ ಎಂದು ಈ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತ ಯೆಚುರಿ ಟಿಪ್ಪಣಿ ಮಾಡಿದ್ದಾರೆ.

ಲಾಕ್‌ ಡೌನ್ ವಿಸ್ತರಣೆಯ ಪ್ರಕಟಣೆ ಬರುವ ತುಸು ಮೊದಲು, ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಬೇಕೆಂದು ಕೇಂದ್ರ ಗೃಹ ಮಂತ್ರಾಲಯ ನಿರ್ದೇಶನ ನೀಡಿತು. ಅದಕ್ಕೆ ರೈಲು ವ್ಯವಸ್ಥೆ ಮಾಡಬೇಕು ಎಂದು ಕೆಲವು ರಾಜ್ಯ ಸರಕಾರಗಳು ಕೇಳಿದ ಮೇಲೆ  ಕೊನೆಗೂ ಐದು ವಾರಗಳಿಂದ ಕಾಯುತ್ತಿದ್ದ ಕಾರ್ಮಿಕರಿಗೆ ಕೆಲವು ’ಶ್ರಮಿಕ ಸ್ಪೆಷಲ್’ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಇದನ್ನೂ ಉಚಿತವಾಗಿ ಮಾಡಿಲ್ಲ, ಬದಲಿಗೆ ವಿಪರೀತ ದರಗಳನ್ನು ವಸೂಲಿ ಮಾಡಲಾಗಿದೆ. ಸ್ಲೀಪರ್ ದರಗಳಿಗೆ, ಸೂಪರ್‌ಫಾಸ್ಟ್ ದರ ರೂ.೩೦, ಊಟಕ್ಕೆ ಮತ್ತು ನೀರಿಗೆ ರೂ.೨೦ ಸೇರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಹತಾಶರಾಗಿರುವ ಬಡ ಕಾರ್ಮಿಕರನ್ನು ನಿಮ್ಮ ಪ್ರಯಾಣಕ್ಕೆ ಬೆಲೆ ತೆರಿ ಎಂದು ಕೇಳುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಯೆಚುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಯವರು ಪ್ರಧಾನಿಗಳು ನೋಡಿಕೊಳ್ಳುತ್ತಾರೆ(ಪಿಎಂ ಕೇರ‍್ಸ್) ಎಂದು ತಮ್ಮ ಹೆಸರಿನಲ್ಲಿ ರಚಿಸಿರುವ ನಿಧಿಗೆ ಬಂದು ಬೀಳುತ್ತಿರುವ ಸಾವಿರಾರು ಕೋಟಿ ರೂ.ಗಳು ಯಾತಕ್ಕಾಗಿ ಎಂದು ಅವರು ಪ್ರಶ್ನಿಸಿದ್ದಾರೆ.

ಈಗಲೂ ಅರ್ಧದಷ್ಟು ಕಾರ್ಮಿಕರ ಕುಟುಂಬಗಳ ಬಳಿ ಒಂದು ದಿನದ ರೇಷನ್ ಕೂಡಾ ಇಲ್ಲ, ಲಾಕ್‌ಡೌನ್‌ನ ೩೨ ದಿನಗಳ ನಂತರವೂ ೮೨ಶೇ. ಕಾರ್ಮಿಕರಿಗೆ ಸರಕಾರದಿಂದ ಯಾವುದೇ ರೇಷನ್ ಸಿಕ್ಕಿಲ್ಲ, ೬೮ಶೇ. ಮಂದಿಗೆ ಬೇಯಿಸಿದ ಆಹಾರ ಸಿಕ್ಕಿಲ್ಲ. ಕಳೆದ ಲಾಕ್‌ ಡೌನ್ ವಿಸ್ತರಣೆಯ ನಂತರ ಕೇವಲ ೨ಶೇ. ಮಂದಿಯ ಪರಿಸ್ಥಿತಿ ಉತ್ತಮಗೊಂಡಿದೆ, ಅದೂ ಸರ್ಕಾರೇತರ ಸಂಸ್ಥೆಗಳೂ ಆಹಾರ ಒದಗಿಸುತ್ತಿರುವುದರಿಂದಾಗಿ.

ಎಪ್ರಿಲ್ ೨೬ ರ ವೇಳೆಗೆ ೬ಶೇ. ಕಾರ್ಮಿಕರಿಗೆ ಮಾತ್ರ ಪೂರ್ಣ ಸಂಬಳ ಸಿಕ್ಕಿದೆ, ೧೬ಶೇ. ಮಂದಿಗೆ ಭಾಗಶಃ ಸಿಕ್ಕಿದೆ, ಸುಮಾರು ೭೮ಶೇ. ಮಂದಿಗೆ ತಮ್ಮ ಸಂಬಳವೇ ಸಿಕ್ಕಿಲ್ಲ.  ಸ್ವ-ಉದ್ಯೋಗಿಗಳು ಎಂದು ಸರಕಾರ ಕರೆಯುವ ಬೀದಿ ಮಾರಾಟಗಾರರು, ರಿಕ್ಷಾವಾಲಾಗಳಲ್ಲಿ ೯೯ಶೇ. ಮಂದಿಗೆ ಈ ಅವಧಿಯಲ್ಲಿ ಯಾವುದೇ ಆದಾಯ ಬಂದಿಲ್ಲ.

ಇದು ಇತ್ತೀಚೆಗೆ ಮಾಡಿರುವ ಒಂದು ಸರ್ವೇಯಲ್ಲಿ ಕಂಡು ಬಂದಿರುವ ಸಂಗತಿಗಳು. ಬಡಜನಗಳು, ಅದರಲ್ಲೂ ವಲಸೆ ಕಾರ್ಮಿಕರು ಎಂತಹ ದುಸ್ಥಿತಿಯಲ್ಲಿದ್ದಾರೆ ಎಂದು ಈ ಅಂಕಿ-ಅಂಶಗಳು ಹೇಳುತ್ತಿದ್ದರೂ ಪ್ರಧಾನಿಗಳಿಂದ, ಅವರ ಮಂತ್ರಿಗಳಿಂದ ಒಂದು ಮಾತೂ ಕೇಳಬಂದಿಲ್ಲ.

ಈ ನಡುವೆ ಸಶಸ್ತ್ರ ಪಡೆಗಳು ಮೇ ೩ರಂದು ಆಸ್ಪತ್ರೆಗಳ ಮೇಲೆ ಹಾರಾಟ (ಫ್ಲೈಪಾಸ್ಟ್) ನಡೆಸಿ ಹೂಮಳೆ ಸುರಿಸುವ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ. ಜನಗಳ ಆವಶ್ಯಕತೆಗಳನ್ನು ಪೂರೈಸಲು, ನಗದು, ರೇಷನ್‌ಗೆ ಯಾವುದೇ ಅರ್ಥಪೂರ್ಣ ಮೊತ್ತವನ್ನು ಕೊಡದ ಸರಕಾರ ಈ ಮಹಾಪ್ರದರ್ಶನಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡುತ್ತದೆಯೇ ಎಂದು ಯೆಚುರಿ ಪ್ರಶ್ನಿಸಿದ್ದಾರೆ. ಇದು ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಲು ತಗಲುವ ವೆಚ್ಚವನ್ನು ಮೀರುತ್ತದೆ.

ಇಂತಹ ಸನ್ನಿವೇಶದಲ್ಲಿ ಬಡ ಕಾರ್ಮಿಕರಿಂದ ಸೂಪರ್ ಫಾಸ್ಟ್ ಟಿಕೇಟ್ ದರಗಳನ್ನು ವಸೂಲಿ ಮಾಡಿರುವುದು ಒಂದು ಕ್ರೌರ್ಯಪೂರ್ಣ ಕೃತ್ಯ ಎಂದು ಯೆಚುರಿ ವರ್ಣಿಸಿದ್ದಾರೆ.

ವೈಯಕ್ತಿಕ ಪ್ರಚಾರ, ಸೆಂಟ್ರಲ್ ವಿಸ್ಟಾ, ಪ್ರಧಾನಿಗಳಿಗೆ ಹೊಸ ನಿವಾ, ಮತ್ತು ಈಗ ಈ ಫ್ಲೈಪಾಸ್ಟ್ ಇತ್ಯಾದಿಗಳೇ ಈ ಸರಕಾರದ ಆದ್ಯತೆಗಳು, ಕುಲಗೆಟ್ಟಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ, ಜನಗಳ ಜೀವನೋಪಾಯಗಳಲ್ಲ.ಜನಗಳಿಗೆ ಈಗ ಪರಿಹಾರ ಬೇಕಾಗಿದೆ. ಲಕ್ಷಾಂತರ ಮಂದಿ ಉಪವಾಸದ ಸಿತ್ಥಿಯತ್ತ ಜಾರುತ್ತಿದ್ದಾರೆ. ಹಸಿದವರಿಗೆ ತುಂಬಿ ತುಳುಕುತ್ತಿರುವ ಆಹಾರಧಾನ್ಯಗಳ ಗೋದಾಮುಗಳನ್ನು ತೆರೆಯುವ ಬದಲು ಬಡಜನಗಳ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಲಾಕ್‌ ಡೌನ್ ಮತ್ತೆ ವಿಸ್ತಾರಗೊಂಡಿದೆ ಎಂದು ಯೆಚುರಿ ಖೇದ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *