ಕೇಂದ್ರ ಸರಕಾರವೇ ಸಮಸ್ತ ವೆಚ್ಚ ಹೊರಬೇಕು- ಸಿಪಿಐ(ಎಂ) ಪೊಲಿಟ್ ಬ್ಯುರೊ
ಲಾಕ್ ಡೌನಿನ ಮೂರನೇ ಘಟ್ಟದ ಷರತ್ತುಗಳ ವಿವರಗಳನ್ನು ಕೊಟ್ಟಿರುವ ಗೃಹ ಮಂತ್ರಾಲಯದ ಸುತ್ತೋಲೆ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಒಯ್ಯಲು ರೈಲುಗಳು ಚಲಿಸುವುದಕ್ಕೆ ಅನುಮತಿ ನೀಡಿದೆ. ಆದರೆ ಆಘಾತಕಾರಿ ಸಂಗತಿಯೆಂದರೆ, ಕೇಂದ್ರ ಸರಕಾರ ಮತ್ತೊಮ್ಮೆ ರಾಜ್ಯ ಸರಕಾರಕ್ಕೆ ನಿರ್ದೇಶನಗಳನ್ನು ಕೊಟ್ಟಿದೆಯೇ ಹೊರತು ಅದರ ಯಾವುದೇ ಹಣಕಾಸು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಇದು ಆಘಾತಕಾರಿ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ವಿವಧೆಡೆಗಳಿಂದ ಮನೆಗೆ ಹಿಂದಿರುಗಲು ರೈಲು ಹತ್ತಿದ ವಲಸೆ ಕಾರ್ಮಿಕರು ಟಿಕೆಟುಗಳಿಗೆ ಮತ್ತು ಆಹಾರಕ್ಕೆ ಕೂಡ ಹಣ ತೆರುವಂತೆ ಬಲವಂತ ಮಾಡಲಾಗಿದೆ. ಬಸ್ ಹತ್ತಿದದವರಿಂದ ಪ್ರಯಾಣಕ್ಕೆ ವಿಪರೀತ ದರಗಳನ್ನು ವಸೂಲಿ ಮಾಡಲಾಗಿದೆ. ಲಾಕ್ ಡೌನಿನಿಂದಾಗಿ ಕಳೆದ ಎರಡು ತಿಂಗಳಿಂದ ಏನೇನೂ ಆದಾಯವಿಲ್ಲದವರು ಅವರವರ ರೈಲು ಟಿಕೆಟುಗಳಿಗೆ ಹಣ ತೆರಬೇಕು ಎಂದು ನಿರೀಕ್ಷಿಸುವುದು ಕ್ರೌರ್ಯವಲ್ಲದೆ ಬೇರೇನೂ ಅಲ್ಲ. ರಾಜ್ಯ ಸರಕಾರಗಳೂ, ಕೇಂದ್ರ ಸರಕಾರದಿಂದ ಏನೊಂದೂ ಸಹಾಯ ಪಡೆಯದಿರುವಾಗ, ಈ ವೆಚ್ಚವನ್ನು ವಹಿಸಬೆಕು ಎಂದೂ ಕೇಳುವಂತಿಲ್ಲ.
ವಲಸೆ ಕಾರ್ಮಿಕರು ಎಲ್ಲೂ ಹೋಗಲಾರದೆ ಉಳಿಯಬೇಕಾದ್ದು ಅವರ ತಪ್ಪಿನಿಂದ ಅಲ್ಲ, ಬದಲಾಗಿ ಕೇಂದ್ರ ಸರಕಾರ ಕೇವಲ ನಾಲ್ಕು ಗಂಟೆಗಳ ನೋಟೀಸಿನಲ್ಲೇ ಲಾಕ್ಡೌನ್ ಹೇರಿದ್ದರಿಂದಾಗಿ. ಆದ್ದರಿಂದ ತಮ್ಮ ಮನೆಗಳಿಗೆ ಹೋಗಬಯಸುವ ವಲಸೆ ಕಾರ್ಮಿಕರ ಸಮಸ್ತ ವೆಚ್ಚಗಳನ್ನೂ ಕೇಂದ್ರ ಸರಕಾರವೇ ಹೊರಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ರಾಜ್ಯದೊಳಗೆ ಅವರ ಸುರಕ್ಷಿತ ಪ್ರಯಾಣದ ವ್ಯವಸ್ಥೆಗಳನ್ನೆಲ್ಲ ಸಂಬಂಧಪಟ್ಟ ರಾಜ್ಯ ಸರಕಾರಗಳು ಮಾಡಬೆಕು ಎಂದು ಅದು ಹೇಳಿದೆ.