ವಾಶಿಂಗ್ಟನ್ ನಲ್ಲಿ ಕ್ಯೂಬಾ ರಾಯಭಾರ ಕಚೇರಿಯ ಮೇಲೆ ದಾಳಿ – ಸಿಪಿಐ(ಎಂ) ಖಂಡನೆ

ಅಮೆರಿಕಾದ ರಾಜಧಾನಿ ವಾಶಿಂಗ್ಟನ್ ನಲ್ಲಿರುವ ಕ್ಯೂಬಾದ ರಾಯಭಾರ ಕಚೇರಿಯ ಮೇಲೆ ಎಪ್ರಿಲ್ ೩೦ರಂದು ದಾಳಿ ನಡೆದಿದೆ. ಒಬ್ಬ ಅಪರಿಚಿತ ಬಂದೂಕುಧಾರಿ ಅಸಾಲ್ಟ್ ರೈಫಲ್ ನಿಂದ ರಾಯಭಾರ ಕಚೇರಿಯ ಮೇಲೆ ಗುಂಡು ಹಾರಿಸಿದ. ಕ್ಯೂಬಾದ ಭದ್ರತಾ ವ್ಯವಸ್ಥೆಯಿಂದಾಗಿ ಯಾವ ರಾಜತಾಂತ್ರಿಕರಿಗೂ ಗಾಯಗಳಾಗಿಲ್ಲ. ಸಿಪಿಐ(ಎಂ) ಈ ದಾಳಿಯನ್ನು ಖಂಡಿಸಿದೆ.

ವಿಯೆನ್ನಾ ಅಧಿನಿರ್ಣಯದ ಪ್ರಕಾರ, ರಾಯಭಾರ ಮಿಶನ್‌ಗಳ ರಕ್ಷಣೆ ಸಂಬಂಧಪಟ್ಟ ದೇಶದ, ಅಂದರೆ ಇಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಜವಾಬ್ದಾರಿ. ಆದರೆ ಅಮೆರಿಕನ್ ಸರಕಾರ ಕ್ಯೂಬಾದ ರಾಯಭಾರ ಕಚೇರಿಗೆ ಈ ರಕ್ಷಣೆಯನ್ನು ಒದಗಿಸುವಲ್ಲಿ ವಿಫಲವಾಗಿದೆ. ಅಮೆರಿಕನ್ ಸರಕಾರದ ಅಧಿಕಾರಿಗಳು ಇದುವರೆಗೆ ಕ್ಯೂಬಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿಲ್ಲ, ಈ ದಾಳಿಯನ್ನು ಖಂಡಿಸುವ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ.

ಅಮರಿಕನ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಧೋರಣೆಗಳು ಮತ್ತು ವೈಷಮ್ಯ ತುಂಬಿರುವ ಅಬ್ಬರಗಳ ಫಲಿತಾಂಶವಾಗಿ ಈ ದಾಳಿ ನಡೆದಿದೆ. ಎಂದು ಸಿಪಿಐ(ಎಂ) ಹೇಳಿದೆ.

ಕ್ಯೂಬಾ ಕೊವಿಡ್-೧೯ ಮಹಾಮಾರಿಯ ವಿರುದ್ಧ ಈಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ನೇತೃತ್ವ ನೀಡುತ್ತಿರುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಕ್ಯೂಬಾದ ವೈದ್ಯಕೀಯ ತಂಡಗಳು ಈಗ ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ಖಂಡದ ೫೯ ದೇಶಗಳಲ್ಲಿ ಸೇವಾ ನಿರತವಾಗಿವೆ. ಬೊಲಿವಿಯಾದಲ್ಲಿ ನಡೆದಂತೆ, ಇಂತಹ ವೈದ್ಯಕೀಯ ಸಿಬ್ಬಂದಿಯ ಮೇಲೂ ದಾಳಿಗಳು ನಡೆಯುತ್ತಿದ್ದು, ಇದರಲ್ಲಿ ಅಮೆರಿಕಾದ ಪಾತ್ರಕ್ಕೆ ಸಾಕಷ್ಟು ದಾಖಲೆಗಳ ಪುರಾವೆಗಳಿವೆ.

ಕ್ಯೂಬಾದ ವಿರುದ್ಧ ಅಮಾನವೀಯ ಆರ್ಥಿಕ ದಿಗ್ಬಂಧನಗಳನ್ನು ಖಂಡಿಸಿ ವಿಶ್ವಸಂಸ್ಥೆ ಹಲವಾರು ನಿರ್ಣಯಗಳನ್ನು ಕೈಗೊಂಡಿದೆ. ಇವನ್ನೆಲ್ಲ ಅಮೆರಿಕನ್ ಸರಕಾರ ಗೌರವಿಸಬೇಕು, ಆರ್ಥಿಕ ದಿಗ್ಬಂಧನವನ್ನು ತಕ್ಷಣವೇ ಹಿಂತೆಗೆದು ಕೊಳ್ಳಬೇಕು ಮತ್ತು ಎಲ್ಲ ನಿರ್ಬಂಧಗಳನ್ನು ರದ್ದು ಮಾಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಕ್ಯೂಬಾದ ವಿರುದ್ಧ ದಾಳಿಗಳನ್ನು ನಡೆಸಲು ಅಮೆರಿಕಾವನ್ನು ನೆಲೆಯಾಗಿ ಬಳಸಿಕೊಳ್ಳುತ್ತಿರುವ ಎಲ್ಲ ವ್ಯಕ್ತಿಗಳು ಮತ್ತು ಗುಂಪುಗಳನ್ನು ಹೊರಹಾಕುವ ಕ್ರಮಗಳನ್ನು ಅಮೆರಿಕನ್ ಸರಕಾರ ಕೈಗೊಳ್ಳಬೇಕು ಎಂದಿರುವ ಸಿಪಿಐ(ಎಂ), ಪ್ರಸಕ್ತ ಮಹಾಮಾರಿಯ ವೇಳೆಯಲ್ಲಿ ಜಗತ್ತಿನ ಜನಗಳಿಗೆ ಉದಾತ್ತ ಸೇವೆ ಸಲ್ಲಿಸುತ್ತಿರುವ ಸಮಾಜವಾದಿ ಕ್ಯೂಬ ಮತ್ತು ಅಲ್ಲಿಯ ಜನತೆಯೊಂದಿಗೆ ತನ್ನ ಸೌಹಾರ್ದವನ್ನು ಪುನರುಚ್ಚರಿಸಿದೆ.

Leave a Reply

Your email address will not be published. Required fields are marked *