ವಿಶಾಖಪಟ್ಟಣಂನ ಎಲ್ ಜಿ ಪೊಲಿಮೊರ್ಸ್ನ ಸ್ಥಾವರದಲ್ಲಿ ಮಾರಣಾಂತಿಕ ಅನಿಲ ಸೋರಿಕೆ ದಿಗಿಲುಂಟು ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇದುವರೆಗೆ ಹತ್ತಕ್ಕಿಂತಲೂ ಹೆಚ್ಚು ಮಂದಿ ಸಾವಪ್ಪಿದ್ದಾರೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ಅಸ್ಪತ್ರೆಗೆ ಸೇರಿಸಬೇಕಾಗಿ ಬಂದಿದೆ. ಸಾವುಗಳ ಸಂಖ್ಯೆ ಏರುವ ಸಂಭವ ಇದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಅಪಘಾತ ಈ ಕಂಪನಿಯ ಮ್ಯಾನೇಜ್ಮೆಂಟಿನ ಕ್ರಿಮಿನಲ್ ನಿರ್ಲಕ್ಷ್ಯದ ಒಂದು ಸ್ಪಷ್ಟ ಪ್ರಕರಣ. ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಮುಚ್ಚಿದ್ದ ಸ್ಥಾವರವನ್ನು ತೆರಯುವ ಮೊದಲು ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂದು ಸರಿಯಾದ ತನಿಖೆ ನಡೆಯಬೇಕಾಗಿದೆ.
ದಟ್ಟ ಹೊಗೆಯ ನಡುವೆ ಜನಗಳು ತಮ್ಮ ಮನೆಗಳಿಂದ ಹೊರಗೆ ಧಾವಿಸುತ್ತಿದ್ದುದು ಕಂಡು ಬಂದಿದೆ. ಸಾವುಗಳು ಮುಖ್ಯವಾಗಿ ಉಸಿರುಗಟ್ಟಿದುದರಿಂದ ಆಗಿವೆ. ಬಾಧಿತ ಜನಗಳನ್ನು ಶುಶ್ರೂಷೆಗೆ ಒಯ್ಯಲು ಮಧ್ಯಪ್ರವೇಶಿಸುವಲ್ಲಿ ಜಿಲ್ಲಾ ಆಡಳಿತ ವಿಫಲವಾಗಿದೆ ಎಂದು ವರದಿಯಾಗಿದೆ.
ತಕ್ಷಣವೇ ಒಂದು ನ್ಯಾಯಾಂಗ ತನಿಖೆಯನ್ನು ಸಮಯಬದ್ಧ ರೀತಿಯಲ್ಲಿ ನಡೆಸಬೇಕಾಗಿದೆ, ತಪ್ಪಿತಸ್ಥರನ್ನು ಶಿಕ್ಷಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಎಲ್ ಜಿ ಪೊಲಿಮರ್ಸ್ ನ ಮ್ಯಾನೇಜ್ಮೆಂಟನ್ನು ದಂಡನೀಯಗೊಳಿಸಬೇಕು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಜೀವ ಕಳಕೊಂಡವರ ಕುಟುಂಬಗಳಿಗೆ ರೂ.೫೦ ಲಕ್ಷ ಪರಿಹಾರ ಕೊಡಬೇಕು, ಮತ್ತು ಗಾಯಗೊಂಡವರಿಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.