ನಗ್ನ ಕ್ರೌರ್ಯವನ್ನು ನಿಲ್ಲಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ರಾಷ್ಟ್ರಪತಿಗಳಿಗೆ 7 ಪಕ್ಷಗಳ ಪತ್ರ
ಏಳು ರಾಜಕೀಯ ಪಕ್ಷಗಳ ಮುಖಂಡರು ಮೇ ೮ರಂದು ರಾಷ್ಟ್ರಪತಿಗಳಿಗೆ ಒಂದು ಪತ್ರ ಬರೆದು ಕೋಟ್ಯಂತರ ಭಾರತೀಯ ಕಾರ್ಮಿಕ ವರ್ಗದ ಮತ್ತು ದುಡಿಯುವ ಜನಗಳ ಭದ್ರತೆ, ಕಲ್ಯಾಣ, ಜೀವನೋಪಾಯ ಮತ್ತು ಭವಿಷ್ಯಕ್ಕೆ ಸಂಬಂಧಪಟ್ಟ ಕಾಳಜಿಗಳನ್ನು ಎತ್ತಿದ್ದಾರೆ. ‘ಕೇಂದ್ರ ಸರಕಾರ ಮತ್ತು ಕೆಲವು ರಾಜ್ಯ ಸರಕಾರಗಳು ನಮ್ಮ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಿಕೊಂಡು ಮತ್ತು ನಮ್ಮ ಡಾಕ್ಟರುಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಕಾಪಾಡಿಕೊಂಡು ಹಾಗೂ ಜನಗಳ ಅಗತ್ಯಗಳ ಬಗ್ಗೆ ಕಾಳಜಿ ವಹಿಸಿ ಮಹಾಮಾರಿಯ ವಿರುದ್ಧ ಸಮರದ ಮೇಲೆ ಗಮನ ಕೇಂದ್ರೀಕರಿಸುವ ಬದಲು ಕಾರ್ಮಿಕ ಹಕ್ಕುಗಳನ್ನು ದುರ್ಬಲಗೊಳಿಸುವ ತರ್ಕವನ್ನು ಬಳಸುವಂತೆ ಕಾಣುತ್ತದೆ’ ಎಂದು ಈ ಪತ್ರದಲ್ಲಿ ಹೇಳಿರುವ ಈ ಮುಖಂಡರು ’ಕಾರ್ಮಿಕರು ಭಾರತೀಯ ಸಂವಿಧಾನದ ಅಡಿಯಲ್ಲಿ ಗುಲಾಮರಲ್ಲ, ಅವರನ್ನು ಈ ಮಟ್ಟಕ್ಕೆ ಇಳಿಸುವುದು ಸಂವಿಧಾನದ ಉಲ್ಲಂಘನೆಯಷ್ಟೇ ಅಲ್ಲ, ಅದನ್ನು ನಿರರ್ಥಕಗೊಳಿಸಿದಂತೆಯೇ’ ಎಂಬ ಸಂಗತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತಂದಿದ್ದಾರೆ.
ಪತ್ರದ ಕೊನೆಯಲ್ಲಿ “ನೀವು ಭಾರತದ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸುವಾಗ ತೆಗೆದುಕೊಂಡ ಪ್ರತಿಜ್ಞೆಗೆ ವಿಧೇಯರಾಗಿ, ಈ ಮಹಾಮಾರಿಯನ್ನು ಎದುರಿಸುವಲ್ಲಿ ಮತ್ತು ಸೋಲಿಸುವಲ್ಲಿ ನಮ್ಮ ಎಲ್ಲ ಜನಗಳ ಐಕ್ಯತೆ ನಮ್ಮ ಅತಿ ದೊಡ್ಡ ಶಕ್ತಿಯಾಗಿರಬೇಕಾದ ಈ ನಿರ್ಣಾಯಕ ತಿರುವಿನಲ್ಲಿ, ಕಾರ್ಮಿಕ ವರ್ಗ ಮತ್ತು ದುಡಿಯುವ ಜನಗಳ ವಿರುದ್ಧ ಇಂತಹ ನಗ್ನ ಕ್ರೌರ್ಯವನ್ನು ನಿಲ್ಲಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕು”
ಎಂದು ಮನವಿ ಮಾಡಿಕೊಂಡಿದ್ದಾರೆ.
ಸೀತಾರಾಮ್ ಯೆಚುರಿ, ಡಿ.ರಾಜ, ದೀಪಂಕರ್ ಭಟ್ಟಾಚಾರ್ಯ, ದೇಬಬ್ರತ ಬಿಸ್ವಾಸ್ ಮತ್ತು ಮನೋಜ್ ಭಟ್ಟಾಚಾರ್ಯ, ಅನುಕ್ರಮವಾಗಿ ಸಿಪಿಐ(ಎಂ) , ಸಿಪಿಐ, ಸಿಪಿಐ(ಎಂಎಲ್)-ಎಲ್, ಎಐಎಫ್ಬಿ ಮತ್ತು ಆರ್ ಎಸ್ ಪಿ ಯ ಪ್ರಧಾನ ಕಾರ್ಯದರ್ಶಿಗಳು, ಹಾಗೂ ಆರ್ಜೆಡಿಯ ಸಂಸತ್ ಸದಸ್ಯ ಮನೋಜ್ ಝಾ ಮತ್ತು ವಿಸಿಕೆ ಅಧ್ಯಕ್ಷರು ಮತ್ತು ಸಂಸತ್ ಸದಸ್ ಡಾ. ಥೋಲ್ ತಿರುಮಾವಳವನ್ ಈ ಪತ್ರಕ್ಕೆ ಸಹಿ ಹಾಕಿರುವ ಮುಖಂಡರು. ಈ ಪತ್ರದ ಪೂರ್ಣ ಪಾಟ ಹೀಗಿದೆ:
ಪ್ರಿಯ ರಾಷ್ಟ್ರಪತಿಯವರೇ,
ನಾವು, ಕೆಳಗೆ ಸಹಿ ಮಾಡಿರುವ ಭಾರತೀಯ ಸಂಸತ್ತಿನಲ್ಲಿ ಪ್ರಾತಿನಿಧ್ಯ ಹೊಂದಿರುವ ರಾಜಕೀಯ ಪಕ್ಷಗಳ ಮುಖಂಡರು, ಕೋಟ್ಯಂತರ ಭಾರತೀಯ ಕಾರ್ಮಿಕ ವರ್ಗದ ಮತ್ತು ದುಡಿಯುವ ಜನಗಳ ಭದ್ರತೆ, ಕಲ್ಯಾಣ, ಜೀವನೋಪಾಯ ಮತ್ತು ಭವಿಷ್ಯಕ್ಕೆ ಸಂಬಂಧಪಟ್ಟಿರುವ ಒಂದು ಅತ್ಯಂತ ಗಂಭೀರ ಪ್ರಶ್ನೆಯ ಮೇಲೆ ನಿಮಗೆ ಬರೆಯುತ್ತಿದ್ದೇವೆ. ನಿಜವೆಂದರೆ, ಇದು ನಮ್ಮ ಸಮಸ್ತ ದೇಶದ ಯೋಗಕ್ಷೇಮ ಮತ್ತು ಅದರ ಭವಿಷ್ಯಕ್ಕೆ ಸಂಬಂಧಪಟ್ಟಿರುವಂತದ್ದು. ಕೊವಿಡ್-೧೯ ಮಹಾಮಾರಿಯ ಎದುರು ಹೋರಾಟದ ಮತ್ತು ದೀರ್ಘಗೊಂಡ ರಾಷ್ಟ್ರೀಯ ಲಾಕ್ಡೌನಿನ ಪರಿಣಾಮಗಳ ಹೆಸರಿನಲ್ಲಿ ಕಾರ್ಮಿಕ ಹಕ್ಕುಗಳನ್ನು ಮತ್ತು ಬಹುಪಾಲು ಭಾರತೀಯ ಜನತೆ ಶ್ರಮಪಟ್ಟು ಗೆದ್ದುಕೊಂಡ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರರ್ಥಕಗೊಳಿಸುತ್ತಿರುವುದೇ ಆ ಪ್ರಶ್ನೆ. ಸಂವಿಧಾನ-ವಿರೋಧಿ, ಅದರಿಂದಾಗಿ ನಾಡಿನ ಕಾನೂನಿಗೆ ವಿರುದ್ಧವಾದದ್ದು ಎಂದು ನಾವು ಭಾವಿಸುವ ಈ ಪ್ರಶ್ನೆಗಳತ್ತ ತಮ್ಮ ಗಮನವನ್ನು ಸೆಳೆಯುತ್ತಿದ್ದೇವೆ.
ಕೊವಿಡ್-೧೯ ಮಹಾಮಾರಿಯ ವಿರುದ್ಧ ಸೆಣಸುವ ನೆಪವೊಡ್ಡಿ ದೇಶದ ಈಗಿರುವ ಕಾರ್ಮಿಕ ಕಾನೂನುಗಳಲ್ಲಿ ತೀವ್ರತರವಾದ ಬದಲಾವಣೆಗಳನ್ನು ಮಾಡಲಾಗುತ್ತಿದೆ, ಇವು ದುಡಿಯುವ ಜನಗಳ ಬದುಕುಗಳನ್ನು ಮತ್ತು ಯೋಗಕ್ಷೇಮವನ್ನು ಇನ್ನಷ್ಟು ಗಂಡಾಂತರಕ್ಕೆ ಈಡು ಮಾಡುತ್ತವೆ. ಈಗಾಗಲೇ ದೇಶ ರಾಷ್ಟ್ರೀಯ ಲಾಕ್ಡೌನನ್ನು ಜಾರಿಗೆ ತಂದಂದಿನಿಂದ ವಲಸೆ ಕಾರ್ಮಿಕರು ಪಡುತ್ತಿರುವ ಪಾಡಿನ ಅತ್ಯಂತ ಅಮಾನವೀಯ ದುರಂತಮಯ ಆಯಾಮಗಳನ್ನು ಕಾಣುತ್ತಿದೆ. ಇಂದಿನ ಪರಿಸ್ಥಿತಿಗಳು ಬದುಕಿನ ಮತ್ತು ಘನತೆಯ ಮೂಲಭೂತ ಹಕ್ಕನ್ನು ರಕ್ಷಿಸುವುದಂತಿರಲಿ, ಅವು ಬರ್ಬರವೇ ಆಗಿವೆ. ಕಳೆದ ರಾತ್ರಿ, ಮಹಾರಾಷ್ಟ್ರದಲ್ಲಿ, ಹದಿನಾರು ವಲಸೆ ಕಾರ್ಮಿಕರು, ಬಹುಪಾಲು ಬುಡಕಟ್ಟು ಜನಗಳು, ತಮ್ಮ ಮನೆಗಳಿಗೆ ಹಿಂದಿರುಗಲು ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲವಾದ್ದರಿಂದ ಸಾವಿರಾರು ಕಿಲೋಮೀಟರುಗಳಷ್ಟು ನಡೆದೇ ಹೋಗಬೇಕಾಗಿ ಬಂದವರು, ಒಂದು ಗೂಡ್ಸ್ ರೈಲಿನ ಅಡಿಯಲ್ಲಿ ಜಜ್ಜಿಯಾಗಿ ಸಾವನ್ನಪ್ಪಿದ್ದಾರೆ. ನಿರ್ಬಂಧಗಳನ್ನು ಸಡಿಲಿಸುವುದರ ಜತೆಗೆ ಇರಬೇಕಾಗಿದ್ದ ಸುರಕ್ಷಿತತೆಯ ಕ್ರಮಗಳು, ಪರಿಸರ ಕಾಳಜಿಗಳು ಇಲ್ಲ. ಇಂತಹ ನಿರ್ಲಕ್ಷ್ಯದಿಂದಾಗಿ ವಿಶಾಖಪಟ್ಟಣಂನ ಕೈಗಾರಿಕಾ ಅಪಘಾತ ೧೨ ಜೀವಗಳನ್ನು ಬಲಿ ತೆಗೆದುಕೊಂಡಿದೆ, ನೂರಾರು ಜನರನ್ನು ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿದೆ. “ನಿಮ್ಮ ಸರಕಾರ” ಕಾರ್ಮಿಕರು ಸುರಕ್ಷಿತರಾಗಿರಬೇಕು, ಬದುಕುಳಿಯಬೇಕು ಎಂಬ ಕಾಳಜಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೀಗಿದೆ ನಮ್ಮ ದೇಶದ ಪರಿಸ್ಥಿತಿ.
ಈಗಾಗಲೇ “ನಿಮ್ಮ ಸರಕಾರ” ಈಗಿರುವ ೪೪ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಮಾಡುವ ಶಾಸನ ಪ್ರಕ್ರಿಯೆಯನ್ನು ಆರಂಭಿಸಿದೆ. ಇವುಗಳಲ್ಲಿ ಒಂದನ್ನು, ವೇತನಗಳ ಸಂಹಿತೆಯ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಉಳಿದವುಗಳ ಪ್ರಕ್ರಿಯೆ ಸಾಗಿದೆ. ಈ ಸಂಹಿತೆಗಳು ಶಾಕಾಂಗದ ಮಂಜೂರಾತಿ ಪಡೆಯುವ ಮೊದಲೇ ಈಗಿರುವ ಕಾನೂನುಗಳನ್ನು ಶಿಕ್ಷೆಯ ಯಾವುದೇ ಭಯವಿಲ್ಲದೆ ಉಲ್ಲಂಘಿಸಲಾಗುತ್ತಿದೆ. ಈ ಸಂಹಿತೆಗಳು ಶಾಸಕಾಂಗದ ಮಂಜೂರಾತಿ ಪಡೆದ ನಂತರ, ಕಾರ್ಯಾಂಗ, ಅಂದರೆ ಸರಕಾರ ಒಂದು ಕಾರ್ಯಾಂಗದ ಆದೇಶದ ಮೂಲಕ ಇವನ್ನು ಬದಲಿಸಬಹುದು, ಅದಕ್ಕೆ ಸಂಸತ್ತು ಅಥವ ರಾಜ್ಯ ಶಾಸನ ಸಭೆಗಳನ್ನು ಕೇಳಬೇಕಾದ ಅಗತ್ಯವಿರುವುದಿಲ್ಲ. ಇದು ಸಂಪೂರ್ಣವಾಗಿ ಕಾರ್ಮಿಕ-ವಿರೋಧಿ ಮತ್ತು ಕರಾಳ.
ಮಹಾಮಾರಿಯ ವಿರುದ್ದ ಸಮರದ ನೆಪವೊಡ್ಡಿ ದೈನಂದಿನ ಕೆಲಸದ ಅವಧಿಯನ್ನು ಹಲವು ರಾಜ್ಯಗಳಲ್ಲಿ ಒಂದು ಕಾರ್ಯಾಂಗದ ಆದೇಶದ ಮೂಲಕ ಎಂಟು ಗಂಟೆಗಳಿಂದ ಹನ್ನೆರಡು ಗಂಟೆಗಳಿಗೆ ಏರಿಸಲಾಗಿದೆ. ಗುಜರಾತ್, ಮಧ್ಯಪ್ರದೇಶ, ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬಿನಲ್ಲಿ ಕಾರ್ಖಾನೆಗಳ ಕಾಯ್ದೆಯನ್ನು ತಿದ್ದುಪಡಿ ಮಾಡದೆಯೇ ಇದನ್ನು ಮಾಡಲಾಗಿದೆ. ಈ ಪಟ್ಟಿ ಬೆಳೆಯುತ್ತಿದೆ, ಇನ್ನೂ ಕೆಲವು ರಾಜ್ಯಗಳು ಈ ಪಟ್ಟಿಯನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಉತ್ತರಪ್ರದೇಶದ ರಾಜ್ಯ ಸರಕಾರ ಮೂರನ್ನು ಬಿಟ್ಟು ಎಲ್ಲ ಕಾರ್ಮಿಕ ಕಾನೂನುಗಳನ್ನು, ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸಿದೆ. ಅದೇ ರೀತಿಯಲ್ಲಿ, ಮಧ್ಯಪ್ರದೇಶ ಸರಕಾರ ಒಂದು ಸಾವಿರ ದಿನಗಳ ವರೆಗೆ ಎಲ್ಲ ಸಂಸ್ಥೆಗಳಿಗೆ ಎಲ್ಲ ಕಾರ್ಮಿಕ ಕಾನೂನುಗಳ ಬಾಧ್ಯತೆಗಳಿಂದ ವಿನಾಯ್ತಿ ನೀಡುವ ಒಂದು ಸಂಪುಟ ನಿರ್ಣಯವನ್ನು ಪ್ರಕಟಿಸಿದೆ. ಕಾರ್ಮಿಕರು ತಮ್ಮನ್ನು ಸಂಘಗಳಾಗಿ ಸಂಘಟಿಸಿಕೊಳ್ಳುವ ಮೂಲಭೂತ ಹಕ್ಕಿಗೆ ಕೂಡ ಗಂಭೀರ ಬೆದರಿಕೆ ಬಂದಿದೆ.
ಕೇಂದ್ರದಲ್ಲಿನ “ನಿಮ್ಮ ಸರಕಾರ” ಮತ್ತು ಕೆಲವು ರಾಜ್ಯ ಸರಕಾರಗಳು ನಮ್ಮ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಿಕೊಂಡು ಮತ್ತು ನಮ್ಮ ಡಾಕ್ಟರುಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಕಾಪಾಡಿಕೊಂಡು ಹಾಗೂ ಜನಗಳ ಅಗತ್ಯಗಳ ಬಗ್ಗೆ ಕಾಳಜಿ ವಹಿಸಿ ಮಹಾಮಾರಿಯ ವಿರುದ್ಧ ಸಮರದ ಮೇಲೆ ಗಮನ ಕೇಂದ್ರೀಕರಿಸುವ ಬದಲು ಕಾರ್ಮಿಕ ಹಕ್ಕುಗಳನ್ನು ದುರ್ಬಲಗೊಳಿಸುವ ತರ್ಕವನ್ನು ಬಳಸುವಂತೆ ಕಾಣುತ್ತದೆ.
ಇವೆಲ್ಲವನ್ನೂ ರಾಷ್ಟ್ರೀಯ ಲಾಕ್ಡೌನಿನಿಂದಾಗಿ ಉಂಟಾದ ಕಷ್ಟಗಳಿಂದ ನಮ್ಮ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಹೆಸರಿನಲ್ಲಿ ಮಾಡಲಾಗುತ್ತಿದೆ. ಭಾರತೀಯ ಅರ್ಥವ್ಯವಸ್ಥೆ ಮಹಾಮಾರಿ ಎರಗುವ ಮೊದಲೇ ಒಂದು ಹಿಂಜರಿತದತ್ತ ಜಾರುತ್ತಿತ್ತು ಎಂದು ನಾವು ಇಲ್ಲಿ ಸೇರಿಸಬಹುದು.
“ನಿಮ್ಮ ಸರಕಾರ” ತಮ್ಮ ಎಲ್ಲ ಜೀವನಾಧಾರಗಳನ್ನು ಮತ್ತು ತಮ್ಮ ಹಸಿವಿನ ಅಗತ್ಯಗಳನ್ನು ಪೂರೈಸಿಕೊಳ್ಳುವ ಎಲ್ಲ ಸಾಮರ್ಥ್ಯವನ್ನು ಕಳಕೊಂಡಿರುವ ಜನತೆಯನ್ನು ನೋಡಿಕೊಳ್ಳಲು ಮಾಡಿದ್ದೇನೂ ಇಲ್ಲ. ಜನಗಳು ನರಳುತ್ತಿದ್ದಾರೆ. ಲಾಕ್ಡೌನ್ ಆರಂಭವಾದ ಮೇಲೆ ೧೪ ಕೋಟಿ ಮಂದಿ ತಮ್ಮ ಉದ್ಯೋಗಗಳನ್ನು ಕಳಕೊಂಡಿದ್ದಾರೆ. ಭಾರತದಲ್ಲಿ ಈ ಮಾರಣಾಂತಿಕ ವೈರಸ್ ಸೋಂಕಿನಿಂದ ಸಾವುಗಳಿಗಿಂತ ಹಸಿವು, ಉಪವಾಸ, ಬಡತನ ಮತ್ತು ವಂಚನೆಯಿಂದಲೇ ಹೆಚ್ಚು ಸಾವುಗಳು ಸಂಭವಿಸಲು ಬಿಡಬಾರದು ಎಂಬುದನ್ನು ತಾವೂ ಕೂಡ ಖಂಡಿತವಾಗಿಯೂ ಒಪ್ಪುತ್ತೀರಿ.
ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರೊಂದಿಗೆ ನಡೆದುಕೊಳ್ಳುತ್ತಿರುವ, ಅವರಿಗೆ ಯಾವುದೇ ಬೆಂಬಲವಿಲ್ಲದೆ ನರಳಲು ಬಿಡುತ್ತಿರುವ ರೀತಿ ಖಂಡನೀಯ. ಈಗಂತೂ ಮನೆಗೆ ಹಿಂದಿರುಗುವ ಪ್ರಯಾಣದ ವೆಚ್ಚವನ್ನೂ ಅವರಿಂದಲೇ ವಸೂಲಿ ಮಾಡಲಾಗುತ್ತಿದೆ. ಇದರಲ್ಲಿ ಕೇರಳ ಮಾತ್ರವೇ ಗೌರವಾರ್ಹ ಅಪವಾದ. ಹಲವು ರಾಜ್ಯಗಳು ವಲಸೆ ಕಾರ್ಮಿಕರ ಚಲನವಲನಗಳ ಮೇಲೂ ನಿರ್ಬಂಧಗಳನ್ನು ಹಾಕಿವೆ. ಅವರನ್ನು ಜೀತದಾಳುಗಳಂತೆಯೇ ನಡೆಸಿಕೊಳ್ಳುತ್ತಿವೆ.
ಭಾರತ, ಒಂದು ಚೈತನ್ಯಪೂರ್ಣ ಆಧುನಿಕ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದತ್ತ ಚಲಿಸುವ ಬದಲು, ಇಂದು ಮಧ್ಯಯುಗದ ಬರ್ಬರತೆ ಮತ್ತು ಗುಲಾಮಿಕೆಯತ್ತ ತಳ್ಳಲ್ಪಡುತ್ತಿದೆ. ಇದು ಸರಳ ಸಂಗತಿ, ಮಾನನೀಯ ರಾಷ್ಟ್ರಪತಿಗಳೇ, ಕಾರ್ಮಿಕರು ಭಾರತೀಯ ಸಂವಿಧಾನದ ಅಡಿಯಲ್ಲಿ ಗುಲಾಮರಲ್ಲ. ಅವರನ್ನು ಈ ಮಟ್ಟಕ್ಕೆ ಇಳಿಸುವುದು ಸಂವಿಧಾನದ ಉಲ್ಲಂಘನೆಯಷ್ಟೇ ಅಲ್ಲ, ಅದನ್ನು ನಿರರ್ಥಕಗೊಳಿಸಿದಂತೆಯೇ.
ನಾವು, ಈ ಕೆಳಗೆ ಸಹಿ ಮಾಡಿದವರು, ನೀವು ಭಾರತದ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸುವಾಗ ತೆಗೆದುಕೊಂಡ ಪ್ರತಿಜ್ಞೆಗೆ ವಿಧೇಯರಾಗಿ, ಈ ಮಹಾಮಾರಿಯನ್ನು ಎದುರಿಸುವಲ್ಲಿ ಮತ್ತು ಸೋಲಿಸುವಲ್ಲಿ ನಮ್ಮ ಎಲ್ಲ ಜನಗಳ ಐಕ್ಯತೆ ನಮ್ಮ ಅತಿ ದೊಡ್ಡ ಶಕ್ತಿಯಾಗಿರಬೇಕಾದ ಈ ನಿರ್ಣಾಯಕ ತಿರುವಿನಲ್ಲಿ, ಕಾರ್ಮಿಕ ವರ್ಗ ಮತ್ತು ದುಡಿಯುವ ಜನಗಳ ವಿರುದ್ಧ ಇಂತಹ ನಗ್ನ ಕ್ರೌರ್ಯವನ್ನು ನಿಲ್ಲಿಸಲು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.