ಇಡೀ ರಾಜ್ಯ, ದೇಶ ಮತ್ತು ಜಗತ್ತು ಕೋವಿಡ್ -19 ರ ವಿರುದ್ದ ಎಲ್ಲ ಭೇದಗಳನ್ನು ಮರೆತು ಒಗ್ಗೂಡಿ ಹೋರಾಟದಲ್ಲಿ ತೊಡಗಿರುವಾಗ, ಸದರಿ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು, ಅದರ ಮರೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶ/ ರಾಜ್ಯದ ಕಾರ್ಮಿಕ ವರ್ಗ ಮತ್ತು ರೈತರು ಹಾಗೂ ರೈತ – ಕೂಲಿಕಾರರ ಆಧಾರಿತ ವ್ಯವಸಾಯದ ಮೇಲೆ ಕಾರ್ಪೋರೇಟ್ ಕಂಪನಿಗಳ ಪರವಾಗಿ, ಗಂಭೀರ ಧಾಳಿ ಮಾಡಲು ಮುಂದಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿಯಾದ ಕ್ರಮಗಳನ್ನು ಭಾರತ ಕಮ್ಯನಿಷ್ಟ್ ಪಕ್ಷ ( ಮಾರ್ಕ್ಸವಾದಿ)ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
ದೇಶದ ಹಾಗು ರಾಜ್ಯದ ಕೈಗಾರಿಕೆಗಳು ಹಾಗೂ ಕಾರ್ಮಿಕ ವರ್ಗ ಮತ್ತು ವ್ಯವಸಾಯ ಹಾಗೂ ರೈತರು ಹಾಗೂ ಕೂಲಿಕಾರ ಜನತೆ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಏಕಾಏಕಿಯಾಗಿ ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಮತ್ತು ಅದರಿದುಂಟಾದ ಸಂಕಷ್ಠಗಳ ನಿವಾರಣೆಗೆ ಸಮರ್ಪಕ ಕ್ರಮವಹಿಸದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನಿಲುಮೆಗಳಿಂದಾಗಿ ನಲುಗಿ ಹೋಗಿವೆ.
ಆದಾಗ್ಯೂ ಅವರು ಕೋವಿಡ್ – 19 ವೈರಾಣುವಿನ ವಿರುದ್ಧದ ಐಕ್ಯ ಹೋರಾಟದಲ್ಲಿ ಗಂಭೀರವಾಗಿ ತೊಡಗಿದ್ದಾರೆ.
ಲಾಕ್ ಡೌನ್ ನಿಂದಾಗಿ ಸಂಕಷ್ಠದಲ್ಲಿರುವ ಈ ಜನತೆಯ ಪರವಾಗಿ ನಿಂತು ನೆರವಾಗುವ ಬದಲು, ಬೆನ್ನಿಗೆ ಇರಿಯುವ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿರುವುದು ಅಕ್ಷಮ್ಯವೆಂದು ಎಂದು ಭಾರತ ಕಮ್ಯುನಿಷ್ಠ್ ಪಕ್ಷ ( ಮಾರ್ಕ್ಸವಾದಿ)ದ ರಾಜ್ಯ ಸಮಿತಿ ಕಟುವಾಗಿ ಠೀಕಿಸಿದೆ.
ಕೋವಿಡ್ – 19 ರ ನೆಪದಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ಬಂಡವಾಳಗಾರರಿಗೆ ಕಾಮಿ೯ಕ ಕಾನೂನುಗಳಿಂದ ವಿನಾಯಿತಿ ನೀಡಲು ಮತ್ತು ಕಾರ್ಮಿಕರ ಕೆಲಸದ ಸಮಯವನ್ನು ಹನ್ನೆರಡು ಘಂಟೆಗೆ ವಿಸ್ತರಿಸಿ ಕೊಳ್ಳೆ ಹೊಡೆಯಲು ರಾಜ್ಯ ಸರಕಾರ ಸುಗ್ರೀವಾಜ್ಞೆ ತರುವ ಯತ್ನವನ್ನು ಮಾಡುತ್ತಿದೆ.
ಅದೇ ರೀತಿ, ಕೇಂದ್ರ ಸರಕಾರದ ಕೃಷಿ ಹಾಗೂ ರೈತ ಕಲ್ಯಾಣ ಮಂತ್ರಾಲಯ ಮತ್ತು ಕೃಷಿ ಮತ್ತು ಸಹಕಾರ ಹಾಗೂ ರೈತ ಕಲ್ಯಾಣ ಇಲಾಖೆಯ ಕೋರಿಕೆ ಮೇರೆಗೆ ರಾಜ್ಯದ ಖಾಸಗೀ ಕೃಷಿ ಮಾರುಕಟ್ಟೆಯ ಮೇಲಿನ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ ನಿಯಂತ್ರಣವನ್ನು ತಗೆದು ಹಾಕಲು ಸುಗ್ರೀವಾಜ್ಣೆಗೆ ಮುಂದಾಗುತ್ತಿದೆಯೆನ್ನಲಾಗಿದೆ.
ರಾಜ್ಯ ಸರಕಾರ ಕೈಗೊಳ್ಳಲಿರುವ ಈ ಎರಡೂ ಕ್ರಮಗಳು ಅದಾಗಲೇ ಸಂಕಷ್ಟದಲ್ಲಿರುವ ರಾಜ್ಯವನ್ನು ಮತ್ತಷ್ಠು ಆರ್ಥಿಕ ಸಂಕಷ್ಠಕ್ಕೆ ದೂಡಲಿದೆ ಎಂದು ಸಿಪಿಐಎಂ ಎಚ್ಚರಿಸುತ್ತದೆ.
ಕಾರ್ಪೋರೇಟ್ ಕಂಪನಿಗಳು ಮತ್ತು ಬಂಡವಾಳದಾರರ ಪರವಾಗಿ ತರಲಿರುವ ಕಾರ್ಮಿಕ ಕಾನೂನುಗಳ ತಿದ್ದುಪಡಿಯು ಕಾರ್ಮಿಕರಿಗೆ ಕಡಿಮೆ ವೇತನ ನೀಡಿ, ಅತಿ ಹೆಚ್ಚು ಸಮಯ ದುಡಿಸಿಕೊಳ್ಳಲು, ಯೆಥೇಚ್ಛವಾಗಿ ಲೂಟಿಗೊಳಪಡಿಸಲು ಅವರಿಗೆ ಸಹಾಯಕವಾಗಲಿದೆ ಎಂದು ಠೀಕಿಸಿದೆ.
ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ – 1966 ಮತ್ರು ನಿಯಮಗಳು – 1968 ರ ಕಲಂ 8, 66,67 ಮತ್ತು 70 ಗಳಿಗೆ ಅದೇ ರೀತಿ, ಕಲಂ 114,116, ಮತ್ತು 117 ಕ್ಕೆ ತರುವ ತಿದ್ದುಪಡಿಗಳು, ವ್ಯವಸಾಯ ಮತ್ತು ರೈತಾಪಿ ಜನತೆಯನ್ನು ಮನಬಂದಂತೆ ಲೂಟಿಗೊಳಪಡಿಸಲು ನೆರವಾಗಲಿವೆ. ಇದೂ ಗ್ರಾಮೀಣ ಆರ್ಥಿಕತೆಯನ್ನು ಮತ್ತು ರಾಜ್ಯದ ಗ್ರಾಹಕ ಮಾರುಕಟ್ಟೆಯನ್ನು ಕಾರ್ಪೋರೇಟ್ ಗಳ ಕೈಗೆ ವರ್ಗಾಯಿಸಲಿದೆ. ರಾಜ್ಯದ ಎಲ್ಲಾ ಏಪಿಎಂಸಿಗಳನ್ನು ನಾಶ ಮಾಡಲಿದೆ.
ಇದು ಇಡೀ ಗ್ರಾಮೀಣ ಪ್ರದೇಶವನ್ನು ಮತ್ತು ರಾಜ್ಯದ ಸಣ್ಣ ಹಾಗೂ ಮದ್ಯಮ ವರ್ತಕ ಸಮುದಾಯ ಮತ್ತು ಏಪಿಎಂಸಿಗಳಲ್ಲಿ ದುಡಿಯುವ ಜನ ಸಮುದಾಯವನ್ನು ಉದ್ಯೋಗ ಹೀನರನ್ನಾಗಿಸುತ್ತದೆ ಹಾಗೂ ಈ ಎಲ್ಲರನ್ನು ತೀವ್ರ ಸಂಕಷ್ಠಕ್ಕೀಡು ಮಾಡಲಿದೆ.
ಆದ್ದರಿಂದ, ರಾಜ್ಯ ಸರಕಾರ ಇಂತಹ ಗಂಭೀರವಾದ ಜನ ವಿರೋಧಿ ತಿದ್ದುಪಡಿಗಳಿಗೆ ಯಾವುದೇ ರೀತಿಯಲ್ಲಿ ಮುಂದಾಗುವುದು ತೀವ್ರ ಅಪಾಯಕಾರಿಯಾಗಿದ್ದು, ಕೂಡಲೇ ಅಂತಹ ಪ್ರಯತ್ನ ಗಳನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಶ್ರೀ ಯಡೆಯೂರಪ್ಪನವರನ್ನು ಭಾರತ ಕಮ್ಯುನಿಷ್ಠ ಪಕ್ಷ ( ಮಾರ್ಕ್ಸವಾದಿ ) ದ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ. ಬದಲಿಗೆ, ಕಾರ್ಮಿಕರ ಹಾಗೂ ರೈತರ, ಕೂಲಿಕಾರರ ಮತ್ತು ವ್ಯವಸಾಯದ ಹಾಗೂ ಸಣ್ಷ, ಮಧ್ಯಮ ಕೈಗಾರಿಗಳ ಹಿತ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತದೆ.
ಅದೇ ರೀತಿ, ರಾಜ್ಯದ ಕಾರ್ಮಿಕ ವರ್ಗ ಹಾಗೂ ರೈತರು, ಕೂಲಿಕಾರರು, ಮತ್ತು ರಾಜ್ಯದ ಸಮಸ್ತ ಗ್ರಾಹಕರು ಇಂತಹ ಅಪಾಯಗಳ ವಿರುದ್ದ ಎಚ್ಚರಿಕೆಯನ್ನು ವಹಿಸಿ, ಇಂತಹ ದುಷ್ಠ ಪ್ರಯತ್ನಗಳನ್ನು ಎದುರಿಸಿ ಹಿಮ್ಮೆಟ್ಟಿಸಲು ಐಕ್ಯ ಹೋರಾಟದಲ್ಲಿ ತೊಡಗಬೇಕೆಂದು ಸಿಪಿಐಎಂ ರಾಜ್ಯ ಸಮಿತಿ ರಾಜ್ಯದ ಜನತೆಗೆ ಕರೆ ನೀಡಿದೆ.
ಇಂತಹ ಸಂಘಟಿತ ಯತ್ನದ ಜೊತೆ ಸಿಪಿಐಎಂ ನಿಲ್ಲಲಿದೆಯೆಂದು ಅದು ತಿಳಿಸಿದೆ.
ಯು. ಬಸವರಾಜ, ಪ್ರಧಾನ ಕಾರ್ಯದರ್ಶಿ