ಮೇ ೧೨ ರ ರಾತ್ರಿ ೮ ಗಂಟೆಯ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ಸದ್ಯಕ್ಕೆ ಇನ್ನೊಂದು ಭಾಷಣವಾಗಿಯಷ್ಟೆ ಉಳಿದಿದೆ. ಜನಸಾಮಾನ್ಯರನ್ನು, ದೇಶವನ್ನು ವಿಪರೀತವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಈಗಲಾದರೂ ಮಾತಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಕೋಟ್ಯಂತರ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳು, ಹಸಿವು ಈ ಭಾಷಣದಲ್ಲಿ ಪ್ರಸ್ತಾಪಿಸಲು ಅರ್ಹವಲ್ಲ ಎಂದು ಅವರು ಭಾವಿಸಿರುವಂತೆ ಕಾಣುತ್ತದೆ, ಇದು ನೋವಿನ ಸಂಗತಿ ಎಂದು ಈ ಭಾಷಣದ ಬಗ್ಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡುತ್ತ ಹೇಳಿದ್ದಾರೆ.
ವಲಸೆ ಕಾರ್ಮಿಕರ ಹತಾಶೆ, ರಾಜ್ಯಗಳಿಗೆ ಸಂಪನ್ಮೂಲಗಳ ಆವಶ್ಯಕತೆ, ಹಸಿವು ಮತ್ತು ನಿರುದ್ಯೋಗ ಈ ನಾಲ್ಕು ದೊಡ್ಡ ಸಮಸ್ಯೆಗಳ ಬಗ್ಗೆ ಪ್ರಧಾನಿಗಳು ಮಾತನಾಡಲೇ ಇಲ್ಲ. ಕಷ್ಟಪಟ್ಟು ದುಡಿಯುವ ಬಡಜನರ ನೋವು, ಸಂಕಟಗಳನ್ನು ಗುರುತಿಸಲೂ ಇಲ್ಲ. ತಮ್ಮ ಜೀವನಾಧಾರಗಳನ್ನೇ ಕಳೆದುಕೊಂಡಿರುವವರ ಬಗ್ಗೆ ಮೋದಿ ಸರಕಾರದ ಈ ಅಸಡ್ಡೆ, ತಿರಸ್ಕಾರ ಅಕ್ಷಮ್ಯ.
20 ಲಕ್ಷ ಕೋಟಿ-ವಿವರಗಳಿಗೆ ಕಾಯಬೇಕಾಗಿದೆ:
ಪರಿಹಾರ ಪ್ಯಾಕೇಜು ಪ್ರಕಟಿಸಲಾಗುವುದು ಮತ್ತು ಲಾಕ್ಡೌನನ್ನು ಬದಲಾದ ರೂಪದಲ್ಲಿ ಮುಂದುವರೆಸಲಾಗುವುದು ಎಂಬ ಸಂಕೇತಗಳನ್ನಷ್ಟೇ ಈ ಭಾಷಣ ಕೊಟ್ಟಿದೆ. ವಿವರಗಳಿಗೆ ಕಾಯಬೇಕಷ್ಟೇ. ೨೦ ಲಕ್ಷ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಪ್ರಕಟಿಸುವುದಾಗಿ ಹೇಳಿದ ಈ ಭಾಷಣ ಮಾಧ್ಯಮಗಳಲ್ಲೇನೋ ದೊಡ್ಡ ಸುದ್ದಿಯಾಗಿದೆ. ಆದರೆ ಏಳು ವಾರಗಳ ಲಾಕ್ಡೌನ್ ನಂತರ ತುರ್ತಾಗಿ ನೆರವಿಗೆ ಕಾಯುತ್ತಿರುವವರಿಗೆ ಇದರಿಂದೇನೂ ಪರಿಸ್ಥಿತಿ ಬದಲಾಗಿಲ್ಲ. ಅವರಿನ್ನೂ ಆಹಾರವಿಲ್ಲದೆ, ಪರಿಹಾರವಿಲ್ಲದೆ ಹೆದ್ದಾರಿಗಳಲ್ಲಿ ಕಾಲ್ನಡಿಗೆಯಲ್ಲೇ ಸಾಗಿದ್ದಾರೆ. ಆತ್ತ ಮೋದಿ ಸರಕಾರ ಏರ್ಕಂಡಿಷನ್ಡ್ ರೈಲುಗಳ ಓಡಾಟವನ್ನು ಆರಂಭಿಸಿದೆ ಮತ್ತು ಪ್ರಚಾರ ಕಸರತ್ತುಗಳ ಮೇಲೆಯೇ ಗಮನ ಕೇಂದ್ರೀಕರಿಸಿದೆ ಎಂದು ಯೆಚುರಿ ಖೇದ ವ್ಯಕ್ತಪಡಿಸಿದ್ದಾರೆ.
ಈ ೨೦ ಲಕ್ಷ ಕೋಟಿಯಲ್ಲಿ ಏಳು ವಾರಗಳ ಹಿಂದೆ ಹಣಕಾಸು ಮಂತ್ರಾಲಯ ಪ್ರಕಟಿಸಿದ ೧.೭ಲಕ್ಷ ಕೊಟಿ ರೂ.ಗಳ ’ಗರೀಬ್ ಕಲ್ಯಾಣ್ ಯೋಜನೆ’ ಮತ್ತು ರಿಝರ್ವ್ ಬ್ಯಾಂಕ್ ಪ್ರಕಟಿಸಿದ ಸುಮಾರು ೮ ಲಕ್ಷ ಕೋಟಿ ರೂ.ಗಳ ಹಣಕಾಸು ಯೋಜನೆಗಳೂ ಸೇರಿದೆಯಂತೆ. ಈ ೧೦ ಲಕ್ಷ ಕೋಟಿ ರೂ.ಗಳಲ್ಲಿ ಸರಕಾರದ ಬೊಕ್ಕಸದಿಂದ ಬಡವರಿಗಾಗಿ ಮಾಡಿದ ವೆಚ್ಚ ಮತ್ತು ಅದರಲ್ಲೂ ಅವರಿಗೆ ನಿಜವಾಗಿ ತಲುಪಿರುವುದು ಅತ್ಯಲ್ಪ. ಉಳಿದ ಸುಮಾರು ೧೦ ಲಕ್ಷ ಕೋಟಿ ರೂ.ಗಳಲ್ಲಿ ನಿಜವಾಗಿಯೂ ಪರಿಹಾರದ ಅಗತ್ಯವಿರುವ ಬಡವರಿಗೆ ಸಿಗುವುದೆಷ್ಟು, ಶ್ರೀಮಂತ ಸುಸ್ತಿದಾರರ ಜೇಬುಗಳಿಗೆ ಹೋಗುವುದೆಷ್ಟು ಎಂಬುದರ ವಿವರಗಳನ್ನು ಕಾದು ನೋಡಬೇಕಾಗಿದೆ.
ಕಾರ್ಮಿಕ ಕಾನೂನುಗಳ ರದ್ದು, ಎಪಿಎಂಸಿ ತಿದ್ದುಪಡಿ ಏಕೆ?:
ಇದೀಗ ಇದ್ದಕ್ಕಿದ್ದಂತೆ ಹಾಕಿದ ಲಾಕ್ಡೌನಿನ ಹೊರೆಯ ಬಹುಭಾಗವನ್ನು ಹೊರಬೇಕಾಗಿ ಬಂದಿರುವ ಕಾರ್ಮಿಕರನ್ನು, ಕೂಲಿಕಾರರನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕಾದ ಸಮಯ. ಆದರೆ ಬಿಜೆಪಿ ಸಕಾರಗಳು ಕಾರ್ಮಿಕ ಕಾನೂನುಗಳನ್ನೇ ನಿರರ್ಥಕಗೊಳಿಸಿ ತಮ್ಮ ಶ್ರೀಮಂತ ಬಂಟರು ಬಡಜನರ ಸಂಕಟಗಳಿಂದ ಲಾಭ ಪಡೆಯಲು ನೆರವಾಗುತ್ತಿವೆ.
ಪ್ರಧಾನಿಗಳು ಸ್ಥಳೀಯ ಪೂರೈಕೆ ಕೊಂಡಿಗಳ ಗುಣಗಾನ ಮಾಡಬೇಕೆಂದು ಹೇಳಿದ್ದಾರೆ, ಆದರೆ ಅದರ ಹಿಂದಿನ ದಿನವೇ ಕರ್ನಾಟಕ ಸರಕಾರ ಕೇಂದ್ರ ಸರಕಾರದ ನಿರ್ದೇಶನದ ಮೇಲೆ ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ದೊಡ್ಡ ಮತ್ತು ಬಹುರಾಷ್ಟ್ರೀಯ ಪೂರೈಕೆ ಕೊಂಡಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಪ್ರಯತ್ನ ನಡೆಸಿದೆ.
“ಈ ಆರ್ಥಿಕ ಪ್ಯಾಕೇಜ್ ಸಣ್ಣ ಪುಟ್ಟ ಬದಲಾವಣೆಗಳನ್ನು ಅವಲಂಬಿಸಿಲ್ಲ, ಭೂಮಿ ,ಶ್ರಮ, ಕಾನೂನು ಮತ್ತು ಹಣದ ಹರಿವು ಇವುಗಳಲ್ಲಿ ಧೀರ ಸುಧಾರಣೆಗಳನ್ನು ಅವಲಂಬಿಸಿದೆ” ಎಂದು ಪ್ರಧಾನಿಗಳು ಹೇಳಿರುವುದರ ಅರ್ಥ ಇದೇ ಇರಬಹುದೇ ?
’ಸ್ವಾವಲಂಬನೆ’-ಭಾಷಣವಲ್ಲ, ಹಕ್ಕು ಬೇಕು:
ಪ್ರಧಾನ ಮಂತ್ರಿಗಳು ಸ್ವಾವಲಂಬನೆಯ ಬಗ್ಗೆ ಭಾಷಣ ಕೊಟ್ಟಿದ್ದಾರೆ. ಇದು ಒಳ್ಳೆಯದೇ, ಆದರೆ ಅದರ ಸ್ವರೂಪದ ಬಗ್ಗೆ ಏನೂ ಹೇಳಿಲ್ಲ ಎನ್ನುತ್ತ ಯೆಚುರಿ ಮುಂದುವರೆದು, “ಭಾರತದ ರೈತರು ಮತ್ತು ಕಾರ್ಮಿಕರು ಎಂದೂ ಯಾರ ಮೇಲೂ ಅವಲಂಬಿಸಿರಲಿಲ್ಲ. ಅವರು ಬಹಳ ಹಿಂದಿನಿಂದಲೇ ನಮಗೆ ಆತ್ಮವಿಶ್ವಾಸದಿಂದ ಕೆಲಸ ಮಾಡುವುದನ್ನು ಕಲಿಸಿದ್ದಾರೆ. ಅವರಿಗೆ ಬೇಕಾಗಿರುವುದು ಭಾಷಣವಲ್ಲ, ಅವರ ಹಕ್ಕು” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
“ಕೇವಲ ೪ ಗಂಟೆಗಳ ನೋಟಿಸಿನಲ್ಲೇ ಲಾಕ್ಡೌನ್ ಹೇರಿ ದುಡಿಮೆಗಾರರ ಅನ್ನ ಮತ್ತು ಆದಾಯವನ್ನು ಕಸಿದುಕೊಂಡಿರುವುದಷ್ಟೇ ಅಲ್ಲ, ಅವರ ಘನತೆಯನ್ನೂ, ಆತ್ಮವಿಶ್ವಾಸವನ್ನೂ ಕಸಿದುಕೊಳ್ಳಲಾಗಿದೆ. ಕನಿಷ್ಟ ಆದಾಯವನ್ನು ರದ್ದು ಮಾಡುವ ಸರಕಾರದ ಯೋಚನೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಆದರಣೀಯ ಪ್ರಧಾನ ಮಂತ್ರಿಗಳು ಈಗ ’ಸ್ವಾವಲಂಬನೆ’ಯ ಮೇಲೆ ಹಾಕಿರುವ ಒತ್ತಿನಿಂದ ತಾವು ಏಕಾಂಗಿಯಾಗಿದ್ದೇವೆ ಎಂದು ರೈತರು ಮತ್ತು ಕಾರ್ಮಿಕರು ಯೋಚಿಸಬೇಡಿ, ಸಿಪಿಐ(ಎಂ)ನ ಪ್ರತಿಯೊಬ್ಬ ಕಾರ್ಯಕರ್ತರು ನಿಮ್ಮ ಜತೆಗಿದ್ದಾರೆ”ಎಂದು ಮುಂದುವರೆದು ಸೀತಾರಾಮ್ ಯೆಚುರಿ ಹೇಳಿದ್ದಾರೆ.