ಮೋದಿ 2.0 ಸರಕಾರ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲೇ 2019-20ರ ಜಿಡಿಪಿ ಬೆಳವಣಿಗೆ ಮಾಹಿತಿ ಬಿಡುಗಡೆಯಾಗಿದೆ. ಇದು, ನಮ್ಮ ಅರ್ಥವ್ಯವಸ್ಥೆಯನ್ನು ಧ್ವಂಸ ಮಾಡಲಾಗುತ್ತಿದೆ ಮತ್ತು ನಮ್ಮ ಬಹುಪಾಲು ಜನಗಳ ಮೇಲೆ ಅಭೂತಪೂರ್ವ ಹೊರೆಗಳನ್ನು ಹೇರಲಾಗುತ್ತಿದೆ ಎಂದು ಎಡಪಕ್ಷಗಳು ಹೇಳುತ್ತಾ ಬರುತ್ತಿರುವುದನ್ನು ಪೂರ್ಣವಾಗಿ ಸಾಬೀತು ಮಾಡಿದೆ.
ಈ ರೀತಿ ಜನಗಳ ಬದುಕುಗಳು ನಾಶವಾಗಿರುವುದರ ಮೇಲೆ ಈಗ ಕೊವಿಡ್ ಮಹಾಮಾರಿಯ ಪಿಡುಗು ಹಾಗೂ ಅದಕ್ಕೆ ಸರಕಾರದ ಯಾವುದೇ ನಿಶ್ಚಿತ ಯೋಜನೆಯಿಲ್ಲದ ಪ್ರತಿಕ್ರಿಯೆ. ಕೇವಲ ನಾಲ್ಕು ಗಂಟೆಗಳ ನೋಟೀಸಿನಲ್ಲಿ ಇದ್ದಕ್ಕಿದ್ದಂತೆ ಹಾಕಿದ ಅಯೋಜಿತವಾದ ಲಾಕ್ ಡೌನ್ ನಮ್ಮ ಬಹುಪಾಲು ಜನಗಳ ಮೇಲೆ ಮತ್ತಷ್ಟು ಅಮಾನವೀಯ ಸಂಕಟಗಳನ್ನು ಹೇರಿದೆ. ವಲಸಿಗ ಕಾರ್ಮಿಕರ ಪರಿಸ್ಥಿತಿ ಈಗಲೂ ಅಸಹನೀಯವಾಗಿದೆ ಎಂದು ಐದು ಎಡಪಕ್ಷಗಳು, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂ.ಎಲ್.), ಆರ್.ಎಸ್.ಪಿ. ಮತ್ತು ಫಾರ್ವರ್ಡ್ ಬ್ಲಾಕ್ ಹೇಳಿವೆ.
ಜನಗಳ ಯಾತನೆಗಳು, ಆತಂಕಗಳು ಮುಂದುವರೆಯುತ್ತಲೇ ಇವೆ, ಹಸಿವಿನಿಂದ, ಸುಸ್ತಿನಿಂದ ಮತ್ತು ಅಪಘಾತಗಳಿಂದ ಅವರು ಜೀವ ಕಳಕೊಳ್ಳುತ್ತಲೇ ಇದ್ದಾರೆ. ಲಾಕ್ಡೌನ್ ಮಹಾಮಾರಿಯನ್ನು ಎದುರಿಸುವ ನಮ್ಮ ಸಾಮರ್ಥ್ಯವನ್ನೂ ಹೆಚ್ಚಿಸಿಲ್ಲ, ಅತ್ತ ಈ ಪರಿಸ್ಥಿತಿಗಳಿಂದ ಬದುಕುಳಿಯಲು ಜನಗಳಿಗೆ ಅಗತ್ಯವಾದ ಯಾವ ಪರಿಹಾರಗಳನ್ನೂ ಕೊಟ್ಟಿಲ್ಲ.
ಆದ್ದರಿಂದ ಎಡಪಕ್ಷಗಳು ತಮ್ಮ ನಾಲ್ಕು ಬೇಡಿಕೆಗಳನ್ನು ಪುನರುಚ್ಚರಿಸಿವೆ:
- ಆದಾಯ ತೆರಿಗೆದಾರರಲ್ಲದ ಕುಟುಂಬಗಳಿಗೆ ತಿಂಗಳಿಗೆ ರೂ. 7,500ರಂತೆ ಆರು ತಿಂಗಳ ಕಾಲ ಕೊಡಬೇಕು.
- ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಧಾನ್ಯದಂತೆ ಆರು ತಿಂಗಳ ಕಾಲ ಉಚಿತವಾಗಿ ಲಭ್ಯಗೊಳಿಸಬೇಕು.
- ತಮ್ಮೂರುಗಳಿಗೆ ಹೋಗಲಾರದೆ ಸಿಲುಕಿಕೊಂಡಿರುವ ವಲಸಿಗ ಕಾರ್ಮಿಕರಿಗೆ ಉಚಿತವಾಗಿ ಆಹಾರ ಮತ್ತು ನೀರು ಒದಗಿಸುವುದರೊಂದಿಗೆ ಅವರವರ ಮನೆಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಮಾಡಬೇಕು.
- ಮನರೇಗದ ಅಡಿಯಲ್ಲಿ ಕೂಲಿಯನ್ನು ಹೆಚ್ಚಿಸಿ ಕನಿಷ್ಟ 200 ದಿನಗಳ ಕೆಲಸ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರದ ಬಡವರಿಗೂ ವಿಸ್ತರಿಸಬೇಕು.
ಎಡಪಕ್ಷಗಳ ಎಲ್ಲ ಘಟಕಗಳು, ಈ ಬೇಡಿಕೆಗಳನ್ನೆತ್ತಿ, ಅವುಗಳನ್ನು ಜಾರಿಗೊಳಿಸುವಂತೆ ಒತ್ತಡ ತರಬೇಕು, ಇದಕ್ಕಾಗಿ, ತಂತಮ್ಮ ಸ್ಥಳಗಳಲ್ಲಿನ ಮೂರ್ತ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಗತ್ಯ ಭೌತಿಕ ಅಂತರಗಳನ್ನು ಕಾಯ್ದುಕೊಂಡು ಮತ್ತು ಮುಖಗವಸುಗಳನ್ನು ಧರಿಸಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಬೇಕು ಈ ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಮ್ ಯೆಚುರಿ, ಡಿ.ರಾಜ, ದೀಪಂಕರ್ ಭಟ್ಟಾಚಾರ್ಯ, ಮನೋಜ್ ಭಟ್ಟಾಚಾರ್ಯ ಮತ್ತು ದೇಬಬ್ರತ ಬಿಸ್ವಾಸ್ ಸಹಿ ಹಾಕಿರುವ ಜಂಟಿ ಹೇಳಿಕೆ ಕರೆ ನೀಡಿದೆ.