ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದ ವಾರಲೀ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ ಮತ್ತು ಋಣಭಾರದ ಗುಲಾಮಗಿರಿಯಿಂದ ವಿಮೋಚನೆಯು ಅದರ ಅವಿಭಾಜ್ಯ ಅಂಗ ಎನುವುದನ್ನು ವಾರಲೀಗಳು ಅರಿತುಕೊಂಡರು. ಹೋರಾಟಗಳ ಅನುಭವ ಅವರನ್ನು ಬಹುಬೇಗ ಮಾರ್ಪಾಟು ಮಾಡಿತು. ಅವರು ಹೊಸ ಮನುಷ್ಯರಾದರು. ಅವರಲ್ಲಿ ಜ್ಞಾನದ ಹಸಿವು ಬೆಳೆಯಿತು. ಸಮಾಜವಾದ ಮತ್ತು ಸೋವಿಯತ್ ಯೂನಿಯನ್ನ ಎಲ್ಲಾ ಮಾಹಿತಿಗಳನ್ನು ತಿಳಿಯಲು ಹಾತೊರೆದರು. ಭೂಮಾಲಕರ ಅಪಪ್ರಚಾರ ಅವರಲ್ಲಿ ಈ ಹಂಬಲವನ್ನು ಹುಟ್ಟುಹಾಕಿತು. ಇದು ಅವರ ಆರ್ಥಿಕ ಹಕ್ಕುಗಳ ಬಗ್ಗೆ ಪ್ರಜ್ಞೆಯನ್ನು ಉಂಟುಮಾಡಿದ್ದಲ್ಲದೇ ಅವರ ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಮೌಲ್ಯಗಳ ಬಗ್ಗೆ ಕೂಡ ಹೋರಾಟವು ಅವರಲ್ಲಿ ಅರಿವು ಮೂಡಿಸಿತು.
ಕ್ರೂರ ಭೂಮಾಲಕರ ದಬ್ಬಾಳಿಕೆಗಳಿಂದಾಗಿ ವಾರಲೀಗಳ ಶೋಚನೀಯ ಹಾಗೂ ಅಸಹ್ಯಕರ ಬದುಕು ಅವರ ಸಾಮೂಹಿಕ ಉತ್ಕ್ರಾಂತಿಗೆ ಮೂಲ ಕಾರಣ. ಅವರೇ ಸಂಪೂರ್ಣವಾಗಿ ದ್ವೇಷಿಸುತ್ತಿದ್ದ ಆ ಸ್ಥಿತಿಯಲ್ಲಿ ಅವರು ಶತಮಾನಗಳ ಕಾಲ ಕೊಳೆದಿದ್ದವರು, ಆದರೆ ಅವರ ಭಯ ಮತ್ತು ಅಸಹಾಯಕತೆ ಅವರ ಕೋಪದ ಕಿಚ್ಚನ್ನು ಅಡಗಿಸಿಟ್ಟಿತ್ತು. ಮಾನಸಿಕ ಯಾತನೆಯಿಂದ ಬದುಕುತ್ತಿದ್ದರು ಮತ್ತು ತಮ್ಮ ಗುಲಾಮಗಿರಿಗೆ ಕೊನೆ ಹಾಡಬೇಕೆಂದು ಹಾತೊರೆಯುತ್ತಿದ್ದರು, ಆದರೆ ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ವಾರಲೀಗಳ ವಿಮೋಚನಾ ಚಳುವಳಿಯು ೧೯೪೫ರ ಮೇ ತಿಂಗಳಲ್ಲಿ ಆರಂಭವಾಯಿತು, ಗುಲಾಮಗಿರಿಯ ವಿರುದ್ಧ ಬಂಡಾಯದ ಕೆಂಬಾವುಟವನ್ನು ಹಾರಿಸಿದರು. ವಾರಲೀಗಳನ್ನು ಜಾಗೃತಿಗೊಳಿಸಿ ಸಂಘಟಿಸುವಲ್ಲಿ ಗೋದಾವರಿ ಪರುಳೇಕರ್ ಮತ್ತು ಅವರ ಪತಿ ಶಾಮರಾವ್ ಪರುಳೇಕರ್ ದಣಿವರಿಯದೆ ಶ್ರಮಿಸಿದರು.
ಠಾಣೆ ಜಿಲ್ಲೆಯ ಉಬರ್ಗಾಂವ್, ಡಹಾಣು, ಪಾಲ್ಘರ್ ಮತ್ತು ಜವಾಹರ್ ತಾಲೂಕುಗಳಲ್ಲಿ ಹರಿದು ಹಂಚಿಹೋಗಿ ಬದುಕುತ್ತಿದ್ದ ಆದಿವಾಸಿ ರೈತರಲ್ಲಿ ಬಹುತೇಕರು ವಾರಲೀಗಳಾಗಿದ್ದರು. ಶ್ರೀಮಂತ ಭೂಮಾಲಕರು ಹಾಗೂ ಬಡ್ಡಿ ಸಾಹುಕಾರರು ಅವರ ಜಮೀನುಗಳನ್ನು ಜುಜುಬಿ ಕಾಸಿಗೆ ಬಲಾತ್ಕಾರದಿಂದ ಕಸಿದುಕೊಂಡಿದ್ದರು. ಆ ನಂತರದಲ್ಲಿ ಅದೇ ಜಮೀನಿನಲ್ಲಿ ಗೇಣಿದಾರರಾಗಿ ದುಡಿದು ಬೆಳೆದ ಅರ್ಧ ಫಸಲನ್ನು ಗೇಣಿಯೆಂದು ಕೊಡುತ್ತಿದ್ದರು ಮತ್ತು ಜಮೀನುದಾರರ ಜಮೀನಿನಲ್ಲಿ ಕೂಲಿಯಿಲ್ಲದೇ ದುಡಿಯುತ್ತಿದ್ದರು. ಗುಲಾಮರಂತೆ ಬದುಕುತ್ತಿದ್ದರು. ಕೆಲವು ಭೂಮಾಲಕರು ಹುಲ್ಲುಗಾವಲನ್ನು ಹೊಂದಿದ್ದರು ಮತ್ತು ಅರಣ್ಯ ಗುತ್ತಿಗೆದಾರರಾಗಿದ್ದರು, ಅತ್ಯಂತ ಕಡಿಮೆ ಕೂಲಿಗೆ ಆದಿವಾಸಿ ರೈತರನ್ನು ಕೂಲಿಗಾರರಾಗಿ ದುಡಿಸಿಕೊಳ್ಳುತ್ತಿದ್ದರು. ಬಲವಂತದ ದುಡಿಮೆ ಸಾಮಾನ್ಯವಾಗಿತ್ತು. ಕೆಲಸವಿಲ್ಲದ ಸಮಯದಲ್ಲಿ ಭೂಮಾಲಕರಿಂದ ಭತ್ತವನ್ನು ಸಾಲ ರೂಪ(ಖೋಟಿ ಪದ್ಧತಿ)ದಲ್ಲಿ ಪಡೆಯುತ್ತಿದ್ದರು, ಅದಕ್ಕೆ ಶೇಕಡಾ ೫೦ ರಿಂದ ೨೦೦ರವರೆಗೆ ಬಡ್ಡಿ ತೆರುತ್ತಿದ್ದರು.
ಮಹಾರಾಷ್ಟ್ರ ಕಿಸಾನ್ ಸಭಾವು ತನ್ನ ಮೊದಲ ಸಮ್ಮೇಳನವನ್ನು ೧೯೪೫ರಲ್ಲಿ ಠಾಣೆ ಜಿಲ್ಲೆಯ ಟಿಟ್ವಾಳ ಹಳ್ಳಿಯಲ್ಲಿ ನಡೆಸಿತು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರೈತರ ಪ್ರತಿನಿಧಿಗಳನ್ನು ಅಣಿನೆರೆಸಬೇಕೆಂದು ಕಿಸಾನ್ ಸಭಾ ಕಾರ್ಯಕರ್ತರು ಯೋಜಿಸಿದ್ದರು. ಹೀಗೆ ಅವರು ಸಮ್ಮೇಳನಕ್ಕೆ ಪ್ರಚಾರ ನಡೆಸುವ ಸಮಯದಲ್ಲಿ, ಉಬರ್ಗಾಂವ್ ತಾಲೂಕಿನಲ್ಲಿ ಡಿಸೆಂಬರ್ ೧೯೪೪ರಲ್ಲಿ ವಾರಲೀಗಳ ಸಂಪರ್ಕಕ್ಕೆ ಬಂದರು.
ಆ ದಿನಗಳಲ್ಲಿ ಭೂಮಾಲಕರ ಬಂಟರು ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಆ ಪ್ರದೇಶದ ರಾಜರುಗಳ ರೀತಿ ವರ್ತಿಸುತ್ತಿದ್ದರು. ಅವರ ಎದುರು ವಾರಲೀಗಳು ಮಾತನಾಡಲು ಹೆದರುತ್ತಿದ್ದರು. ಒಮ್ಮೆ ಈ ಜನರು ಕಿಸಾನ್ ಸಭಾ ಆಯೋಜಿಸಿದ್ದ ಸಭೆಯೊಂದರಲ್ಲಿ ಕಾಣಿಸಿಕೊಂಡಾಗ, ಮುಖಂಡರು ಅವರಿಗೆ ಸಭೆಯಿಂದ ಹೊರಹೋಗಲು ಕಟ್ಟುನಿಟ್ಟಾಗಿ ಹೇಳಿದರು. ಅವರು ತಲೆ ಬಗ್ಗಿಸಿಕೊಂಡು ಹೊರನಡೆದರು. ಇದು ವಾರಲೀಗಳಿಗೆ ಮುಕ್ತವಾಗಿ ಮಾತನಾಡಲು ಧೈರ್ಯ ನೀಡಿತು. ಅವರು ತಮ್ಮ ಮೇಲಾಗುತ್ತಿರುವ ದಾಳಿ ದಬ್ಬಾಳಿಕೆ ಹಾಗೂ ಶೋಷಣೆಗಳ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡರು. ಟಿಟ್ವಾಳ ಸಮ್ಮೇಳನಕ್ಕೆ ತಮ್ಮ ಕೆಲವು ಪ್ರತಿನಿಧಿಗಳನ್ನು ಕಳಿಸುವುದಾಗಿ ಭರವಸೆ ನೀಡಿದರು, ಆದರೆ ಒಂದು ಷರತ್ತಿನ ಮೇಲೆ ಕಳಿಸುವುದಾಗಿ ಹೇಳಿದರು: ಸಮ್ಮೇಳನದ ನಂತರ ತಮ್ಮ ಜತೆಯಲ್ಲಿ ಕಿಸಾನ್ ಸಭಾ ಕಾರ್ಯಕರ್ತರು ಉಳಿದುಕೊಳ್ಳಬೇಕು ಎಂದರು.
ಉಬರ್ಗಾಂವ್ ತಾಲೂಕಿನಿಂದ ೧೫ ವಾರ ಪ್ರತಿನಿಧಿಗಳು ಟಿಟ್ವಾಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರದ ಎಲ್ಲಾ ಜಿಲ್ಲೆಗಳಿಂದ ಅಲ್ಲಿ ಅಣಿನೆರೆದಿದ್ದ ರೈತರನ್ನು ನೋಡಿ ವಾರಲೀಗಳು ಸ್ಪೂರ್ತಿಗೊಂಡರು. ಅದು ಅವರನ್ನು ರೂಪಾಂತರಿಸಿತು. ಆ ನಂತರ ಅವರು ತಮ್ಮ ಪೀಡಕರ ಎದುರು ನಡುಗಲಿಲ್ಲ, ಅವರನ್ನು ಧಿಕ್ಕರಿಸಲು ಶುರುಮಾಡಿದರು. ತಮ್ಮ ಜತೆಯಲ್ಲಿ ಕೆಂಬಾವುಟವನ್ನು ಹಿಡಿದು ಹೊರಟರು, ಅದು ತಮ್ಮ ಮಾರ್ಗದರ್ಶಕ, ಮಿತ್ರ ಹಾಗೂ ದಾರ್ಶನಿಕನಾಗಿ ನೆರವಿಗೆ ಬರುತ್ತದೆ ಎಂದು ಅರಿತರು.
ಸಮ್ಮೇಳನಕ್ಕೆ ಪ್ರಚಾರ ಮಾಡುವಾಗ ಕಿಸಾನ್ ಸಭಾ ಮುಖಂಡರು ಬಲವಂತದ ದುಡಿಮೆಯ ಭೂಮಾಲಕರ ಒತ್ತಾಯವನ್ನು ಪ್ರತಿಭಟಿಸಿದರು ಮತ್ತು ಅಂತಿಮವಾಗಿ ನಿಲ್ಲಿಸಿದರೂ ಕೂಡ. ಮೊದಲ ಸುತ್ತಿನ ಹೋರಾಟಗಳಲ್ಲೇ ಈ ಗೆಲುವುಗಳು ಸಲೀಸಾಗಿ ಲಭಿಸಿದವು. ಇದು ಅವರ ಪ್ರತಿರೋಧದ ಚೈತನ್ಯವನ್ನು ಉತ್ತೇಜಿಸಿತು ಮತ್ತು ಅವರಲ್ಲಿ ತಮ್ಮ ಶತೃಗಳನ್ನು ಸಲೀಸಾಗಿ ಸೋಲಿಸಬಹುದೆಂಬ ಆತ್ಮವಿಶ್ವಾಸವನ್ನು ತುಂಬಿತು. ಒಂದು ಹೊಸ ಅರಿವು ಮತ್ತು ಪ್ರಜ್ಞೆ ಅವರಲ್ಲಿ ಮೂಡಿತು.
ಕಿಸಾನ್ ಸಭಾ ಸಮ್ಮೇಳನವು ಗುಲಾಮಗಿರಿ ಮತ್ತು ಬಲವಂತದ ದುಡಿಮೆಯನ್ನು ಕೊನೆಗಾಣಿಸಲು ತಕ್ಷಣದ ಕಾರ್ಯಕ್ರಮವನ್ನು ಅಂಗೀಕರಿಸಿತು. ನಾಲ್ಕು ಮುಖ್ಯ ಹಾಗೂ ಸರಳ ಘೋಷಣೆಗಳನ್ನು ಅದು ರೂಪಿಸಿತು:
ಅ) ದಿನಗೂಲಿಯನ್ನು ನಗದು ರೂಪದಲ್ಲಿ ನೀಡದಿದ್ದರೆ ಭೂಮಾಲಕರ ಜಮೀನಿನಲ್ಲಿ ಸಾಗುವಳಿ ಮಾಡಬಾರದು;
ಆ) ಭೂಮಾಲಕರಿಗೆ ಉಚಿತ ಸೇವೆ ಸಲ್ಲಿಸಬಾರದು;
ಇ) ಭೂಮಾಲಕ ಹೊಡೆದರೆ ಪ್ರತಿಭಟಿಸಬೇಕು ಮತ್ತು
ಈ) ಎಲ್ಲರೂ ಐಕ್ಯತೆಯಿಂದ ಇರಬೇಕು.
ಭೂಮಾಲಕರ ಬಲವಂತದ ದುಡಿಮೆಯ ಬಲಾತ್ಕಾರಕ್ಕೆ ಪ್ರತಿರೋಧವು ಸಮ್ಮೇಳನ ಮುಗಿದ ಕೂಡಲೇ ಪ್ರಾರಂಭವಾಯಿತು. ಸಮ್ಮೇಳನ ಮುಗಿದ ೨೪ ಗಂಟೆಯೊಳಗೆ ಅದರ ಘೋಷಣೆ ಮತ್ತು ಸಂದೇಶವು ಮೂಲೆ ಮೂಲೆಗೂ ಹಬ್ಬಿತು. ವಾರಲೀಗಳು ನೂರಕ್ಕೆ ನೂರು ಐಕ್ಯತೆ ಸಾಧಿಸಿದರು. ಈ ಪ್ರತಿರೋಧ ಎಷ್ಟು ಬೇಗ ಹಬ್ಬಿತು ಮತ್ತು ಎಷ್ಟು ತ್ವರಿತವಾಗಿ ಬಲ ಪಡೆದುಕೊಂಡಿತೆಂದರೆ ಮೂರು ವಾರಗಳಲ್ಲೇ, ಬಲವಂತದ ದುಡಿಮೆ ಹಳೆಯ ಕಾಲಕ್ಕೆ ಸಂದಿತು.
ಈ ಗೆಲುವಿನಿಂದ ಪ್ರೇರಿತರಾದ ವಾರಲೀಗಳು ಗುಲಾಮ ಪದ್ಧತಿಯನ್ನು ಕೊನೆಗೊಳಿಸಲು ಮುಂದಾದರು. ಭೂಮಾಲಕನ ಜಮೀನಿನಲ್ಲಿ ಪುಕ್ಕಟೆ ಸಾಗುವಳಿ ಮಾಡಲು ನಿರಾಕರಿಸಿದರು ಮತ್ತು ಕಿಸಾನ್ ಸಭಾ ನಿಗದಿಪಡಿಸಿದ ಕೂಲಿ ಕೊಡಬೇಕೆಂದು ಒತ್ತಾಯಿಸಿದರು. ಇದು ಉಬರ್ಗಾಂವ್ನ ಉದ್ದಕ್ಕೂ ಬಿರುಗಾಳಿಯಂತೆ ಬೀಸಿ ಬಲಪಡೆಯಿತು, ಭೂಮಾಲಕತ್ವ ಕೊಚ್ಚಿಕೊಂಡುಹೋಯಿತು. ಗುಲಾಮಿ ಪದ್ದತಿ ಕೊನೆಗೊಂಡಿತು.
ಉಬರ್ಗಾಂವ್ ವಾರಲೀಗಳ ವಿಜಯೋತ್ಸವದ ಮುನ್ನಡೆಯ ಸುದ್ದಿ ಗಡಿಗಳನ್ನು ದಾಟಿ ಡಹಾಣುವನ್ನು ತಲುಪಿತು. ಕಿಸಾನ್ ಸಭಾಕ್ಕಾಗಿ ಕಾಯದೇ, ಅವರು ಪ್ರತಿದಿನ ಸಾಮೂಹಿಕ ಸಭೆ ಮಾಡುವುದರ ಮೂಲಕ ತಮ್ಮ ಚಳುವಳಿ ಶುರುಮಾಡಿದರು. ಕಿಸಾನ್ ಸಭಾ ಕಾರ್ಯಕರ್ತರು ಅಲ್ಲಿಗೆ ಹೋದಾಗ, ಇಡೀ ಪ್ರದೇಶ ಬೃಹದಾಕಾರದ ಸಾಮೂಹಿಕ ವಿಪ್ಲವದ ಹಿಡಿತದಲ್ಲಿರುವುದನ್ನು ನೋಡಿ ಅಚ್ಚರಿಪಟ್ಟರು.
ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ ಮತ್ತು ಋಣಭಾರದ ಗುಲಾಮಗಿರಿಯಿಂದ ವಿಮೋಚನೆಯು ಅದರ ಅವಿಭಾಜ್ಯ ಅಂಗ ಎನ್ನುವುದನ್ನು ವಾರಲೀಗಳು ಅರಿತುಕೊಂಡರು. ಡಹಾಣುವಿನ ವಿವಿಧ ಭಾಗಗಳಲ್ಲಿ ಕೆಂಬಾವುಟ ಹಿಡಿದು ಮೆರವಣಿಗೆ ಮಾಡಿದರು ಮತ್ತು ೧೦೦೦ ಗುಲಾಮರನ್ನು ವಿಮೋಚನೆಗೊಳಿಸಿದರು. ಗುಲಾಮರ ವಿಮೋಚನಾ ಚಳುವಳಿಯು ಗುಲಾಮರಿಗೆ ಸ್ವಾತಂತ್ರ್ಯವನ್ನು ಮರಳಿ ಕೊಡಿಸಿತು ಮತ್ತು ಬಹಳ ಮುಖ್ಯವಾಗಿ, ಗುಲಾಮನ ಹೆಂಡತಿಯನ್ನು ಭೂಮಾಲಕನ ಕಾಮಪೀಡನೆಯಿಂದ ಮುಕ್ತಗೊಳಿಸಿತು.
ಕಿಸಾನ್ ಸಭಾವು ಮತ್ತೊಂದು ಬೇಡಿಕೆಯನ್ನು, ೫೦೦ ಪೌಂಡ್ ಹುಲ್ಲು ಕೊಯ್ಯಲು ಕನಿಷ್ಠ ಕೂಲಿ ರೂ.೨.೫೦ ಕೊಡಬೇಕೆಂದು ಒತ್ತಾಯಿಸಿತು. ಸಾವಿರಾರು ಎಕರೆ ಜಮೀನಿನಲ್ಲಿ ಹುಲ್ಲು ತುಂಬಿಕೊಂಡಿತ್ತು, ಆ ಹುಲ್ಲು ಮಾರಾಟದಿಂದ ಭೂಮಾಲಕರು ಭರ್ಜರಿ ಸಂಪತ್ತು ಗಳಿಸುತ್ತಿದ್ದರು. ವಾರಲೀಗಳು ಹುಲ್ಲು ಕೊಯ್ಯಲು ನಿರಾಕರಿಸಿದಾಗ ಭೂಮಾಲಕರು ಅವರ ಚಳುವಳಿಗೆ ತಡೆಯೊಡ್ಡುವ ಪ್ರಯತ್ನ ಮಾಡಿದರು. ಗೋದಾವರಿ ಪರುಳೇಕರ್ ಭಾಷಣ ಮಾಡುವ ಸಭೆಯನ್ನು ಭಂಗಮಾಡಲು ಗೂಂಡಾಗಳನ್ನು ಕರೆಸಲಾಗಿದೆ ಎಂಬ ಸುಳ್ಳು ವದಂತಿ ಹಬ್ಬಿಸಿದರು. ಆದರೆ ನಿಜವಾಗಿ, ಅಂತಹ ಯಾವ ಸಭೆಯನ್ನೂ ಕಿಸಾನ್ ಸಭಾ ಆಯೋಜಿಸಿರಲಿಲ್ಲ. ಭೂಮಾಲಕರಿಂದ ಮೋಸ ಹೋದ ವಾರಲೀಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದರು. ಅಕ್ಟೋಬರ್ ೧೦ರ ಮಧ್ಯರಾತ್ರಿ ಸಶಸ್ತ್ರ ಪೋಲಿಸರು ಬಂದು, ವಾರಲೀಗಳ ಶಾಂತಿಯುತ ಸಭೆಯ ಮೇಲೆ ಚಲಿಸುತ್ತಿದ್ದ ಮೋಟಾರು ವಾಹನದ ಮೇಲಿನಿಂದಲೇ ಗುಂಡು ಹಾರಿಸಿದರು. ಪೋಲಿಸರು ಪದೇ ಪದೇ ಮನಸೋಯಿಚ್ಛೆ ಗುಂಡು ಹಾರಿಸಿದರು, ಎಲ್ಲಾ ದಿಕ್ಕುಗಳಲ್ಲಿಯೂ ಮರುದಿನ ಮಧ್ಯಾಹ್ನ ೩ ಗಂಟೆಯವರೆಗೂ ಗೋಲಿಬಾರ್ ಮುಂದುವರಿಸಿದರು. ಐವರು ವಾರಲೀಗಳು ಗುಂಡಿಗೆ ಬಲಿಯಾದರು ಮತ್ತು ಬಹಳ ಜನ ಗಾಯಗೊಂಡರು.
ಸಾವನ್ನೂ ಧಿಕ್ಕರಿಸಿ ಯಾವುದಕ್ಕೂ ಹೆದರುವುದಿಲ್ಲವೆಂಬ ವಾರಲೀಗಳ ಧೈರ್ಯದ ಈ ಪ್ರಸಂಗವು ಅವರು ಕೆಂಬಾವುಟದ ಬಗ್ಗೆ ಹೊಂದಿರುವ ನಿಷ್ಠೆಯ ಮತ್ತು ಅವರಲ್ಲಿ ಹೊರಹೊಮ್ಮಿದ ಅಪರೂಪದ ಕೆಚ್ಚಿನ ರೋಮಾಂಚನಕಾರಿ ಪ್ರದರ್ಶನವಾಗಿತ್ತು. ೧೫ ಗಂಟೆಗಳ ಕಾಲ, ಗುಂಡಿನ ಮಳೆಯನ್ನು ಅವರು ಧಿಕ್ಕರಿಸಿದರು; ೧೫ ಗಂಟೆಗಳ ಕಾಲ ಅವರು ಅವರೇ ಹಾರಿಸಿದ್ದ ಕೆಂಬಾವುಟವನ್ನು ತಮ್ಮ ದೇಹಗಳನ್ನೇ ಒಡ್ಡಿ ರಕ್ಷಿಸಿದರು. ಆ ಸ್ಥಳದ ಹತ್ತಿರ ಬರುತ್ತಿದ್ದಂತೆ ಪೋಲಿಸರು ಗುಂಡು ಹಾರಿಸಿದಾಗ ಅವರು ಬಾವುಟದ ಸುತ್ತ ನಿಂತು ಕೆಂಬಾವುಟವನ್ನು ರಕ್ಷಿಸುತ್ತಿದ್ದರು. ಪೋಲಿಸರು ತಮ್ಮ ಕೆಂಬಾವುಟವನ್ನು ಗುರಿಯಾಗಿಸಿ ಗುಂಡು ಹಾರಿಸುತ್ತಿದ್ದಾರೆಂದು ಭಾವಿಸಿದ ಅವರು ಜೀವ ತೆತ್ತಾದರೂ ಬಾವುಟವನ್ನು ರಕ್ಷಿಸುವುದು ತಮ್ಮ ಕರ್ತವ್ಯವೆಂದು ತಿಳಿದರು. ಪೋಲಿಸರ ಗುಂಡಿನ ಸುರಿಮಳೆಯು ಅವರನ್ನು ಅಲ್ಲಿಂದ ಕದಲಿಸಲಾಗಲಿಲ್ಲ. ಕಿಸಾನ್ ಸಭಾ ಕಾರ್ಯಕರ್ತರೊಬ್ಬರು ಬಂದು ಅದು ಭೂಮಾಲಕರ ಪಿತೂರಿ ಎಂದು ಹೇಳಿದ ಮೇಲೆಯೇ ಅವರು ಅಲ್ಲಿಂದ ದೂರ ಸರಿದರು. ಭೂಮಾಲಕರ ವಂಚನೆಯಿಂದ ತಾವು ಮೋಸ ಹೋದೆವು ಎನ್ನುವ ಅರಿವಾದಾಗ ಅವರು ಭೂಮಾಲಕರು ಮತ್ತು ಸರ್ಕಾರದ ಮೇಲೆ ಅಸಮಾಧಾನದ ಕಹಿಯನ್ನು ಹೊತ್ತು ತಮ್ಮ ಮನೆಗಳಿಗೆ ಹಿಂತಿರುಗಿದರು.
ವಾರಲೀ ಚಳುವಳಿಯ ಮಹತ್ವ ಗೋಚರವಾದ ಕೂಡಲೇ, ಸಾಮ್ರಾಜ್ಯಶಾಹೀ ಅಧಿಕಾರಿಗಳ ಧೋರಣೆಯು ತಟಸ್ಥ ನೀತಿಯ ಬದಲು ನಿರ್ದಯ ದಬ್ಬಾಳಿಕೆಗೆ ತಿರುಗಿತು. ಪ್ರಾಂತೀಯ ಕಾಂಗ್ರೆಸ್ ಸರ್ಕಾರ ಕೂಡ ಆದಿವಾಸಿ ರೈತರ ನಡುವೆ ಕಮ್ಯುನಿಸ್ಟ್ ಪ್ರಭಾವ ಬೆಳೆಯುತ್ತಿರುವುದನ್ನು ಕಂಡು ಹೆದರಿತು. ಅದು ಭೂಮಾಲಕರ ಜತೆ ಸೇರಿಕೊಂಡು ಚಳುವಳಿಯನ್ನು ಬಗ್ಗುಬಡಿಯಲು ಭೀಕರ ದಾಳಿಯನ್ನು ಶುರುಮಾಡಿತು. ಆ ಪ್ರದೇಶಗಳಲ್ಲಿ ಸಭೆ, ಮೆರವಣಿಗೆ ಮತ್ತು ಐದಕ್ಕಿಂತ ಹೆಚ್ಚು ಜನಸೇರುವುದನ್ನು ನಿಷೇಧಿಸಲಾಯಿತು. ಆಡಳಿತವು ಎಲ್ಲಾ ಕಮ್ಯುನಿಸ್ಟರನ್ನು ಅಲ್ಲಿಂದ ಗಡೀಪಾರು ಮಾಡಿತು. ಅಲ್ಲಿಯ ಪೋಲಿಸರು ಅನುಸರಿಸಿದ ಒರಟು, ಭಯಾನಕ ಹಾಗೂ ಹಿಂದೆ ಯಾರೂ ಬಳಸಿರದ ವಿಧಾನಗಳು ಜರ್ಮನಿಯ ನಾಜಿಗಳ ವಿಧಾನವನ್ನೂ ನಾಚಿಸುವಂತಿದ್ದವು. ಇವಾವುದಕ್ಕೂ ಸೊಪ್ಪುಹಾಕದ ವಾರಲೀಗಳು ಮುಂದೆ ಸಾಗಿದರು.
ರೈತರು ಒಂದು ವರ್ಷದ ಗೇಣಿಯನ್ನು ಮಾತ್ರ, ಯಾವುದೇ ಬಾಕಿ ನೀಡದೇ, ಸಂದಾಯ ಮಾಡುತ್ತಾರೆ ಮತ್ತು ಅವರ ಕೂಲಿಯನ್ನು ಹೆಚ್ಚಿಸಬೇಕು ಎಂದು ೧೯೪೬ರ ಆರಂಭದಲ್ಲಿ ಕಿಸಾನ್ ಸಭಾ ಸಮ್ಮೇಳನವು ತೀರ್ಮಾನ ಮಾಡಿತು. ೧೯೪೬ರ ಶರತ್ಕಾಲದಲ್ಲಿ ಹುಲ್ಲು ಕೊಯ್ಯುವ ಸಮಯದಲ್ಲಿ ವಾರಲೀ ಚಳುವಳಿಯು ಪರಾಕಾಷ್ಠೆ ತಲುಪಿತು. ಹುಲ್ಲುಗಾವಲನ್ನು ಹೊಂದಿದ ಭೂಮಾಲಕರಲ್ಲದೇ ಅರಣ್ಯ ಗುತ್ತಿಗೆದಾರರೂ ಆದಿವಾಸಿ ರೈತರನ್ನು ದಿನಗೂಲಿಯ ಮೇಲೆ ನೇಮಿಸಿಕೊಂಡಿದ್ದರು. ಅವರು ಈ ಬೇಡಿಕೆಗಳನ್ನು ಒಪ್ಪಲು ನಿರಾಕರಿಸಿದರು. ಕಿಸಾನ್ ಸಭಾ ಮುಷ್ಕರಕ್ಕೆ ಕರೆ ನೀಡಿತು.
ಆದಿವಾಸಿ ರೈತರು ಈಚಲು ಎಲೆಗಳನ್ನು ಕಟ್ಟಿದ ಒಂದು ಕಡ್ಡಿಯ ಮೂಲಕ ಹಳ್ಳಿಯಿಂದ ಹಳ್ಳಿಗೆ ಕಳಿಸುವ ಸಂದೇಶವನ್ನು ಮುಟ್ಟಿಸಿದರು. ಹಳ್ಳಿಗೆ ಆ ಕಡ್ಡಿ ಬಂದ ಕೂಡಲೇ ರೈತರು ಕೆಲಸ ನಿಲ್ಲಿಸುತ್ತಿದ್ದರು. ಎತ್ತಿನ ಗಾಡಿಗಳಲ್ಲಿ ಸಾಗಿಸುತ್ತಿದ್ದ ಆದಿವಾಸಿ ರೈತರೂ ಕೂಡ ಕೆಲಸ ನಿಲ್ಲಿಸಿದರು. ಮಹಾರಾಷ್ಟ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಆದಿವಾಸಿ ಶ್ರಮಿಕರ ಮುಷ್ಕರವು ೨೦೦ ಹಳ್ಳಿಗಳನ್ನು ಆವರಿಸಿತು.
ಒಂದು ತಿಂಗಳ ಕಾಲ ಮುಂದುವರಿದ ಮುಷ್ಕರವು ಶಕ್ತಿಗುಂದುವ ಯಾವ ಸೂಚನೆಯನ್ನೂ ತೋರಲಿಲ್ಲ. ತೀವ್ರ ನಷ್ಟವನ್ನು ಎದುರಿಸಿ ಒಪ್ಪಂದಕ್ಕಾಗಿ ಕಾಯುತ್ತಿದ್ದ ನಾಟಾ ವರ್ತಕರು ಮತ್ತು ಭೂಮಾಲಕರು ಬೇಡಿಕೆಗಳನ್ನು ಒಪ್ಪಿದರು. ನವೆಂಬರ್ ೧೦, ೧೯೪೬ರಂದು ಮುಷ್ಕರ ಕೊನೆಗೊಂಡಿತು. ವಾರಲೀಗಳಿಗೆ ಅದೊಂದು ದೊಡ್ಡ ಗೆಲುವಾಗಿತ್ತು. ಭೂಮಾಲಕರ, ನಾಟಾ ವರ್ತಕರ ದಾಳಿ ದಬ್ಬಾಳಿಕೆಗಳನ್ನು ಮತ್ತು ಪ್ರಾಂತೀಯ ಕಾಂಗ್ರೆಸ್ ಸರ್ಕಾರದ ದಮನಕಾರಿ ಧೋರಣೆಯನ್ನು ಯಶಸ್ವಿಯಾಗಿ ಎದುರಿಸಿದರು. ವಾರಲೀಗಳು ಶಕ್ತಿವಂತರಾದರು, ಐಕ್ಯತೆ ಸಾಧಿಸಿದರು ಮತ್ತು ತಮ್ಮ ನಿಜವಾದ ಮಿತ್ರರಾರು ಶತೃಗಳಾರು ಎಂಬ ಹೆಚ್ಚು ಉತ್ತಮ ತಿಳುವಳಿಕೆಯನ್ನು ಪಡೆದರು. ತಮ್ಮ ಸಂಘಟನೆಯೇ ತಮ್ಮ ನೈಜ ಶಕ್ತಿ ಎಂಬ ಅರಿವನ್ನು ಪಡೆದರು.
ಹೋರಾಟಗಳ ಅನುಭವ ವಾರಲೀಗಳನ್ನು ಬಹುಬೇಗ ಮಾರ್ಪಾಟು ಮಾಡಿತು. ಅವರ ಪರಿವರ್ತನೆ ಎಷ್ಟು ಮೂಲಭೂತವಾಗಿತ್ತೆಂದರೆ ಅವರು ಹೊಸ ಮನುಷ್ಯರಾದರು. ಅವರಲ್ಲಿ ಜ್ಞಾನದ ಹಸಿವು ಬೆಳೆಯಿತು. ಸಮಾಜವಾದ ಮತ್ತು ಸೋವಿಯತ್ ಯೂನಿಯನ್ನ ಎಲ್ಲಾ ಮಾಹಿತಿಗಳನ್ನು ತಿಳಿಯಲು ಹಾತೊರೆದರು. ಭೂಮಾಲಕರ ಅಪಪ್ರಚಾರ ಅವರಲ್ಲಿ ಈ ಹಂಬಲವನ್ನು ಹುಟ್ಟುಹಾಕಿತು. ಅವರ ಆರ್ಥಿಕ ಹಕ್ಕುಗಳ ಬಗ್ಗೆ ಪ್ರಜ್ಞೆಯನ್ನು ಉಂಟುಮಾಡಿದ್ದಲ್ಲದೇ ಅವರ ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಮೌಲ್ಯಗಳ ಬಗ್ಗೆ ಕೂಡ ಹೋರಾಟವು ಅವರಲ್ಲಿ ಅರಿವು ಮೂಡಿಸಿತು.
ಕನ್ನಡಕ್ಕೆ: ಟಿ. ಸುರೇಂದ್ರ ರಾವ್