“ಬ್ರಿಟಿಶರ ಕಾಲದ ನಿರ್ದಯ ರೈತ ಶೋಷಣೆಯ ದಿನಗಳನ್ನು ಮತ್ತೆ ತರಲಿರುವ ತಿದ್ದುಪಡಿಗಳು”
ಜೂನ್ ೩ರಂದು ಕೃಷಿಗೆ ಸಂಬಂಧಪಟ್ಟಂತೆ ಮೂರು ಸುಗ್ರೀವಾಜ್ಞೆಗಳನ್ನು ಕೇಂದ್ರ ಸಂಪುಟ ಮಂಜೂರು ಮಾಡಿದೆ. ಇವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ವಿರೋಧಿಸಿದೆ.
ಆವಶ್ಯಕ ಸರಕುಗಳ ಕಾಯ್ದೆಗೆ ಪ್ರಸ್ತಾವಿಸಿರುವ ಈ ಸುಗ್ರೀವಾಜ್ಞೆಗಳ ತಿದ್ದುಪಡಿಗಳು ದೇಶದ ಆಹಾರ ಭದ್ರತೆಗೆ ಅತ್ಯಗತ್ಯವಾದ ಪ್ರಮುಖ ಕೃಷಿ ಸರಕುಗಳ ಬೆಲೆ ನಿರ್ಧಾರ ಮತ್ತು ಲಭ್ಯತೆಯ ಮೇಲಿರುವ ಎಲ್ಲ ನಿಬಂಧನೆಗಳನ್ನು ತೆಗೆದು ಹಾಕುತ್ತವೆ. ಈ ಪ್ರಸ್ತಾವಗಳು ಮಧ್ಯವರ್ತಿಗಳ ಮತ್ತು ವ್ಯಾಪಾರಿಗಳ ಸಟ್ಟಾಕೋರತನದಿಂದಾಗಿ ಕೃತಕ ಕೊರತೆಗಳನ್ನು ಸೃಷ್ಟಿಸಲು ದಾರಿ ಮಾಡಿಕೊಡುತ್ತವೆ. ಇದು ದೇಶದ ಆಹಾರ ಭದ್ರತೆಯನ್ನು ಪ್ರತಿಕೂಲವಾಗಿ ತಟ್ಟುತ್ತದೆ.
ಅಲ್ಲದೆ, ಈ ತಿದ್ದುಪಡಿಗಳು ಎಲ್ಲ ನಿರ್ಬಂಧಗಳನ್ನು ತೆಗೆದು ಮತ್ತು ಕೃಷಿ ಉತ್ಪನ್ನಗಳ ತಡೆಮುಕ್ತ ಅಂತರ-ರಾಜ್ಯ ಮತ್ತು ರಾಜ್ಯದೊಳಗೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು ಗುತ್ತಿಗೆ ಕೃಷಿಗೆ ದಾರಿ ಮಾಡಿಕೊಡುತ್ತವೆ, ಇದಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ(ಅಂದರೆ ಮಂಡಿಗಳ) ಅಡಿಯಲ್ಲಿ ಬರುವ ಮಾರುಕಟ್ಟೆಗಳ ಅಥವ ಆವರಣಗಳ ಹೊರಗೆ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುತ್ತವೆ ಎಂದು ಪೊಲಿಟ್ ಬ್ಯುರೊ ಇವನ್ನು ವಿಶ್ಲೇಷಿಸುತ್ತ ಹೇಳಿದೆ. ಎಲೆಕ್ಟ್ರಾನಿಕ್ ವ್ಯಾಪಾರಕ್ಕೆ ಪರವಾನಿಗೆಗಳನ್ನು ಕೊಡುವುದು ಎಲ್ಲ ಕೃಷಿ ಸರಕುಗಳಲ್ಲಿ ಸಟ್ಟಾಕೋರ ಫಾರ್ವರ್ಡ್ ಟ್ರೇಡಿಂಗ್ ವ್ಯಾಪಾರಕ್ಕೆ ದಾರಿ ಮಾಡಿಕೊಡುತ್ತದೆ.
ಇವೆಲ್ಲವೂ ಭಾರತದ ಕೃಷಿ ಉತ್ಪನ್ನಗಳು ಹಾಗೂ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕೃಷಿ ವ್ಯಾಪಾರ ಕಂಪನಿಗಳು ಮತ್ತು ದೇಶೀ ಕಾರ್ಪೊರೇಟ್ಗಳು ಮುಕ್ತವಾಗಿ ಪ್ರವೇಶಿಸಲು ಅವಕಾಶ ಕಲ್ಪಿಸುತ್ತವೆ.
ಈ ಸಂಪುಟ ಪ್ರಸ್ತಾವಗಳು ಕರ್ಷಕ ಬಿಕ್ಕಟ್ಟು ಮಹಾಮಾರಿ ಮತ್ತು ರಾಷ್ಟ್ರೀಯ ಲಾಕ್ಡೌನಿನಿಂದಾಗಿ ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ಬರುತ್ತಿವೆ, ನಮ್ಮ ರೈತರಿಗೆ ಹೆಚ್ಚಿನ ರಕ್ಷಣೆ ಅಗತ್ಯವಿರುವ ಸಮಯದಲ್ಲಿ ಈ ಕ್ರಮಗಳು ಒಂದು ನ್ಯಾಯಯುತ ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದನ್ನು ಕೈಬಿಡುವಂತಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಎಚ್ಚರಿಸಿದೆ.
ಈ ಎಲ್ಲ ತಿದ್ದುಪಡಿಗಳಿಂದ ಒಟ್ಟಾರೆಯಾಗಿ ಲಾಭ ಗಿಟ್ಟಿಸುವವರು ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಹಣಕಾಸು ಮಧ್ಯವರ್ತಿಗಳು. ಇವರೆಲ್ಲರೂ ಉತ್ಪಾದಕರನ್ನು, ಅಂದರೆ ರೈತರನ್ನು ಹಾಗೂ ಬಳಕೆದಾರರನ್ನು ಇಬ್ಬರನ್ನೂ ಹಿಂಡುತ್ತಾರೆ. ಇದು ಅಳಿದುಳಿದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೂಡ ಸಂಪೂರ್ಣವಾಗಿ ನಾಶ ಮಾಡುವ ಪಥ್ಯ ಎಂದು ಪೊಲಿಟ್ ಬ್ಯುರೊ ವರ್ಣಿಸಿದೆ.
ಈ ಸುಗ್ರೀವಾಜ್ಞೆಗಳು ರೈತರಿಗೆ ನಿಜ ಸ್ವಾತಂತ್ರ್ಯ ಎಂದು ಕೃಷಿ ಮಂತ್ರಿಗಳು ವರ್ಣಿಸ ಹೊರಟಿರುವುದು ನಿಜಕ್ಕೂ ಅಸಹ್ಯ ಉಂಟುಮಾಡುತ್ತದೆ. ದೇಶ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯಿತು, ಆದರೆ ರೈತರು ಪಡೆಯಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಭಾರತ ಸ್ವತಂತ್ರವಾದ ನಂತರ ಬಂದ ಸರಕಾರಗಳ ನಿರ್ಧಾರಗಳು ಎಷ್ಟೇ ಸೀಮಿತವಾಗಿಯಾದರೂ ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಲ ರೈತರನ್ನು ಮತ್ತು ದೇಶದ ಆಹಾರ ಭದ್ರತೆಯನ್ನು ಸಾಪೇಕ್ಷವಾಗಿ ಕಾಪಾಡಿಕೊಂಡು ಬಂದಿವೆ. ಮೋದಿ ಸರಕಾರ ಈ ನವ-ಉದಾರವಾದಿ ಸುಧಾರಣೆಗಳನ್ನು ಆಕ್ರಾಮಕ ರೀತಿಯಲ್ಲಿ ಅನುಸರಿಸುತ್ತಿರುವುದು ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತೀಯ ರೈತರ ನಿರ್ದಯ ಶೋಷಣೆಯ ದಿನಗಳನ್ನು ಮತ್ತೆ ಕಾಣುವ ಬೆದರಿಕೆಯನ್ನು ಒಡ್ಡಿದೆ ಎಂದು ಎಚ್ಚರಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಸುಗ್ರೀವಾಜ್ಞೆಗಳು ಸಂಸತ್ತು ಈ ಬಗ್ಗೆ ಚರ್ಚಿಸಿ ಶಾಸನವನ್ನು ತರುವ ವರೆಗೆ ಜಾರಿಗೆ ಬರಲು ಸಾಧ್ಯವಿಲ್ಲ ಎಂಬುದು ತನ್ನ ದೃಢ ಅಭಿಪ್ರಾಯ ಎಂದಿದೆ. ಇದನ್ನು ಕಾಯ್ದೆಗಳಾಗಿ ಮಾಡುವ ಮೊದಲು ಕೃಷಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯಿಂದ ಇವುಗಳ ಕ್ರಮಬದ್ಧ ತಪಾಸಣೆ ನಡೆಯಬೇಕು ಎಂದು ಅದು ಹೇಳಿದೆ.
ಇನ್ನೂ ಮಹತ್ವದ ಸಂಗತಿಯೆಂದರೆ ಭಾರತೀಯ ಸಂವಿಧಾನದ ಅಡಿಯಲ್ಲಿ ಕೃಷಿ ರಾಜ್ಯಪಟ್ಟಿಯಲ್ಲಿರುವ ವಿಷಯ. ಕೇಂದ್ರ ಸಂಪುಟ ಚುನಾಯಿತ ರಾಜ್ಯ ಸರಕಾರಗಳೊಡನೆ ಸಮಾಲೋಚನೆಗಳನ್ನು ನಡೆಸದೆಯೇ ಈ ಸುಗ್ರೀವಾಜ್ಞೆಗಳಿಗೆ ಮಂಜೂರಾತಿ ನೀಡಿದೆ. ಇದು ಸಂವಿಧಾನದ ಘೋರ ಉಲ್ಲಂಘನೆ. ಸಂಸತ್ತು ಇದನ್ನು ಪರಿಶೀಲಿಸಿ ಶಾಸನವನ್ನು ತಂದರೂ ಇದು ರಾಜ್ಯ ಶಾಸಕಾಂಗಗಳ ಮಂಜೂರಾತಿಗೆ ಒಳಪಡಬೇಕಾಗುತ್ತದೆ, ಆದ್ದರಿಂದ ಕೇಂದ್ರ ಸರಕಾರ ಅದನ್ನು ಏಕಪಕ್ಷೀಯವಾಗಿ ಹೇರುವಂತಿಲ್ಲ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ನೆನಪಿಸಿದೆ.
ಈ ಸುಗ್ರೀವಾಜ್ಞೆಗಳನ್ನುತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಆಗ್ರಹಿಸಿದೆ.